ಮೊಮ್ಮಕ್ಕಳ ಕೂಡ ಆಟವಾಡಿದ ಅಜ್ಜ-ಅಜ್ಜಿ

ಪರಶುರಾಮ ಭಾಸಗಿ
ವಿಜಯಪುರ: 17 ನೇ ಲೋಕಸಭೆ ಚುನಾವಣೆಗೆ ಮತದಾನ ಪ್ರಕ್ರಿಯೆ ಮುಗಿಯುತ್ತಿದ್ದಂತೆ ಪ್ರಮುಖ ಪಕ್ಷಗಳ ಅಭ್ಯರ್ಥಿಗಳು ಹಾಗೂ ಮುಖಂಡರು ಈಗ ವಿಶ್ರಾಂತಿ ‘ಮೂಡ್’ನಲ್ಲಿದ್ದಾರೆ !

ಕಳೆದೊಂದು ತಿಂಗಳಿನಿಂದ ಹಸಿವು, ನಿದ್ರೆ, ಮನೆ, ಕುಟುಂಬ ಮರೆತು ಲೋಕಸಭೆ ಚುನಾವಣೆ ಪ್ರಚಾರ ಕಾರ್ಯದಲ್ಲಿ ಅಭ್ಯರ್ಥಿಗಳು ತೊಡಗಿಸಿಕೊಂಡಿದ್ದರು. ಮತದಾರ ಪ್ರಭುವಿನ ಆಶೀರ್ವಾದ ಪಡೆಯಲು ಕಾಲಿಗೆ ಚಕ್ರಕಟ್ಟಿಕೊಂಡು ಕ್ಷೇತ್ರದಾದ್ಯಂತ ಓಡಾಡಿಕೊಂಡಿದ್ದರು.

ಈಗ ಅದೆಲ್ಲ ಕಸರತ್ತಿಗೆ ಬ್ರೇಕ್ ಬಿದ್ದಿದ್ದು ಅಭ್ಯರ್ಥಿಗಳಿಗೆ ಮನೆ, ಕುಟುಂಬ ಸದಸ್ಯರು ನೆನಪಾಗಿದ್ದಾರೆ. ವಿಜಯಪುರ ಲೋಕಸಭೆ ಮೀಸಲು ಕ್ಷೇತ್ರಕ್ಕೆ ಸ್ಪರ್ಧಿಸಿರುವ ಪ್ರಮುಖ ಪಕ್ಷಗಳ ಅಭ್ಯರ್ಥಿಗಳು ವಿಶ್ರಾಂತಿಗೆ ಭಿನ್ನ ಹಾದಿ ಹಿಡಿದಿದ್ದಾರೆ. ಜನಪ್ರತಿನಿಧಿಯೊಬ್ಬರು ವಿದೇಶದತ್ತ ಪ್ರಯಾಣ ಬೆಳೆಸಿದ್ದರೆ ಕೆಲ ಶಾಸಕರು ಅಜ್ಞಾತ ಸ್ಥಳಕ್ಕೆ ತೆರೆಳಿದ್ದು ಕಂಡು ಬಂತು.

ಮೊಮ್ಮಕ್ಕಳ ಜತೆ ಆಟ
ಬುಧವಾರ ಬೆಳಗ್ಗೆ ಬಿಜೆಪಿ ಅಭ್ಯರ್ಥಿ ರಮೇಶ ಜಿಗಜಿಣಗಿ ಹಾಗೂ ಜೆಡಿಎಸ್ ಅಭ್ಯರ್ಥಿ ಡಾ. ಸುನೀತಾ ಚವಾಣ್ ಸಂಪೂರ್ಣ ಪ್ರಸನ್ನವದನರಾಗಿದ್ದರು. ಪ್ರತಿದಿನ ಗಂಟಿಕ್ಕಿಕೊಳ್ಳುತ್ತಿದ್ದ ಮುಖದ ಗೆರೆಗಳು ಅಳಸಿ ಮಂದಸ್ಮಿತರಾಗಿ ಮೊಮ್ಮಕ್ಕಳ ಜತೆ ಆಟವಾಡಿಕೊಂಡಿದ್ದರು.

