ಮಾದರಿ ನೀತಿ ಸಂಹಿತೆ ಉಲ್ಲಂಸದಿರಿ

ವಿಜಯಪುರ : ಲೋಕಸಭಾ ಸಾರ್ವತ್ರಿಕ ಚುನಾವಣೆ ಅಂಗವಾಗಿ ನಡೆಯುವ ಮತದಾನ ಪ್ರಕ್ರಿಯೆ ಶಾಂತಿಯುತವಾಗಿ ನಡೆಯಲು ಅನುಕೂಲವಾಗುವಂತೆ ಚುನಾವಣಾ ಪ್ರಕ್ರಿಯೆ, ಮತದಾನ ಕೇಂದ್ರ, ಮತದಾರರ ಪಟ್ಟಿ ಹಾಗೂ ಮಾದರಿ ನೀತಿ ಸಂಹಿತೆ ಉಲ್ಲಂಘನೆಗೆ ಸಂಬಂಧಪಟ್ಟಂತೆ ಯಾವುದೇ ರೀತಿಯ ದೂರುಗಳಿದ್ದಲ್ಲಿ ದೂರವಾಣಿ ಮೂಲಕ ಅಥವಾ ಖುದ್ದಾಗಿ ಸಲ್ಲಿಸಬಹುದಾಗಿದೆ ಎಂದು ಸಾಮಾನ್ಯ ವೀಕ್ಷಕರಾದ ಅಶೋಕ ಶಹಾ ತಿಳಿಸಿದರು.

ಇಲ್ಲಿನ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಸೋಮವಾರ ರಾಜಕೀಯ ಪಕ್ಷಗಳ ಪ್ರತಿನಿಧಿಗಳೊಂದಿಗೆ ಸಭೆ ನಡೆಸಿದ ಅವರು, ಚುನಾವಣೆ ಪ್ರಕ್ರಿಯೆ ಶಾಂತಿಯುತವಾಗಿ ಹಾಗೂ ಪಾರದರ್ಶಕ ರೀತಿಯಲ್ಲಿ ನಡೆಯಬೇಕು. ಈ ನಿಟ್ಟಿನಲ್ಲಿ ಸಂಬಂಧಪಟ್ಟ ರಾಜಕೀಯ ಪಕ್ಷಗಳು ಚುನಾವಣೆ ಸಂದರ್ಭದಲ್ಲಿ ಯಾವುದೇ ರೀತಿಯ ನೀತಿ ಸಂಹಿತೆ ಉಲ್ಲಂಘನೆಯಾಗದಂತೆ ಮುನ್ನೆಚ್ಚರಿಕೆ ವಹಿಸುವಂತೆ ತಿಳಿಸಿದ ಅವರು, ಪ್ರಚಾರಕ್ಕೆ ಸಂಬಂಧಪಟ್ಟಂತೆ ಚುನಾವಣಾ ಆಯೋಗದ ನಿರ್ದೇಶನದನ್ವಯ ಅನುಮತಿಯನ್ನು ಕಡ್ಡಾಯವಾಗಿ ಪಡೆಯುವಂತೆ ಸೂಚನೆ ನೀಡಿದರು.

