ಬಿಸಿಲೂರಲ್ಲಿ ತಗ್ಗಿದ ಮತದಾನದ ಕಾವು

ವಿಜಯಪುರ: ಮತದಾನ ಬಹಿಷ್ಕಾರ, ಮತಯಂತ್ರಗಳ ದೋಷ, ಮತಪಟ್ಟಿಯಿಂದ ಕೈ ಬಿಟ್ಟು ಹೋದ ಹೆಸರುಗಳು, ತಡವಾಗಿ ಆರಂಭಗೊಂಡ ಮತದಾನ ಪ್ರಕ್ರಿಯೆ ನಡುವೆಯೂ ಜಿಲ್ಲಾದ್ಯಂತ ಶಾಂತಿಯುತ ಮತದಾನ ನಡೆದಿದೆ.

ಲೋಕಸಭೆ ಚುನಾವಣೆ ಹಿನ್ನೆಲೆ ಮಂಗಳವಾರ ಜಿಲ್ಲೆ ಎಂಟು ವಿಧಾನ ಸಭೆ ಕ್ಷೇತ್ರಗಳಲ್ಲಿ ಮತದಾನ ಪ್ರಕ್ರಿಯೆ ಸಾಂಗವಾಗಿ ನೆರವೇರಿದೆ. ಉರಿವ ಬಿಸಿಲು ಲೆಕ್ಕಿಸದೇ ವೃದ್ಧರು, ಅಂಗವಿಕಲರು ಹಾಗೂ ಯುವಕರು ಮತದಾನ ಮಾಡುವ ಮೂಲಕ ಮಾದರಿಯಾದರು. ಆದರೂ ನಿರೀಕ್ಷಿತ ಪ್ರಮಾಣದಲ್ಲಿ ಮತದಾನ ಆಗದಿರುವುದು ಪ್ರಜಾಪ್ರಭುತ್ವ ವ್ಯವಸ್ಥೆಗೆ ಕೊಂಚ ಹಿನ್ನಡೆ ಆದಂತಿದೆ.

ಜಿಲ್ಲೆಯ 2101 ಮತಗಟ್ಟೆಗಳಲ್ಲಿ ಬೆಳಗ್ಗೆ 7ಕ್ಕೆ ಸರಿಯಾಗಿ ಮತದಾನ ಪ್ರಕ್ರಿಯೆ ಆರಂಭಗೊಂಡಿತಾದರೂ ಕೆಲವೆಡೆ ತಾಂತ್ರಿಕ ತೊಂದರೆಯಿಂದಾಗಿ ಮತದಾನ ವಿಳಂಬವಾಯಿತು. ಬೆಳಗ್ಗೆ ಬೇಗ ಮತದಾನ ಮಾಡಿ ದೈನಂದಿನ ಕೆಲಸ ಕಾರ್ಯಗಳಿಗೆ ಹೋಗಬೆಂಕೆಂದು ಮತಗಟ್ಟೆಗೆ ಬಂದಿದ್ದ ಮತದಾರ ಪ್ರಭುಗಳು ತಾಂತ್ರಿಕ ತೊಂದರೆಯಿಂದಾಗಿ ಹಿಡಿಶಾಪ ಹಾಕಿದರು. ಇನ್ನುಳಿದಂತೆ ಕೆಲವರು ಬೇಗ ಮತ ಚಲಾಯಿಸಿ ದೈನಂದಿನ ಚಟುವಟಿಕೆಯಲ್ಲಿ ತೊಡಗಿಸಿಕೊಂಡರು.

