ಕೈ ಕಾರ್ಯಕರ್ತರಿಂದ ವಿಜಯೋತ್ಸವ

ವಿಜಯಪುರ: ಉಪ ಚುನಾವಣೆಯಲ್ಲಿ ಕಾಂಗ್ರೆಸ್-ಜೆಡಿಎಸ್ ಮೈತ್ರಿ ಅಭ್ಯರ್ಥಿಗಳ ಗೆಲುವಿನ ಹಿನ್ನೆಲೆ ಜಿಲ್ಲಾ ಕಾಂಗ್ರೆಸ್ ಕಾರ್ಯಕರ್ತರು ಮಹಾತ್ಮ ಗಾಂಧಿ ವೃತ್ತದಲ್ಲಿ ವಿಜಯೋತ್ಸವ ಆಚರಿಸಿದರು.

ಮಂಗಳವಾರ ಫಲಿತಾಂಶ ಪ್ರಕಟಗೊಳ್ಳುತ್ತಿದ್ದಂತೆ ಗಾಂಧಿ ವೃತ್ತದಲ್ಲಿ ಜಮಾಯಿಸಿದ ಕಾರ್ಯಕರ್ತರು ಪರಸ್ಪರ ಸಿಹಿ ಹಂಚಿ ಪಟಾಕಿ ಸಿಡಿಸಿ ಸಂಭ್ರಮಾಚರಿಸಿದರು.

ಕಾಂಗ್ರೆಸ್ ಜಿಲ್ಲಾ ಉಪಾಧ್ಯಕ್ಷ ವೈಜನಾಥ ಕರ್ಪರಮಠ ಮಾತನಾಡಿ, ಜಮಖಂಡಿ, ಬಳ್ಳಾರಿ, ರಾಮನಗರ ಮತ್ತು ಮಂಡ್ಯ ಉಪ ಚುನಾವಣೆ ಫಲಿತಾಂಶ ರಾಜ್ಯ ರಾಜಕೀಯದ ಇತಿಹಾಸದಲ್ಲಿ ದಾಖಲೆ ನಿರ್ವಿುಸಿದೆ. ದೋಸ್ತಿ ಸರ್ಕಾರದ ಅಭ್ಯರ್ಥಿಗಳು ಅತ್ಯಧಿಕ ಮತಗಳ ಅಂತರದಿಂದ ಗೆಲುವು ಸಾಧಿಸಿದ್ದಾರೆ. ಆ ಮೂಲಕ ಬಿಜೆಪಿಗೆ ತಕ್ಕ ಪಾಠ ಕಲಿಸಿದ್ದು ಇದು ಮುಂಬರುವ ಲೋಕಸಭೆ ದಿಕ್ಸೂಚಿಯಾಗಲಿದೆ ಎಂದರು.

ಜಿಲ್ಲಾ ಯುವ ಕಾಂಗ್ರೆಸ್ ಅಧ್ಯಕ್ಷ ಅಬ್ದುಲ್ ಖಾದರ ಮಾತನಾಡಿ, ದೇಶದಲ್ಲಿ 2019ರ ಲೋಕಸಭಾ ಚುನಾವಣೆಯ ಮುನ್ಸೂಚನೆ ಕರ್ನಾಟಕ ರಾಜ್ಯದಿಂದ ಆರಂಭವಾಗಿದೆ. ಕಾಂಗ್ರೆಸ್ ಪಕ್ಷ ಗೆಲುವುದರ ಮೂಲಕ ಮುಂಬರುವ ಚುನಾವಣೆಯಲ್ಲಿ ಮೋದಿ ಸರ್ಕಾರ ಪತನಗೊಳ್ಳಲಿದೆ ಎಂಬುದನ್ನು ಸೂಚ್ಯವಾಗಿ ತಿಳಿಸಿದೆ. ಈ ಚುನಾವಣೆಯಲ್ಲಿ ಯುವಕರು ಮಹತ್ವದ ಪಾತ್ರವಹಿಸಿದ್ದು ಗಮನಾರ್ಹ. ಮುಂದಿನ ಲೋಕ ಸಭೆ ಚುನಾವಣೆಯಲ್ಲೂ ಇದೇ ಯುವಪಡೆ ಕಾಂಗ್ರೆಸ್ ಬೆಂಬಲಕ್ಕೆ ನಿಲ್ಲಲಿದೆ. ಆ ಮೂಲಕ ಸುಳ್ಳು ಆಶ್ವಾಸನೆ ನೀಡಿ ಅಧಿಕಾರಕ್ಕೆ ಬಂದ ನರೇಂದ್ರ ಮೋದಿ ನೇತೃತ್ವದ ಬಿಜೆಪಿ ಸರ್ಕಾರಕ್ಕೆ ತಕ್ಕ ಪಾಠ ಕಲಿಸಲಿದ್ದಾರೆ ಎಂದು ತಿಳಿಸಿದರು.

ಉಪಾಧ್ಯಕ್ಷ ಚಾಂದಸಾಬ ಗಡಗಲಾವ, ಐ.ಎಂ. ಇಂಡಿಕರ, ಪರ್ವೆಜ ಚಟ್ಟರಕಿ, ಜ್ಯೋತಿರಾಮ ಪವಾರ, ಶ್ರೀಕಾಂತ ಛಾಯಾಗೋಳ, ಸರತಾಜ್ ಬೀಳಗಿ, ವಸಂತ ಹೊನಮೊಡೆ, ಜಮೀರ ಬಾಂಗಿ, ಇದ್ರುಸ್ ಭಕ್ಷಿ, ತಾಜುದ್ದಿನ ಖಲೀಪಾ, ಅನುಪ(ಪ್ರತಾಪ)ಬಬಲೇಶ್ವರ, ಶೌಕತ್ ಕೋತವಾಲ, ಪೈರುಜ ಭಳಬಟ್ಟಿ, ಡಿ.ಎಸ್. ಮುಲ್ಲಾ, ದಾವಲಸಾಬ ಬಾಗವಾನ, ಗೌಸ ಮುಜಾವರ, ಪ್ರೇಮ ಜಾಧವ, ಅನೀಲ ರಾಠೋಡ, ಎಂ.ಎ. ಭಕ್ಷಿ, ಅಶ್ರಫ್ ಇಂಡಿಕರ, ಹಾಜಿಲಾಲ ದಳವಾಯಿ, ಮಹಮ್ಮದ ಭಕ್ಷಿ, ನಜೀರ ಹಂಚಿನಾಳ ಇತರರಿದ್ದರು.