ಸಾಮಾನ್ಯ ಸಭೆಯಲ್ಲಿ ಅಟ್ರಾಸಿಟಿ ಅನುರಣನ

ವಿಜಯಪುರ: ಜ್ಯಾತಿ ನಿಂದನೆ ಆರೋಪದ ಹಿನ್ನೆಲೆ ನ್ಯಾಯಾಲಯದ ಮೆಟ್ಟಿಲೇರಿದ್ದ ಪ್ರಕರಣವೀಗ ಜಿಪಂ ಸಾಮಾನ್ಯ ಸಭೆಯಲ್ಲಿ ಮತ್ತೆ ಪ್ರತಿಧ್ವನಿಸಿದ್ದು ಪ್ರಕರಣ ಮತ್ತೊಮ್ಮೆ ಮರುಕಳಿಸದಂತೆ ಸರ್ವ ಸದಸ್ಯರು ಸಿಇಒ ವಿಕಾಸ್ ಸುರಳಕರ್ ಸೇರಿದಂತೆ ಸಂಬಂಧಿಸಿದ ಅಧಿಕಾರಿ ಮೇಲೆ ಹರಿಹಾಯ್ದಿದ್ದಾರೆ.

ಸೋಮವಾರ ಜಿಪಂ ಸಭಾಂಗಣದಲ್ಲಿ ನಡೆದ 13ನೇ ಸಾಮಾನ್ಯ ಸಭೆ ಆರಂಭದಲ್ಲೇ ಸದಸ್ಯ ಸಾಬು ಮಾಶ್ಯಾಳ ಜಾತಿ ನಿಂದನೆ ಪ್ರಕರಣವನ್ನು ಉಲ್ಲೇಖಿಸಿದರು. ಇವರಿಗೆ ಸರ್ವ ಸದಸ್ಯರು ಸಾಥ್ ನೀಡಿದರು. ಅಧ್ಯಕ್ಷ ಶಿವಯೋಗಪ್ಪ ನೇದಲಗಿ ಹಾಗೂ ಉಪಾಧ್ಯಕ್ಷ ಪ್ರಭು ದೇಸಾಯಿ ಸಹ ಪಕ್ಷಾತೀತವಾಗಿ ಮಾಶ್ಯಾಳ ಬೆಂಬಲಕ್ಕೆ ನಿಂತರು. ಅಧಿಕಾರಿಗಳ ಈ ವರ್ತನೆ ಒಳ್ಳೆಯ ಬೆಳವಣಿಗೆಯಲ್ಲ. ಮತ್ತೊಮ್ಮೆ ಇಂಥ ಪ್ರಕರಣ ನಡೆದರೆ ಖಂಡಿತ ಸಹಿಸಲ್ಲ ಎಂಬ ಕಠಿಣ ಸಂದೇಶ ರವಾನಿಸಿದರು.

ಮಾಹಿತಿ ಕೇಳಿದ್ದು ತಪ್ಪೇ?
ಕೃಷಿ ಹೊಂಡ ನಿರ್ಮಾಣಕ್ಕೆ ಸಂಬಂಧಿಸಿದಂತೆ ತೋಟಗಾರಿಕೆ ಇಲಾಖೆ ಅಧಿಕಾರಿ ಬಿಲ್ ಮಾಡಲು ಹಿಂದೇಟು ಹಾಕಿದರು. ಕ್ಷೇತ್ರದ ರೈತರ ಹಿತದೃಷ್ಠಿಯಿಂದ ಬೇಗ ಬಿಲ್ ಮಾಡಲು ಹೇಳಿದೆ. ಅಲ್ಲದೇ, ಹಲವು ಪ್ರಕರಣಗಳಲ್ಲಿ ಇದೇ ಅಧಿಕಾರಿ ಲಂಚ ಪಡೆದು ಬಿಲ್ ಮಾಡಿದ್ದಾರೆ. ಇದನ್ನು ಪ್ರಶ್ನಿಸಿದ್ದಕ್ಕೆ ನನ್ನ ಮೇಲೆ ಜಾತಿ ನಿಂದನೆ ಪ್ರಕರಣ ದಾಖಲಿಸಿದ್ದಾರೆ. ಅಧಿಕಾರಿಗಳಿಗೆ ಮಾಹಿತಿ ಕೇಳುವ ಅಧಿಕಾರವೂ ಜನಪ್ರತಿನಿಧಿಗಳಿಗಲ್ಲವಾ? ಎಂದು ಸಾಬು ಮಾಶ್ಯಾಳ ಪ್ರಶ್ನಿಸಿದರು. ಹಾಗೊಂದು ವೇಳೆ ನಾನು ಜಾತಿ ನಿಂದನೆ ಮಾಡಿದ್ದೇ ಆದಲ್ಲಿ ಸಭೆಯಲ್ಲಿ ಅದನ್ನು ಸ್ಪಷ್ಟಪಡಿಸಲಿ ಎಂದು ಪಟ್ಟು ಹಿಡಿದರು.

