ಅಧಿಕಾರಿಗಳ ವಿರುದ್ಧ ಕ್ರಮಕ್ಕೆ ಆಗ್ರಹ

ವಿಜಯಪುರ: ಜವಾಬ್ದಾರಿ ಹಾಗೂ ಮಾನವೀಯತೆ ಮರೆತು ವರ್ತನೆ ಮಾಡಿರುವ ಬೆಂಗಳೂರು ಮಹಿಳಾ ಸಾಂತ್ವನ ಕೇಂದ್ರದ ಅಧಿಕಾರಿಗಳ ಮೇಲೆ ಸೂಕ್ತ ಕ್ರಮ ಕೈಗೊಳ್ಳುವಂತೆ ಒತ್ತಾಯಿಸಿ ದಲಿತ ಸಂಘರ್ಷ ಸಮಿತಿ (ಸಮತಾವಾದ) ಜಿಲ್ಲಾ ಘಟಕದ ವತಿಯಿಂದ ಮಂಗಳವಾರ ಜಿಲ್ಲಾಧಿಕಾರಿಗಳ ಕಚೇರಿ ಎದುರು ಪ್ರತಿಭಟನೆ ನಡೆಸಲಾಯಿತು.

ಪ್ರತಿಭಟನೆ ನೇತೃತ್ವ ವಹಿಸಿದ್ದ ಸಂಘಟನೆ ಪ್ರಮುಖ ಯಮನಪ್ಪ ಸಿದ್ಧರೆಡ್ಡಿ ಮಾತನಾಡಿ, ಬೆಂಗಳೂರು ನಗರದ ನಿಮಾನ್ಸ್ ಕೇಂದ್ರದ ಮಹಿಳಾ ಸಾಂತ್ವನ ಕೇಂದ್ರದಲ್ಲಿ ಪ್ರವೇಶ ಪಡೆದ ಸಾವಿರಾರು ಅಬಲೆಯರು ನಾಪತ್ತೆಯಾಗಿರುವುದು ಅತ್ಯಂತ ಕಳವಳಕಾರಿಯಾದ ಸಂಗತಿ. ಈ ಘಟನೆಗೆ ಕಾರಣವಾಗಿರುವ ಸಾಂತ್ವನ ಮಹಿಳಾ ಕೇಂದ್ರದ ಅಧಿಕಾರಿಗಳು ಮಾನವೀಯತೆ ಮೀರಿ ವರ್ತನೆ ಮಾಡಿದ್ದಾರೆ. ಮಹಿಳೆಯ ಮೇಲೆ ಇಲಾಖೆಯ ಕೆಲವು ದುರುಳರು ಅತ್ಯಾಚಾರವೆಸಗಿದ್ದಾರೆ. ಅಷ್ಟೆ ಅಲ್ಲದೆ ಮಹಿಳಾ ಸಾಂತ್ವನ ಕೇಂದ್ರಕ್ಕೆ ಆಶ್ರಯ ಅರಸಿ ಬಂದ ಹಲವಾರು ನಿರಾಶ್ರಿತ ಹೆಣ್ಣು ಮಕ್ಕಳನ್ನು ಪರರಾಜ್ಯಗಳಿಗೆ ರವಾನಿಸಿದ ಅತ್ಯಂತ ಅಮಾನವೀಯ ಘಟನೆಯೂ ನಡೆದಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಮಹಿಳಾ ಸಾಂತ್ವನ ಕೇಂದ್ರದಲ್ಲಿ ಅನೇಕ ಮಹಿಳೆಯರಲ್ಲಿ ಬೆರಳಣಿಕೆಯಷ್ಟು ಮಹಿಳೆಯರು ಮಾತ್ರ ಸುರಕ್ಷಿತವಾಗಿ ಮನೆ ಸೇರಿದ್ದಾರೆ, ಉಳಿದ ಮಹಿಳೆಯರು ಹೋಗಿದ್ದು ಎಲ್ಲಿಗೆ? ಅವರು ಇಂದಿಗೂ ನಾಪತ್ತೆಯಾಗಿರುವುದು ಕಂಡು ಬಂದಿದೆ. ಸಾಂತ್ವನ ಕೇಂದ್ರದಲ್ಲಿ ಒಂದೇ ಒಂದು ದಾಖಲೆಯನ್ನು ಸಹ ಸಮರ್ಪಕವಾಗಿ ನಿರ್ವಹಣೆ ಮಾಡಿಲ್ಲ, ದೊಡ್ಡದಾದ ಅಕ್ರಮವೇ ಅಲ್ಲಿ ನಡೆದಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಕೇಂದ್ರದಲ್ಲಿ ಕಳೆದ ಹಲವಾರು ವರ್ಷಗಳಿಂದ ಠಿಕಾಣಿ ಹೂಡಿರುವ ಅಧಿಕಾರಿಗಳೇ ಈ ಎಲ್ಲ ಅಕ್ರಮಗಳಿಗೆ ಕಾರಣ ಎನ್ನಲಾಗಿದೆ, ಅವರೇ ಅನೈತಿಕ ಚಟುವಟಿಕೆಗಳಿಗೆ ಪ್ರೇರಣೆ ನೀಡಿದ್ದಾರೆ, ಈ ಪ್ರಕರಣ ಇಡೀ ಜನತೆ ತಲೆತಗ್ಗಿಸುವಂತಹ ಪ್ರಕರಣವಾಗಿದೆ. ಈ ಹಿನ್ನೆಲೆಯಲ್ಲಿ ಈ ವಿಷಯವನ್ನು ಸರ್ಕಾರ ಗಂಭೀರವಾಗಿ ಪರಿಗಣಿಸಿ ತಕ್ಷಣವೇ ಅಧಿಕಾರಿಗಳ ಮೇಲೆ ಸೂಕ್ತ ಕ್ರಮ ಕೈಗೊಳ್ಳಬೇಕು, ತಕ್ಷಣವೇ ಈ ಘಟನೆಯ ಬಗ್ಗೆ ಉನ್ನತ ಮಟ್ಟದ ತನಿಖೆ ಕೈಗೊಂಡು ತಪ್ಪಿತಸ್ಥರ ಮೇಲೆ ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದರು.

