ವಚನಗಳು ಜ್ಞಾನದ ಸಂಪತ್ತು

ವಿಜಯಪುರ: ಪಟ್ಟಭದ್ರ ಹಿತಾಸಕ್ತಿಗಳು ವೇದಗಳಂಥ ಅಪರೂಪದ ಜ್ಞಾನ ಸಂಪತ್ತನ್ನು ತಮ್ಮ ಕಪಿಮುಷ್ಠಿಯಲ್ಲಿಟ್ಟುಕೊಂಡು ಸಾಮಾನ್ಯರಿಗೆ ಆ ಜ್ಞಾನ ತಲುಪಿಸದ ಕಾರಣ ವಚನಗಳಂಥ ಹೊಸ ಜ್ಞಾನ ಸಂಪತ್ತು ಉದಯಿಸಲು ಕಾರಣವಾಯಿತು ಎಂದು ಆಯುರ್ವೇದ ತಜ್ಞ ಡಾ.ಸಂಜಯ ಕಡ್ಲಿಮಟ್ಟಿ ಹೇಳಿದರು.
ಬಸವ ಜಯಂತಿ ನಿಮಿತ್ತ ಬಿಎಲ್‌ಡಿಇ ಸಂಸ್ಥೆಯ ವಚನ ಪಿತಾಮಹ ಡಾ.ಫ.ಗು. ಹಳಕಟ್ಟಿ ಭವನದಲ್ಲಿ ಚಿಂತನ-ಸಾಂಸ್ಕೃತಿಕ ಬಳಗ ಹಮ್ಮಿಕೊಂಡಿದ್ದ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

ಅಜ್ಞಾನದ ಪ್ರಸಾರದಿಂದಾಗಿಯೇ ಸಿಡಿದೆದ್ದ ಬಸವಾದಿ ಶರಣರು ಲಿಂಗಾಯತ ಧರ್ಮವನ್ನು ಸ್ಥಾಪಿಸಿದರು. ಲಿಂಗವನ್ನು ಆಯತಮಾಡಿಕೊಳ್ಳುವವನೇ ಲಿಂಗಾಯತ. ಇಲ್ಲಿ ಎಲ್ಲರಿಗೂ ಮುಕ್ತ ಅವಕಾಶವಿದೆ. ಲಿಂಗವನ್ನು ಧರಿಸಿದವ ಸ್ವಯಂ ದೇವ, ದೇವಾಲಯ ಆಗಿದ್ದಾರೆ ಎಂದರು.

ಸಾಹಿತಿ ಪ್ರೊ.ಸಿದ್ದಣ್ಣ ಲಂಗೋಟಿ ಮಾತನಾಡಿ, ವಚನಗಳೆಂದರೆ ಸಂಗೀತದ ಸಂಯೋಜನೆ ಅಲ್ಲ. ಅವು ಜ್ಞಾನ ನೀಡುವ ಮಾರ್ಗಗಳು. ಅನೇಕರು ತಮ್ಮ ಸಂಗೀತ ಸಂಯೋಜನೆಗೆ ಅನುಕೂಲವಾಗುವಂತೆ ವಚನಗಳನ್ನು ಮಾರ್ಪಡಿಸಿದಂತೆ ಅವುಗಳ ಅರ್ಥದಲ್ಲಿಯೂ ಮಾರ್ಪಾಡು ಉಂಟಾಗುತ್ತದೆ ಎಂಬುದನ್ನು ಅರ್ಥೈಸಿಕೊಳ್ಳಬೇಕು ಎಂದರು.

