ಅದ್ದಿಗಾನಹಳ್ಳಿಯಲ್ಲಿ ಐಎಎಸ್- ಕೆಎಎಸ್ ತರಬೇತಿ ಕೇಂದ್ರ

ವಿಜಯಪುರ: ರಾಜ್ಯ ಸರ್ಕಾರ ಬೆಂಗಳೂರು ಸಮೀಪದ ಅದ್ದಿಗಾನಹಳ್ಳಿಯಲ್ಲಿ 4 ಎಕರೆ ಭೂಮಿ ಮಂಜೂರು ಮಾಡಿದ್ದು ಆ ಸ್ಥಳದಲ್ಲಿ ಮಹಿಳಾ ವಿವಿಯಿಂದ ಕೆಎಎಸ್- ಐಎಎಸ್ ಪರೀಕ್ಷಾ ತರಬೇತಿ ಕೇಂದ್ರ ಮತ್ತು ಪ್ರಾದೇಶಿಕ ಕೇಂದ್ರ ಪ್ರಾರಂಭಸಲು ಯೋಜನೆ ರೂಪಿಸಿದೆ ಎಂದು ಅಕ್ಕಮಹಾದೇವಿ ಮಹಿಳಾ ವಿವಿ ಕುಲಪತಿ ಪ್ರೊ. ಸಬಿಹಾ ಭೂಮಿಗೌಡ ಹೇಳಿದರು.

ಅಕ್ಕಮಹಾದೇವಿ ಮಹಿಳಾ ವಿವಿ 10ನೇ ಘಟಿಕೋತ್ಸವದ ಸ್ವಾಗತ ಭಾಷಣದಲ್ಲಿ ವಿಷಯ ಪ್ರಸ್ತಾಪಿಸಿದ ಅವರು, ಗ್ರಾಮೀಣ ಭಾಗದಲ್ಲಿ ಮಹಿಳೆಯರಿಗೆ ಉನ್ನತ ಶಿಕ್ಷಣ ನೀಡುವ ಉದ್ದೇಶದಿಂದ ನಮ್ಮ ವಿಶ್ವವಿದ್ಯಾನಿಲಯವು ತನ್ನ ಭೌಗೋಳಿಕ ವ್ಯಾಪ್ತಿಯನ್ನು ಕರ್ನಾಟಕದಾದ್ಯಂತ ವಿಸ್ತರಿಸಿಕೊಂಡಿರುವುದು ಹೆಮ್ಮೆಯ ಸಂಗತಿ ಎಂದರು.

ಜುಲೈ 2018ರಲ್ಲಿ ವಿವಿಯಲ್ಲಿ 18 ಸಹಾಯಕ ಪ್ರಾಧ್ಯಾಪಕರು, 10 ಸಹ ಪ್ರಾಧ್ಯಾಪಕರು ಹಾಗೂ 6 ಪ್ರಾಧ್ಯಾಪಕರ ನೇಮಕಾತಿ ನಡೆಸಲಾಗಿದೆ. ಇಲ್ಲಿನ ವಿದ್ಯಾರ್ಥಿನಿಯರು ಜಗತ್‌ವಿಖ್ಯಾತ ಮೈಸೂರು ದಸರಾ ಉತ್ಸವದಲ್ಲಿ ಭಾಗವಹಿಸಿದ್ದಾರೆ. ಜಂಬುಸವಾರಿಯ ಮೆರವಣಿಗೆಯಲ್ಲಿ ನಮ್ಮ ಮಹಿಳಾ ಬ್ಯಾಂಡ್ ತಂಡ ಭಾಗವಹಿಸಿರುವುದು ಐತಿಹಾಸಿಕ ದಾಖಲೆ. ದಸರಾ ವಸ್ತು ಪ್ರದರ್ಶನದಲ್ಲಿ ಜೈವಿಕ ಇಂಧನ, ಪೇಪರ್ ಪುನರ್ ಉತ್ಪಾದನಾ ಸಾಮಗ್ರಿಗಳು, ಸಿರಿಧಾನ್ಯಗಳಿಂದ ತಯಾರಿಸಿದ ಆಹಾರ ಸಾಮಗ್ರಿಗಳ ವಿಶಿಷ್ಟ ಪ್ರಯೋಗಗಳನ್ನು ಪ್ರದರ್ಶಿಸಿದ್ದು ವಿವಿಯ ಹೆಮ್ಮೆಯ ಸಂಗತಿ ಎಂದರು.