ಮತದಾರರಲ್ಲಿ ಗೊಂದಲ
ಕಾಂಗ್ರೆಸ್-ಜೆಡಿಎಸ್ ಮೈತ್ರಿಯಾಗಿದ್ದರೂ ಬಹುತೇಕ ಕಡೆ ಮತದಾರರು ಗೊಂದಲಕ್ಕೊಳಗಾಗಿದ್ದು ಕಂಡು ಬಂತು. ಕಾಂಗ್ರೆಸ್ ಚಿಹ್ನೆ ಕಾಣುತ್ತಿಲ್ಲವೆಂದು ಕೆಲವೆಡೆ ತಗಾದೆ ತೆಗೆದ ಪ್ರಸಂಗ ನಡೆದಿದೆ. ಬಬಲೇಶ್ವರ ಕ್ಷೇತ್ರದಲ್ಲಿ ಬ್ಯಾಲೆಟ್ ಪೇಪರ್‌ನಲ್ಲಿ ಕಾಂಗ್ರೆಸ್ ಚಿಹ್ನೆ ಕಾಣುತ್ತಿಲ್ಲವೆಂದು ಅಜ್ಜಿಯೊಬ್ಬರು ಜನಪ್ರತಿನಿಧಿಯನ್ನೇ ಪ್ರಶ್ನಿಸಿದ್ದಾಳೆ. ಬಳಿಕ ಸಮಜಾಯಿಷಿ ನೀಡಲಾಗಿ ತನ್ನ ಹಕ್ಕು ಚಲಾಯಿಸುವ ನಿರ್ಧಾರ ಪ್ರಕಟಿಸಿದ್ದಾಗಿ ತಿಳಿದು ಬಂತು. ಇದೇ ಮೊದಲ ಬಾರಿ ಬ್ಯಾಲೆಟ್ ಪೇಪರ್‌ನಲ್ಲಿ ಕಾಂಗ್ರೆಸ್ ಚಿಹ್ನೆ ಕಾಣೆಯಾಗಿದ್ದು ಸಹ ಸಾಂಪ್ರದಾಯಿಕ ಮತದಾರರ ಹಿನ್ನಡೆಗೂ ಕಾರಣವಾಗಿದೆ. ಕೆಲ ಕಟ್ಟಾ ಕಾಂಗ್ರೆಸ್ಸಿಗರು ಮತದಾನದಿಂದ ದೂರವುಳಿದ ಪ್ರಸಂಗ ಕೂಡ ಅಲ್ಲಲ್ಲಿ ಕಂಡು ಬಂತು.

ಫೇಸ್‌ಬುಕ್ ಲೈವ್
ಮತಗಟ್ಟೆ ವ್ಯಾಪ್ತಿಯಲ್ಲಿ ಮೊಬೈಲ್ ಬಳಕೆ ನಿಷೇಧವಿದ್ದರೂ ಮತದಾನದ ನೈಜ ದೃಶ್ಯಾವಳಿಗಳು ಸಾಮಾಜಿಕ ಜಾಲತಾಣದಲ್ಲಿ ಹರಿದಾಡಿದವು. ಅನೇಕರು ಮತಚಲಾವಣೆ ದೃಶ್ಯಾವಳಿಗಳನ್ನು ಫೇಸ್‌ಬುಕ್ ಲೈವ್ ಮೂಲಕ ಸಾಕ್ಷೀಕರಿಸಿದ್ದು ಕಂಡು ಬಂತು. ಲೈವ್ ಮೂಲಕವೇ ಇವಿಎಂನಲ್ಲಿ ಹಕ್ಕು ಚಲಾಯಿಸಿ ವಿವಿ ಪ್ಯಾಡ್‌ನಲ್ಲಿ ಅದರ ದೃಢೀಕರಣ ದೃಶ್ಯಗಳನ್ನು ಚಿತ್ರೀಕರಿಸಲಾಗಿದೆ. ಇನ್ನೂ ಕೆಲವರು ಮತದಾನದ ಫೋಟೊಗಳನ್ನು ಹರಿಬಿಡುವ ಮೂಲಕ ಗುಪ್ತ ಮತದಾನವನ್ನು ಬಹಿರಂಗಗೊಳಿಸಿದ್ದಾರೆ. ಇನ್ನೂ ಕೆಲವರು ಯಾವ ಪಕ್ಷಕ್ಕೆ ಮತ ಚಲಾಯಿಸಿದ್ದೇನೆಂಬುದನ್ನು ಘಂಟಾಘೋಷವಾಗಿ ಘೋಷಿಸಿಕೊಂಡರೆ ಕೆಲವರು ಪಕ್ಷದ ಚಿಹ್ನೆಗಳೊಂದಿಗಿನ ಸೆಲ್ಫಿ ಹರಿಬಿಟ್ಟರು. ಪ್ರಮುಖ ಪಕ್ಷಗಳ ಕಾರ್ಯಕರ್ತರು ಫೇಸ್‌ಬುಕ್‌ನಲ್ಲಿ ಎಂದಿನಂತೆ ಪ್ರಚಾರ ಮುಂದುವರಿಸಿದ್ದು ಕಂಡು ಬಂತು. ಮತದಾರನೊಬ್ಬ ಬಿಜೆಪಿ ಅಭ್ಯರ್ಥಿ ರಮೇಶ ಜಿಗಜಿಣಗಿ ಫೋಟೊ ಇರುವ ಇವಿಎಂ ಯಂತ್ರದ ಪಕ್ಕ ಶಾಸಕ ಯತ್ನಾಳರ ಫೋಟೊ ಇಟ್ಟು ಮತಚಲಾಯಿಸಿದ ಫೋಟೊ ಸಹ ವೈರಲ್ ಆಗಿದೆ.

