ಈ ಬಾರಿ ಮೋದಿಯನ್ನು ಮನೆಗೆ ಕಳುಹಿಸಿ

ವಿಜಯಪುರ : ವೈಮಾನಿಕ ದಾಳಿ, ಸೈನಿಕರ ಶೌರ್ಯವನ್ನು ತಮ್ಮ ಸಾಧನೆ ಎಂದು ಬಿಂಬಿಸಿ ಪ್ರಧಾನಿ ಮೋದಿ ಅವರು ಮತ ಕೇಳುತ್ತಿರುವುದು ಸರಿಯಲ್ಲ. ಎಂದಿಗೂ ಯಾವ ಪಕ್ಷಗಳು ಸೈನಿಕರನ್ನು ವಿಷಯವಾಗಿರಿಸಿಕೊಂಡು ಮತ ಕೇಳಿದ ಉದಾಹರಣೆ ಇಲ್ಲ ಎಂದು ವಿಧಾನ ಪರಿಷತ್ ಮಾಜಿ ಸದಸ್ಯ ಡಾ.ಎಂ.ಪಿ. ನಾಡಗೌಡ ಹೇಳಿದರು.

ಈ ಹಿಂದೆ ದಿವಂಗತ ಲಾಲ್ ಬಹಾದ್ದೂರ ಶಾಸ್ತ್ರೀಜಿ, ಇಂದಿರಾ ಗಾಂಧಿ ಮೊದಲಾದವರು ಪ್ರಧಾನಿಯಾಗಿದ್ದ ಸಂದರ್ಭದಲ್ಲಿಯೂ ಅನೇಕ ಯುದ್ಧಗಳು ನಡೆದು ಪಾಕಿಸ್ತಾನಕ್ಕೆ ತಕ್ಕ ಉತ್ತರ ನೀಡಲಾಗಿತ್ತು. ಆದರೆ ಅದನ್ನು ಚುನಾವಣಾ ವಿಷಯವಾಗಿರಿಸಿಕೊಂಡಿರಲಿಲ್ಲ. ಆದರೆ ಮೋದಿ ಅವರು ಸೈನ್ಯದ ವಿಷಯವನ್ನು ಚುನಾವಣೆಯಲ್ಲಿ ಬಳಸಿಕೊಳ್ಳುತ್ತಿರುವುದು ಸರಿಯಲ್ಲ ಎಂದು ಬುಧವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದರು.

ಪುಲ್ವಾಮಾ ದಾಳಿ ವೇಳೆ 350 ಕೆಜಿ ಆರ್‌ಡಿಎಕ್ಸ್ ಸರಬರಾಜು ಆಗಿರುವ ಮಾಹಿತಿ ಕಲೆ ಹಾಕುವಲ್ಲಿ ಕೇಂದ್ರ ಸರ್ಕಾರ ವಿಫಲವಾಗಿದೆ. ಅದನ್ನು ಸಾರ್ವಜನಿಕವಾಗಿ ತನಿಖೆ ಮಾಡಲು ಸಾಧ್ಯವಾಗದಿದ್ದರೂ ವಿವಿಧ ಹಂತಗಳಲ್ಲಾದರೂ ತನಿಖೆ ನಡೆಸಬೇಕಿದೆ. ಒಂದೇ ತಿಂಗಳಲ್ಲಿ ಮಂಗಳಯಾನದ ಬಟನ್ ಒತ್ತಿದರು. ಅದು ಒಂದೇ ತಿಂಗಳಲ್ಲಿ ಸಾಧ್ಯವಾಯಿತೇ? ಈ ಹಿಂದೆ ನೆಹರು ಅವರ ಪ್ರಯತ್ನದ ಫಲವಾಗಿ ಬಾಹ್ಯಾಕಾಶ ರಂಗದಲ್ಲಿ ಸಾಧನೆ ಮಾಡಲು ಸಾಧ್ಯವಾಯಿತು. ನಾನು ಸಹ ಕಾಂಗ್ರೆಸ್ ವಿರೋಧಿಸಿದ್ದೇನೆ, ವಿರೋಧ ಎಂದ ಮಾತ್ರಕ್ಕೆ ಕಾಂಗ್ರೆಸ್ ಏನೂ ಮಾಡಿಲ್ಲ ಎಂತಲ್ಲ. ವಾಜಪೇಯಿ ಅವರಲ್ಲಿದ್ದ ದೊಡ್ಡತನ ಮೋದಿ ಅವರಲ್ಲಿ ಇಲ್ಲವೇ ಇಲ್ಲ ಎಂದು ವ್ಯಂಗ್ಯವಾಡಿದರು.

ಸಿಬಿಐ, ಇಡಿ, ರಿಸರ್ವ್ ಬ್ಯಾಂಕ್ ಸೇರಿದಂತೆ ಅನೇಕ ಸಾಂವಿಧಾನಿಕ ಸಂಸ್ಥೆಗಳನ್ನು ಕೇಂದ್ರ ಸರ್ಕಾರ ದುರಪಯೋಗ ಪಡಿಸಿಕೊಳ್ಳುತ್ತಿದೆ. ನೋಟು ಅಮಾನ್ಯೀಕರಣ ಎಂಬ ತುಘಲಕ್ ನಿರ್ಧಾರದಿಂದಾಗಿ ಜನಸಾಮಾನ್ಯರಿಗೆ ಆಗಿರುವ ತೊಂದರೆ ಅಷ್ಟಿಷ್ಟಲ್ಲ, ಆ ತೊಂದರೆಯಿಂದ ಸಾಮಾನ್ಯ ಜನತೆ ಇನ್ನೂ ಹೊರಬಂದಿಲ್ಲ. ಸ್ವಿಸ್ ಬ್ಯಾಂಕ್‌ನಲ್ಲಿ ಈ ಹಿಂದೆ ಇದ್ದಿಕ್ಕಿಂತ ಠೇವಣಿ ಹೆಚ್ಚಾಗಿರುವುದು ಬೆಳಕಿಗೆ ಬಂದಿದೆ. ಇದು ವಿಪರ್ಯಾಸವಲ್ಲವೇ? ಎಂದು ಪ್ರಶ್ನಿಸಿದರು.

