ಅನುದಾನ ಹಂಚಿಕೆಯಲ್ಲಿ ತಾರತಮ್ಯ

ಪರಶುರಾಮ ಭಾಸಗಿ
ವಿಜಯಪುರ: ರಾಷ್ಟ್ರೀಯ ತೋಟಗಾರಿಕೆ ಮಿಷನ್ ಯೋಜನೆಯಡಿ ಲಿಂಬೆ ಪುನಃಶ್ಚೇತನ ಕಾರ್ಯಕ್ರಮಕ್ಕೆ ಬಿಡುಗಡೆಯಾದ ಅನುದಾನ ಹಂಚಿಕೆಯಲ್ಲಿ ತಾರತಮ್ಯ ನೀತಿ ಅನುಸರಿಸಿರುವ ಗುರುತರ ಆರೋಪ ಕೇಳಿ ಬಂದಿದ್ದು, ತೋಟಗಾರಿಕೆ ಸಚಿವ ಎಂ.ಸಿ. ಮನಗೂಳಿ ತವರು ಕ್ಷೇತ್ರದಲ್ಲಿಯೇ ರೈತರು ಹಿಡಿಶಾಪ ಹಾಕುತ್ತಿದ್ದಾರೆ.
ಸಚಿವರು ತಮಗೆ ಬೇಕಾದವರಿಗೆ ಮಾತ್ರ ಮಣೆ ಹಾಕಿದ್ದು, ಇನ್ನುಳಿದ ರೈತರಿಗೆ ಅನ್ಯಾಯ ಮಾಡಿದ್ದಾರೆ. ಅರ್ಹರಿದ್ದರೂ ಅನೇಕ ರೈತರು ಸಹಾಯ ಧನದಿಂದ ವಂಚಿತರಾಗಿದ್ದಾರೆ. ಸಾವಿರಾರು ರೈತರನ್ನು ಸೌಲಭ್ಯದಿಂದ ವಂಚಿತರನ್ನಾಗಿಸಲಾಗಿದೆ. ತಮ್ಮ ಮತ ಹೆಚ್ಚಿರುವ ಹಳ್ಳಿಗಳಿಗೆ ಮೊದಲ ಆದ್ಯತೆ ನೀಡಲಾಗಿದೆ ಎಂಬಿತ್ಯಾದಿ ಆರೋಪಗಳು ಕೇಳಿ ಬಂದಿವೆ.

ಏನಿದು ಯೋಜನೆ?
ರಾಜ್ಯದಲ್ಲೇ ಅತೀ ಹೆಚ್ಚು ಲಿಂಬೆ ಬೆಳೆಯುವ ರೈತರ ಅನುಕೂಲಕ್ಕಾಗಿ ಸರ್ಕಾರ ಲಿಂಬೆ ಪುನಃಶ್ಚೇತನ ಕಾರ್ಯಕ್ರಮ ಹಮ್ಮಿಕೊಂಡಿದೆ. ಭೀಕರ ಬರಕ್ಕೆ ತುತ್ತಾಗಿ ಕಂಗಾಲಾಗಿರುವ ಲಿಂಬೆ ಬೆಳೆಗಾರರು ಬೇಸಿಗೆಯಲ್ಲಿ ಹಸಿರು ಉಳಿಸಿಕೊಳ್ಳಲು ಟ್ಯಾಂಕರ್ ನೀರಿಗೆ ಮೊರೆ ಹೋಗುತ್ತಿದ್ದರು. ಅದಾಗ್ಯೂ ಬಹುತೇಕ ಬೆಳೆ ನೀರಿಲ್ಲದೆ ಒಣಗಿದ್ದವು. ಹೀಗಾಗಿ ಲಿಂಬೆ ಪುನಃಶ್ಚೇತನ ಕಾರ್ಯಕ್ರಮದಡಿ ಟ್ಯಾಂಕರ್ ನೀರು, ಗೊಬ್ಬರ ಔಷಧ ಮತ್ತು ಕಟಾವಿಗಾಗಿ ಪ್ರತಿ ಎಕರೆಗೆ 8 ಸಾವಿರ ರೂ.ಗಳಂತೆ ಹೆಕ್ಟೇರ್‌ಗೆ 20 ಸಾವಿರ ರೂ. ನೀಡಲಾಗುತ್ತಿದೆ. ಪ್ರತಿ ಫಲಾನುಭವಿಗೆ ಗರಿಷ್ಠ 2 ಹೆಕ್ಟೇರ್‌ವರೆಗೆ ಸಹಾಯಧನ ನೀಡಬಹುದಾಗಿದೆ. ಇದು 10 ವರ್ಷದ ಹಳೇ ಗಿಡಗಳಿಗೆ ಮಾತ್ರ ಅನ್ವಯಿಸಲಿದೆ. ಆದರೆ, ಅದಕ್ಕಿಂತಲೂ ಹಳೇಗಿಡಗಳಿದ್ದರೂ ತಮಗೆ ಸಹಾಯ ಧನ ನೀಡಲಾಗಿಲ್ಲವೆಂಬುದು ರೈತರ ಆರೋಪ.