ಇಳಿವಯಸ್ಸಿನಲ್ಲೂ ಇಳಿಯದ ಉತ್ಸಾಹ
ಯುವಜನತೆ ಇನ್ನಿಲ್ಲದ ಉತ್ಸಾಹದಿಂದ ಮತ ಚಲಾಯಿಸಿದರಲ್ಲದೇ ವೃದ್ಧರು ಸಹ ತಾವು ಯಾರಿಗೇನು ಕಡಿಮೆ ಇಲ್ಲವೆನ್ನುವಂತೆ ಮತಗಟ್ಟೆಗೆ ಬಂದು ಹಕ್ಕು ಚಲಾಯಿಸಿದರು. ಅಥರ್ಗಾದಲ್ಲಿ 109 ವರ್ಷದ ಗುರುಲಿಂಗವ್ವ ಬಾಳಿ ಹಕ್ಕು ಚಲಾಯಿಸಿ ಗಮನ ಸೆಳೆದರು. ಮಕ್ಕಳ ಸಹಾಯದಿಂದ ಕೋಲು ಹಿಡಿದುಕೊಂಡೇ ಮತ ಚಲಾಯಿಸಿ ಗುರುಲಿಂಗವ್ವ ಮನೆಯತ್ತ ಹೆಜ್ಜೆಹಾಕಿದರು. ವಿಜಯಪುರ ನಗರದ ಜಾಡರ ಓಣಿಯ ಮೆಟ್ರಿಕ್ ನಂತರದ ಬಾಲಕಿಯರ ಶಾಲೆಯಲ್ಲಿ ಸ್ಥಾಪಿಸಿದ ಮತಗಟ್ಟೆ ನಂ.168ರಲ್ಲಿ ಶತಾಯುಷಿ ಗಂಗವ್ವ ಬಳಗಲಿ ಮತಚಲಾಯಿಸಿದರು. ಮತಗಟ್ಟೆ ಸಿಬ್ಬಂದಿ ವೀಲ್‌ಚೇರ ಬಳಸಿ ಗಂಗವ್ವಳನ್ನು ಕರೆತಂದರು. ಇದೇ ರೀತಿ ಶಾಂತಾಬಾಯಿ ಜಮಾದಾರ ಎಂಬುವರು ವೀಲ್‌ಚೇರ್ ಸಹಾಯದಿಂದ ಹಕ್ಕು ಚಲಾಯಿಸಿದರೆ ಇಂಡಿ ತಾಲೂಕಿನ ಹಿರೇಮಸಳಿಯಲ್ಲಿ 88ರ ವಯೋಮಾನದ ಬಂದವ್ವ ಭೋಜಪ್ಪ ಚಾಂದಕವಟೆ ಎಂಬ ಅಜ್ಜಿ ಕೋಲು ಹಿಡಿದುಕೊಂಡೇ ಮತಗಟ್ಟೆಗೆ ಬಂದು ಸ್ವತಂತ್ರವಾಗಿ ಹಕ್ಕು ಚಲಾಯಿಸಿ ಗಮನ ಸೆಳೆದರು. ಇದೇ ತೆರನಾಗಿ ಜಿಲ್ಲೆ ವಿವಿಧೆಡೆ ವೃದ್ಧರು ಮತಚಲಾಯಿಸಿ ಯುವಕರನ್ನು ನಾಚಿಸಿದರು.

