ಜ್ಞಾನದೇಗುಲದಲ್ಲಿ ಏನಿದು ಅಸಹ್ಯ?

ವಿಜಯಪುರ: ಶಾಲೆ ಎಂದಾಕ್ಷಣ ಎಲ್ಲರಲ್ಲೂ ಜ್ಞಾನ ದೇಗುಲವೆಂಬ ಭಾವ ಮೂಡುವುದು ಸಹಜ. ಆದರೆ, ಇಲ್ಲಿ ಕೆಲ ಕಿಡಿಗೇಡಿಗೆಳು ಅದೇ ಜ್ಞಾನ ದೇಗುಲದಲ್ಲಿ ಕುಳಿತು ಮರ್ಮಾಂಗದ ಮೇಲಿನ ರೋಮಗಳನ್ನು ಸ್ವಚ್ಛಗೊಳಿಸುವ ಮೂಲಕ ವಿಕೃತಿ ಮೆರೆದಿದ್ದಾರೆ.

ಬಬಲೇಶ್ವರ ತಾಲೂಕಿನ ಜುಮನಾಳ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಇಂಥದ್ದೊಂದು ಅಸಹ್ಯಕರ ಬೆಳವಣಿಗೆ ನಡೆದಿದೆ. ಗುರುವಾರ ರಾತ್ರಿ ಶಾಲೆ ಮುಖ್ಯದ್ವಾರದ ಬಾಗಿಲಿನ ಬೀಗ ಮುರಿದು ಒಳನುಗ್ಗಿದ ಕಿರಾತಕರು ಮಹಡಿ ಮೇಲಿನ ಮುಖ್ಯಾಧ್ಯಾಪಕರ ಕೊಠಡಿ ಬೀಗ ಮುರಿದು ಇಂಥ ಕೃತ್ಯ ಎಸಗಿದ್ದಾರೆ.

ಬೆಳಗ್ಗೆ ಎಂದಿನಂತೆ ಶಾಲೆಗೆ ಬಂದ ಮಕ್ಕಳು ಹಾಗೂ ಶಿಕ್ಷಕರು ಬೀಗ ಮುರಿದಿದ್ದನ್ನು ಕಂಡು ಆಶ್ಚರ್ಯ ಚಕಿತರಾಗಿದ್ದಾರೆ. ಮುಖ್ಯಾಧ್ಯಾಪಕರ ಕೊಠಡಿಗೆ ಹೋಗಿ ನೋಡಲಾಗಿ ಅಲ್ಲಿನ ಮೇಜಿನ ಮೇಲೆ ರೋಮಗಳ ರಾಶಿ ಕಂಡಿದೆ. ಪಕ್ಕದಲ್ಲಿ ಬ್ಲೇಡ್ ಕೂಡ ಬಿದ್ದಿದೆ. ಗುಟಖಾ ಚೀಟಿ ಬಿದ್ದಿದ್ದು ಗೋಡೆ ಮೇಲೆಲ್ಲಾ ಉಗುಳಿದ ಕಲೆಗಳಿವೆ. ವಿಷಯ ತಿಳಿದು ಪಾಲಕರು ಶಾಲೆಗೆ ದೌಡಾಯಿಸಿದ್ದು ಘಟನೆ ಬಗ್ಗೆ ತೀವ್ರ ಖಂಡನೆ ವ್ಯಕ್ತಪಡಿಸಿದ್ದಾರೆ.
ಈ ಬಗ್ಗೆ ಸಂಬಂಧಿಸಿದ ಶಿಕ್ಷಣಾಧಿಕಾರಿಗಳಿಗೆ ವಿಷಯ ತಿಳಿಸಿದರೂ ಪ್ರಯೋಜನವಾಗಿಲ್ಲ. ಕ್ಷೇತ್ರ ಶಿಕ್ಷಣಾಧಿಕಾರಿ ಕೆಳಗಿನ ಸಿಬ್ಬಂದಿಯನ್ನು ಕಳುಹಿಸಿ ಕೈತೊಳೆದುಕೊಂಡರೆ ಪೊಲೀಸ್ ಇಲಾಖೆ ಬೀಟ್ ಮೂಲಕ ದೂರು ಸ್ವೀಕರಿಸಿದೆ. ಯಾರೊಬ್ಬರೂ ಈ ವಿಷಯವನ್ನು ಗಂಭೀರವಾಗಿ ಪರಿಗಣಿಸಿಲ್ಲ. ಘಟನೆಯಿಂದ ಚಿಕ್ಕಮಕ್ಕಳು ಮುಜುಗರಕ್ಕೆ ಒಳಗಾಗಿದ್ದಾರೆಂದು ಗ್ರಾಮಸ್ಥರು ತಿಳಿಸಿದರು.