ಅನುದಾನ ವಿವರ
2018-19ನೇ ಸಾಲಿನಲ್ಲಿ ಲಿಂಬೆ ಪುನಃಶ್ಚೇತನ ಕಾರ್ಯಕ್ರಮದಡಿ ಸಹಾಯ ಧನ ಒದಗಿಸಲು 215 ಲಕ್ಷ ರೂ.ಅನುದಾನ ಬಿಡುಗಡೆಯಾಗಿತ್ತು. ಆ ಪ್ರಕಾರ 2018 ಆ. 23 ರವರೆಗೆ ಸಹಾಯಧನಕ್ಕಾಗಿ ರೈತರಿಂದ ಅರ್ಜಿ ಆಹ್ವಾನಿಸಲಾಗಿತ್ತು. ಐದು ತಾಲೂಕುಗಳಿಂದ ಒಟ್ಟು 8612 ಅರ್ಜಿಗಳು ಬಂದಿದ್ದವು. ಅದರಲ್ಲಿ 1075 ಹೆಕ್ಟೇರ್‌ಗೆ ಸಮೀಕ್ಷೆ ನಡೆಸಿ 2059 ಫಲಾನುಭವಿಗಳಿಗೆ ಅನುದಾನ ಹಂಚಿಕೆ ಮಾಡಲಾಗಿದೆ. ಇನ್ನುಳಿದ 6553 ಫಲಾನುಭವಿಗಳು ಯೋಜನೆಯಿಂದ ವಂಚಿತರಾಗಿದ್ದಾರೆ. ಅರ್ಹರಿದ್ದರೂ ಸಹಾಯಧನ ನೀಡದಿರುವುದಕ್ಕೆ ರೈತರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಆದರೆ, ಅಧಿಕಾರಿಗಳು ಮಾತ್ರ ಇರುವ ಅನುದಾನ ಹಂಚಿಕೆ ಮಾಡಿದ್ದು ಹೆಚ್ಚುವರಿ ಅನುದಾನಕ್ಕೆ ಪ್ರಸ್ತಾವನೆ ಸಲ್ಲಿಸಲಾಗಿದೆ. ಬಂದ ಕೂಡಲೇ ಇನ್ನುಳಿದ ಫಲಾನುಭವಿಗಳಿಗೆ ಹಂಚಿಕೆ ಮಾಡುವುದಾಗಿ ತಿಳಿಸುತ್ತಾರೆ. 2019-20ನೇ ಸಾಲಿಗೆ 1158 ಹೆಕ್ಟೇರ್ ಲಿಂಬೆ ಪುನಃಶ್ಚೇತನಕ್ಕಾಗಿ 230 ಲಕ್ಷ ರೂ. ಅನುದಾನ ಕೇಳಲಾಗುತ್ತಿದ್ದು, ಅದರಲ್ಲಿ ಬಾಕಿ ಉಳಿದವರಿಗೆ ಮೊದಲ ಆದ್ಯತೆ ನೀಡಲಾಗುವುದೆಂದು ಅಧಿಕಾರಿಗಳು ತಿಳಿಸುತ್ತಾರೆ.

