ಬಿಜೆಪಿಗೆ ಅನ್ಯಾಯ ಮಾಡಿದ್ರೆ ಹೆತ್ತ ತಾಯಿಗೆ ಮಾಡಿದಂತೆ

ವಿಜಯಪುರ: ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್. ಯಡಿಯೂರಪ್ಪ ಅವರು ನನ್ನ ಪ್ರಾಮಾಣಿಕತೆ ಮೆಚ್ಚಿ ಟಿಕೆಟ್ ನೀಡಿದ್ದಾರೆ. ಬಿಜೆಪಿ ನನ್ನ ತಾಯಿ ಸಮಾನ. ಪಕ್ಷಕ್ಕೆ ಅನ್ಯಾಯ ಮಾಡಿದ್ರೆ ಹೆತ್ತ ತಾಯಿಗೆ ಅನ್ಯಾಯ ಮಾಡಿದಂತೆ ಎಂದು ದೇವರಹಿಪ್ಪರಗಿ ಶಾಸಕ ಸೋಮನಗೌಡ ಪಾಟೀಲ ಸಾಸನೂರ ತಿಳಿಸಿದರು.

ನಾಗಠಾಣ ಕ್ಷೇತ್ರದ ಜೆಡಿಎಸ್ ಶಾಸಕ ದೇವಾನಂದ ಚವಾಣ್ ಹಾಗೂ ಶಿವಾಜಿ ಮೆಟಗಾರ ಎಂಬುವರ ಮಧ್ಯೆ ನಡೆದ ದೂರವಾಣಿ ಸಂಭಾಷಣೆಯಲ್ಲಿ ಸೋಮನಗೌಡರು ಬಿಜೆಪಿ ತೊರೆದು ಕಾಂಗ್ರೆಸ್ ಸೇರುವವರ ಸಾಲಿನಲ್ಲಿ ಮುಂಚೂಣಿಯಲ್ಲಿದ್ದಾರೆಂಬ ವಿಷಯಕ್ಕೆ ಸಂಬಂಧಿಸಿದಂತೆ ಬುಧವಾರ ಸುದ್ದಿಗೋಷ್ಠಿಯಲ್ಲಿ ಅವರು ಸ್ಪಷ್ಟನೆ ನೀಡಿದರು.

ಆಡಿಯೋದಲ್ಲಿ ನಾನು ಕಾಂಗ್ರೆಸ್ ಸೇರುತ್ತೇನೆಂಬ ಅಂಶವಿದ್ದು, ಅದರಲ್ಲಿ ಯಾವುದೇ ಹುರುಳಿಲ್ಲ. ಶಾಸಕ ದೇವಾನಂದ ಚವಾಣ್ ಯಾಕೆ ಈ ರೀತಿ ಮಾತನಾಡಿದ್ದಾರೋ ಗೊತ್ತಿಲ್ಲ. ಶಿವಾಜಿ ಮೆಟಗಾರ ಸಹ ಬಿಜೆಪಿ ಮುಖಂಡನಾಗಿದ್ದು, ನನ್ನ ಪರ ಪ್ರಚಾರ ಮಾಡಿದ್ದಾರೆ. ಜತೆಗೆ ಪಕ್ಷದ ಗೆಲುವಿಗೆ ಶ್ರಮಿಸಿದ್ದಾರೆ. ಇದೀಗ ಶಾಸಕ ದೇವಾನಂದ ಅವರ ಜತೆ ಮಾತನಾಡಿದ್ದರ ಹಿಂದಿನ ಉದ್ದೇಶ ಗೊತ್ತಿಲ್ಲ ಎಂದರು.

ಶಾಸಕ ದೇವಾನಂದ ಚವಾಣ್ ಆಡಿಯೋ ವಿಚಾರ ಒಪ್ಪಿಕೊಂಡಿದ್ದಾರೆ. ಮಾತಾಡಿದ್ದು ನಿಜ, ಆದರೆ ತಿರುಚಲಾಗಿದೆ ಎಂದಿದ್ದಾರೆ. ಹಾಗೊಂದು ವೇಳೆ ಆಡಿಯೋ ತಿರುಚಿದ್ದರೆ ದೂರು ನೀಡಬೇಕಿತ್ತು. ಶಾಸಕರಾದವರು ಇನ್ನೊಬ್ಬ ಶಾಸಕರ ಬಗ್ಗೆ ಮಾತಾಡುವಾಗ ವಿಚಾರ ಮಾಡಿ ಮಾತಾಡಬೇಕಿತ್ತು. ನಾನು ಕಾಂಗ್ರೆಸ್ ಸೇರುವ ಬಗ್ಗೆ ದೇವಾನಂದ ಅವರ ಬಳಿ ಸಾಕ್ಷೃ ಇದ್ದರೆ ನೀಡಲಿ. ಈ ಬಗ್ಗೆ ಬಹಿರಂಗ ಚರ್ಚೆಗೆ ಬೇಕಾದರೂ ಬರಲಿ ಎಂದರು.