ಶ್ರೀಶೈಲ ದೊಡಮನಿ, ರವಿ ಮೇಲಿನಕೇರಿ, ರಾಕೇಶ ಅಥನೂರ, ಮಹಾಂತೇಶ, ಶ್ರೀಶೈಲ ಹಾದಿಮನಿ, ರಾಜು, ರಮೇಶ ಮಂಗಳೂರು ಮೊದಲಾದವರು ಭಾಗವಹಿಸಿದ್ದರು.

ವಿವಿಧ ಸಂಘಟನೆಗಳಿಂದ ಪ್ರತಿಭಟನೆ

ಮಾನವೀಯತೆ ಮರೆತು ವರ್ತನೆ ಮಾಡಿರುವ ಬೆಂಗಳೂರು ಮಹಿಳಾ ಸಾಂತ್ವನ ಕೇಂದ್ರದ ಅಧಿಕಾರಿಗಳ ಮೇಲೆ ಸೂಕ್ತ ಕ್ರಮ ಕೈಗೊಳ್ಳುವಂತೆ ಒತ್ತಾಯಿಸಿ ವಿವಿಧ ಪ್ರಗತಿಪರ ಸಂಘಟನೆಗಳ ನೇತೃತ್ವದಲ್ಲಿ ವಿಜಯಪುರದಲ್ಲಿ ಪ್ರತಿಭಟನೆ ನಡೆಸಲಾಯಿತು.

ಈ ರೀತಿಯ ಘಟನೆ ನಡೆದಿರುವುದು ಅತ್ಯಂತ ನೋವಿನ ಸಂಗತಿ. ಕೂಡಲೇ ತಪ್ಪಿತಸ್ಥ ಅಧಿಕಾರಿಗಳನ್ನು ಕೂಡಲೇ ಸೇವೆಯಿಂದ ವಜಾಗೊಳಿಸಿ ಸೂಕ್ತ ಕ್ರಮ ಕೈಗೊಳ್ಳಬೇಕು, ಈ ಘಟನೆಯ ಬಗ್ಗೆ ಉನ್ನತ ಮಟ್ಟದ ತನಿಖೆ ನಡೆಸಬೇಕು ಎಂದು ಪ್ರತಿಭಟನಾಕಾರರು ಆಗ್ರಹಿಸಿದರು.

ವಿವಿಧ ಪ್ರಗತಿಪರ ಸಂಘಟನೆಗಳ ಪ್ರಮುಖರಾದ ಪ್ರಕಾಶ ಕುಂಬಾರ, ಫಯಾಜ್ ಕಲಾದಗಿ, ರಮೇಶ ಹೊನ್ನಮೋರೆ, ದಾದಾಪೀರ ಮುಜಾವರ, ಇರ್ಫಾನ್ ಜಹಾಗೀರದಾರ, ಮೋಹನ್ ಚವಾಣ್, ಫಿದಾ ಕಲಾದಗಿ, ಎಂ.ಎಸ್. ಕಬಾಡೆ, ಸಲ್ಮಾನ್ ತಾಳಿಕೋಟಿ, ಆಸೀಫ್ ತಾಜಿಮತರಕ, ಸಾದಿಕ್ ಜಾನ್ವೇಕರ ಮೊದಲಾದವರು ಪಾಲ್ಗೊಂಡಿದ್ದರು.