ಅಭ್ಯರ್ಥಿಗಳು ಹಾಗೂ ಮಕ್ಕಳ ಜತೆಗಿನ ಆಟ ಸುದೀರ್ಘಾವಧಿ ಬಳಿಕ ಸಿಕ್ಕ ವಾತ್ಸಲ್ಯದಂತಿತ್ತು. ತಿಂಗಳ ಪರ್ಯಂತ ಮಕ್ಕಳನ್ನು ಸರಿಯಾಗಿ ನೋಡಿಕೊಳ್ಳಲಾಗಲೇ ಇಲ್ಲ. ತರಾತುರಿಯಲ್ಲಿ ಮಕ್ಕಳನ್ನು ಮಾತಾಡಿಸಿ ಪ್ರಚಾರಕ್ಕೆ ಹೋಗಬೇಕಿತ್ತು. ಇದೀಗ ಅವರ ಜತೆಗಿನ ಒಡನಾಟ ಖುಷಿ ತಂದಿದೆ ಎಂದರು ಸುನೀತಾ ಚವಾಣ್. ಇನ್ನು ರಮೇಶ ಜಿಗಜಿಣಗಿ ಅವರ ಸುತ್ತ ಮೊಮ್ಮಕ್ಕಳ ದಂಡೇ ಮುತ್ತಿಕೊಂಡಿತ್ತು. ಅಜ್ಜ ಮತ್ತು ಮೊಮ್ಮಕ್ಕಳ ಒಡನಾಟ ಚುನಾವಣೆಯ ತಲೆನೋವು ಹೋಗಲಾಡಿಸಿತ್ತು.

ಮುಖಂಡರ ಜತೆ ಹರಟೆ
ಚುನಾವಣೆ ಮುಗಿದರೂ ಕೆಲ ಕಾರ್ಯಕರ್ತರು ಎಂದಿನಂತೆ ಮನೆ ಮುಂದೆ ಝಂಡಾ ಹೂಡಿದ್ದರು. ಮುಖಂಡರುಗಳು ಚುನಾವಣೆ ಕುರಿತ ಚರ್ಚೆಯಲ್ಲಿ ತೊಡಗಿಸಿಕೊಂಡಿದ್ದರು. ಡಾ. ಸುನೀತಾ ಚವಾಣ್ ಅವರು ಪ್ರಚಾರ ವೇಳೆ ನಡೆದ ಘಟನಾವಳಿಗಳು ಹಾಗೂ ಮತದಾನದ ದಿನದ ಎದುರಿಸಿದ ಕೆಲ ಸವಾಲುಗಳ ಬಗ್ಗೆ ಮುಖಂಡರ ಜತೆ ಸ್ವಾರಸ್ಯಕರವಾಗಿ ಹರಟುತ್ತಿದ್ದರು. ಯಾವ ಯಾವ ಭಾಗದಲ್ಲಿ ಎಷ್ಟು ಮತ ಹೆಚ್ಚಿಗೆ ಬರಬಹುದೆಂಬ ಲೆಕ್ಕಾಚಾರ ಸಹ ಜೋರಾಗಿತ್ತು. ಪತಿ ಶಾಸಕ ದೇವಾನಂದ ಚವಾಣ್ ಅವರು ಕಾರ್ಯನಿಮಿತ್ತ ಬೆಂಗಳೂರಿಗೆ ತೆರಳಿದ್ದರು.

ಇನ್ನು ರಮೇಶ ಜಿಗಜಿಣಗಿ ಅವರ ಮನೆಯಲ್ಲಿ ಅಧಿಕಾರದ ವಾಸನೆ ದಟ್ಟವಾಗಿತ್ತಲ್ಲದೇ ಕೇಂದ್ರ ಮಂತ್ರಿಯ ಗತ್ತಿನಲ್ಲೇ ಮುಖಂಡರನ್ನು ಬರಮಾಡಿಕೊಂಡು ಪರಸ್ಪರ ಕುಶಲೋಪರಿ ಯೋಚಿಸುತ್ತಾ ಜಿಗಜಿಣಗಿ ಮಹಡಿ ಮೇಲೆ ಸುಖಾಸೀನರಾಗಿದ್ದರು. ಕೆಲವರು ಸಮಸ್ಯೆ ಹೇಳಿಕೊಂಡು ಬಂದಿದ್ದರೆ ಇನ್ನೂ ಕೆಲವರು ಚುನಾವಣೆಯ ಸೋಲು- ಗೆಲುವಿನ ಲೆಕ್ಕಾಚಾರ ಒಪ್ಪಿಸುತ್ತಿರುವುದು ಕಂಡು ಬಂತು. ಬಳಿಕ ಬಿಸಿಲೇರುತ್ತಿದ್ದಂತೆ ಜಿಗಜಿಣಗಿ ಅವರು ಮದುವೆ ಕಾರ್ಯಕ್ಕೆ ತೆರಳಿದರು.