ಮಾದರಿ ಯುವಪಡೆ
ಅಂಗವಿಕಲರು, ವೃದ್ಧರು ಹಾಗೂ ಮಹಿಳೆಯರನ್ನು ಮತಗಟ್ಟೆಗೆ ಕರೆತರುವ ಮೂಲಕ ಯುವ ಸಂಘಟನೆಯೊಂದು ಪ್ರಜಾಪ್ರಭುತ್ವ ವ್ಯವಸ್ಥೆಗೆ ಮಾದರಿಯಾಗಿದೆ. ಇಂಡಿ ತಾಲೂಕಿನ ಹಿರೇಮಸಳಿ ಗ್ರಾಮದ ಶ್ರೀ ಮಲ್ಲಿಕಾರ್ಜುನ ಸೇವಾ ಸಮಿತಿ ಪದಾಧಿಕಾರಿಗಳು ಯುವ ಸಂಘಟನೆಗಳಿಗೆ ಮಾದರಿಯಾಗಿದ್ದಾರೆ. ಬೆಳಗ್ಗೆಯಿಂದ ಸಂಜೆವರೆಗೆ ಕಾರ್ಯಕರ್ತರು ಮತದಾನ ಪ್ರಮಾಣ ಹೆಚ್ಚಿಸಲು ಶ್ರಮಿಸಿದ್ದಾರೆ. ಸಿದ್ದು ಕುರುಬತಳ್ಳಿ, ಶರಣಬಸು ಸೋಲಾಪುರ ಸೇರಿದಂತೆ ಹಲವು ಯುವಕರು ಮನೆ ಮನೆಗೆ ಭೇಟಿ ನೀಡಿ ಮತದಾರರನ್ನು ಕರೆತಂದು ಹಕ್ಕು ಚಲಾಯಿಸುವಂತೆ ಮಾಡಿದ್ದಾರೆ. ಬೈಕ್ ಮೇಲೆ ಕರೆತಂದು ಮತ ಹಾಕಿಸಿ ಮರಳಿ ಸ್ವಸ್ಥಳಕ್ಕೆ ಕರೆದೊಯ್ದು ಬಿಟ್ಟಿದ್ದಾರೆ.

ವಿಶೇಷ ಪೂಜೆ ಪುನಸ್ಕಾರ
ಇಂಡಿ ತಾಲೂಕಿನ ಹಿರೇಮಸಳಿಯಲ್ಲಿ ಮತದಾನಕ್ಕೂ ಮುನ್ನ ಮುತ್ತೈದೆಯರು ಮತಗಟ್ಟೆ ಹೊರಗೆ ಆರತಿ ಹಿಡಿದು ವಿಶೇಷ ಪೂಜೆ ಸಲ್ಲಿಸಿದ್ದಾರೆ. ಮೊದಲು ಈ ಐವರು ಮತಚಲಾಯಿಸಿದ ಬಳಿಕವೇ ನಂತರ ಮತದಾನ ಆರಂಭಗೊಂಡಿದೆ. ಸಿಂದಗಿಯಲ್ಲಿ ನರೇಂದ್ರ ಮೋದಿ ಮತ್ತೊಮ್ಮೆ ಪ್ರಧಾನಿಯಾಗಲಿ ಎಂದು ವರ್ತಕನೊಬ್ಬ ಆಂಜನೇಯನಿಗೆ ಹಾಲಿನಭಿಷೇಕ ಮಾಡಿಸಿದ್ದಾನೆ. ಇನ್ನು ಕೆಲವೆಡೆ ಹಾಲುಮತಸ್ಥರಿಂದ ಮೊದಲ ಮತ ಹಾಕಿಸುವ ಮೂಲಕ ಸಾಂಪ್ರದಾಯಿಕ ನಂಬಿಕೆಗೆ ಒತ್ತು ನೀಡಿದರ.