ಉದ್ಯೋಗಾಕಾಂಕ್ಷಿಗಳಲ್ಲಿ ಹೆಚ್ಚಿದ ಕಾತುರ

ವಿಜಯಪುರ: ಇಲ್ಲಿನ ದರಬಾರ ಹೈಸ್ಕೂಲ್ ಮೈದಾನದಲ್ಲಿ ಫೆ.23 ಹಾಗೂ 24ರಂದು ಸರ್ಕಾರದಿಂದ ಹಮ್ಮಿಕೊಳ್ಳುತ್ತಿರುವ ಮಿನಿ ಉದ್ಯೋಗ ಮೇಳದಲ್ಲಿ ಭಾಗವಹಿಸುವ ಉದ್ಯೋಗಾಕಾಂಕ್ಷಿಗಳ ಸಂಖ್ಯೆ ಹೆಚ್ಚಳಗೊಳ್ಳುತ್ತಿದೆ.

ವಿಜಯಪುರ-ಬಾಗಲಕೋಟೆ ಜಿಲ್ಲೆಯ ಉದ್ಯೋಗಾಕಾಂಕ್ಷಿಗಳಿಗಾಗಿ ಹಮ್ಮಿಕೊಳ್ಳುತ್ತಿರುವ ಮಿನಿ ಉದ್ಯೋಗ ಮೇಳದಲ್ಲಿ ಯಾವುದೇ ಲೋಪವಾಗದಂತೆ ಅಚ್ಚುಕಟ್ಟಾಗಿ ವ್ಯವಸ್ಥೆ ಮಾಡುವಂತೆ ಜಿಲ್ಲಾಧಿಕಾರಿ ಕಚೇರಿಯಲ್ಲಿ ಮಂಗಳವಾರ ನಡೆದ ಸಿದ್ಧತೆ ಸಭೆಯಲ್ಲಿ ಅಧಿಕಾರಿಗಳಿಗೆ ಸೂಚಿಸಲಾಯಿತು.

ಜಿಲ್ಲಾಧಿಕಾರಿ ಎಸ್.ಬಿ.ಶೆಟ್ಟೆಣ್ಣವರ ಮಾತನಾಡಿ, ಈಗಾಗಲೇ ಉದ್ಯೋಗ ಮೇಳದ ಕುರಿತು ವಿವಿಧ ಸಮಿತಿಗಳನ್ನು ನೇಮಕ ಮಾಡುವುದರ ಮೂಲಕ ಜವಾಬ್ದಾರಿಗಳನ್ನು ಹಂಚಿಕೆ ಮಾಡಲಾಗಿದೆ. ಅದರಂತೆ ಈವರೆಗೂ ಸಿದ್ಧತಾ ಕಾರ್ಯ ನಡೆದಿದೆ. ಅಂತಿಮ ಹಂತದ ಸಿದ್ಧತೆಗಳನ್ನು ಸಂಬಂಧಿಸಿದ ಸಮಿತಿಯವರು ಇನ್ನಷ್ಟು ಹೆಚ್ಚಿನ ಜವಾಬ್ದಾರಿಯಿಂದ ಚುರುಕಾಗಿ ನಿರ್ವಹಿಸಲು ಸೂಚನೆ ನೀಡಿದರು.

ಇದುವರೆಗೂ 4,600 ಉದ್ಯೋಗಾಕಾಂಕ್ಷಿಗಳು ತಮ್ಮ ಹೆಸರನ್ನು ನೋಂದಾಯಿಸಿದ್ದಾರೆ. ಉದ್ಯೋಗ ಮೇಳಕ್ಕೆ ಆಗಮಿಸುವ ಉದ್ಯೋಗಾಕಾಂಕ್ಷಿಗಳಿಗೆ ಗೊಂದಲ ಉಂಟಾಗದಂತೆ ಸೂಕ್ತ ಮಾರ್ಗದರ್ಶನ ನೀಡಲು ಕೌಂಟರ್‌ಗಳನ್ನು ತೆರೆಯಬೇಕು. ಉದ್ಯೋಗದಾತರ ಬೇಡಿಕೆಗಳನ್ವಯ ಉದ್ಯೋಗಾಕಾಂಕ್ಷಿಗಳ ವರ್ಗೀಕರಣ ಮಾಡಬೇಕು ಎಂದು ಹೇಳಿದರು.

ಕೊನೆಯ ಹಂತದ ಸಿದ್ಧತೆಗಳನ್ನು ಪೂರ್ಣಗೊಳಿಸಿ ಉದ್ಯೋಗ ಮೇಳವನ್ನು ಯಶಸ್ವಿಗೊಳಿಸಬೇಕು ಎಂದು ವಿವಿಧ ಸಮಿತಿಗಳ ಮುಖ್ಯಸ್ಥರಿಗೆ ಸೂಚಿಸಿದರು. ಪಾಲಿಕೆ ಆಯುಕ್ತ ಡಾ.ಔದ್ರಾಮ, ತಹಸೀಲ್ದಾರ್ ಮೋಹನಕುಮಾರಿ, ಕೌಶಲಾಭಿವೃದ್ಧಿ ಅಧಿಕಾರಿ ರಮೇಶ ದೇಸಾಯಿ ಸೇರಿ ಜಿಲ್ಲಾ ಮಟ್ಟದ ವಿವಿಧ ಇಲಾಖೆ ಅಧಿಕಾರಿಗಳು ಉಪಸ್ಥಿತರಿದ್ದರು.