ಗರ್ಭಗುಡಿಗೆ ಬೀಗ ಜಡಿದ ಅರ್ಚಕರು

ವಿಜಯಪುರ: ಗಂಡ-ಹೆಂಡತಿ ಜಗಳದಲ್ಲಿ ಕೂಸು ಬಡವಾಯಿತು ಎಂಬುದು ಹಳೇ ಗಾದೆ. ಪೂಜಾರಿಗಳ ಜಗಳದಲ್ಲಿ ದೇವರು ಬಡವಾದ ಎಂಬ ಲೇಟೆಸ್ಟ್ ಗಾದೆ ಇದೀಗ ವಿಜಯಪುರದ ದೇವಸ್ಥಾನವೊಂದರಲ್ಲಿ ಚಾಲ್ತಿಗೆ ಬಂದಿದೆ !

ಇಲ್ಲಿನ ಪವಾಡ ಬಸವೇಶ್ವರ ದೇವಸ್ಥಾನದಲ್ಲಿ ಬೆಳ್ಳೆಂಬೆಳಗ್ಗೆ ಭಕ್ತರಿಗೆ ಪವಾಡ ಕಂಡಿದೆ. ಪೂಜೆಗೆಂದು ಬಂದ ಭಕ್ತರಿಗೆ ದರ್ಶನ ನೀಡದೆ ಬಸವೇಶ್ವರ ಬಾಗಿಲು ಹಾಕಿಕೊಂಡಿದ್ದಲ್ಲದೆ, ಗರ್ಭಗುಡಿಗೆ ಬೀಗ ಜಡಿದುಕೊಂಡಿದ್ದಾನೆ. ಇದೇನಪ್ಪ ಪವಾಡ ಅಂತೀರಾ? ವಾಸ್ತವ ಚಿತ್ರಣ ಇಲ್ಲಿದೆ ನೋಡಿ.

ಪೂಜೆಗಾಗಿ ಪೂಜಾರಿಗಳ ಜಗಳ
ನಗರದ ಗೋಳಗುಮ್ಮಟ ಹತ್ತಿರದಲ್ಲಿರುವ ಐತಿಹಾಸಿಕ ಪವಾಡ ಬಸವೇಶ್ವರ ದೇವಸ್ಥಾನ ಅರ್ಚಕರ ಮಧ್ಯೆ ಭಾನುವಾರ ಬೆಳಗ್ಗೆ ಗಲಾಟೆ ನಡೆದಿದೆ. ಎರಡು ದಿನಗಳಿಂದ ಈ ಜಗಳ ಕಾಣಿಸಿಕೊಂಡಿದೆಯಾದರೂ ಭಾನುವಾರ ತಾರಕಕ್ಕೇರಿದೆ. ಚಿನ್ನಕಾಳಿಮಠ ಹಾಗೂ ನಂದಿಕೋಲಮಠ ಎಂಬ ಎರಡು ಕುಟುಂಬಗಳ ನಡುವೆ ದೇವರ ಪೂಜೆಗಾಗಿ ಗಲಾಟೆ ನಡೆದು ನಾಲ್ವರು ಗಾಯಗೊಂಡಿದ್ದಾರೆ. ಗಾಯಾಳುಗಳು ಆಸ್ಪತ್ರೆಗೆ ದಾಖಲಾದರೆ ಭಕ್ತರು ವಿಷಯವನ್ನು ಪೊಲೀಸ್ ಠಾಣೆಗೆ ಮುಟ್ಟಿಸಿದ್ದಾರೆ. ಪರಿಣಾಮ ಎರಡು ಕುಟುಂಬಸ್ಥರು ಗರ್ಭಗುಡಿಗೆ ಬೀಗ ಹಾಕಿ ಪೂಜೆ ನಡೆಯದಂತೆ ಮಾಡಿದ್ದಾರೆ. ಇದು ಭಕ್ತರ ಆಕ್ರೋಶಕ್ಕೆ ಕಾರಣವಾಗಿದೆ.

ಘಟನೆ ವಿವರ
ಚಿನ್ನಕಾಳಿಮಠ ಹಾಗೂ ನಂದಿಕೋಲಮಠ ಕುಟುಂಬಕ್ಕೆ ದೇವಸ್ಥಾನದ ಪೂಜೆ ಜವಾಬ್ದಾರಿ ಹಂಚಿಕೆಯಾಗಿದೆ. 30 ವರ್ಷಗಳಿಂದ ಪಾಳಿ ಪ್ರಕಾರ ಪೂಜೆ ನೆರವೇರಿಸಲಾಗುತ್ತಿದೆ. ಈ ಹಿಂದಿನ ತೀರ್ಮಾನದಂತೆ ಪ್ರತಿ ವರ್ಷ ಚಿನ್ನಕಾಳಿಮಠ ಕುಟುಂಬಕ್ಕೆ 11 ತಿಂಗಳು ಹಾಗೂ ನಂದಿಕೋಲಮಠ ಕುಟುಂಬಕ್ಕೆ 1 ತಿಂಗಳ ಪೂಜೆಗೆ ಅವಕಾಶ ನೀಡಲಾಗಿತ್ತು. ಇದೇ ವಿಚಾರವಾಗಿ ಮೂರು ತಿಂಗಳಿಂದ ಎರಡು ಕುಟಂಬಗಳ ಮಧ್ಯೆ ಆಗಾಗ ಗಲಾಟೆ ನಡೆಯುತ್ತಿತ್ತು. ಅಲ್ಲದೆ, ಪ್ರಕರಣ ಕೋರ್ಟ್ ಮೆಟ್ಟಿಲೇರಿದ್ದು ವಿಚಾರಣೆ ಹಂತದಲ್ಲಿದೆ. ಅಷ್ಟರಲ್ಲಿ ಪಾಳಿ ಪ್ರಕಾರ ಪೂಜೆಗೆ ಕೀಲಿ ಕೈ ನೀಡದೆ ಇರುವ ಕಾರಣ ಜಗಳ ಕಾಣಿಸಿಕೊಂಡಿದೆ. ಎರಡೂ ಬಣದವರು ಕಿತ್ತಾಡಿಕೊಂಡು ಗರ್ಭಗುಡಿಗೆ ಬೀಗ ಜಡಿದಿದ್ದಾರೆ.