ಯುಜಿಸಿಯ ಸಾಮಾನ್ಯ ನಿಯಮಗಳ ಪ್ರಕಾರ ಪದವಿ ಪಠ್ಯಕ್ರಮದ ಪರಿಷ್ಕರಣೆ ಮಾಡಲಾಗಿದೆ. 2018-19 ಶೈಕ್ಷಣಿಕ ಸಾಲಿನಿಂದ 70:30 ಅಂಕಗಳ ಮಾದರಿ ಅಳವಡಿಸಲಾಗಿದೆ. ಕರ್ನಾಟಕ ರಾಜ್ಯ ಉನ್ನತ ಶಿಕ್ಷಣ ಸಂಸ್ಥೆ ಅನುಮೋದಿತ ನಿಯಮಗಳಾನುಸಾರ, ವಿಶ್ವವಿದ್ಯಾನಿಲಯವು ಸಿಬಿಚೆಸ್ ವ್ಯವಸ್ಥೆಯನ್ನು ಸ್ನಾತಕೋತ್ತರ ಕೋರ್ಸಿಗೆ ಅಳವಡಿಸಿಕೊಂಡಿದ್ದು, ಕಳೆದ ಶೈಕ್ಷಣಿಕ ವರ್ಷದಿಂದಲೇ ಜಾರಿಗೆ ತರಲಾಗಿದೆ ಎಂದು ಪ್ರೊ. ಸಬಿಹಾ ವಿವರಿಸಿದರು.

ವಿಶ್ವವಿದ್ಯಾನಿಲಯವು ಪರ್ಯಾಯ ಇಂಧನ ಬಳಕೆಯನ್ನು ಉತ್ತೇಜಿಸುತ್ತಿದ್ದು, ಕೇಂದ್ರ ಸರ್ಕಾರದ ಎಸ್‌ಇಸಿಐ-ಬೂಟ್ ಯೋಜನೆ ಅಡಿಯಲ್ಲಿ ಎರಡು ಸೌರ ಘಟಕಗಳನ್ನು ವಿಶ್ವವಿದ್ಯಾನಿಲಯದಲ್ಲಿ ಸ್ಥಾಪಿಸಲಾಗಿದೆ. ಈ ಘಟಕಗಳು ಒಟ್ಟು 170 ಕಿಲೋವ್ಯಾಟ್ ವಿದ್ಯುಚ್ಛಕ್ತಿಯನ್ನು ಉತ್ಪಾದಿಸುವ ಸಾಮರ್ಥ್ಯವನ್ನು ಹೊಂದಿವೆ. ಈ ಘಟಕಗಳಿಂದ ನಮ್ಮ ವಿಶ್ವವಿದ್ಯಾನಿಲಯಕ್ಕೆ ಪ್ರತಿ ತಿಂಗಳು ರೂ.1 ಲಕ್ಷಗಳ ಉಳಿತಾಯವಾಗುತ್ತಿದೆ ಎಂದರು.

ನಮ್ಮ ಮಹಿಳಾ ಪದವೀಧರರನ್ನು ನಾಯಕ ಗುಣ ಹೊಂದಿದ ಮಹತ್ತರ ವ್ಯಕ್ತಿಗಳನ್ನಾಗಿ ಮಾಡುವುದು ನಮ್ಮ ಕನಸಾಗಿದೆ. ಇದರೊಂದಿಗೆ ನಮ್ಮ ವಿಶ್ವವಿದ್ಯಾನಿಲಯವು ಅತ್ಯಂತ ಒಳ್ಳೆಯ ವಾತಾವರಣವನ್ನು ಕಲ್ಪಿಸುವ ಎಲ್ಲ ಪ್ರಯತ್ನಗಳನ್ನೂ ಮಾಡುತ್ತಿದೆ. ವಿಶೇಷವಾಗಿ ‘ಮಹಿಳಾ ವಸ್ತು ಸಂಗ್ರಹಾಲಯ’ ನಿರ್ಮಾಣ ಮಾಡಲು ತೀರ್ಮಾನಿಸಲಾಗಿದೆ. ಮಹಿಳೆಯರ ಜ್ಞಾನ, ಕೌಶಲ್ಯ ಮತ್ತು ಸಮಾಜಕ್ಕೆ ಅವರ ಕೊಡುಗೆ ಬಿಂಬಿಸುವ ರೀತಿಯಲ್ಲಿ ವಸ್ತು ಸಂಗ್ರಹಾಲಯ ನಿರ್ಮಿಸುವುದು ವಿವಿ ಕನಸಾಗಿದೆ. ಅದರ ನೀಲನಕ್ಷೆಯನ್ನು ತಜ್ಞರು ಸಿದ್ಧಪಡಿಸುತ್ತಿದ್ದಾರೆಂದು ಪ್ರೊ. ಸಬಿಹಾ ಹೇಳಿದರು.