ಚಿಂತನ-ಸಾಂಸ್ಕೃತಿಕ ಬಳಗದ ಕಾರ್ಯದರ್ಶಿ ಡಾ.ಮಹಾಂತೇಶ ಬಿರಾದಾರ ಪ್ರಾಸ್ತಾವಿಕವಾಗಿ ಮಾತನಾಡಿ, ಸಮಾಜದಲ್ಲಿರುವ ಪುರೋಹಿತ ವರ್ಗ ಸದಾ ಬಸವಣ್ಣನನ್ನು ತುಳಿಯುತ್ತಲೇ, ಆತನ ಅಗಾಧ ಜ್ಞಾನ ಸಂಪತ್ತು ಹೊರ ಜಗತ್ತಿಗೆ ಬಾರದಂತೆ ನೋಡಿಕೊಳ್ಳುತ್ತಲೇ ಇದೆ. ಆದರೆ, ಇಂದಿನ ಯುಗದಲ್ಲಿ ಪ್ರತಿಯೊಬ್ಬರು ಯಾವುದು ಸತ್ಯ, ಯಾವುದು ಮಿಥ್ಯ ಎಂಬುದನ್ನು ಅರ್ಥೈಸಿಕೊಳ್ಳುತ್ತಿದ್ದಾರೆ. ಆ ಕಾರಣಕ್ಕಾಗಿಯೇ ಬಸವ ಸಾಹಿತ್ಯ ವಿಶ್ವದಲ್ಲೆಡೆ ವ್ಯಾಪಿಸುತ್ತಿದೆ ಎಂದರು.

ಸಹಕಾರ ಇಲಾಖೆಯ ನಿವೃತ್ತ ಅಧಿಕಾರಿ ಬಿ.ಆರ್.ಬನಸೊಡೆ, ಸಾಕ್ಷಿ ಹಿರೇಮಠ ವಚನ ಸಂಗೀತ ನಡೆಸಿದರು. ಕೆ.ಎಸ್. ಬಿರಾದಾರ, ಡಾ.ಎಂ.ಎಸ್. ಮದಭಾವಿ, ಡಾ.ವಿ.ಡಿ. ಐಹೊಳ್ಳಿ, ಎ.ಎಸ್.ಪಾಟೀಲ, ಶ್ರೀಶೈಲ ಕಾಗಲ, ರಾಜೇಂದ್ರಕುಮಾರ ಬಿರಾದಾರ, ಜೆ.ಎಸ್. ಗಲಗಲಿ, ಶಶಿಧರ ಸಾತಿಹಾಳ, ಬಿ.ಎಸ್. ಕೋನರೆಡ್ಡಿ, ಸಿ.ಎ. ಗಂಟೆಪ್ಪಗೋಳ ಮತ್ತಿತರರು ಉಪಸ್ಥಿತರಿದ್ದರು.

ಜೆಡಿಎಸ್ ಕಾರ್ಯಾಲಯ: ಇಲ್ಲಿ ನಡೆದ ಸಮಾರಂಭದಲ್ಲಿ ಜಿಲ್ಲಾಧ್ಯಕ್ಷ ಮಲ್ಲಿಕಾರ್ಜುನ ಯಂಡಿಗೇರಿ ಅಧ್ಯಕ್ಷತೆ ವಹಿಸಿದ್ದರು. ಬಸು ಯಾದವಾಡ, ಖಾದ್ರಿ ಇನಾಂದಾರ್, ಇಜಾಜ್ ಮುಖಬಿಲ್ಲ, ಯಾಕುಬ ಕೊಪರ್, ಸೈಯ್ಯದ್ ಅಮೀನ್, ಮಹಾದೇವಿ ತಲಕೇರಿ, ರೇಖಾ ಮಾಶ್ಯಾಳ, ಸಾಜೀದ್ ರಿಸಾಲದಾರ್, ಬಾಬು ಶಿರಣಗಾರ, ಸಾಜೀದ್ ಕನ್ನೂರ ಸೇರಿದಂತೆ ಮತ್ತಿತರರು ಉಪಸ್ಥಿತರಿದ್ದರು. ಚಂದ್ರಕಾಂತ ಹಿರೇಮಠ ಸ್ವಾಗತಿಸಿ, ವಂದಿಸಿದರು.

