ಉಭಯ ಪಕ್ಷಗಳಲ್ಲಿ ಉದಾಸೀನವೇ ಹೆಚ್ಚು?

ಪರಶುರಾಮ ಭಾಸಗಿ
ವಿಜಯಪುರ: 17ನೇ ಲೊಕಸಭೆ ಚುನಾವಣೆ ಬಹಿರಂಗ ಪ್ರಚಾರಕ್ಕೆ ಭಾನುವಾರ ಸಂಜೆ ತೆರೆಬಿದ್ದಿದ್ದು, ಬಿಜೆಪಿ ಮತ್ತು ಕಾಂಗ್ರೆಸ್‌ನ ರಾಷ್ಟ್ರೀಯ ನಾಯಕರು ಪ್ರಚಾರಕ್ಕೆ ಬಾರದೆ ಅಭ್ಯರ್ಥಿಗಳಿಗೆ ‘ಕೈ’ ಕೊಟ್ಟಿದ್ದಾರೆ !
ಪರಿಶಿಷ್ಟ ಜಾತಿಗೆ ಮೀಸಲಾಗಿರುವ ವಿಜಯಪುರ ಕ್ಷೇತ್ರದಲ್ಲಿ ಈ ಬಾರಿ ಹೇಳಿಕೊಳ್ಳುವಂಥ ಪ್ರಚಾರವೇನೂ ಕಾಣಿಸಲಿಲ್ಲ. ಬಿಜೆಪಿಯಲ್ಲಿ ನಟಿ ತಾರಾ ಅನುರಾಧಾ ಬಿಟ್ಟರೆ ರಾಜ್ಯ ಹಾಗೂ ರಾಷ್ಟ್ರೀಯ ನಾಯಕರು ಬರಲೇ ಇಲ್ಲ. ಜೆಡಿಎಸ್‌ನಿಂದ ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡ ಹಾಗೂ ಸಿಎಂ ಕುಮಾರಸ್ವಾಮಿ ಬಹಿರಂಗ ಪ್ರಚಾರ ನಡೆಸಿದರಾದರೂ ದೋಸ್ತಿಗಳಿಂದ ಸಮರ್ಪಕವಾಗಿ ಸಾಥ್ ಸಿಗಲಿಲ್ಲ. ಹೀಗಾಗಿ ‘ಪಿತ-ಸುತ’ ರು ಕೇವಲ ಮೂರು ಕ್ಷೇತ್ರಗಳಿಗೆ ಮಾತ್ರ ಸೀಮಿತರಾಗಬೇಕಾಯಿತು. ಆಂತರಿಕ ಅಸಮಾಧಾನವೋ…ಒಗ್ಗಟ್ಟಿನ ಕೊರತೆಯಿಂದಾಗಿಯೋ ಇಂಡಿ ಮತ್ತು ಸಿಂದಗಿ ಕಾರ್ಯಕ್ರಮ ರದ್ದುಗೊಂಡಿತು.

