ಕಬಡ್ಡಿ ಕ್ರೀಡೆ ಆರೋಗ್ಯಕ್ಕೆ ಸಹಕಾರಿ

ವಿಜಯಪುರ: ಕಬಡ್ಡಿ ಕ್ರೀಡೆ ದೈಹಿಕ ಹಾಗೂ ಮಾನಸಿಕ ಆರೋಗ್ಯಕ್ಕೆ ಸಹಕಾರಿಯಾಗಿದೆ ಎಂದು ವಿಜಯಪುರ ಜಿಲ್ಲಾ ಅಮೆಚೂರ್ ಕಬಡ್ಡಿ ಅಸೋಸಿಯೇಷನ್ ಕಾರ್ಯದರ್ಶಿ ಬಂಡೆಪ್ಪ ತೇಲಿ ಹೇಳಿದರು.

ನಗರದ ಸಿಕ್ಯಾಬ್ ತಾಂತ್ರಿಕ ಮಹಾವಿದ್ಯಾಲಯದ ಆವರಣದಲ್ಲಿ ಸೋಮವಾರ ಹಮ್ಮಿಕೊಂಡಿದ್ದ ಬೆಳಗಾವಿ ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾಲಯದ ಕಲಬುರಗಿ ವಿಭಾಗದ ಅಂತರ್ ಮಹಾವಿದ್ಯಾಲಯಗಳ ಪುರುಷರ ಕಬಡ್ಡಿ ಪಂದ್ಯಾವಳಿ ವಿಜೇತರಿಗೆ ಬಹುಮಾನ ವಿತರಿಸಿ ಅವರು ಮಾತನಾಡಿದರು.

ಪಂದ್ಯಾವಳಿಯಲ್ಲಿ ಸಿಕ್ಯಾಬ್ ತಾಂತ್ರಿಕ ಮಹಾವಿದ್ಯಾಲಯ ಕಬಡ್ಡಿ ತಂಡ ತನ್ನ ಎದುರಾಳಿ ಬಾಗಲಕೋಟೆ ಜಿಲ್ಲೆಯ ಮುಧೋಳದ ಬಿಜಿಎಂಐಟಿ ತಂಡವನ್ನು ಸೋಲಿಸುವ ಮೂಲಕ ಚಾಂಪಿಯನ್ ಪ್ರಶಸ್ತಿ ಪಡೆಯಿತು.
ಅಂತರ್ ವಿಭಾಗದ ಮಹಾವಿದ್ಯಾಲಯಗಳ ಪುರುಷರ ಕಬಡ್ಡಿ ಪಂದ್ಯಾವಳಿಯಲ್ಲಿ 5 ವಿವಿ ತಂಡಗಳು ಭಾಗವಹಿಸಿದ್ದವು. ವಿಜಯಪುರ ಸಿಕ್ಯಾಬ್ ತಾಂತ್ರಿಕ ಮಹಾವಿದ್ಯಾಲಯ ಹಾಗೂ ಮುಧೋಳದ ಬಿಜಿಎಂಐಟಿ ತಂಡಗಳ ನಡುವೆ ನಡೆದ ಫೈನಲ್ ಪಂದ್ಯದಲ್ಲಿ ಸಿಕ್ಯಾಬ್ ತಂಡ 21-3 ಅಂಕಗಳಿಂದ ಜಯ ಸಾಧಿಸಿತು.
ಸಿಕ್ಯಾಬ್ ತಾಂತ್ರಿಕ ಮಹಾವಿದ್ಯಾಲಯದ ಪ್ರಾಚಾರ್ಯ ಎಸ್.ಜಿ. ಅರವೇರಕರ ಅಧ್ಯಕ್ಷತೆ ವಹಿಸಿ, ತಮ್ಮ ಮಹಾವಿದ್ಯಾಲಯ ವಿದ್ಯೆಯೊಂದಿಗೆ ಕ್ರೀಡೆಗೂ ಹೆಚ್ಚಿನ ಮಹತ್ವ ನೀಡುತ್ತಿದೆ ಎಂದು ಹೇಳಿದರು.

ಮಲೀಕ್ ಸಂದಲ್ ಆರ್ಟ್ಸ್ ಆರ್ಟಿಕಲ್ಚರ್ ಮಹಾವಿದ್ಯಾಲಯ ಪ್ರಾಚಾರ್ಯ ಅನ್ವರ್ ಪುಣೇಕರ್, ಸಿಕ್ಯಾಬ್ ತಾಂತ್ರಿಕ ಮಹಾವಿದ್ಯಾಲಯ ಕ್ರೀಡಾ ಸಂಯೋಜಕ ಅಲ್ತಾಫ್ ಬಾಗವಾನ್, ಕ್ರೀಡಾ ದೈಹಿಕ ನಿರ್ದೇಶಕ ಸದಾಶಿವ ಕೊಟ್ಯಾಳ, ದೈಹಿಕ ಶಿಕ್ಷಣ ಶಿಕ್ಷಕ ಜೆ.ಟಿ.ದೇವರೆಡ್ಡಿ, ವಿಜಯಪುರ ಜಿಲ್ಲಾ ಕಬಡ್ಡಿ ನಿರ್ಣಾಯಕರ ಸಂಘದ ಅಧ್ಯಕ್ಷ ಐ.ಎಂ. ಮಸಾಲೆ, ಎಂ.ಆರ್. ಮಕಾನದಾರ್, ವಿಜಯ ಹಂಡೇಗಾರ, ಸದಾಶಿವ ಹಾರುಗೇರಿ, ಎಂ.ಜಿ. ಮಸಳಿ, ಎಸ್.ಎಲ್. ಪಾಸೋಡಿ, ಸಂಜು ಬ್ಯಾಕೋಡ, ಭಾರತಿ ಮಠಪತಿ, ಕಲಾವತಿ ಮಲಗೊಂಡ, ಕವಿತಾ ಸಿಂದಗಿ, ಕವಿತಾ ಜಾಡೆಕರ, ಸಂತೋಷ ಸಿಂದಗಿ, ಅಜೀಮ್ ಜಾಗೀರದಾರ್ ಮತ್ತಿತರರು ಉಪಸ್ಥಿತರಿದ್ದರು.