ಬಾರಾಕಮಾನ್ ನೆನಪಿಸುತ್ತಿರುವ ಅಕ್ವಾಡೆಕ್ಟ್

ವಿಜಯಪುರ: ರಾಜ್ಯ ಸಮ್ಮಿಶ್ರ ಸರ್ಕಾರ ಉತ್ತರ ಕರ್ನಾಟಕದ ಅಭಿವೃದ್ಧಿ ಕಡೆಗಣಿಸಿದೆ. ನೀರಾವರಿ ಯೋಜನೆಗಳು ನನೆಗುದಿಗೆ ಬಿದ್ದಿದ್ದು, ಅರ್ಧಕ್ಕೆ ನಿಂತ ಅಕ್ವಾಡೆಕ್ಟ್‌ಗಳು ಬಾರಾಕಮಾನ್ ನೆನಪಿಸುತ್ತಿವೆ ಎಂದು ವಿಪ ಸದಸ್ಯ ಅರುಣ ಶಹಾಪುರ ಆರೋಪಿಸಿದರು.

ನೀರಾವರಿ ಯೋಜನೆಯಲ್ಲಿ ಉತ್ತರ ಕರ್ನಾಟಕಕ್ಕೆ ಭಾರಿ ಅನ್ಯಾಯವಾಗಿದೆ. ನಿರೀಕ್ಷಿತ ಮಟ್ಟದಲ್ಲಿ ಕಾಮಗಾರಿ ಕೈಗೊಳ್ಳಲಾಗಿಲ್ಲ. ಕಾಂಗ್ರೆಸ್ ಸರ್ಕಾರದ ಯೋಜನೆಯನ್ನೇ ಮುಂದು ಮಾಡಿಕೊಂಡು ಜೆಡಿಎಸ್ ಪ್ರಚಾರ ಗಿಟ್ಟಿಸಿಕೊಳ್ಳುತ್ತಿದೆ. ಹಾಗೊಂದು ವೇಳೆ ನೀರಾವರಿ ಯೋಜನೆಗಳು ಸಾಕಾರಗೊಂಡಿದ್ದರೆ ಈ ಹಿಂದಿನ ಮಂತ್ರಿಯನ್ನೇ ನೀರಾವರಿ ಸಚಿವರನ್ನಾಗಿ ಮಾಡಬಹುದಿತ್ತಲ್ಲ? ಎಂದು ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಅವರು ಪ್ರಶ್ನಿಸಿದರು.

ಜೆಡಿಎಸ್ ಉತ್ತರ ಕರ್ನಾಟಕ ವಿರೋಧಿ ಎಂಬ ಭಾವ ಇಲ್ಲಿನ ಜನರಿಗಿದೆ. ಅದು ಸತ್ಯ ಸಹ. ಕಳೆದ ಒಂದು ವರ್ಷದಲ್ಲಿ ಸರ್ಕಾರ ಜಿಲ್ಲೆಗೆ ಯಾವ ಕೊಡುಗೆ ನೀಡಿದೆ ಹೇಳಿ? ಎಂದ ಶಹಾಪುರ, ಸಮ್ಮಿಶ್ರ ಸರ್ಕಾರ ಕೇವಲ ದಕ್ಷಿಣ ಕರ್ನಾಟಕಕ್ಕೆ ಸೀಮಿತವಾಗಿದೆ. ಅದೂ ಮೂರ‌್ನಾಲ್ಕು ಜಿಲ್ಲೆಗಳಿಗೆ ಮಾತ್ರ ಎಂದು ವ್ಯಂಗ್ಯವಾಡಿದರು.