ತಾಲೂಕುವಾರು ವಿವರ
ತಾಲೂಕು ಸ್ವೀಕೃತ ಅರ್ಜಿ ಸೌಲಭ್ಯ ಪಡೆದ ರೈತರ ಸಂಖ್ಯೆ
ಇಂಡಿ 4300 1068
ಸಿಂದಗಿ 3340 820
ವಿಜಯಪುರ 695 134
ಬ.ಬಾಗೇವಾಡಿ 266 26
ಮುದ್ದೇಬಿಹಾಳ 11 11
ಒಟ್ಟು 8612 2059

ಒಟ್ಟು 500 ಲಿಂಬೆ ಗಿಡ ಒಣಗಿ ನಿಂತಿವೆ. ಸುಮಾರು 15 ವರ್ಷಕ್ಕೂ ಮೇಲ್ಪಟ್ಟ ಗಿಡಗಳಿವೆ. ಲಿಂಬೆ ಪುನಃಶ್ಚೇತನ ಯೋಜನೆಯಡಿ ಅರ್ಜಿ ಸಲ್ಲಿಸಲಾಗಿದ್ದು, ಸಿಬ್ಬಂದಿಯೊಬ್ಬರು ಜಿಪಿಆರ್‌ಎಸ್ ಸಹ ಮಾಡಿಕೊಂಡು ಹೋಗಿದ್ದಾರೆ. ಆದರೆ, ಕೆಲವರಿಗೆ ಸಹಾಯಧನ ನೀಡಿದ್ದು ನಮಗಿನ್ನೂ ಬಂದಿಲ್ಲ. ಅಧಿಕಾರಿಗಳನ್ನು ಕೇಳಿದರೆ ಅನುದಾನವಿಲ್ಲ ಮುಂದಿನ ತಿಂಗಳು ಬಂದಾಗ ನೀಡುತ್ತೇವೆನ್ನುತ್ತಿದ್ದಾರೆ.
ಬಸವರಾಜ ಹಣಮಂತ್ರಾಯಗೌಡ ಬಿರಾದಾರ, ಚಿಕ್ಕರೂಗಿ ರೈತ

ತೋಟಗಾರಿಕೆ ಸಚಿವರು ತಮಗೆ ಬೇಕಾದವರಿಗೆ ಅನುದಾನ ಹಂಚಿಕೆ ಮಾಡಿದ್ದಾರೆ. ದೇವರಹಿಪ್ಪರಗಿ ಮತಕ್ಷೇತ್ರದ ಸುಮಾರು 45 ಹಳ್ಳಿಗಳಿಗೆ ಸಹಾಯಧನ ನೀಡಿಲ್ಲ. ಸಿಂದಗಿ ಮತಕ್ಷೇತ್ರದ ಹಳ್ಳಿಗಳಿಗೆ ಆದ್ಯತೆ ನೀಡಿದ್ದಾರೆ. ಸಚಿವರು ತಾರತಮ್ಯ ಧೋರಣೆ ತೋರಿದ್ದು, ಸ್ಥಳೀಯ ಶಾಸಕ ಸೋಮನಗೌಡ ಪಾಟೀಲ ಸಹ ಚಕಾರವೆತ್ತದೆ ಸುಮ್ಮನೆ ಕುಳಿತಿದ್ದಾರೆ. ಸಚಿವರಿಗೆ ಅಂಗಲಾಚಿದರೂ ಪ್ರಯೋಜನವಾಗಿಲ್ಲ.
ಶ್ರೀಶೈಲ ಮುಳಜಿ, ಸಾಮಾಜಿಕ ಹೋರಾಟಗಾರ

Leave a Reply

Your email address will not be published. Required fields are marked *