ಮತ್ತೆ ಗದ್ದಲ ಎಬ್ಬಿಸಿದ ಗೌಡರು !

ವಿಜಯಪುರ: ‘ಮತಪಟ್ಟಿಯಿಂದ ಬಂಜಾರಾ ಸಮಾಜದವರ ಹೆಸರು ತೆಗೆದುಹಾಕಲು ಕೆಲವರು ಯತ್ನಿಸಿದ್ದರು. ಅವರಿಗೆ ತಕ್ಕ ಪಾಠ ಕಲಿಸಬೇಕು. ಅವರು ಯಾರೆಂಬುದು ನನಗೂ ಗೊತ್ತು, ತಮಗೂ ಗೊತ್ತಿದೆ’ ಎನ್ನುವ ಮೂಲಕ ನಗರ ಶಾಸಕರೊಬ್ಬರು ತಮ್ಮದೇ ಪಕ್ಷದ ಲೋಕಸಭೆ ಅಭ್ಯರ್ಥಿ ವಿರುದ್ಧ ಪರೋಕ್ಷ ವಾಗ್ದಾಳಿ ನಡೆಸಿದ್ದಾರೆ.

ಹೌದು, ಭಾನುವಾರ ನಡೆದ ಸಂತಸೇವಾಲಾಲ ಮಹಾರಾಜದ ಜಯಂತ್ಯುತ್ಸವ ಹಾಗೂ ಬಂಜಾರಾ ಜನಜಾಗೃತಿ ಸಮಾವೇಶದಲ್ಲಿ ನಗರ ಶಾಸಕ ಬಸನಗೌಡ ಪಾಟೀಲ ಯತ್ನಾಳರ ಭಾಷಣದ ಸಾರಾಂಶ ತಮ್ಮದೇ ಪಕ್ಷದ ಸಂಸದ ರಮೇಶ ಜಿಗಜಿಣಗಿ ವಿರುದ್ಧವಾಗಿತ್ತು.

ಲೋಕಸಭೆ ಚುನಾವಣೆಯಲ್ಲಿ ಸಮಾಜಕ್ಕೆ ಅನ್ಯಾಯವಾಗುತ್ತಿದ್ದು ಅದಕ್ಕೆ ತಾವೇ ಕಾರಣ ಎನ್ನುವ ಮೂಲಕ ಯತ್ನಾಳರು ಕಳೆದೆರಡು ಬಾರಿ ಕಾಂಗ್ರೆಸ್‌ನ ಪ್ರಕಾಶ ರಾಠೋಡ ಸೋತಿದ್ದು ಬಿಜೆಪಿ ಗೆಲುವಿಗೆ ಪರೋಕ್ಷವಾಗಿ ಬಂಜಾರಾ ಸಮುದಾಯವೇ ಕಾರಣ ಮತ್ತು ಅದು ತಪ್ಪು ಎನ್ನುವ ರೀತಿ ಯತ್ನಾಳ ಮಾತನಾಡಿದರು.

‘ಸಮುದಾಯದ ರಾಜಕೀಯ ವೈಫಲ್ಯದಲ್ಲಿ ತಮ್ಮದೂ ತಪ್ಪಿದೆ. ದೀಪಾವಳಿಗೆ ಹೋದರೆ ಯುಗಾದಿಗೇ ಬರುತ್ತೀರಿ, ಈ ಮಧ್ಯೆ ಚುನಾವಣೆ ಬಂದು ಹೋಗುತ್ತದೆ, ಮತ್ತೆ ಎಂ.ಬಿ. ಪಾಟೀಲರು ಗಾಡಿ ಕೊಟ್ಟು ಕಳುಹಿಸಬೇಕಾಗುತ್ತದೆ. ಈ ದೀಪಾವಳಿ- ಯುಗಾದಿ ಮಧ್ಯೆಯೇ ಚುನಾವಣೆ ಬಂದು ಬಿಡುತ್ತದೆ. ಹೀಗಾಗಿ ಮತದಾನದಿಂದ ವಂಚಿತರಾಗುತ್ತೀರಿ. ಇತ್ತೀಚೆಗೆ ಕೆಲವರು ಮತ ಪಟ್ಟಿಯಿಂದ ತಮ್ಮೆಲ್ಲರ ಹೆಸರು ಸಹ ತೆಗೆಯಲು ಮುಂದಾಗಿದ್ದರು. ಅವರು ಯಾರೆಂಬುದು ನಿಮಗೂ ಮತ್ತು ನನಗೂ ಚೆನ್ನಾಗಿ ಗೊತ್ತು’ ಎಂದು ಪರೋಕ್ಷವಾಗಿ ಜಿಗಜಿಣಗಿ ಹೆಸರು ಪ್ರಸ್ತಾಪಿಸಿದರಲ್ಲದೇ, ಅಂಥವರಿಗೆ ತಕ್ಕ ಪಾಠ ಕಲಿಸಬೇಕೆಂದರು.