ಕೈಕೊಟ್ಟ ಸ್ಮತಿ-ಬಿಎಸ್‌ವೈ
ಏ. 20 ರಂದು ತಾಳಿಕೋಟೆಗೆ ಬರಬೇಕಿದ್ದ ಬಿಜೆಪಿ ರಾಷ್ಟ್ರೀಯ ನಾಯಕಿ ಸ್ಮತಿ ಇರಾನಿ ಬರಲೇ ಇಲ್ಲ. ಅಂದು ಮಧ್ಯಾಹ್ನ 2ಕ್ಕೆ ತಾಳಿಕೋಟೆಯ ಸರ್ಕಾರಿ ಶಾಲೆ ಆವರಣದಲ್ಲಿ ಹಮ್ಮಿಕೊಂಡಿದ್ದ ಸಮಾವೇಶ ರದ್ದಾಯಿತು. ಇದಕ್ಕೆ ನಿಖರ ಕಾರಣ ಸಹ ಬಿಟ್ಟುಕೊಡಲಿಲ್ಲ. ಇನ್ನು ಏ. 21 ರಂದು ನಿಗದಿಯಾಗಿದ್ದ ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್. ಯಡಿಯೂರಪ್ಪ ಅವರ ಪ್ರವಾಸ ಸಹ ರದ್ದಾಯಿತು. ಅಂದು ಬೆಳಗ್ಗೆ 11ಕ್ಕೆ ಸಿಂದಗಿಯಲ್ಲಿ ನಡೆಯಬೇಕಿದ್ದ ರೋಡ್‌ಶೋಗೆ ಕೊಕ್ಕೆ ಬಿತ್ತು. ಅಲ್ಲದೆ, ವಿವಿಧೆಡೆ ರೋಡ್‌ಶೋ ನಡೆಸಿ ಬಿಎಸ್‌ವೈ ಮತಯಾಸಿವರೆಂಬ ನಿರೀಕ್ಷೆ ಸುಳ್ಳಾಯಿತು. ಬಿಜೆಪಿ ರಾಷ್ಟ್ರೀಯ ಸಹ ಸಂಘಟನಾ ಕಾರ್ಯದರ್ಶಿ ಬಿ.ಎಲ್. ಸಂತೋಷ ಬಿಟ್ಟರೆ ಹೇಳಿಕೊಳ್ಳುವಂಥ ಭಾಷಣಕಾರರು ಸಹ ಆಗಮಿಸಲಿಲ್ಲ. ಜಿಲ್ಲೆಯವರೇ ಆದ ನಗರ ಶಾಸಕ ಬಸನಗೌಡ ಪಾಟೀಲ ಯತ್ನಾಳ ಮತ್ತು ವಿಪ ಸದಸ್ಯ ಹಣಮಂತ ನಿರಾಣಿ ಸಹ ಪ್ರಚಾರದಿಂದ ದೂರವುಳಿದರು. ಉಸ್ತುವಾರಿ ಹೊತ್ತ ಲಕ್ಷ್ಮಣ ಸವದಿ ನಂತರದ ದಿನಗಳಲ್ಲಿ ಕಾಣಿಸಲೇ ಇಲ್ಲ.

ಕಾಂಗ್ರೆಸ್ ನಿರಾಸಕ್ತಿ
ಇನ್ನು ಜೆಡಿಎಸ್ ಮತ್ತು ಕಾಂಗ್ರೆಸ್ ಮುಖಂಡರು ಮೊದಲನೇ ಹಂತಕ್ಕೆ ನೀಡಿದಷ್ಟು ಪ್ರಾಮುಖ್ಯತೆ ಎರಡನೇ ಹಂತದಲ್ಲಿ ತೋರಲಿಲ್ಲ. ಪಕ್ಷದ ಅಭ್ಯರ್ಥಿ ಎನ್ನುವ ಕಾರಣಕ್ಕೆ ದೇವೇಗೌಡರು ಹಾಗೂ ಕುಮಾರಸ್ವಾಮಿ ಬಂದಿದ್ದು ಬಿಟ್ಟರೆ ಇನ್ನುಳಿದವರು ತಿರುಗಿಯೂ ನೋಡಲಿಲ್ಲ. ನೆರೆಯ ಜಿಲ್ಲೆಯಲ್ಲಿದ್ದರೂ ಮಾಜಿ ಸಿಎಂ ಸಿದ್ದರಾಮಯ್ಯ ಜಿಲ್ಲೆಗೆ ಭೇಟಿ ನೀಡಲಿಲ್ಲ. ಕ್ಷೇತ್ರ ಹಂಚಿಕೆಗೂ ಮುನ್ನ ನಡೆದ ಬಂಜಾರ ಸಮಾವೇಶದಲ್ಲಿ ಭಾಗಿಯಾಗಿ ಹೋದ ಸಿದ್ದರಾಮಯ್ಯ ಆ ಬಳಿಕ ಬರಲೇ ಇಲ್ಲ. ಇನ್ನು ಪಕ್ಕದ ಕ್ಷೇತ್ರದಲ್ಲಿದ್ದರೂ ರಾಷ್ಟ್ರೀಯ ನಾಯಕ ಮಲ್ಲಿಕಾರ್ಜುನ ಖರ್ಗೆ ಒಮ್ಮೆಯೂ ಇತ್ತ ಕಡೆ ಲಕ್ಷ ವಹಿಸಲಿಲ್ಲ. ರಾಷ್ಟ್ರೀಯ ನಾಯಕರೊಬ್ಬರು ಕೇವಲ ತಮ್ಮ ಕ್ಷೇತ್ರಕ್ಕೆ ಸೀಮಿತವಾಗಿದ್ದು ಕೊಂಚ ಚರ್ಚೆಗೂ ಗ್ರಾಸವಾಯಿತು. ಸಿಎಂ ಇಬ್ರಾಹಿಂ ಸೇರಿ ಕೆಲ ಮುಸ್ಲಿಂ ಮುಖಂಡರನ್ನು ಕರೆಯಿಸಿ ಮತ ಸೆಳೆಯುವ ಲೆಕ್ಕಾಚಾರವೂ ಸುಳ್ಳಾಯಿತು.