ಕಚೇರಿಗಳೆಲ್ಲಾ ಖಾಲಿ ಖಾಲಿ
ಸದಾ ಕಾರ್ಯಕರ್ತರಿಂದ ಗಿಜಿಗುಡುತ್ತಿದ್ದ ಪಕ್ಷದ ಪ್ರಚಾರ ಕಾರ್ಯಾಲಯಗಳು ಬುಧವಾರ ಮೌನಕ್ಕೆ ಜಾರಿದ್ದವು. ದಿನಕ್ಕೊಂದು ಸುದ್ದಿಗೋಷ್ಠಿ, ಕಾರ್ಯಕರ್ತರ ಸಭೆ, ಪ್ರಚಾರ ಸಾಮಗ್ರಿಗಳ ಭರಾಟೆಗಳಿಂದ ತುಂಬಿ ತುಳುಕುತ್ತಿದ್ದ ಕಚೇರಿಗಳಲ್ಲಿ ನಿಶ್ಯಬ್ಧ ಆವರಿಸಿತ್ತು. ಜೆಡಿಎಸ್ ಕಾರ್ಯಾಲಯದಲ್ಲಿ ಜಿಲ್ಲಾಧ್ಯಕ್ಷ ಮಲ್ಲಿಕಾರ್ಜುನ ಯಂಡಿಗೇರಿ ಪತ್ರಿಕೆ ಓದುತ್ತಾ ಕುಳಿತಿದ್ದರೆ ಇವರೊಟ್ಟಿಗೆ ಮುಖಂಡರೊಬ್ಬರು ಕುಳಿತಿದ್ದರು. ಬಿಜೆಪಿ ಕಾರ್ಯಾಲಯದಲ್ಲಿ ಕಾರ್ಯಕರ್ತರು ಕುರ್ಚಿಗಳನ್ನು ಪೇರಿಸಿಡುತ್ತಿದ್ದರು. ಪ್ರಚಾರ ಸಾಮಗ್ರಿ ತೆರವುಗೊಳಿಸಿ ಕಚೇರಿ ಸ್ವಚ್ಛಗೊಳಿಸಲಾಗುತ್ತಿತ್ತು.

ಚುನಾವಣೆ ಜಂಝಾಟದಲ್ಲಿ ಮೊಮ್ಮಕ್ಕಳು ಜತೆ ಬೆರೆಯಲಾಗಿಲ್ಲ. ಇನ್ನೆರೆಡು ದಿನ ಅವರ ಕೂಟ ಕಾಲ ಕಳೆಯುತ್ತೇನೆ. ಅವರಿಗೂ ಈಗ ರಜಾ ದಿನ. ಅವರು ಎಲ್ಲಿಗೆ ಕರೆದುಕೊಂಡು ಹೋಗೆನ್ನುತ್ತಾರೋ ಅವರೊಟ್ಟಿಗೆ ಹೋಗುತ್ತೇನೆ. ಚುನಾವಣೆ ಸೋಲು- ಗೆಲುವಿನ ಚಿಂತೆ ಮರೆತು ಎರಡು ದಿನ ವಿಶ್ರಾಂತಿ ಪಡೆಯುತ್ತೇನೆ.
ರಮೇಶ ಜಿಗಜಿಣಗಿ, ಬಿಜೆಪಿ ಅಭ್ಯರ್ಥಿ

ಚುನಾವಣೆ ಬಹಳ ಖುಷಿ ಕೊಟ್ಟಿದೆ. ಗೆಲ್ಲುವುದು ನಿಶ್ಚಿತ ಎನಿಸಿದೆ. ಹೀಗಾಗಿ ತಲೆ ಕೆಡೆಸಿಕೊಳ್ಳದೇ ಆರಾಮಾಗಿ ಕುಟುಂಬಸ್ಥರ ಜತೆ ಕಾಲ ಕಳೆಯುತ್ತೇನೆ. ಫಲಿತಾಂಶಕ್ಕೆ ಇನ್ನೂ ತಿಂಗಳ ಕಾಲಾವಕಾಶ ಇದೆ. ಅಲ್ಲಿವರೆಗೆ ಚುನಾವಣೆಗೆ ಶ್ರಮಿಸಿದ ಪಕ್ಷದ ಕಾರ್ಯಕರ್ತರನ್ನು ಕರೆದು ಮಾತಾಡುಸುತ್ತೇನೆ. ಕುಟುಂಬಸ್ಥರತ್ತಲೂ ಚಿತ್ತ ಹರಿಸುವೆ.
ಡಾ. ಸುನೀತಾ ಚವಾಣ್, ಜೆಡಿಎಸ್ ಅಭ್ಯರ್ಥಿ

Leave a Reply

Your email address will not be published. Required fields are marked *