ಒಣದ್ರಾಕ್ಷಿಗೆ ಬಂತು ಕುತ್ತು…!

ಹೀರಾನಾಯ್ಕ ಟಿ.
ವಿಜಯಪುರ: ದ್ರಾಕ್ಷಿನಾಡು, ಬರದ ಜಿಲ್ಲೆ ವಿಜಯಪುರದಲ್ಲಿ ಬರದ ನಡುವೆಯೂ ಉತ್ತಮ ದ್ರಾಕ್ಷಿ ಬೆಳೆದಿದ್ದ ಬೆಳೆಗಾರರಿಗೆ ಮತ್ತೆ ಕಂಟಕ ಎದುರಾಗಿದೆ. ಕಳೆದ ಎರಡು ದಿನಗಳಿಂದ ಸುರಿದ ಅಕಾಲಿಕ ಮಳೆಯಿಂದಾಗಿ ದ್ರಾಕ್ಷಿ ಬೆಳೆ ಹಾನಿಯಾಗಿದ್ದು, ಈಗಾಗಲೇ ಕಟಾವು ಮಾಡಿರುವ ಒಣದ್ರಾಕ್ಷಿಯ ಗುಣಮಟ್ಟವೂ ಕಡಿಮೆ ಆಗುತ್ತಿರುವುದರಿಂದ ಬೆಳೆಗಾರರು ಆತಂಕಕ್ಕಿಡಾಗಿದ್ದಾರೆ.

ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಒಣದ್ರಾಕ್ಷಿಗೆ ಉತ್ತಮ ಬೆಲೆ ಸಿಗದೆ ಕೈ ಸುಟ್ಟುಕೊಂಡಿರುವ ಬೆಳೆಗಾರ ಬೆಳೆ ಉತ್ಪಾದನೆಗೆ ಹಾಕಿದ ವೆಚ್ಚ ಬಾರದೇ ಸಾಲದ ಸಂಕೋಲೆಯಲ್ಲಿ ನರಳಾಡುತ್ತಿದ್ದಾನೆ.

ರಾಜ್ಯದಲ್ಲಿ ಅತೀ ಹೆಚ್ಚು ಉತ್ಪಾದನೆ
ರಾಜ್ಯದಲ್ಲಿ ಒಟ್ಟು 21,600 ಹೆಕ್ಟೇರ್ ಪ್ರದೇಶದಲ್ಲಿ ದ್ರಾಕ್ಷಿ ಬೆಳೆಯಲಾಗುತ್ತಿದೆ. ಅದರಲ್ಲಿ ವಿಜಯಪುರ ಜಿಲ್ಲೆಯೊಂದರಲ್ಲಿಯೇ 13,474 ಹೆಕ್ಟೇರ್ ಪ್ರದೇಶದಲ್ಲಿ ದ್ರಾಕ್ಷಿ ಬೆಳೆಯಲಾಗುತ್ತಿದೆ. ಅಲ್ಲದೆ ಬಾಗಲಕೋಟೆ 2,500 ಹೆಕ್ಟೇರ್, ಬೆಳಗಾವಿ 2,000 ಹೆಕ್ಟೇರ್ ದ್ರಾಕ್ಷಿ ಬೆಳೆ ಕ್ಷೇತ್ರ ಒಳಗೊಂಡಿವೆ. ರಾಜ್ಯದ ಶೇ.50ರಿಂದ 60 ರಷ್ಟು ದ್ರಾಕ್ಷಿ ಕ್ಷೇತ್ರವನ್ನು ವಿಜಯಪುರ ಜಿಲ್ಲೆಯೊಂದೇ ಹೊಂದಿದ್ದು, ‘ಕರ್ನಾಟಕದ ಕ್ಯಾಲಿೆರ್ನಿಯಾ’ ಎಂದೇ ಹೆಸರು ಪಡೆದಿದೆ. ಪ್ರತಿ ಹೆಕ್ಟೇರ್‌ಗೆ 20 ಟನ್ ದ್ರಾಕ್ಷಿ ಉತ್ಪಾದನೆಯಾಗುತ್ತದೆ. ವಾರ್ಷಿಕ 2.69 ಲಕ್ಷ ಟನ್ ದ್ರಾಕ್ಷಿ ಬೆಳೆಯಲಾಗುತ್ತದೆ. 67,370 ಟನ್ ಒಣದ್ರಾಕ್ಷಿ ತಯಾರಿಸಿ, ಅವುಗಳನ್ನು ವಿದೇಶಗಳಿಗೆ ರ್ತು ಮಾಡಲಾಗುತ್ತಿದೆ ಎಂದು ದ್ರಾಕ್ಷಿ ಬೆಳೆಗಾರರ ಸಂಘದ ಅಧ್ಯಕ್ಷ ಅಭಯಕುಮಾರ ನಾಂದ್ರೇಕರ ಮಾಹಿತಿ ನೀಡುತ್ತಾರೆ.