ಇದಕ್ಕೆ ಪ್ರತಿಕ್ರಿಯಿಸಿದ ತೋಟಗಾರಿಕೆ ಇಲಾಖೆ ಉಪನಿರ್ದೇಶಕ ಸಂತೋಷ ಇನಾಮದಾರ್ ಅವರು, ಆ ಪ್ರಕರಣ ಸದ್ಯ ನ್ಯಾಯಾಲಯದ ಮಟ್ಟದಲ್ಲಿದೆ. ವಿಚಾರಣೆ ನಡೆಯುತ್ತಿರುವ ಕಾರಣ ಆ ಬಗ್ಗೆ ಸಭೆಯಲ್ಲಿ ಮಾತನಾಡುವುದು ಸಮಂಜಸವಾಗದು ಎಂದರು. ಸಿಇಒ ವಿಕಾಸ್ ಸುರಳಕರ್ ಮಾತನಾಡಿ, ಅಧಿಕಾರಿಯೊಬ್ಬರು ಕೇಸ್ ದಾಖಲಿಸುವ ಮುನ್ನ ಹಿರಿಯ ಅಧಿಕಾರಿ ಮನವೊಲಿಸಬಹುದಷ್ಟೆ. ಅದಾಗ್ಯೂ ಅವರು ಪ್ರಕರಣ ದಾಖಲಿಸುವ ದೃಢ ನಿರ್ಧಾರ ಮಾಡಿದರೆ ಅದನ್ನು ತಡೆಯುವುದು ನಮ್ಮಿಂದಲೂ ಆಗದು. ಹೀಗಾಗಿ ಇನ್ನೊಮ್ಮೆ ಇಂಥ ಪ್ರಕರಣ ನಡೆಯದಂತೆ ನೋಡಿಕೊಳ್ಳುವ ಭರವಸೆ ನೀಡಿದರು.

ಜಾತಿ ಸೇಫ್‌ಗಾರ್ಡ್ ಅಲ್ಲ
ಅಧಿಕಾರಿಗಳು ಸರ್ಕಾರಿ ನೌಕರಿ ಗಿಟ್ಟಿಸಿಕೊಂಡ ಮೇಲೆ ಜಾತಿಯನ್ನು ಕೈಬಿಡಬೇಕು. ಸಾರ್ವಜನಿಕ ಸೇವಾ ಕ್ಷೇತ್ರದಲ್ಲಿ ಎಲ್ಲರೂ ಒಂದೇ. ಅಸಲು ನಮಗೆ ಅಧಕಾರಿಗಳ ಜಾತಿಯೇ ಗೊತ್ತಿರಲ್ಲ. ಅಂಥದರಲ್ಲಿ ನಿಂದನೆ ಮಾಡುವ ಪ್ರಸಂಗ ಎಲ್ಲಿಯದು? ಕೆಲ ತಪ್ಪಿತಸ್ಥ ಅಧಿಕಾರಿಗಳು ಕಾನೂನು ಚೌಕಟ್ಟಿನಿಂದ ತಪ್ಪಿಸಿಕೊಳ್ಳಲು ಜಾತಿ ನಿಂದನೆ ಅಸ್ತ್ರ ಬಳಸುತ್ತಿದ್ದಾರೆ. ಜಾತಿ ಸೇಫ್‌ಗಾರ್ಡ್ ಅಲ್ಲ. ಇನ್ಮುಂದೆ ಜಿಪಂ, ತಾಪಂ ಮತ್ತು ಗ್ರಾಪಂಗಳಲ್ಲಿ ಇಂಥ ಪ್ರಕರಣಗಳು ಮರುಕಳಿಸಬಾರದು. ಅದಕ್ಕೊಂದು ಚೌಕಟ್ಟು ತರದೇ ಹೋದರೆ ಆಡಳಿತ ಯಂತ್ರ ಹಳಿತಪ್ಪುತ್ತದೆ. ಹೀಗಾಗಿ ಇನ್ನೊಮ್ಮೆ ಮೇಲಾಧಿಕಾರಿಗಳ ಗಮನಕ್ಕೆ ತರದೇ ಜಾತಿ ನಿಂದನೆ ಪ್ರಕರಣ ದಾಖಲಿಸದಂತೆ ಠರಾವು ಮಂಡಿಸುವಂತೆ ಸಭೆಯ ಗಮನ ಸೆಳೆದರು.