ಗೆಲ್ಲುವ ಭರವಸೆಯಾ?
ರಾಜ್ಯ ಹಾಗೂ ರಾಷ್ಟ್ರೀಯ ನಾಯಕರ ಅನುಪಸ್ಥಿತಿಗೆ ಉಭಯ ಪಾಳಯದಲ್ಲೂ ಗೆಲ್ಲುವ ಭರವಸೆಯೇ ಕಾರಣವಾ? ಎಂಬ ಪ್ರಶ್ನೆಯೂ ಇದೆ. ಜಿಲ್ಲೆಯಲ್ಲಿ ಮೂವರು ಸಚಿವರು, ಇಬ್ಬರು ವಿಧಾನ ಪರಿಷತ್ ಸದಸ್ಯರು, ಸಂಸದೀಯ ಕಾರ್ಯದರ್ಶಿ ಹಾಗೂ ಮಂಡಳಿ ಅಧ್ಯಕ್ಷರಿದ್ದಾರೆಂಬ ಕಾರಣಕ್ಕೆ ಮೈತ್ರಿ ನಾಯಕರು ಪ್ರಚಾರಕ್ಕೆ ಬರಲಿಲ್ಲವೇ? ಅಥವಾ ನಿಜಕ್ಕೂ ಉದಾಸೀನತೆಯೇ? ಎಂಬ ಪ್ರಶ್ನೆ ಸಹಜವಾಗಿಯೇ ಕಾಡುತ್ತಿದೆ. ವಿಧಾನಸಭೆ ಚುನಾವಣೆ ಪ್ರಚಾರಕ್ಕೆ ಬಂದಿದ್ದ ಎಐಸಿಸಿ ಅಧ್ಯಕ್ಷೆ ಸೋನಿಯಾ ಗಾಂಧಿ, ರಾಹುಲ್ ಗಾಂಧಿ, ಬಿಜೆಪಿಯ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಷಾ, ಪ್ರಧಾನಿ ನರೇಂದ್ರ ಮೋದಿ ಲೋಕಸಭೆ ಚುನಾವಣೆ ಪ್ರಚಾರಕ್ಕೆ ಬರಲಿಲ್ಲ. ಕೊನೇ ಪಕ್ಷ ಇನ್ನುಳಿದ ನಾಯಕರ ಪೈಕಿ ಯಾರಾದರೊಬ್ಬರೂ ಬರಬಹುದಿತ್ತೆಂಬ ಮಾತಿಗೂ ಈಗ ಮೌಲ್ಯವಿಲ್ಲ.

Leave a Reply

Your email address will not be published. Required fields are marked *