ಒಣದ್ರಾಕ್ಷಿ ಬೆಲೆ ಕುಸಿತ
ಕಳೆದ ಬಾರಿ ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ದ್ರಾಕ್ಷಿ ಬೆಲೆ ತುಸು ಏರಿಕೆ ಕಂಡಿತ್ತು. ಆದರೆ ಪ್ರಸಕ್ತ ಸಾಲಿನಲ್ಲಿ ಒಣದ್ರಾಕ್ಷಿ ಬೆಲೆ ಕುಸಿತವಾಗುತ್ತಿದ್ದು, ಮುಂದಿನ ದಿನಗಳಲ್ಲಿ ಇನ್ನಷ್ಟು ಬೆಲೆ ಇಳಿಕೆ ಸಾಧ್ಯತೆಗಳಿವೆ. ಇದರಿಂದ ಬೆಳೆಗಾರರು ಹಾಕಿದ ಬಂಡವಾಳ ವಾಪಸ್ ಬಾರದಂತಾಗಿದೆ.

ಕಳೆದ ವರ್ಷ ಮಾರ್ಚ್‌ನಲ್ಲಿ ಕ್ವಿಂಟಾಲ್ ಒಣದ್ರಾಕ್ಷಿ ಬೆಲೆ 14 ಸಾವಿರ ರೂ ನಿಂದ 25 ಸಾವಿರ ರೂ. ವರೆಗೆ ಬೆಲೆ ಇತ್ತು. ಪ್ರಸಕ್ತ ಸಾಲಿನಲ್ಲಿ 14,000 ರೂ ನಿಂದ 16,250 ರೂ. ವರೆಗೆ ಮಾತ್ರ ಇದೆ. ಇದರಿಂದಾಗಿ ದ್ರಾಕ್ಷಿ ಬೆಳೆಗಾರರು ಸಂಕಷ್ಟಕ್ಕೆ ಸಿಲುಕಿದಂತಾಗಿದೆ. ಪ್ರತಿ ಟನ್ ದ್ರಾಕ್ಷಿ ಬೆಳೆಗೆ 1.50 ಲಕ್ಷ ರೂ. ಉತ್ಪಾದನಾ ವೆಚ್ಚ ವಾಗಲಿದೆ. ಆದರೆ ಮಾರುಕಟ್ಟೆಯಲ್ಲಿ ಸಿಗೋದು ಪ್ರತಿ ಕೆಜಿಗೆ 140 ರೂ. ನಿಂದ 150 ರೂ. ವರೆಗೆ ಮಾತ್ರ. ಪ್ರತಿ ಕೆಜಿಗೆ 200 ರೂ. ವರೆಗೆ ದೊರಕಿದರೆ ಬೆಳೆಗಾರರು ನಿಟ್ಟುಸಿರು ಬಿಡುತ್ತಾರೆ ಎಂದು ನಾಂದ್ರೇಕರ್ ತಿಳಿಸುತ್ತಾರೆ.

ಗುಣಮಟ್ಟ ಕಳೆದುಕೊಳ್ಳುತ್ತಿರುವ ಒಣದ್ರಾಕ್ಷಿ
ರಾಜ್ಯದಲ್ಲಿಯೇ ಅತಿಹೆಚ್ಚು ದ್ರಾಕ್ಷಿ ಉತ್ಪಾದಿಸುವ ಜಿಲ್ಲೆಗಳ ಪೈಕಿ ವಿಜಯಪುರ ಮುಂಚೂಣಿಯಲ್ಲಿದ್ದು, ಅಕಾಲಿಕ ಮಳೆಯಿಂದಾಗಿ ಒಣದ್ರಾಕ್ಷಿ ತನ್ನ ಗುಣಮಟ್ಟ ಕಳೆದುಕೊಂಡಿದೆ. ಈಗಾಗಲೇ ಭಾಗಶಃ ದ್ರಾಕ್ಷಿ ಕಟಾವು ಮಾಡಲಾಗಿದ್ದು, ಅವುಗಳನ್ನು ಒಣಗಿಸಲು ಸಂಸ್ಕರಣಾ ಘಟಕಗಳಲ್ಲಿ ಇಡಲಾಗಿದೆ. ಆಲಿಕಲ್ಲು ಮಳೆಯಿಂದಾಗಿ ಒಣದ್ರಾಕ್ಷಿ ಸಂಪೂರ್ಣ ಕಪ್ಪು ಬಣ್ಣಕ್ಕೆ ತಿರುಗುತ್ತಿದ್ದು, ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಬೆಳೆ ಕುಸಿತದ ಭೀತಿ ಎದುರಾಗಿದೆ. ವಿಜಯಪುರ ಜಿಲ್ಲೆಯ ತಿಕೋಟಾ, ತಾಜಪುರ, ಬಾಬಾನಗರ, ಬಿಜ್ಜರಗಿ, ಬಬಲೇಶ್ವರ ಕಡೆಗಳಲ್ಲಿ ಆಲಿಕಲ್ಲು ಮಳೆಗೆ ಹೆಚ್ಚಿನ ಹಾನಿ ಉಂಟಾಗಿದ್ದು, ರೈತರು ಬೆಳೆದ ಬೆಳೆ ಕೈಗೆ ಬಂದ ತುತ್ತು ಬಾಯಿಗೆ ಬರದಂತಾಗಿದೆ.

