ದೇಶಕ್ಕೆ ‘ಕೈ’ ಕೊಡುಗೆ ಅಪಾರ

ವಿಜಯಪುರ: ಪಾಕಿಸ್ತಾನದ ವಿರುದ್ಧ ಕಾಂಗ್ರೆಸ್ ಸರ್ಕಾರ ಐದು ಯುದ್ಧ ಮಾಡಿದೆ. ದಿ. ಇಂದಿರಾಗಾಂಧಿ ಪಾಕಿಸ್ತಾನದ ಲಕ್ಷ ಸೈನಿಕರನ್ನು ಸೆರೆ ಹಿಡಿದು ತಂದಿದ್ದರು. ಕಾಂಗ್ರೆಸ್ ನಾಯಕರು ದೇಶಕ್ಕಾಗಿ ಪ್ರಾಣತ್ಯಾಗ ಮಾಡಿದ್ದಾರೆ. ವಾಜಪೇಯಿ ಅವರು ಇಂದಿರಾಗಾಂಧಿಯನ್ನು ದುರ್ಗೆ ಎಂದಿದ್ದರು. ಕಾಂಗ್ರೆಸ್ ಅವಧಿಯಲ್ಲಿ ದೇಶ ಸುಭಿಕ್ಷೆಯಿಂದಿತ್ತು. ಬಿಜೆಪಿ ಸೇರಿ ಕೆಲ ಸಂಘಟನೆಗಳು ದೇಶಭಕ್ತಿಯನ್ನು ಗುತ್ತಿಗೆ ಪಡೆದಂತೆ ಆಡುತ್ತಿವೆ. ಕಾಂಗ್ರೆಸ್ ಎಂದೂ ಯುದ್ಧವನ್ನು ರಾಜಕೀಯವಾಗಿ ಬಳಸಿಕೊಂಡಿಲ್ಲ….!

ಭಾರತ ಮತ್ತು ಪಾಕ್ ನಡುವಿನ ಸಮರಕ್ಕೆ ಸಂಬಂಧಿಸಿದಂತೆ ಕಾಂಗ್ರೆಸ್ ನಾಯಕರು ನೀಡಿದ ಸಾಲು ಸಾಲು ಹೇಳಿಕೆಗಳ ಸಾರಾಂಶ ಇದು.

ಲೋಕಸಭೆ ಚುನಾವಣೆ ಹಿನ್ನೆಲೆ ರಾಜ್ಯಾದ್ಯಂತ ನಡೆಯುತ್ತಿರುವ ಕಾಂಗ್ರೆಸ್ ಪರಿವರ್ತನೆ ಯಾತ್ರೆಯಂಗವಾಗಿ ಬುಧವಾರ ವಿಜಯಪುರದಲ್ಲಿ ನಡೆದ ಸಮಾವೇಶದಲ್ಲಿ ಮಾತನಾಡಿದ ಕಾಂಗ್ರೆಸ್ ಮುಖಂಡರು, ತಮ್ಮ ಭಾಷಣದ ಬಹುಪಾಲನ್ನು ಯುದ್ಧ ವಿಷಯಕ್ಕೆ ಮೀಸಲಿಟ್ಟರು. ಆರಂಭದಲ್ಲಿ ಹುತಾತ್ಮ ಯೋಧರಿಗಾಗಿ ಮೌನಾಚರಿಸಿದ ಮುಖಂಡರು, ಬಳಿಕ ಯುದ್ಧದ ಮಾತುಗಳ ಮೂಲಕವೇ ಭಾಷಣ ಆರಂಭಿಸಿದರು.

ಮಾಜಿ ಸಿಎಂ ಸಿದ್ದರಾಮಯ್ಯ, ಕೆಪಿಸಿಸಿ ಅಧ್ಯಕ್ಷ ದಿನೇಶ್ ಗುಂಡೂರಾವ್, ಕೆಪಿಸಿಸಿ ಪ್ರಚಾರ ಸಮಿತಿ ಅಧ್ಯಕ್ಷ ಎಚ್.ಕೆ. ಪಾಟೀಲ, ಸಿ.ಎಂ. ಇಬ್ರಾಹಿಂ ಅವರು ಪಾಕ್ ವಿರುದ್ಧ ಚಾಟಿ ಬೀಸಿದರಲ್ಲದೆ ಭಾರತದ ಪಾಲಿಗೆ ಯುದ್ಧ ಹೊಸದೇನಲ್ಲ ಎಂದರು.