ಕಾಂಗ್ರೆಸ್‌ನ ಯಾವುದೇ ಮುಖಂಡರು ಕರೆದರೂ ನಾನು ಬಿಜೆಪಿ ಬಿಡಲು ಸಿದ್ಧನಿಲ್ಲ. ಜಿಲ್ಲೆ ಸಚಿವರಲ್ಲ ಸ್ವತಃ ಸಿದ್ದರಾಮಯ್ಯ ಕರೆದರೂ ಕಾಂಗ್ರೆಸ್‌ಗೆ ಹೋಗಲ್ಲ. ರಾಜಕೀಯೇತರವಾಗಿ ಕಾಂಗ್ರೆಸ್ ಮುಖಂಡರ ಜತೆ ನಮ್ಮ ತಂದೆ ಕಾಲದಿಂದಲೂ ಉತ್ತಮ ಸಂಬಂಧವಿದೆ. ಹಾಗಂತ ಅದನ್ನು ರಾಜಕೀಯವಾಗಿ ಬಳಸಿಕೊಳ್ಳಲು ಬಿಡಲ್ಲ ಎಂದು ಪ್ರಶ್ನೆಯೊಂದಕ್ಕೆ ಪ್ರತಿಕ್ರಿಯಿಸಿದರು.

ಆಡಿಯೋದ ಭಾಗೀದಾರ ಶಿವಾಜಿ ಮೆಟಗಾರ ಅವರ ಜಗಳ ವೈಯಕ್ತಿಕ. ಅವರ ಕುಟುಂಬಸ್ಥರ ಜತೆಗಿನ ಕಲಹ. ಅಲ್ಲಿ ಯಾವುದೇ ಎಂಎಸ್‌ಐಎಲ್ ವಿಚಾರಕ್ಕೆ ಜಗಳ ಬಂದಿಲ್ಲ. ಕ್ಷೇತ್ರಕ್ಕೆ ಒಟ್ಟು ನಾಲ್ಕು ಎಂಎಸ್‌ಐಎಲ್ ಮಂಜೂರಾಗಿವೆ. ಮುಳಸಾವಳಗಿ ಮತ್ತು ದೇವರಹಿಪ್ಪರಗಿ ಎಂಎಸ್‌ಐಎಲ್‌ಗೆ ತಕರಾರು ಇರುವ ಕಾರಣ ತಟಸ್ಥಗೊಳಿಸಲಾಗಿದೆ. ಅಷ್ಟಕ್ಕೂ ಎಂಎಸ್‌ಐಎಲ್‌ಗೂ ತಮಗೂ ಸಂಬಂಧವಿಲ್ಲವೆಂದು ಸ್ಪಷ್ಟಪಡಿಸಿದರು.
ಇನ್ನು ಆಡಿಯೋ ವಿಚಾರಕ್ಕೆ ಸಂಬಂಧಿಸಿದಂತೆ ರಾಜ್ಯ ಬಿಜೆಪಿ ಮುಖಂಡರ ಜತೆ ಚರ್ಚಿಸಲಾಗಿದ್ದು, ಕಾನೂನು ತಜ್ಞರ ಸಲಹೆ ಪಡೆದು ಕ್ರಮ ಕೈಗೊಳ್ಳುವುದಾಗಿ ತಿಳಿಸಿದ್ದಾರೆ ಎಂದರು.

ಮುಖಂಡರಾದ ವಿಜುಗೌಡ ಪಾಟೀಲ, ಸಂಗರಾಜ ದೇಸಾಯಿ, ಆರ್.ಎಸ್. ಪಾಟೀಲ ಕೂಚಬಾಳ, ರವಿಕಾಂತ ಬಗಲಿ, ವಿಜು ಜೋಶಿ, ರಾಕೇಶ ಕುಲಕರ್ಣಿ ಇತರರಿದ್ದರು.