ಸ್ವಚ್ಛ ಭಾರತ, ಸ್ವಸ್ಥ ಭಾರತ ಕನಸನ್ನು ನನಸಾಗಿಸೋಣ

ವಿಜಯಪುರ: ಮಹಾತ್ಮ ಗಾಂಧೀಜಿ ಕಂಡ ಸ್ವಚ್ಛ ಭಾರತ, ಸ್ವಸ್ಥ ಭಾರತ ಕನಸನ್ನು ನನಸಾಗಿಸುವ ಮೂಲಕ ದೇಶವನ್ನು ಪ್ರಗತಿಯತ್ತ ಕೊಂಡೊಯ್ಯಲು ಎಲ್ಲರೂ ಶ್ರಮಿಸಬೇಕೆಂದು ವಿಜಯಪುರ ತಾಪಂ ಸದಸ್ಯ ಲಕ್ಷ್ಮಣ ಕಲಬೀಳಗಿ ಹೇಳಿದರು.

ಸಮೀಪದ ತಾಜಪುರ ಗ್ರಾಮದ ಸರ್ಕಾರಿ ಪ್ರಾಥಮಿಕ ಶಾಲೆ ಆವರಣದಲ್ಲಿ ಕ್ಷೇತ್ರ ಜನಸಂಪರ್ಕ ಕಾರ್ಯಾಲಯ, ತಾಪಂ, ಶಿಶು ಅಭಿವೃದ್ಧಿ ಯೋಜನೆ, ಸಾರ್ವಜನಿಕ ಶಿಕ್ಷಣ ಇಲಾಖೆ, ಆರೋಗ್ಯ ಇಲಾಖೆ ಹಾಗೂ ತಾಜಪುರ ಗ್ರಾಪಂ ಸಹಯೋಗದಲ್ಲಿ ಹಮ್ಮಿಕೊಂಡಿದ್ದ ಸ್ವಚ್ಛ ಭಾರತ ಅಭಿಯಾನ ಕುರಿತ ವಿಶೇಷ ಜಾಗೃತಿ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.

ಜಿಪಂ ಸ್ವಚ್ಛ ಭಾರತ ಮಿಷನ್‌ನ ಜಿಲ್ಲಾ ಸಮಾಲೋಚಕ ಸಿದ್ದಣ್ಣ ಪೂಜಾರಿ ಮಾತನಾಡಿ, ಶೇ.60 ರಷ್ಟು ಕಾಯಿಲೆಗಳು ಬಯಲು ಮಲ ವಿಸರ್ಜನೆಯಿಂದ ಹರಡುತ್ತವೆ. 1ಗ್ರಾಂ ಮಲದಲ್ಲಿ 1ಕೋಟಿ ರೋಗಾಣುಗಳು ಉತ್ಪತ್ತಿಯಾಗುತ್ತವೆ. ಆ ದೃಷ್ಟಿಯಿಂದ ಗ್ರಾಮೀಣ ಭಾಗಗಳಲ್ಲಿ ವೈಯಕ್ತಿಕ ಶೌಚಗೃಹಗಳನ್ನು ನಿರ್ಮಿಸಿಕೊಂಡು ತಮ್ಮ ಹಾಗೂ ಕುಟುಂಬದ ಆರೋಗ್ಯ ಕಾಪಾಡಿಕೊಳ್ಳಬೇಕೆಂದು ಮನವಿ ಮಾಡಿದರು.

ಕ್ಷೇತ್ರ ಜನಸಂಪರ್ಕ ಕಾರ್ಯಾಲಯದ ಸಹಾಯಕ ಮುರಳೀಧರ ಕಾರಭಾರಿ ಪ್ರಾಸ್ತಾವಿಕವಾಗಿ ಮಾತನಾಡಿ, ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ಗ್ರಾಮೀಣ ಪ್ರದೇಶಕ್ಕೆ ಹಲವು ಯೋಜನೆಗಳನ್ನು ಜಾರಿಗೆ ತಂದಿದೆ. ಸ್ಥಳೀಯರು ಅವುಗಳ ಸದುಪಯೋಗ ಪಡೆಯಬೇಕೆಂದು ಮನವಿ ಮಾಡಿದರು.

ಗ್ರಾಪಂ ಸದಸ್ಯ ಶ್ರೀಶೈಲ ಹಾಲಳ್ಳಿ,ಶಿಕ್ಷಕ ಎಂ.ಎಸ್.ಬಗಲಿ ಮಾತನಾಡಿದರು. ಗ್ರಾಪಂ ಅಧ್ಯಕ್ಷ ದಾಮಾಜಿ ಚವಾಣ್ ಅಧ್ಯಕ್ಷತೆ ವಹಿಸಿದ್ದರು. ಗ್ರಾಪಂ ಸದಸ್ಯರು, ಸಿಬ್ಬಂದಿ ಹಾಗೂ ಗ್ರಾಮಸ್ಥರು ಉಪಸ್ಥಿತರಿದ್ದರು.