ಅಡಕೆ ವ್ಯಾಪಾರಿಗೆ 63 ರೂ. ಲಕ್ಷ ದಂಡ

ವಿಜಯಪುರ: ತಮಿಳುನಾಡು ಮೂಲದ ಲಾರಿಯೊಂದನ್ನು ಪರಿಶೀಲನೆ ನಡೆಸಿದ ಬೆಳಗಾವಿ ವಾಣಿಜ್ಯ ತೆರಿಗೆ ಜಂಟಿ ಆಯುಕ್ತರು (ಜಾರಿ) ವಿಭಾಗದ ವಿಜಯಪುರದ ಅಧಿಕಾರಿಗಳು ಖೊಟ್ಟಿ ಇ-ವೇ ಬಿಲ್ ಸೃಷ್ಟಿಸಿ ಸರಕು ಸಾಗಿಸುತ್ತಿದ್ದ ಮೀರತ್​ನ ವ್ಯಾಪಾರಿಗೆ 63 ಲಕ್ಷ ರೂ. ದಂಡ ವಿಧಿಸಿದ ಘಟನೆ ನಡೆದಿದೆ.

ಘಟನೆ ವಿವರ

ಉತ್ತರ ಪ್ರದೇಶದ ಮೀರತ್ ಮೂಲದ ಮೆ|| ಸದ್ಗುರು ಟ್ರೇಡರ್ಸ್ ಎಂಬ ಹೆಸರಿನ ಅಡಕೆ ವ್ಯಾಪಾರಿ ಇ-ವೇ ಬಿಲ್ ಮೂಲಕ 292 ಚೀಲದ 21,024 ಕೆ.ಜಿ.ಯ ಅಡಕೆಯನ್ನು ತಮಿಳುನಾಡಿನ ಹೊಸೂರಿನಿಂದ ಖರೀದಿಸ ಲಾಗಿದೆ ಎಂದು ದಿ. 18-12-2018 ರಂದು ಶಿವಮೊಗ್ಗದ ಸುತ್ತ-ಮುತ್ತ ಸ್ಥಳಗಳಿಂದ ಖರೀದಿಸಿದ ಅಡಕೆಯನ್ನು ಆರ್.ಜೆ.-05 ಜಿ.ಬಿ.-2394ರ ಲಾರಿಯಲ್ಲಿ ಸಾಗಿಸುತ್ತಿದ್ದರು. ಈ ಸಂದರ್ಭದಲ್ಲಿ ವಿಜಯಪುರ ಜಾರಿ ವಿಭಾಗದ ಅಧಿಕಾರಿಗಳು ಲಾರಿಯಲ್ಲಿದ್ದ ಅಡಕೆ ಪರಿಶೀಲಿಸಿ, ಸಂದೇಹದ ಮೇಲೆ ಸರಕಿನ ಸಮೇತ ಲಾರಿಯನ್ನು ಜಪ್ತಿ ಮಾಡಿದ್ದರು.

ಅಧಿಕಾರಿಗಳು ತಂಡ ರಚಿಸಿಕೊಂಡು ಒಂದು ವಾರ ಕಾಲ ನಿರಂತರವಾಗಿ ಕಾರ್ಯಾಚರಣೆ ನಡೆಸಿ ಅಡಕೆ ಮೂಲವನ್ನು ಪತ್ತೆ ಹಚ್ಚಲಾಗಿ, ಮೀರತ್ ವ್ಯಾಪಾರಸ್ಥ ತಮಿಳುನಾಡಿನ ಹೊಸೂರು ಹಾಗೂ ಮೀರತ್​ನಲ್ಲಿ ಖೊಟ್ಟಿ ಜಿಎಸ್​ಟಿ ನೋಂದಣಿ ಪಡೆದು, ಕರ್ನಾಟಕದ ಅಡಕೆ ಮೂಲದ ಸ್ಥಳಗಳಲ್ಲಿ ಅಡಕೆಯನ್ನು ವಿವಿಧ ವ್ಯಾಪಾರಸ್ಥರಿಂದ ಖರೀದಿಸಿ ತಮಿಳುನಾಡಿನಿಂದ ಅಡಕೆಯನ್ನು ಸಾಗಿಸಲಾಗಿದೆ ಎಂದು ಸುಳ್ಳು ದಾಖಲೆ ಸೃಷ್ಟಿಸಿರುವುದು ಪತ್ತೆಯಾಗಿದೆ.