ಚುನಾವಣೆ ಸಂದರ್ಭದಲ್ಲಿ ಯಾವುದೇ ರೀತಿಯ ಸಭೆ, ಸಮಾರಂಭ, ಕಾರ್ಯಕ್ರಮ ನಡೆಸುವ ಮುಂಚಿತವಾಗಿ ಹಾಗೂ ವಾಹನಗಳ ಬಳಕೆಗೆ ಅನುಮತಿ ಪಡೆಯುವುದು ಕಡ್ಡಾಯವಾಗಿದ್ದು, ಅನುಮತಿ ಇಲ್ಲದೆ ಯಾವುದೇ ಕಾರ್ಯಕ್ರಮ, ಸಭೆ-ಸಮಾರಂಭ ನಡೆಸುವಂತಿಲ್ಲ. ಅದರಂತೆ ಪ್ರಚಾರಕ್ಕೆ ಸಂಬಂಧಿಸಿದಂತೆ ಬಳಸಲಾಗುವ ಸಾಮಗ್ರಿ ಬಗ್ಗೆ ನಿಖರವಾದ ಮಾಹಿತಿಯೊಂದಿಗೆ ಅನುಮತಿ ಪಡೆಯಬೇಕು ಎಂದು ಸೂಚನೆ ನೀಡಿದರು.
ಪಾರದರ್ಶಕ ಚುನಾವಣೆಗಾಗಿ ಈಗಾಗಲೇ ಹಲವು ಬಾರಿ ತರಬೇತಿಯನ್ನು ಸಹ ವಿವಿಧ ಪಕ್ಷಗಳ ಪ್ರತಿನಿಧಿಗಳಿಗೆ ನೀಡಲಾಗಿದೆ. ಮುಂಬರುವ ದಿನಗಳಲ್ಲಿ ಮತದಾನ, ಮತ ಎಣಿಕೆಗೆ ಸಂಬಂಧಿಸಿದಂತೆ ಮಾಹಿತಿಬೇಕಾದಲ್ಲಿ ನೀಡಲಾಗುವುದು. ಅದರಂತೆ ತಮ್ಮ ಏಜೆಂಟ್‌ಗಳನ್ನು ನಿಯೋಜಿಸಿಕೊಳ್ಳುವಂತೆ ತಿಳಿಸಿದ ಅವರು, ಮತದಾನಕ್ಕೆ ಆರಂಭಕ್ಕೂ ಮುನ್ನ ಅಣುಕು ಮತದಾನ ನಡೆಸುವುದು ಹಾಗೂ ಪೂರ್ಣಗೊಳಿಸುವುದು ಕಡ್ಡಾಯವಾಗಿರುವ ಹಿನ್ನೆಲೆಯಲ್ಲಿ ಈ ಕುರಿತು ಮಾಹಿತಿ ಪಡೆಯಬೇಕು ಎಂದು ತಿಳಿಸಿದರು.

ಈಗಾಗಲೇ ನೀತಿ ಸಂಹಿತೆ ಜಾರಿಯಲ್ಲಿರುವ ಹಿನ್ನ್ನೆಲೆಯಲ್ಲಿ ಜಾತಿ, ಧರ್ಮ, ಮತ, ಪಂಥ ಆಧಾರಿತ ಮತವನ್ನು ಕೇಳುವಂತಿಲ್ಲ. ವ್ಯಕ್ತಿಯ ತೇಜೋವಧೆ ಮಾಡುವಂತಹ ಭಾಷೆಯನ್ನು ಬಳಸುವಂತಿಲ್ಲ ಎಂದು ತಿಳಿಸಿದ ಅವರು, ಇವಿಎಂ, ವಿವಿಪ್ಯಾಟ್‌ಗಳ ಬಗ್ಗೆಯೂ ಸಮಗ್ರ ಮಾಹಿತಿಯನ್ನು ಪಡೆಯುವಂತೆ ತಿಳಿಸಿದರು.

ಜಿಲ್ಲಾಧಿಕಾರಿ ಎಂ.ಕನಗವಲ್ಲಿ ಮಾತನಾಡಿ, ಅಭ್ಯರ್ಥಿಗಳು ಪ್ರಚಾರ ಸಾಮಗ್ರಿಗಳ ಮುದ್ರಣಕ್ಕಾಗಿ ಹಾಗೂ ವಿದ್ಯುನ್ಮಾನ ಮಾಧ್ಯಮಗಳ ಮೂಲಕ ಪ್ರಚಾರ ಕೈಗೊಳ್ಳಲು ಪೂರ್ವಾನುಮತಿ ಪಡೆದುಕೊಳ್ಳಬೇಕು. ಅದರಂತೆ ಚುನಾವಣಾ ಏಜೆಂಟ್‌ಗಳನ್ನು ನೇಮಿಸಿಕೊಳ್ಳುವ ಜತೆಗೆ ಚುನಾವಣೆ ಪ್ರಕ್ರಿಯೆಗಳ ಬಗ್ಗೆ ಕಾನೂನಿನ ರಿತ್ಯ ಅನುಪಾಲನೆ ಮಾಡುವ ಬಗ್ಗೆ ಅರಿವು ಹೊಂದಬೇಕು ಎಂದು ಅವರು ಹೇಳಿದರು.