ಹೆಚ್ಚಿದ ಅತಿಕ್ರಮಣಕಾರರ ಹಾವಳಿ: ಸದರಿ ಶಾಲೆ ಆವರಣದಲ್ಲೇ ಕನ್ನಡ ಗಂಡು ಮಕ್ಕಳು, ಹೆಣ್ಣು ಮಕ್ಕಳು, ಉರ್ದು ಪ್ರಾಥಮಿಕ ಶಾಲೆಗಳು ಪ್ರತ್ಯೇಕವಾಗಿ ನಡೆಯುತ್ತಿವೆ. ಶಾಲೆ 100 ಮೀಟರ್ ಒಳಗಡೆ ಸುಮಾರು 15 ಅಂಗಡಿಗಳನ್ನು ನಿಯಮ ಬಾಹಿರವಾಗಿ ಹಾಕಲಾಗಿದೆ. ಈ ಬಗ್ಗೆ ಶಿಕ್ಷಣಾಧಿಕಾರಿಗಳು, ಜಿಲ್ಲಾಧಿಕಾರಿಗಳು ಹಾಗೂ ಪೊಲೀಸ್ ಅಧಿಕಾರಿಗಳಿಗೆ ಸಾಕಷ್ಟು ಮನವಿ ಮಾಡಿದರೂ ಪ್ರಯೋಜನವಾಗಿಲ್ಲ. ಮುಖ್ಯಮಂತ್ರಿಗಳಿಗೂ ಪತ್ರ ಬರೆಯಲಾಗಿದೆ. ಸದರಿ ಅತಿಕ್ರಮಣಕಾರರಿಂದಾಗಿಯೇ ಇಂಥ ಕೃತ್ಯಗಳು ನಡೆಯುತ್ತಿವೆ. ಅಂಗಡಿಗಳಿಂದಾಗಿ ಶಾಲೆಯಲ್ಲಿ ಏನು ನಡೆಯುತ್ತಿದೆ ಎಂಬುದೇ ಕಾಣಿಸಲ್ಲ ಎನ್ನುತ್ತಾರೆ ಗ್ರಾಮದ ಸಂಜಯ ಕಬಾಡೆ.

ಪಾನ್‌ಬೀಡಾ ಮಾರಾಟ: ಶಾಲೆ ಆವರಣದಲ್ಲಿಯೇ ಪಾನ್‌ಬೀಡಾ ಅಂಗಡಿ ಇರುವ ಕಾರಣ ಗುಟಖಾ ಚೀಟಿಗಳು ಆವರಣದಲ್ಲಿ ರಾಶಿ ರಾಶಿ ಬೀಳುತ್ತಿವೆ. ಕೆಲವರು ಸಾರಾಯಿ ಕುಡಿದು ಬಾಟಲಿಗಳನ್ನು ಆವರಣದಲ್ಲೇ ಎಸೆಯುತ್ತಿದ್ದಾರೆ. ರಜೆ ದಿನಗಳಲ್ಲಿ ಜೂಜಾಟ ಆಡುವವರ ಸಂಖ್ಯೆ ಹೆಚ್ಚಿದೆ. 2016ರಿಂದ ಸುಮಾರು 100ಕ್ಕೂ ಅಧಿಕ ಮನವಿ ಪತ್ರಗಳನ್ನು ಸಲ್ಲಿಸುತ್ತಾ ಬಂದರೂ ಪ್ರಯೋಜನವಾಗಿಲ್ಲ. ಗ್ರಾಮ ಪಂಚಾಯಿತಿಯಲ್ಲಿ ಅಂಗಡಿ ಕಿತ್ತಿಸಲು ಠರಾವು ಕೂಡ ಮಂಡಿಸಲಾಗಿದೆ. ಅದಕ್ಕೂ ಬೆಲೆಯಿಲ್ಲದಾಗಿದೆ. ಇಂಥ ವಾತಾವರಣದಲ್ಲಿ ಮಕ್ಕಳನ್ನು ಶಾಲೆಗೆ ಕಳುಹಿಸಿವುದೇ ದುಸ್ತರವಾಗಿದೆ ಎನ್ನುತ್ತಾರೆ ರಾಜು ಬಾ.ಗಾಡಗೆ.