ಸದಸ್ಯರಲ್ಲೂ ಎಸ್‌ಸಿ ಇದ್ದಾರೆ
ಸದಸ್ಯ ಸಂತೋಷ ನಾಯಕ ಮಾತನಾಡಿ, ಎಸ್‌ಸಿ-ಎಸ್‌ಟಿ ಅಧಿಕಾರಿಗಳಿಗೆ ಜನಪ್ರತಿನಿಧಿಗಳು ಮಾಹಿತಿ, ಪ್ರಶ್ನೇಯನ್ನೇ ಕೇಳಬಾರದೇ? ನಾನು ಸಹ ಪರಿಶಿಷ್ಟ ಜಾತಿಗೆ ಸೇರಿದವನಾಗಿದ್ದೇನೆ, ನಾನು ಅಧಿಕಾರಿಗಳ ಮೇಲೆ ಕೇಸ್ ಹಾಕಿದರೆ ಆಡಳಿತ ವ್ಯವಸ್ಥೆ ಸರಿಯಾಗಿ ಸಾಗುತ್ತದೆಯೇ? ಎಂದು ಪ್ರಶ್ನಿಸಿದರು. ಇನ್ನೋರ್ವ ಸದಸ್ಯ ಭೀಮರಾವ ಯಂಟಮಾನ ಮಾತನಾಡಿ, ಸದಸ್ಯರು ಜಾತಿ ನಿಂದನೆ ಮಾಡಿದ್ದರೆ ಸಭೆಯಲ್ಲಿ ಸ್ಪಷ್ಟಪಡಿಸಿ ಎಂದರೆ ಸದಸ್ಯ ರಾಮು ರಾಠೋಡ, ನಮಗೆ ಯಾವ ಅಧಿಕಾರಿ ಯಾವ ಜಾತಿಯವನು ಎಂಬುದು ಹೇಗೆ ಗೊತ್ತಾಗುತ್ತೆ ಸ್ವಾಮಿ? ಕೇಸ್ ದಾಖಲಿಸುವ ಅಧಿಕಾರಿ ಮೇಲಾಧಿಕಾರಿಗಳ ಗಮನಕ್ಕೆ ವಿಷಯ ತರಬೇಕಲ್ಲವಾ? ಅಧಿಕಾರಿಯ ಈ ನಡೆಗೆ ನಾವೂ ಅದೇ ಮಾರ್ಗ ಅನುಸರಿಸಿದರೆ ಹೇಗೆ? ಎಂದು ಪ್ರಶ್ನಿಸಿದರು.

ಜಿಪಂ ಅಧ್ಯಕ್ಷ ಶಿವಯೋಗಪ್ಪ ನೇದಲಗಿ ಹಾಗೂ ಉಪಾಧ್ಯಕ್ಷ ಪ್ರಭು ದೇಸಾಯಿ ಮಾತನಾಡಿ, ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಈ ಬೆಳವಣಿಗೆ ಸರಿಯಲ್ಲ. ಇನ್ನೊಮ್ಮೆ ಇಂಥ ಪ್ರಕರಣ ನಡೆಯದಂತೆ ನೋಡಿಕೊಳ್ಳಬೇಕು. ಮತ್ತು ಸದರಿ ಪ್ರಕರಣದ ತನಿಖೆ ನಡೆಸಿ ತಪ್ಪಿತಸ್ಥರು ಯಾರು ಎಂಬುದನ್ನು ಮುಂದಿನ ಸಭೆಯಲ್ಲಿ ವರದಿ ನೀಡಬೇಕೆಂದು ಸಿಇಒ ಮತ್ತು ತೋಟಗಾರಿಕೆ ಅಧಿಕಾರಿಗಳಿಗೆ ತಿಳಿಸಿದರು.

ಅಧಿಕಾರಿಗಳು ಜಾತಿ ನಿಂದನೆ ಪ್ರಕರಣ ದಾಖಲಿಸುತ್ತಿರುವುದು ಇದೇ ಮೊದಲೇನಲ್ಲ. ಈ ಹಿಂದೆ ಅಕ್ಷರ ದಾಸೋಹ ಯೋಜನೆಯಡಿಯಲ್ಲಿ ಅವ್ಯವಹಾರವಾಗಿದೆ ಎಂದು ಜಿಪಂ ಸದಸ್ಯರೊಬ್ಬರು ಪ್ರಶ್ನಿಸಿದಾಗಲೂ ಆ ಅಧಿಕಾರಿ ಇದೇ ಅಸ ಪ್ರಯೋಗಿಸಿದ್ದರು. ಈಗ ಆ ಪರಿಸ್ಥಿತಿ ಸಾಬು ಮಾಶ್ಯಾಳ ಅವರಿಗೆ ಬಂದಿದೆ. ಸಮಸ್ಯೆಯನ್ನು ಕೇಳಿದರೆ ಜೈಲಿಗೆ ಕಳುಹಿಸುವುದು ಎಷ್ಟು ಸರಿ? ಶೀಘ್ರದಲ್ಲೇ ಆ ಅಧಿಕಾರಿ ಮೇಲೆ ಕ್ರಮವಾಗಬೇಕು.
ನೀಲಮ್ಮ ಮೇಟಿ, ಸದಸ್ಯೆ

