ವೇತನ ವಿಳಂಬ ಖಂಡಿಸಿ ಎಸ್​ಎಸ್​ಎ ಶಿಕ್ಷಕರ ಪ್ರತಿಭಟನೆ

ವಿಜಯಪುರ: ಸರ್ವ ಶಿಕ್ಷಣ ಅಭಿಯಾನ (ಎಸ್.ಎಸ್.ಎ.) ಯೋಜನೆಯಡಿ ಕಾರ್ಯನಿರ್ವಹಿಸುತ್ತಿರುವ ವಿಜಯಪುರ ಗ್ರಾಮೀಣ ವಲಯ ಶಿಕ್ಷಕರು ವೇತನ ವಿಳಂಬ ಖಂಡಿಸಿ ವಿಜಯಪುರದ ಹೊರವಲಯ ಟಕ್ಕೆಯಲ್ಲಿರುವ ಕ್ಷೇತ್ರ ಶಿಕ್ಷಣಾಧಿಕಾರಿ ಕಚೇರಿ ಮುಂದೆ ಶನಿವಾರ ಪ್ರತಿಭಟಿಸಿದರು.

ಇಂದಿನ ದಿನಗಳಲ್ಲಿ ದೈನಂದಿನ ಜೀವನ ನಿರ್ವಹಣೆ ತುಂಬಾ ಕಷ್ಟಕರವಾಗುತ್ತಿದೆ. ಪ್ರತಿ ತಿಂಗಳು ವೇತನ ಬಿಡುಗಡೆ ಮಾಡುವಂತಾಗಬೇಕು. ವೇತನ ವಿಳಂಬ ಮಾತ್ರವಲ್ಲದೆ ಶಿಕ್ಷಕರ ವಾರ್ಷಿಕ ವೇತನ ಬಡ್ತಿ, ಕಾಲಮಿತಿ ಬಡ್ತಿ ನೀಡಬೇಕು. 6ನೇ ವೇತನ ಶ್ರೇಣಿಯನ್ವಯ ಮೂಲ ವೇತನ ನಿಗದೀಕರಣ ಸರಿಯಾಗಿ ಆಗಿಲ್ಲ. ಸೇವಾಪುಸ್ತಕಗಳ ಸೂಕ್ತ ನಿರ್ವಹಣೆ ಇಲ್ಲ. ತುಟ್ಟಿ ಭತ್ಯೆ ಹಾಗೂ 6ನೇ ವೇತನದ ಅರಿಯರ್ಸ್ (ಹಿಂಬಾಕಿ ವೇತನ) ನೀಡಿಲ್ಲ. ಕುಮಾರ ನಾಯಕ ವರದಿ ಪ್ರಕಾರ ಒಂದು ವಿಶೇಷ ವೇತನ ಬಡ್ತಿ ಮಾಡಬೇಕು. ಎನ್​ಪಿಎಸ್ ಶಿಕ್ಷಕರ 10 ವರ್ಷ ಕಾಲಮಿತಿ ಬಡ್ತಿ ಮಾಡಬೇಕು ಎಂದು ಶಿಕ್ಷಕರು ಆಗ್ರಹಿಸಿದರು.

ಪ್ರತಿಭಟನಾ ಸ್ಥಳಕ್ಕೆ ಭೇಟಿ ನೀಡಿದ ಡಿಡಿಪಿಐ ಎಂ.ಎಂ.ಸಿಂಧೂರ, ಎರಡು ದಿನಗಳಲ್ಲಿ ವೇತನ ಪಾವತಿಯಾಗುವಂತೆ ಮಾಡಲಾಗುವುದು. ಇನ್ನಿತರೆ ಬೇಡಿಕೆಗಳಿಗೆ ಶೀಘ್ರ ಪರಿಹಾರ ಒದಗಿಸುವುದಾಗಿ ಭರವಸೆ ನೀಡಿದರು.

ಜಿಲ್ಲಾ ನೌಕರರ ಸಂಘದ ಅಧ್ಯಕ್ಷ ಸುರೇಶ ಶೇಡಶ್ಯಾಳ, ಜಿಓಸಿಸಿ ಬ್ಯಾಂಕ್ ನಿರ್ದೇಶಕ ಹಣಮಂತ ಕೊಣದಿ, ವಿಜಯಪುರ ಗ್ರಾಮೀಣ ವಲಯ ಶಿಕ್ಷಕರ ಸಂಘದ ಪ್ರಧಾನ ಕಾರ್ಯದರ್ಶಿ ಸಿ.ಕೆ.ಬಜಂತ್ರಿ, ಖಜಾಂಚಿ ಬಸವರಾಜ ಉಪ್ಪಾರ, ಬಸವರಾಜ ತೇಲಿ, ಸಂಜಯ ಚವಾಣ್, ಜೆ.ಎಚ್.ಬಳಬಟ್ಟಿ, ಬಿ.ವೈ.ಮೇಡೆಗಾರ, ಆರ್.ವಿ.ಚಿಕ್ಕರೂಗಿ, ಎನ್.ಐ.ಬಸವರಾಜ ಹಾಗೂ ತಿಕೋಟಾ, ಬಬಲೇಶ್ವರ, ವಿಜಯಪುರ ತಾಲೂಕಿನ ಶಿಕ್ಷಕರು ಪಾಲ್ಗೊಂಡಿದ್ದರು.