ಬೆಳಗ್ಗೆ ಶಾಲೆಗೆ ಬಂದಾಗ ಬೀಗ ಮುರಿದಿತ್ತು. ಮುಖ್ಯ ಗೇಟ್ ಮತ್ತು ಕೊಠಡಿಯ ಬೀಗ ಮುರಿದು ಒಳಗೆ ನುಗ್ಗಿದ್ದಾರೆ. ಒಳಗಡೆ ರೋಮಗಳು ಬಿದ್ದಿದ್ದು ಬ್ಲೇಡ್ ಸಹ ಇತ್ತು. ಬಳಿಕ ಎಸ್‌ಡಿಎಂಸಿ ಅಧ್ಯಕ್ಷರು ಹಾಗೂ ಕ್ಷೇತ್ರ ಶಿಕ್ಷಣಾಧಿಕಾರಿಗಳ ಗಮನಕ್ಕೆ ತರಲಾಯಿತು. ಸ್ಥಳಕ್ಕೆ ಪೊಲೀಸರೊಬ್ಬರು ಭೇಟಿ ನೀಡಿದ್ದು ದೂರು ನೀಡಲಾಗಿದೆ.
ಎ.ಎ. ಬೇವಿನಗಿಡದ, ಮುಖ್ಯಗುರು

ಪ್ರಕರಣ ಮುಚ್ಚಿಹಾಕುವ ಯತ್ನ
ಮಕ್ಕಳ ಮನಸ್ಸಿನ ಮೇಲೆ ದುಷ್ಪರಿಣಾಮ ಬೀರುವಂಥ ಪ್ರಕರಣವನ್ನು ಹಿರಿಯ ಅಧಿಕಾರಿಗಳು ಗಂಭೀರವಾಗಿ ಪರಿಗಣಿಸದಿರುವುದು ಸೋಜಿಗದ ಸಂಗತಿ. ಪ್ರಕರಣದ ಬಗ್ಗೆ ಡಿಡಿಪಿಐ ಸಿಂಧೂರ ಅವರನ್ನು ಸಂಪರ್ಕಿಸಲಾಗಿ ವಿಷಯ ತಮಗೆ ತಿಳಿದಿಲ್ಲವೆಂದರು. ಗ್ರಾಮೀಣ ಪೊಲೀಸ್ ಠಾಣೆಗೆ ಸಂಪರ್ಕಿಸಲಾಗಿ ಯಾರೂ ದೂರು ನೀಡಿಲ್ಲ. ದೂರು ದಾಖಲಾದರೆ ತಿಳಿಸಿವುದಾಗಿ ಹೇಳಿದರು. ಇನ್ನು ಶಾಲೆ ದುರಾವಸ್ಥೆಗೆ ಸಂಬಂಧಿಸಿದಂತೆ ಕ್ರಮ ಕೈಗೊಳ್ಳಲು ನೀಡಿದ ಸಾಲು ಸಾಲು ಮನವಿ ಪತ್ರಗಳು ಮತ್ತು ಹಿರಿಯ ಅಧಿಕಾರಿಗಳ ಆದೇಶ ಪ್ರತಿಗಳನ್ನು ‘ವಿಜಯವಾಣಿ’ಗೆ ಸಲ್ಲಿಸಿದ ಗ್ರಾಮಸ್ಥ ಸೈಯ್ಯದ ಕಾದ್ರಿ ಶೇಖ ಅಧಿಕಾರಿಗಳ ಆದೇಶಗಳಿಗೆ ಬೆಲೆಯೇ ಇಲ್ಲವೆಂದು ಖೇದ ವ್ಯಕ್ತಪಡಿಸಿದರು.