ನಾನೆಲ್ಲೂ ಜಾತಿ ನಿಂದನೆ ಮಾಡಿಲ್ಲ. ಅವ್ಯವಹಾರದ ಬಗ್ಗೆ ಪ್ರಶ್ನೆ ಮಾಡಿದ್ದೇನೆ. ಕೃಷಿ ಹೊಂಡ ಮಂಜೂರು ಮಾಡಲು ಲಕ್ಷಾಂತರ ರೂ. ಅಕ್ರಮ ಸಂಭಾವನೆ ಕೇಳಲಾಗುತ್ತಿದೆ. ಬರಗಾಲ ಪರಿಸ್ಥಿತಿಯಲ್ಲಿ ರೈತರು ತೊಂದರೆಯಲ್ಲಿದ್ದಾರೆ, ಹೀಗಾಗಿ ಅವರ ಪರವಾಗಿ ಪ್ರಶ್ನೆ ಮಾಡಿದ್ದಕ್ಕೆ ನನಗೆ ಈ ಶಿಕ್ಷೆಯೇ? ನಾನು ಒಂದೇ ಒಂದು ಮಾತು ಜಾತಿ ವಿಷಯವಾಗಿ ಮಾತನಾಡಿಲ್ಲ. ನಾನು ಅಪರಾ ತಪರಾ ಮಾಡಿಲ್ಲ, ಜಾತಿ ನಿಂದನೆಯೂ ಮಾಡಿಲ್ಲ. ಮಾಡಿದ್ದರೆ ದಾಖಲೆ ಬಿಡುಗಡೆ ಮಾಡಿ. ಆಗ ನಾನು ತಪ್ಪೊಪ್ಪಿಕೊಳ್ಳುವೆ.
ಸಾಬು ಮಾಶ್ಯಾಳ, ಆರೋಪಿತ ಸದಸ್ಯ

ಜಿಪಂ ಸದಸ್ಯರಲ್ಲೂ ಎಸ್‌ಸಿ-ಎಸ್‌ಟಿ ಇದ್ದಾರೆ. ಅಧಿಕಾರಿ ನಡೆಯನ್ನೇ ಸದಸ್ಯರು ಅನುಸರಿಸಲು ಬರೋಲ್ಲ ಅಂದುಕೊಂಡಿದ್ದೀರಾ? ಹೀಗೆ ಆಡಳಿತ ವ್ಯವಸ್ಥೆಯಲ್ಲಿ ಜಾತಿ ಅಡ್ಡ ತರುವುದು ಎಷ್ಟರಮಟ್ಟಿಗೆ ಸರಿ. ಮತ್ತೊಮ್ಮೆ ಇಂಥ ಘಟನೆ ಮರುಕಳಿಸಿದರೆ ಖಂಡಿತ ಸರಿಯಿರೋದಿಲ್ಲ. ಹಾಗಾದಲ್ಲಿ ಏನು ಮಾಡಬೇಕೆಂದು ನಮಗೆ ಗೊತ್ತಿದೆ.
ಶಿವಯೋಗಪ್ಪ ನೇದಲಗಿ, ಜಿಪಂ ಅಧ್ಯಕ್ಷ

ಈ ವಿಷಯದ ಬಗ್ಗೆ ನನಗೂ ಪ್ರಾಥಮಿಕ ಮಾಹಿತಿ ಇದೆ. ಮಾಶ್ಯಾಳ ಅವರು ಜಾತಿ ನಿಂದನೆ ಮಾಡಿದ್ದಾರೋ ಇಲ್ಲವೋ? ಎಂಬುದನ್ನು ಉಪನಿರ್ದೇಶಕರೇ ಸ್ಪಷ್ಟಪಡಿಸಬೇಕು. ಏಕೆಂದರೆ ಘಟನೆ ಸ್ಥಳದಲ್ಲಿ ಸಿಸಿ ಕ್ಯಾಮರಾ ಇರಲಿಲ್ಲ ನೋಡಿ. ಅದಕ್ಕೆ ಮಾನವೀಯತೆ ದೃಷ್ಠಿಯಿಂದಲಾದರೂ ಉಪನಿರ್ದೇಶಕರು ನೈಜ ಘಟನೆ ಹೇಳಲಿ.
ಪ್ರಭು ದೇಸಾಯಿ, ಉಪಾಧ್ಯಕ್ಷ