ಸಂವಿಧಾನ ಬದಲಾವಣೆ ಬಿಜೆಪಿ ಕೆಲಸವಲ್ಲ

ವಿಜಯಪುರ : ಸಂವಿಧಾನ ಬದಲಾವಣೆ ಮಾಡುವುದು ಸಂಘ ಪರಿವಾರ-ಬಿಜೆಪಿಗರ ಕೆಲಸವಲ್ಲ. ದೇಶದ ರಕ್ಷಣೆ ಹಿತದೃಷ್ಟಿಯಿಂದ ಈ ಬಾರಿ ಕಮಲಕ್ಕೆ ಮತ ಹಾಕಬೇಕು ಎಂದು ಮಾಜಿ ಸಚಿವ, ಚಿತ್ರದುರ್ಗದ ಲೋಕಸಭಾ ಅಭ್ಯರ್ಥಿ ಎ.ನಾರಾಯಣ ಸ್ವಾಮಿ ಹೇಳಿದರು.

ಬಿಜೆಪಿಯವರು ಸಂವಿಧಾನ ಬದಲಾವಣೆ ಮಾಡಲು ಹೊರಟ್ಟಿದ್ದಾರೆಂದು ಕಾಂಗ್ರೆಸ್ ನಾಯಕರು ಟೀಕೆ ಮಾಡುತ್ತ ಹೊರಟಿದ್ದಾರೆ. ಆದರೆ, ಸಂವಿಧಾನ ಬದಲಾವಣೆ ಮಾಡುವುದು ಸಂಘ ಪರಿವಾರ, ಬಿಜೆಪಿ ಕೆಲಸವಲ್ಲ. ಕೇವಲ ಅಭಿವೃದ್ಧಿ ಆಧಾರ ಮೇಲೆ ಮತ ಕೇಳುತ್ತೇವೆ ಎಂದು ಭಾನುವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.

ಕಾಂಗ್ರೆಸ್ ಅಭ್ಯರ್ಥಿ ಮಲ್ಲಿಕಾರ್ಜುನ ಖರ್ಗೆ ಅವರು 370ಜೆ ಅನುಷ್ಠಾನಕ್ಕೆ ಶ್ರಮಿಸಿರುವುದಾಗಿ ಹೇಳಿಕೊಂಡು ಮತ ಕೊಡಿ ಎಂದು ಕೇಳುತ್ತಿದ್ದಾರೆ. ಇನ್ನೊಂದೆಡೆ ಸಿದ್ದರಾಮಯ್ಯ ಹೊಟ್ಟೆ ತುಂಬ ಅನ್ನ ಕೊಟ್ಟಿದ್ದೇವೆ ಮತ ಕೊಡಿ ಎನ್ನುತ್ತಾರೆ. ಹೀಗಿದ್ದರೂ ಏಕೆ ಬಡತನ ನಿವಾರಣೆ ಮಾಡಲು ಆಗಲಿಲ್ಲ. 60 ವರ್ಷ ಕಾಂಗ್ರೆಸ್‌ಗೆ ಅಧಿಕಾರ ನೀಡಿದ್ದೇವೆ. ಆದರೆ ಉತ್ತರ ಕರ್ನಾಟಕ ಭಾಗಕ್ಕೆ ಈವರೆಗೂ ಉತ್ತಮ ಶಿಕ್ಷಣ ಸಿಕ್ಕಿಲ್ಲ ಎಂದರು.

ಸಂವಿಧಾನದಲ್ಲಿ ಮೀಸಲು ಎಂಬುದು ಹತ್ತು ವರ್ಷಕೊಮ್ಮೆ ಪುನರ್ ಪರಿಶೀಲನೆ ಮಾಡಬೇಕಿದೆ. ಅಭಿವೃದ್ಧಿ ಆಧಾರ ಮೇಲೆ ಮೀಸಲಾತಿ ಪರಿಶೀಲನೆ ಮಾಡುವುದು ತಪ್ಪಲ್ಲ. ಆದರೆ, ಯಾವುದೇ ಪಕ್ಷ ಮೀಸಲಾತಿ ಪರಿಶೀಲನೆ ಮಾಡಲು ಮುಂದಾಗಿಲ್ಲ. ಈ ಬಾರಿ ಬಿಜೆಪಿ ಅಧಿಕಾರಕ್ಕೆ ಬಂದರೆ ಮೀಸಲಾತಿ ಮರು ಪರಿಶೀಲನೆ ಮಾಡಲಾಗುವುದು ಎಂದು ತಿಳಿಸಿದರು.

ಸುಮಲತಾ ಮೇಲೇಕಿಲ್ಲ ಅನುಕಂಪ ?
ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಹಾಗೂ ಮಾಜಿ ಪ್ರಧಾನಿ ದೇವೇಗೌಡ ಅವರು ಸುನೀತಾ ಚವಾಣ್ ಪರವಾಗಿ ಪ್ರಚಾರ ಮಾಡುವ ಮೂಲಕ ಮಹಿಳೆ ಬಗ್ಗೆ ಅನುಕಂಪ ತೋರುತ್ತಿದ್ದಾರೆ. ಅದೇ ಅನುಕಂಪವನ್ನು ಸುಮಲತಾ ಮೇಲೆ ಏಕೆ ತೋರಿಸಲಿಲ್ಲ ಎಂದು ಮಾಜಿ ಶಾಸಕ ವೀರಭದ್ರಪ್ಪ ಹಾಲಹರವಿ ಸಿಎಂ ಕುಮಾರಸ್ವಾಮಿ ಅವರನ್ನು ಪ್ರಶ್ನಿಸಿದರು.

ಪುತ್ರ ವ್ಯಾಮೋಹದಿಂದಾಗಿ ಪಕ್ಷೇತರ ಅಭ್ಯರ್ಥಿ ಸುಮಲತಾ ಅವರಿಗೆ ಹೆಣ್ಣು ಎನ್ನದೆ ಮಾನಸಿಕ ಹಿಂಸೆ ನೀಡಿದ್ದಾರೆ. ದೇವೇಗೌಡ ಅವರ ಕುಟುಂಬ ರಾಜಕಾರಣವನ್ನು ವಿಜಯಪುರ ಜಿಲ್ಲೆಗೆ ತಂದಿದ್ದಾರೆ. ಮಕ್ಕಳು, ಸೊಸೆ, ಮೊಮ್ಮಕ್ಕಳನ್ನು ಚುನಾವಣೆಗೆ ಇಳಿಸುತ್ತಿದ್ದಾರೆ. ಮುಂದೆ ಮರಿ ಮೊಮ್ಮಕ್ಕಳನ್ನು ಚುನಾವಣೆಗೆ ತರುತ್ತಾರೆ. ಈಗ ತಮ್ಮ ಮೊಮ್ಮಕ್ಕಳನ್ನು ಚುನಾವಣೆಗೆ ನಿಲ್ಲಿಸಿ ಗೆಲ್ಲಿಸುವಂತೆ ಕಣ್ಣೀರು ಹಾಕುತ್ತಾರೆ. ಇನ್ನೊಂದೆಡೆ ಹೆಣ್ಣು ಮಗಳ ಕಣ್ಣಲ್ಲಿ ಕಣ್ಣೀರು ಹಾಕಿಸುತ್ತಾರೆ. ಇದೆಂಥ ನ್ಯಾಯ ಎಂದು ವಾಗ್ದಾಳಿ ನಡೆಸಿದರು.