ಮತದಾನಕ್ಕೆ ಮಾನಿನಿಯರೇ ಉತ್ಸುಕ

ಪರಶುರಾಮ ಭಾಸಗಿ
ವಿಜಯಪುರ: ಬರದ ಜಿಲ್ಲೆಯಲ್ಲಿ 17 ಲೋಕ ಸಭೆ ಚುನಾವಣೆಗೆ ಭರದ ಸಿದ್ಧತೆ ನಡೆದಿದ್ದು ಹೊಸದಾಗಿ ಹೆಸರು ನೋಂದಾಯಿಸಿಕೊಂಡ ಸುಮಾರು 1.97 ಲಕ್ಷ ಯುವ ಮತದಾರರ ಒಲವು ಗಿಟ್ಟಿಸಿಕೊಳ್ಳಲು ರಾಜಕೀಯ ಪಕ್ಷಗಳು ನಾನಾ ಕಸರತ್ತು ನಡೆಸಿವೆ.

ಹೌದು, ಕಳೆದ 2014ರ ಲೋಕ ಸಭೆ ಚುನಾವಣೆಗಿಂತಲೂ ಈ ಬಾರಿ ಮತದಾರರ ಪ್ರಮಾಣ ಹೆಚ್ಚಿದೆ. ಐದು ವರ್ಷಗಳಲ್ಲಿ 197448 ಮತದಾರರು ಹೊಸದಾಗಿ ಮತ ಹಕ್ಕು ಹೊಂದಿದ್ದಾರೆ. ಅದರಲ್ಲೂ ಯುವಕರಿಗಿಂತ ಯುವತಿಯರೇ ಹೆಚ್ಚಿನ ಪ್ರಮಾಣದಲ್ಲಿ ಹೆಸರು ನೋಂದಾಯಿಸಿಕೊಂಡಿದ್ದು ವಿಶೇಷ.

ಒಟ್ಟು 110747 ಯುವತಿಯರು ಹೊಸದಾಗಿ ಮತ ಹಕ್ಕು ಪಡೆದಿದ್ದರೆ ಯುವಕರು ಕೇವಲ 86459 ಜನ ಹೆಸರು ನೋಂದಾಯಿಸಿದ್ದಾರೆ. ಹೀಗಾಗಿ ಈ ಬಾರಿ ಯುವಕರಿಗಿಂತ ಯುವತಿಯರೇ ಮತದಾನಕ್ಕೆ ಉತ್ಸುಕತೆ ಹೊಂದಿರುವುದು ಸಾಬೀತಾಗಿದೆ.

ಮತದಾರರ ಸಂಖ್ಯೆ ಆಧರಿಸಿ ಮತಗಟ್ಟೆಗಳ ಪ್ರಮಾಣ ಕೂಡ ಹೆಚ್ಚಿಸಲಾಗಿದ್ದು ಈ ಬಾರಿ 235 ಮತಗಟ್ಟೆಗಳು ಹೆಚ್ಚಾಗಿವೆ. ಕಳೆದ ಚುನಾವಣೆಯಲ್ಲಿ 1869 ಮತಗಟ್ಟೆಗಳಿದ್ದು ಈ ಬಾರಿ ಆ ಸಂಖ್ಯೆ 2101ಕ್ಕೇರಿದೆ. 242 ಇತರೆ ಮತದಾರರೆಂದು ಗುರುತಿಸಲಾಗಿದೆ. 16097 ಅಂಗವಿಕಲ ಮತದಾರರಿದ್ದು ಇವರ ಮತದಾನಕ್ಕೆ ಸಕಲ ಸೌಕರ್ಯ ಸಹ ಕಲ್ಪಿಸಲಾಗುತ್ತಿದೆ.