ಘಟನಾ ಸ್ಥಳಕ್ಕೆ ಆಗಮಿಸಿರುವ ಪೊಲೀಸರು ಎರಡೂ ಬಣಗಳ ಮಧ್ಯೆ ಮಾತುಕತೆ ನಡೆಸಿದ್ದಾರೆ. ಸದ್ಯ ದೇವಸ್ಥಾನದ ಬೀಗ ತೆಗೆಯಿಸಿ ದೇವರ ಪೂಜೆಗೆ ಅವಕಾಶ ಕಲ್ಪಿಸಿದ್ದಾರೆ. ಆದರೆ, ಪೂಜಾರಿಗಳ ಈ ವರ್ತನೆಯಿಂದಾಗಿ ಭಕ್ತರು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಇನ್ಮುಂದೆ ಎರಡೂ ಬಣದವರು ದೇವಸ್ಥಾನ ಹತ್ತಿರ ಬರಕೂಡದು. ಭಕ್ತರೇ ದೈನಂದಿನ ಪೂಜೆ ನೆರವೇರಿಸಿಕೊಂಡು ಹೋಗಲಿದ್ದಾರೆ. ಈ ರೀತಿ ಜಗಳ ಮಾಡಿ ದೇವರನ್ನು ಅವಮಾನಿಸುವುದು ಸರಿಯಲ್ಲ ಎಂದಿದ್ದಾರೆ.

ಒಪ್ಪಂದದ ಪ್ರಕಾರ ಮೊದಲು ದೇವಸ್ಥಾನದ ಕೀಲಿ ಕೈ ನೀಡಿದ್ದೇವೆ. ಅವರ ಅವಧಿ ಮುಗಿದು ಎರಡೂವರೆ ತಿಂಗಳಾದರೂ ನಮಗೆ ಕೀಲಿ ಕೈ ನೀಡಿಲ್ಲ. ಕೇಳಲು ಹೋದರೆ ಹೊಡೆದಿದ್ದಾರೆ. ಘಟನೆಯಲ್ಲಿ ನನ್ನ ತಾಯಿ ತಲೆಗೆ ಪೆಟ್ಟು ಬಿದ್ದಿದೆ. ಒಪ್ಪಂದದಂತೆ ಪೂಜೆ ಮಾಡಿಕೊಂಡು ಬಂದಿದ್ದು, ಇದೀಗ ಚಿಕ್ಕಯ್ಯ ನಂದಿಕೋಲಮಠ ಕೋರ್ಟ್‌ನಿಂದ ತಡಯಾಜ್ಞೆ ತಂದಿದ್ದಾರೆ.
ಮಹಾಲಿಂಗಯ್ಯ ಚಿನ್ನಕಾಳಿಮಠ, ಪೂಜಾರಿ ಕುಟುಂಬಸ್ಥ

ಎರಡೂ ಕುಟುಂಬಗಳು ಕೋರ್ಟ್ ಮೊರೆ ಹೋಗಿದ್ದು ಪ್ರಕರಣ ವಿಚಾರಣೆ ಹಂತದಲ್ಲಿದೆ. ಇದೀಗ ನಂದಿಕೋಲಮಠ ಅವರು ಪೂಜೆ ಮಾಡಿಕೊಂಡು ಬರುತ್ತಿದ್ದು, ಏಕಾಏಕಿ ಚಿನ್ನಕಾಳಿಮಠ ಕುಟುಂಬಸ್ಥರು ಜಗಳ ತೆಗೆದು ಪೂಜೆಗೆ ಅಡೆತಡೆ ಮಾಡಿದ್ದಾರೆ. ಶನಿವಾರ ಕೆಲವು ಹುಡುಗರು ಬಂದು ಗಲಾಟೆ ಮಾಡಿದ್ದಾರೆ. ದೇವಸ್ಥಾನಕ್ಕೆ ಬೀಗ ಜಡಿದಿದ್ದು ಭಕ್ತರ ಆಕ್ರೋಶಕ್ಕೆ ಕಾರಣವಾಗಿದೆ. ಎರಡು ಕುಟುಂಬಸ್ಥರು ನ್ಯಾಯಾಲಯದ ಪ್ರಕರಣ ಇತ್ಯರ್ಥ ಮಾಡಿಕೊಂಡು ಆ ಮೇಲೆ ಬನ್ನಿ ಎಂದು ಹರಿಹಾಯ್ದಿದ್ದಾರೆ.
ಸುಪುತ್ರಯ್ಯ ನಂದಿಕೋಲಮಠ ಟ್ರಸ್ಟ್ ಅಧ್ಯಕ್ಷ