ತಪ್ಪಿತಸ್ಥರಿಗೆ ಜಿಎಸ್​ಟಿ ಕಾಯ್ದೆ, 2017ರ ಕಲಂ. 130(2) ರ ಅಡಿಯಲ್ಲಿ ಸರಕಿನ ಮೌಲ್ಯಕ್ಕೆ ಸಮನಾದ ತೆರಿಗೆ, ದಂಡ ಮತ್ತು ಜುಲ್ಮಾನೆ 63,07,200 ರೂ. ಗಳನ್ನು ಮತ್ತು ಸಾಗಣೆದಾರರು ಜಿಎಸ್​ಟಿ. ಕಾಯ್ದೆ, 2017ರ ಕಲಂ. 122(3)ರ ಅಡಿಯಲ್ಲಿ 20,000 ರೂ. ದಂಡ ಹಾಕಲಾಗಿದ್ದು, ತಪ್ಪಿತಸ್ಥರು ದಂಡ ಪಾವತಿಸಿ ಜಪ್ತಿಯಾದ ಸರಕು ಮತ್ತು ಲಾರಿಯನ್ನು ಬಿಡಿಸಿಕೊಂಡು ಹೋಗಿದ್ದಾರೆಂದು ಇಲಾಖೆ ಪ್ರಕಟಣೆ ತಿಳಿಸಿದೆ.

ಬೆಳಗಾವಿ ಜಾರಿ ವಿಭಾಗದ ಜಂಟಿ ಆಯುಕ್ತ ಕೆ. ರಾಮನ್ ಅವರು ತನಿಖಾ ತಂಡದಲ್ಲಿದ್ದ ವಿಜಯಪುರದ ಜಾರಿ ವಿಭಾಗದ ಸಹಾಯಕ ಆಯುಕ್ತ ಕೆಂಪರಾಜು, ವಾಣಿಜ್ಯ ತೆರಿಗೆ ಅಧಿಕಾರಿಗಳಾದ ಬಸವಣ್ಣ, ಟಿ. ರಾಮಚಂದ್ರ, ಕೆ. ರಮೇಶ ಅವರ ತನಿಖಾ ಕಾರ್ಯವನ್ನು ಶ್ಲಾಘಿಸಿದ್ದಾರೆ.

ಸರಕು ವ್ಯಾಪಾರಸ್ಥರಿಗೆ ಬಿಸಿ

ಬೆಳಗಾವಿ, ವಿಜಯಪುರ ಮತ್ತು ಬಾಗಲಕೋಟೆ ಜಿಲ್ಲೆಗಳಲ್ಲಿ ಜಾರಿ ವಿಭಾಗದ ಅಧಿಕಾರಿಗಳು ತೀವ್ರ ತನಿಖೆ, ಜಾಗೃತಿ ಕಾರ್ಯವನ್ನು ಕೈಗೊಂಡಿದ್ದು ರಾಷ್ಟ್ರೀಯ ಹೆದ್ದಾರಿಗಳಲ್ಲಿ ನಾಕಾ ಬಂದಿ ಹಾಕಿ ಇ-ವೇ ಬಿಲ್ಲುಗಳ ಪರಿಶೀಲನೆ, ಕಳ್ಳ ದಾರಿಯಲ್ಲಿ ಸರಕುಗಳನ್ನು ಸಾಗಿಸುವ ವ್ಯಾಪಾರಸ್ಥರಿಗೆ ಬಿಸಿಯನ್ನು ಮುಟ್ಟಿಸುತ್ತಿರುವುದಕ್ಕೆ ಮೆಚ್ಚುಗೆ ವ್ಯಕ್ತವಾಗಿದೆ.

Leave a Reply

Your email address will not be published. Required fields are marked *