ಕೇಂದ್ರದಲ್ಲಿ ಬಿಜೆಪಿ ಅಧಿಕಾರಕ್ಕೆ ಬಂದ ಕೆಲವೇ ದಿನಗಳಲ್ಲಿ ಸಮ್ಮಿಶ್ರ ಸರ್ಕಾರ ಪತನವಾಗಲಿದೆ. ಕಾಂಗ್ರೆಸ್‌ನಲ್ಲಿ 20ಕ್ಕೂ ಅಧಿಕ ಶಾಸಕರು ಕುಮಾರಸ್ವಾಮಿ ನಾಯಕತ್ವ ಒಪ್ಪಿಕೊಳ್ಳಲು ಸಿದ್ದರಿಲ್ಲ. ಅನೇಕ ಜಿಲ್ಲೆಗಳಲ್ಲಿ ದೋಸ್ತಿ ಪಕ್ಷಗಳ ಕಾರ್ಯಕರ್ತರು ಕಿತ್ತಾಡಿಕೊಳ್ಳುತ್ತಿದ್ದಾರೆ. ಸಮಾರಂಭಗಳಲ್ಲೇ ತಾವು ಮೋದಿಗೆ ಮತ ಹಾಕುತ್ತೇವೆನ್ನುತ್ತಿರುವುದು ಮೋದಿ ಅವರ ಜನಪ್ರತಿಯತೆಯನ್ನು ಸೂಚಿಸುತ್ತದೆ ಎಂದರು.

ಮುಖಂಡ ಆರ್.ಎಸ್. ಪಾಟೀಲ ಕೂಚಬಾಳ, ವಿಜಯ ಜೋಶಿ, ರಾಕೇಶ ಕುಲಕರ್ಣಿ, ಪಾಪುಸಿಂಗ ರಜಪೂತ ಇತರರಿದ್ದರು.

ಹೊರಟ್ಟಿ ಬಗ್ಗೆ ಅನುಕಂಪ
ವಿಧಾನ ಪರಿಷತ್ ಸದಸ್ಯ ಬಸವರಾಜ ಹೊರಟ್ಟಿ ಕುರಿತು ಅನುಕಂಪದ ಮಾತುಗಳನ್ನಾಡಿರುವ ಅರುಣ ಶಹಾಪುರ, ಸಮುದಾಯದ ಮತಗಳನ್ನು ಜೆಡಿಎಸ್‌ಗೆ ಹಾಕಿಸುವಲ್ಲಿ ವಿಫಲರಾದರೆಂಬ ಕಾರಣಕ್ಕೆ ಹೊರಟ್ಟಿ ಅವರಿಗೆ ಸಭಾಪತಿ ಸ್ಥಾನ ತಪ್ಪಿತು. ಮಂತ್ರಿ ಸ್ಥಾನವೂ ತಪ್ಪಿತು. ಇದಕ್ಕೆ ಉತ್ತರ ಕರ್ನಾಟಕದವರೆಂಬ ತಾತ್ಸಾರವೂ ಕಾರಣವಾಯಿತು. ಅದಾಗ್ಯೂ ಹೊರಟ್ಟಿ ಅವರು ಪ್ರಚಾರದಲ್ಲಿ ತೊಡಗಿಸಿಕೊಂಡಿದ್ದು ನೋಡಿದರೆ ಆಶ್ಚರ್ಯವಾಗುತ್ತದೆ ಎಂದರು.

ಮೈತ್ರಿ ಸರ್ಕಾರದಲ್ಲಿ ಎಲ್ಲವೂ ಅಸ್ತಿರ. ವಿಷಯಾಧಾರಿತ ಚುನಾವಣೆ ನಡೆಸಲು ಮೈತ್ರಿ ಸರ್ಕಾರ ಸಿದ್ಧವಾಗಿಲ್ಲ. ಕೇವಲ ಹಿಟ್ ಆಂಡ್ ರನ್ ನೀತಿ ಅನುಸರಿಸುತ್ತಿದೆ. ಬಿಜೆಪಿ ಮೇಲೆ ವಿನಾ ಆರೋಪ ಮಾಡಿಕೊಂಡು ಜೆಡಿಎಸ್ ನಾಯಕರು ಕಾಲ ತಳ್ಳುತ್ತಿದ್ದಾರೆ. ಅವರಿಗೆ ತಮ್ಮದೇ ಆದ ಒಂದು ಪ್ರಣಾಳಿಕೆ ಸಹ ಇಲ್ಲ.
ಅರುಣ ಶಹಾಪುರ, ವಿಪ ಸದಸ್ಯ

Leave a Reply

Your email address will not be published. Required fields are marked *