ಬೆಳೆಗಾರರಿಗೆ ಸಿಗದ ವಿಶೇಷ ಪ್ಯಾಕೇಜ್
ಸಮ್ಮಿಶ್ರ ಸರ್ಕಾರದ ಪ್ರಸಕ್ತ ಬಜೆಟ್‌ನಲ್ಲಿ ದಾಳಿಂಬೆ ಹಾಗೂ ದ್ರಾಕ್ಷಿ ಬೆಳೆಗಾರರ ಪುನಃಶ್ಚೇತನಕ್ಕೆ 150 ಕೋಟಿ ರೂ. ವಿಶೇಷ ಪ್ಯಾಕೇಜ್ ನೀಡುವುದಾಗಿ ೋಷಣೆ ಮಾಡಿದೆ. ಆದರೆ ಅದು ಇನ್ನು ಬೆಳೆಗಾರರ ಕೈಗೆ ಎಟುಕಿಲ್ಲ. ತೋಟಗಾರಿಕಾ ಸಚಿವ ಎಂ.ಸಿ. ಮನಗೂಳಿ ಅವರ ತವರು ಜಿಲ್ಲೆಯಾಗಿರುವ ವಿಜಯಪುರದಲ್ಲಿ ದ್ರಾಕ್ಷಿ ಬೆಳೆಗಾರರ ಸಂಖ್ಯೆ ಅತ್ಯಧಿಕವಿದ್ದು, ಇನ್ನು ಸರ್ಕಾರದಿಂದ ಪರಿಹಾರ ಬಾರದೆ ಇರುವುದರಿಂದ ಕಂಗಲಾಗಿದ್ದಾರೆ.

ಜಿಲ್ಲೆಯಲ್ಲಿ ಭಾನುವಾರ ಸುರಿದ ಅಕಾಲಿಕ ಮಳೆಯಿಂದಾಗಿ 10 ಹೆಕ್ಟೇರ್ ಪ್ರದೇಶದಲ್ಲಿ ದ್ರಾಕ್ಷಿ ಬೆಳೆ ಹಾನಿಯಾಗಿದೆ. ಒಟ್ಟು 30 ಲಕ್ಷ ರೂ. ಮೌಲ್ಯದ ದ್ರಾಕ್ಷಿ ಹಾನಿಯಾಗಿದೆ.
ಸಂತೋಷ ಇನಾಮದಾರ, ಉಪ ನಿರ್ದೇಶಕ ತೋಟಗಾರಿಕೆ ಇಲಾಖೆ.

ದ್ರಾಕ್ಷಿ ಬೆಳೆಗಾರರ ಸಮಸ್ಯೆಗಳನ್ನು ಬಗೆಹರಿಸುವಲ್ಲಿ ಸರ್ಕಾರಗಳು ನಿರ್ಲಕ್ಷ್ಯ ಧೋರಣೆ ಅನುಸರಿಸುತ್ತಿವೆ. ಅಕಾಲಿಕ ಮಳೆಯಿಂದಾಗಿ ದ್ರಾಕ್ಷಿ ಬೆಳೆಗಾರರು ತುಂಬಾ ನಷ್ಟ ಅನುಭವಿಸುವಂತಾಗಿದೆ. ತೋಟಗಾರಿಕಾ ಸಚಿವರು ಇಲ್ಲಿನವರೇ ಆಗಿರುವುದರಿಂದ ಬೆಳೆಗಾರರಿಗೆ ಶೀಘ್ರ ಪರಿಹಾರ ಕೊಡಿಸುವ ಕೆಲಸ ಮಾಡಬೇಕು .
ಅಭಯಕುಮಾರ ನಾಂದ್ರೇಕರ, ದ್ರಾಕ್ಷಿ ಬೆಳೆಗಾರರ ಸಂಘದ ಅಧ್ಯಕ್ಷ