ಕ್ಷೇತ್ರವಾರು ಮತದಾರರ ವಿವರ
ಎಂಟು ವಿಧಾನ ಸಭೆ ಕ್ಷೇತ್ರಗಳ ಪೈಕಿ ಮುದ್ದೇಬಿಹಾಳ- 26287(11122- ಪುರುಷ, 15131- ಮಹಿಳೆ, 34- ಇತರೆ), ದೇವರಹಿಪ್ಪರಗಿ- 26466 (11410- ಪುರುಷ, 15037-ಮಹಿಳಾ, 19 ಇತರೆ), ಬಸವನಬಾಗೇವಾಡಿ- 21376 (9580- ಪುರುಷ, 11778-ಮಹಿಳೆ, ಇತರೆ-18), ಬಬಲೇಶ್ವರ- 15686 (7569- ಪುರುಷ, 8105-ಮಹಿಳೆ, ಇತರೆ-12), ವಿಜಯಪುರ ನಗರ-20440 (8120- ಪುರುಷ, 12242- ಮಹಿಳೆ, ಇತರೆ-78), ನಾಗಠಾಣ-23733 (10787- ಪುರುಷ, 12916-ಮಹಿಳೆ, ಇತರೆ-30), ಇಂಡಿ- 28658 (12732- ಪುರುಷ, 15903-ಮಹಿಳೆ, ಇತರೆ-23), ಸಿಂದಗಿ-34802 (15139-ಪುರುಷ, 19635-ಮಹಿಳೆ, ಇತರೆ-28) ಮತದಾರರು ಲೋಕಸಭೆಗೆ ಮೊದಲ ಬಾರಿ ಹಕ್ಕು ಚಲಾಯಿಸುತ್ತಿದ್ದಾರೆ.
ಕಳೆದ ಚುನಾವಣೆಯಲ್ಲಿ ಹೊಸದಾಗಿ 95062 ಮತದಾರರು ಮಾತ್ರ ಹೆಸರು ನೋಂದಾಯಿಸಿಕೊಂಡಿದ್ದರು. ಆ ಪೈಕಿ 47481 ಗಂಡು ಹಾಗೂ 47581 ಮಹಿಳಾ ಮತದಾರರಿದ್ದರು. ಇಲ್ಲೂ ಸಹ 100 ಮಹಿಳೆಯರು ಪುರುಷರಿಗಿಂತ ಹೆಚ್ಚಾಗಿ ಹೆಸರು ನೋಂದಾಯಿಸಿದ್ದರು.

ಆಗ ಲಕ್ಷ- ಈಗ ಲಕ್ಷ ಲಕ್ಷ
1957ರ ಮೊದಲ ಲೋಕಸಭೆ ಚುನಾವಣೆಯಲ್ಲಿ ಅಭ್ಯರ್ಥಿ ಗೆಲುವಿಗೆ ಲಕ್ಷ ಮತ ಅಗಾಧವಾಗಿತ್ತು. ಆ ಸಾಲಿನಲ್ಲಿ ಒಟ್ಟು ಮತದಾರರ ಸಂಖ್ಯೆ ಇದ್ದದ್ದು ಕೇವಲ 3,53,151 ಮಾತ್ರ. ಅದರಲ್ಲಿ 177852 ಜನ ಮಾತ್ರ ಹಕ್ಕು ಚಲಾಯಿಸಿದ್ದು ಸುಗಂಧಿ ಮುರಗೆಪ್ಪ ಸಿದ್ದಪ್ಪ ಅವರು 88209 ಮತ ಪಡೆದು ಜಯ ಸಾಧಿಸಿದ್ದರು. ಆದರೀಗ ಅಭ್ಯರ್ಥಿ ಗೆಲುವಿಗೆ ಲಕ್ಷ ಮತ ಊಟಕ್ಕೆ ಉಪ್ಪಿನ ಕಾಯಿ ಇದ್ದಂತೆ. 2019ನೇ ಸಾಲಿಗೆ ಇರುವ ಮತದಾರರ ಪ್ರಮಾಣ 17,75,839ಕ್ಕೆ ತಲುಪಿದೆ. ಶೇ. 70ರಷ್ಟು ಮತದಾನವಾದರೂ ಗೆಲುವಿಗೆ ಕನಿಷ್ಠ 7 ಲಕ್ಷ ಮತ ಪಡೆಯಬೇಕು.

1962 ರಲ್ಲಿ 393246, 1967 ರಲ್ಲಿ 472997, 1971ರಲ್ಲಿ 450749 ( ಕ್ಷೇತ್ರ ವಿಂಗಡಣೆಯಿಂದ ಕೆಲ ಮತದಾರರು ಪಟ್ಟಿಯಿಂದ ಹೊರಗುಳಿದರು), 1977ರಲ್ಲಿ 576941, 1980 ರಲ್ಲಿ 677105, 1984ರಲ್ಲಿ 707905, 1989 ರಲ್ಲಿ 949422, 1996ರಲ್ಲಿ 1096455, 1999 ರಲ್ಲಿ 1182826 ರಷ್ಟಿದ್ದ ಮತದಾರರ ಸಂಖ್ಯೆ 2009ಕ್ಕೆ 1373604ಕ್ಕೆ ತಲುಪಿತು. ಬಳಿಕ 2014ರ ಚುನಾವಣೆಯಲ್ಲಿ 1578391 ಹಾಗೂ 2019ಕ್ಕೆ ಒಟ್ಟು ಮತದಾರರ ಪ್ರಮಾಣ 1775839 ಕ್ಕೆ ತಲುಪಿದೆ.