ಈ ಹಿಂದೆ ಅನೇಕ ಬಾರಿ ಪಾಕ್‌ಗೆ ತಕ್ಕ ಪಾಠ ಕಲಿಸಲಾಗಿದೆ ಎನ್ನುತ್ತಲೇ ಕಾಂಗ್ರೆಸ್ ಅವಧಿಯಲ್ಲೂ ಸಾಕಷ್ಟು ಯುದ್ಧಗಳಾಗಿದ್ದು, ಅದನ್ನು ಸಮರ್ಥವಾಗಿ ನಿಭಾಯಿಸಲಾಗಿದೆ. ಕಾಂಗ್ರೆಸ್ ಎಂದಿಗೂ ಯುದ್ಧ ಸನ್ನಿವೇಶವನ್ನು ರಾಜಕೀಯವಾಗಿ ಬಳಸಿಕೊಂಡಿಲ್ಲ ಎನ್ನುತ್ತಲೇ ಕಾಂಗ್ರೆಸ್ ಅವಧಿಯಲ್ಲಾದ ಘಟನೆಗಳನ್ನು ಸ್ವಾರಸ್ಯಕರವಾಗಿ ಸಾದರಪಡಿಸಿದರು.

ದೇಶಭಕ್ತಿ ಯಾರ ಸ್ವತ್ತೂ ಅಲ್ಲ
ದೇಶಭಕ್ತಿ ಹಾಗೂ ಧರ್ಮ ಯಾರ ಆಸ್ತಿಯೂ ಅಲ್ಲ. ಕೆಲ ಸಂಘಟನೆಗಳು ದೇಶಭಕ್ತಿ ಗುತ್ತಿಗೆ ಪಡೆದಂತೆ ಆಡುತ್ತಿವೆ. ಅವರ ಅಭಿಪ್ರಾಯಕ್ಕೆ ವಿರೋಧ ವ್ಯಕ್ತಪಡಿಸಿದರೆ ದೇಶವಿರೋಧಿ ಎಂಬ ಪಟ್ಟ ಕಟ್ಟುವಲ್ಲಿ ವ್ಯವಸ್ಥಿತ ಪ್ರಯತ್ನ ನಡೆದಿದೆ ಎಂದು ಕೆಪಿಸಿಸಿ ಕಾರ್ಯಾಧ್ಯಕ್ಷ ದಿನೇಶ್ ಗುಂಡೂರಾವ್ ಕಳವಳ ವ್ಯಕ್ತಪಡಿಸಿದರು. ಆರ್‌ಎಸ್‌ಎಸ್‌ನ ಯಾವೊಬ್ಬ ನಾಯಕ ದೇಶಕ್ಕೆ ಬಲಿದಾನ ನೀಡಲಿಲ್ಲ. ದೇಶಪ್ರೇಮ ಬರೀ ಬಿಜೆಪಿ ಸ್ವತ್ತಲ್ಲ. ಬಿಜೆಪಿಗೆ ನಾಯಕರೇ ಇಲ್ಲ. ಹೀಗಾಗಿ ನೇತಾಜಿ ಸುಭಾಷಚಂದ್ರ ಬೋಸ್, ಭಗತಸಿಂಗ್, ಸರ್ದಾರ್ ಪಟೇಲ್ ಅವರ ಹೆಸರು ಬಳಸಿಕೊಳ್ಳುತ್ತಿದೆ ಎಂದರು.

ಬುಟ್ಟೋ ಭಾರತದ ಕಾಲು ಹಿಡಿದಿದ್ದ
ದಿ. ಇಂದಿರಾ ಗಾಂಧಿ ಈ ಹಿಂದೆ ಪಾಕಿಸ್ತಾನಕ್ಕೆ ಮುಟ್ಟಿ ನೋಡಿಕೊಳ್ಳುವಂಥ ಶಾಸ್ತಿ ಮಾಡಿದ್ದರು. ಅಂದಿನ ಪಾಕ್ ಪ್ರಧಾನಿ ಬುಟ್ಟೋ ಶರಣಾಗಿ ಕಾಲು ಹಿಡಿದು ನಿಮ್ಮ ತಂಟೆಗೆ ಬರುವುದಿಲ್ಲ ಎಂದು ಹೇಳಿದ್ದ. ಆದರೆ ಇಂತಹ ಎದೆಗಾರಿಕೆ ಮೋದಿ ಅವರಿಗೆ ಇಲ್ಲ ಎಂದು ಸಿ.ಎಂ. ಇಬ್ರಾಹಿಂ ಹೇಳಿದರು.