ಅಭಿ ಪಿಚ್ಛರ್ ಬಾಕಿ ಹೈ
ವಿಧಾನಸಭಾ, ಲೋಕಸಭಾ ಕ್ಷೇತ್ರಗಳಿಗೆ ಟಿಕೆಟ್ ಹಂಚುವ ಕಾಲ ನನಗೂ ಬರಲಿದೆ. ನನ್ನನ್ನು ರಾಜಕೀಯವಾಗಿ ಮುಗಿಸಲು ನೋಡಿದರೆ. ಎದ್ದು ಬಿದ್ದು ಮತ್ತೆ ಅಧಿಕಾರಕ್ಕೆ ಬಂದಿರುವೆ. ಇನ್ನೂ ಮೇಲೆ ಹೋಗುತ್ತೇನೆ. ಸದ್ಯ ಟಿಕೆಟ್ ನನ್ನ ಕೈಯಲ್ಲಿಲ್ಲ. ಮುಂದೊಂದು ದಿನ ರಾಜ್ಯದಲ್ಲಿ ಟಿಕೆಟ್ ಹಂಚುವ ಕಾಲ ನನಗೂ ಬರಲಿದೆ. ಆ ದಿನ ದೂರವಿಲ್ಲ. ಅತ್ತೆಗೊಂದು ಕಾಲವಾದರೆ ಸೊಸೆಗೊಂದು ಕಾಲ, ಯತ್ನಾಳಗರಿಗೂ ಒಂದು ಕಾಲ ಬರುತ್ತೆ. ಆಗ ನಾನೇನಂತ ತೋರಿಸುವೆ. ಇದು ಟ್ರೇಲರ್ ಹೈ… ಪಿಚ್ಛರ್ ಅಭೀ ಬಾಕಿ ಹೈ ಎಂದರು.

ನಾನು ಸಂಸದನಾಗಿ ಹಲವು ಕಾರ್ಯಗಳನ್ನು ಮಾಡಿದ್ದೇನೆ, ಯಾವ ಊರಿಗೆ ಹೋದರೂ ನನ್ನ ಅನುದಾನದಡಿಯಲ್ಲಿ ನಿರ್ಮಾಣವಾಗಿರುವ ಕಟ್ಟಡಗಳ ಮೇಲೆ ನನ್ನ ಹೆಸರು ಕಾಣಬಹುದು. ಆಡು ಮುಟ್ಟದ ಗಿಡವಿಲ್ಲ, ಯತ್ನಾಳ ಅಡ್ಡಾಡದ ಊರಿಲ್ಲ, ಎಲ್ಲ ಊರಿಗೂ ಸಂಚರಿಸಿ ಅಭಿವೃದ್ಧಿ ಕಾರ್ಯಗಳನ್ನು ಮಾಡಿದ್ದೆ ಎಂದರು.

ನಾನು ಗೆದ್ದು ಸೋತು, ಮತ್ತೆ ಈಗ ರಾಜಕೀಯದಲ್ಲಿ ಮೇಲೆ ಬಂದಿದ್ದೇನೆ, ನಾನು ಯಾರನ್ನೂ ಬೇಕಾದರೂ ಸೋಲಿಸಬಹುದು, ಯಾರನ್ನೂ ಬೇಕಾದರೂ ಗೆಲ್ಲಿಸಬಹುದು, ನನ್ನ ತಾಕತ್ತು ನನಗೆ ಗೊತ್ತಿದೆ. ಕೆಲವೊಬ್ಬರು ಗೋಳಗುಮ್ಮಟ, ಬಾರಾಕಮಾನ್ ಕಟ್ಟಿದ್ದು ಅವರೇ ಎಂದು ಪ್ರಚಾರ ಮಾಡಿಕೊಳ್ಳುತ್ತಿದ್ದಾರೆ, ಆದರೆ ಗೋಳಗುಮ್ಮಟ ಕಟ್ಟಿದ್ದು ಆದಿಲ್‌ಷಾಹಿ, ನೀರಾವರಿ ಕೆಲಸ ಮಾಡಿದ್ದು ಎಂ.ಬಿ. ಪಾಟೀಲ ಅದರಲ್ಲಿ ಯಾವುದೇ ಎರಡು ಮಾತಿಲ್ಲ. ಒಳ್ಳೆಯ ಕೆಲಸ ಮಾಡಿದಾಗ ನಾನು ಹೊಗಳುತ್ತೇನೆ ಎಂದರು.