ಶ್ರೀಮಂತರಿಂದ ತೆಗೆದುಕೊಂಡು ಬಡವರಿಗೆ ನೀಡುವುದು ಒಂದು ಸಿದ್ಧಾಂತ. ಆದರೆ ಮೋದಿ ಬಡವರಿಂದ ಕಿತ್ತುಕೊಂಡು ಶ್ರೀಮಂತರಿಗೆ ನೀಡುತ್ತಿದ್ದಾರೆ. ಬಂಡವಾಳಶಾಹಿಗಳ ಪರವಾದ ನಿಲುವು ಹೊಂದಿರುವ ಮೋದಿ ಅವರ ದುರಾಡಳಿತದ ಲವಾಗಿಯೇ 36ಕ್ಕೂ ಹೆಚ್ಚು ಉದ್ಯಮಪತಿಗಳು ಸಾವಿರಾರು ಕೋಟಿ ರೂ.ವಂಚನೆ ಮಾಡಿ ಪರಾರಿಯಾಗಿದ್ದಾರೆ ಎಂದರು.

140 ಸೀಟು ಕುಸಿತ
ಈ ಬಾರಿ ಬಿಜೆಪಿಗೆ ಗುಜರಾತ್, ಮಹಾರಾಷ್ಟ್ರ, ರಾಜಸ್ತಾನ, ಕರ್ನಾಟಕ ಸೇರಿದಂತೆ ಹಲವಾರು ರಾಜ್ಯಗಳಲ್ಲಿ ಬಿಜೆಪಿಗೆ ಭಾರಿ ಹೊಡೆತ ಬೀಳಲಿದೆ. ಕಳೆದ ಬಾರಿಗಿಂತ ಈ ಬಾರಿ ಮೋದಿ ಅಲೆ ಕಡಿಮೆಯಾಗಿದ್ದು, ಅದರಿಂದಾಗಿ ಬಿಜೆಪಿ 140 ಸ್ಥಾನ ಕುಸಿತಗೊಳ್ಳಲಿದೆ. ಹಾಗಾಗಿ ಮೋದಿ ಮನೆಗೆ ಹೋಗುವುದು ಸತ್ಯ ಎಂದು ಭವಿಷ್ಯ ನುಡಿದರು. ಪ್ರಸ್ತುತ ಆಡಳಿತದಲ್ಲಿರುವ ಪ್ರಧಾನಿಗಳ ಮುಂದೆ ಸಚಿವರು ಕೈಕಟ್ಟಿ ನಿಲ್ಲುವಂತಹ ಪರಿಸ್ಥಿತಿ ಇದೆ. ಇದು ಪ್ರಜಾಪ್ರಭುತ್ವದ ಲಕ್ಷಣವಲ್ಲ. ಎಲ್ಲರಿಗೂ ಸಮಾನವಾದ ಹಕ್ಕು, ಅಧಿಕಾರಗಳಿವೆ. ಈ ಹಿಂದೆ ಈ ರೀತಿಯ ಪರಿಸ್ಥಿತಿ ಇರಲಿಲ್ಲ. ಮೋದಿ ಅವರು ಪ್ರತಿಪಕ್ಷ ನಾಯಕನಾಗಿ ಕೆಲಸ ಮಾಡಿಲ್ಲ. ಹೀಗಾಗಿ ಜನತೆ ಅವರಿಗೆ ಈ ಬಾರಿ ಪ್ರತಿಪಕ್ಷ ಸ್ಥಾನ ನೀಡಲಿ. ಈ ಬಾರಿ ಅವರು ಪ್ರತಿಪಕ್ಷ ಸ್ಥಾನದಲ್ಲಿ ಕುಳಿತುಕೊಳ್ಳುವಂತೆ ಮಾಡಿ ಎಂದು ಕೋರಿದರು. ಈ ಬಾರಿ ಮೈತ್ರಿ ಅಭ್ಯರ್ಥಿಗೆ ಸಂಪೂರ್ಣ ಬೆಂಬಲ ನೀಡಿದ್ದೇನೆ. ಈ ಹಿನ್ನೆಲೆಯಲ್ಲಿ ಜನತೆ ಮೈತ್ರಿ ಅಭ್ಯರ್ಥಿಯನ್ನು ಆಶೀರ್ವದಿಸಬೇಕು ಎಂದು ತಿಳಿಸಿದರು.

ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಇಂದು ಚುನಾವಣೆ ಎದುರಿಸುವುದು ಕಷ್ಟದ ಕೆಲಸವಾಗಿದೆ. ಹಣ ಬಲ ಇರುವವರಿಗೆ ಹೆಚ್ಚಿನ ಮನ್ನಣೆ ನೀಡುವಂತಾಗುತ್ತಿದೆ. ಚುನಾವಣೆ ಪ್ರಕ್ರಿಯೆಯಲ್ಲಿ ಸುಧಾರಣೆ ತರುವ ಅವಶ್ಯಕತೆ ಇದೆ.
ಎಂ.ಪಿ.ನಾಡಗೌಡ ಮಾಜಿ ಎಂಎಲ್‌ಸಿ