ಈ ಬಾರಿ ಚುನಾವಣೆಯಲ್ಲಿ ಅಭ್ಯರ್ಥಿಗೆ 70 ಲಕ್ಷ ರೂ. ವೆಚ್ಚವನ್ನು ನಿಗದಿಪಡಿಸಲಾಗಿದೆ. ಪ್ರಚಾರಕ್ಕಾಗಿ ಬಳಸಲಾಗುವ ಸಾಮಗ್ರಿ ಮತ್ತು ವಾಹನಗಳ ಕುರಿತು ಅನುಮತಿ ಪಡೆಯುವುದು ಕಡ್ಡಾಯವಾಗಿದೆ. ಯಾವುದೇ ರೀತಿಯ ನೀತಿ ಸಂಹಿತೆ ಉಲ್ಲಂಘನೆಯಾದಲ್ಲಿ ತಕ್ಷಣ ಎ್ಐಆರ್ ದಾಖಲಿಸಲಾಗುತ್ತದೆ ಎಂದು ತಿಳಿಸಿದ ಅವರು, ಈಗಾಗಲೇ ರಾಜಕೀಯ ಪಕ್ಷಗಳ ಅಭ್ಯರ್ಥಿಗಳಿಗೆ ಪ್ರಚಾರದ ಬಗ್ಗೆ ಮಾಹಿತಿ ಕೈಪಿಡಿ ನೀಡಲಾಗಿದೆ. ದೇವಸ್ಥಾನ, ಸರ್ಕಾರಿ ಶಾಲೆ, ಮಸೀದಿ, ಚರ್ಚ್‌ಗಳಲ್ಲಿ, ಜಾತಿಯಾಧಾರ, ಮತ ಕೇಳುವುದಾಗಲಿ, ವ್ಯಕ್ತಿ ತೇಜೋವಧೆಯಂತಹ ಪ್ರಚಾರ ಮೇಲೆ ನಿಗಾ ಇಡಲು ಹಾಗೂ ನೀತಿ ಸಂಹಿತೆ ಉಲ್ಲಂಘನೆ ಪ್ರಕರಣ ದಾಖಲಿಸಲು ಅನೇಕ ರೀತಿಯ ತಂಡಗಳನ್ನು ರಚಿಸಲಾಗಿದ್ದು, ಕಾನೂನಿನ ರಿತ್ಯ ಸೂಕ್ತ ಕ್ರಮ ಕೈಗೊಳ್ಳಲಾಗುವುದು ಎಂದು ತಿಳಿಸಿದರು.
ಜಿಲ್ಲೆಯಲ್ಲಿ ಈಗಾಗಲೇ ಸಾಮಾನ್ಯ ವೀಕ್ಷಕರು, ಪೊಲೀಸ್ ವೀಕ್ಷಕರು ಹಾಗೂ ವೆಚ್ಚ ವೀಕ್ಷಕರು ಆಗಮಿಸಿದ್ದು, ವೆಚ್ಚಗಳ ಮೇಲೆ ನಿಗಾ ಇಡಲಾಗುತ್ತದೆ. ಕಾರಣ ವೆಚ್ಚಕ್ಕೆ ಸಂಬಂಧಿಸಿದಂತೆ ಸಮರ್ಪಕ ದಾಖಲಾತಿಗಳನ್ನು ಇಟ್ಟುಕೊಳ್ಳುವಂತೆ ತಿಳಿಸಿದ ಅವರು, ಸಮರ್ಪಕ ವೆಚ್ಚ ದಾಖಲಾತಿಗಳನ್ನು ಸಲ್ಲಿಸದಿದ್ದಲ್ಲಿ ಚುನಾವಣೆಗೆ ಸ್ಪರ್ಧಿಸಲು ಅನರ್ಹಗೊಳಿಸುವಂತಹ ಕ್ರಮ ಕೈಗೊಳ್ಳಲಾಗುತ್ತದೆ ಎಂದರು.

ಹೆಚ್ಚುವರಿ ಜಿಲ್ಲಾಧಿಕಾರಿ ಎಚ್. ಪ್ರಸನ್ನ ಸೇರಿದಂತೆ ರಾಜಕೀಯ ಪಕ್ಷಗಳ ಪ್ರತಿನಿಧಿಗಳು ಉಪಸ್ಥಿತರಿದ್ದರು.