ಈ ಬಾರಿ ಮೋದಿ ಮತ್ತೆ ಅಧಿಕಾರಕ್ಕೆ ಬಂದರೆ ದೇಶದಲ್ಲಿ ಚುನಾವಣೆಯೇ ನಡೆಯಲ್ಲ. ಏಕೆಂದರೆ ಮೋದಿ ಸರ್ವಾಧಿಕಾರತ್ವ ಧೋರಣೆಯುಳ್ಳವರು. ಹಾಗಂತ ಅವರ ಪಕ್ಷದವರೇ ಹೇಳುತ್ತಿದ್ದಾರೆ. ಅರುಣ ಜೇಟ್ಲಿ ಕಿಟ್ಲಿ ಹಿಡಿಯುವಂತಾಗಿದೆ. ಇದೊಂದು ಥರ ಹುಚ್ಚನ ಕೈಯಲ್ಲಿ ಕತ್ತಿ ಕೊಟ್ಟಂತಾಗಿದೆ. 500 ಕೋಟಿ ರೂ.ವಿದೇಶ ಸುತ್ತಲು ಬಳಸಿದ ಮೋದಿ ದೇಶಕ್ಕೆ ತಂದಿದ್ದೇನು? ಪಾಕಿಸ್ತಾನಕ್ಕೆ ಯಾಕೆ ಹೋದ್ರಿ? ದೇಶದ ಮಾನ ಮರ್ಯಾದೆ ಯಾಕೆ ಕಳೆದ್ರಿ ಎಂದು ಮೋದಿ ವಿರುದ್ಧ ಕಿಡಿಕಾರಿದರು.

ರಕ್ಷಣೆ ವಿಷಯದಲ್ಲಿ ಒಂದಾಗೋಣ
ಮಾಜಿ ಸಚಿವ ಎಚ್.ಕೆ. ಪಾಟೀಲ ಮಾತನಾಡಿ, ಪ್ರಸ್ತುತ ದೇಶದಲ್ಲಿ ಸೂಕ್ಷ್ಮಸಮಯವಿದೆ. ಈ ಹಿಂದೆಯೂ ಯುದ್ಧ ನಡೆಸಲೇಬೇಕಾದ ಅನಿವಾರ್ಯತೆ ಎದುರಾಗಿತ್ತು. ಎಲ್ಲ ಯುದ್ಧಗಳಲ್ಲಿಯೂ ಭಾರತ ಜಯ ಸಾಧಿಸಿತು. ಇಂದಿರಾಗಾಂಧಿ ಅವರ ರಾಜಕೀಯ ಮುತ್ಸದ್ದಿತನದಿಂದಾಗಿ ರಾಷ್ಟ್ರ ಮತ್ತಷ್ಟು ಸುಭದ್ರವಾಯಿತು. ಆಗ ಪ್ರತಿಪಕ್ಷ ನಾಯಕರಾಗಿದ್ದ ದಿ. ಅಟಲ್ ಬಿಹಾರಿ ವಾಜಪೇಯಿ ಅವರೇ ಇಂದಿರಾ ಗಾಂಧಿ ಅವರ ದಿಟ್ಟತನವನ್ನು ಬಣ್ಣಿಸಿ ‘ದುರ್ಗೆ’ ಎಂದು ಕರೆದಿದ್ದರು.

ದೇಶದ ನಾಗರಿಕರ ರಕ್ಷಣೆ ಬಂದಾಗ, ದೇಶದ ಯುದ್ಧದ ವಿಚಾರ ಹಾಗೂ ಯೋಧರ ವಿಚಾರ ಬಂದಾಗ ಎಲ್ಲವನ್ನೂ ಬದಿಗೊತ್ತಿ ಒಂದಾಗಬೇಕಿದೆ. ಶೂಟಿಂಗ್‌ನಲ್ಲಿರಲಿ-ಮೀಟಿಂಗ್‌ನಲ್ಲಿರಲಿ, ವಾಕಿಂಗ್‌ನಲ್ಲಿರಲಿ-ಟಾಕಿಂಗ್‌ನಲ್ಲಿರಲಿ ಅದನ್ನೆಲ್ಲವನ್ನೂ ಬದಿಗೊತ್ತಿ ನಮ್ಮ ಜವಾಬ್ದಾರಿ ನಿಭಾಯಿಸಬೇಕೆಂದರು. ಭಾಷಣ ಮಧ್ಯೆ ಆಜಾನ್ ಕೇಳಿ ಬರುತ್ತಿದ್ದಂತೆ ತಮ್ಮ ಮಾತು ನಿಲ್ಲಿಸಿದರು. ಆಜಾನ್ ಮುಗಿಯುವ ಮುನ್ನವೇ ಮಾತು ಆರಂಭಿಸಿದರು.

One Reply to “ದೇಶಕ್ಕೆ ‘ಕೈ’ ಕೊಡುಗೆ ಅಪಾರ”

 1. Congress won 5 wars..
  1. 1949- the Army was ready to take control of lahore.. Nehru could have negotiated with Pak to get out of J&K and completed accession to India— why he did not do it but asked army to come back?
  2. 1971- Durga (indira) was able to create Bangladesh. why she never though of taking further step and ensuring the J&K issue was solved alongside creation of Bangla.
  3. 1988- when J & K was burning and pandits were being thrown out of the Kashmir, why your loved RG did not take concrete steps to ensure their peace..
  4. Why Manmohan could not take firm and concrete steps in telling the world that Pakistan is a terrorist manufacturing country and ensure support from world leaders, as they are doing now..
  the Congress though ruled this country for that party whether at centre or at state level, personal gains are more important than country…

Comments are closed.