ಯಡವಣ್ಣವರ ಗಲ್ಲಿ: ವಿಜಯಪುರದ ಕಮಾಲ್‌ಖಾನ್ ಬಜಾರ್‌ನಲ್ಲಿರುವ ಯಡವಣ್ಣವರ ಗಲ್ಲಿಯಲ್ಲಿ ಬಸವ ಜಯಂತಿ ಆಚರಿಸಲಾಯಿತು. ಸಮಾರಂಭದಲ್ಲಿ ಗುರುರಾಜ ಯಡವಣ್ಣವರ, ರಾಜಶೇಖರ ಯಡವಣ್ಣವರ, ಬಾಬು ಕುಮಠಳ್ಳಿ , ಸಂತೋಷ ಮನಗೂಳಿ, ಈರಣ್ಣ ಕುಮಠಳ್ಳಿ, ದ್ಯಾವಪ್ಪ ಮನಗೂಳಿ ಸೇರಿದಂತೆ ಮತ್ತಿತರರು ಉಪಸ್ಥಿತರಿದ್ದರು.

ಬಸವೇಶ್ವರ ಕರ್ಮವೀರ ಕಲಾ ಸಾಹಿತ್ಯ ಸಂಸ್ಕೃತಿ ವೇದಿಕೆ: ನಗರದ ಇಬ್ರಾಹಿಂಪುರ ಗೇಟ್ ಬಳಿ ಹಮ್ಮಿಕೊಂಡಿದ್ದ ಕಾರ್ಯಕ್ರಮವನ್ನು ಡಿಸಿಸಿ ಬ್ಯಾಂಕಿನ ಉಪಾಧ್ಯಕ್ಷ ರಾಜಶೇಖರ ಗುಡದಿನ್ನಿ ಉದ್ಘಾಟಿಸಿ ಮಾತನಾಡಿದರು. ಚುಟುಕು ಸಾಹಿತ್ಯ ಪರಿಷತ್ ಅಧ್ಯಕ್ಷ ಬಂಡೆಪ್ಪ ತೇಲಿ, ಜಗದೀಶ ಸಾಲಳ್ಳಿ, ಉಮೇಶ ಮಣೂರ, ಶರಣಗೌಡ ಪಾಟೀಲ, ಶೇಖರ ಹೂಗಾರ, ಎಸ್.ಬಿ. ಬಿರಾದಾರ, ಆರ್.ಎಸ್. ಹಿರೇಮಠ ಹಾಗೂ ಬ್ರಿಲಿಯಂಟ್ ಕರಿಯರ್ ಅಕಾಡೆಮಿ ವಿದ್ಯಾರ್ಥಿಗಳು ಉಪಸ್ಥಿತರಿದ್ದರು. ಶ್ರೀಧರ ಬಿರಾದಾರ ಸ್ವಾಗತಿಸಿದರು. ಅನೀಲ ಗಂಗನಳ್ಳಿ ವಂದಿಸಿದರು.

ಚೇತನಾ ಶಿಕ್ಷಣ ಸಂಸ್ಥೆ: ಕಾಲೇಜು ಆವರಣದಲ್ಲಿ ಹಮ್ಮಿಕೊಂಡಿದ್ದ ಕಾರ್ಯಕ್ರಮವನ್ನು ಸಂಸ್ಥೆ ಚೇರ್ಮನ್ ಹಾಗೂ ಪ್ರಾಚಾರ್ಯ ಡಾ.ದಯಾನಂದ ಜುಗತಿ ಉದ್ಘಾಟಿಸಿದರು. ಮುಖ್ಯೋಪಾಧ್ಯಾಯ ಸಾಹಿತಿ ಎ.ಎಚ್. ಕೊಳಮಲಿ, ರಾಜ್ಯ ಪ್ರಶಸ್ತಿ ಪುರಸ್ಕೃತ ಶಿಕ್ಷಕ ಎಸ್.ವಿ. ಬುರ್ಲಿ, ಸಹ ಆಡಳಿತಾಧಿಕಾರಿ ಪ್ರಮೋದ ಕುಲಕರ್ಣಿ, ಸಂಯೋಜಕ ಪ್ರೊ.ಜೆ.ಎಂ. ಜಹಾಗೀರದಾರ್, ಮೇಲ್ವಿಚಾರಕ ಅಂಬರೀಶ ಆದಾಪುರ, ಪ್ರಶಾಂತ ಕಾಂಬಳೆ, ಅಶೋಕ ಜತ್ತಿ ಹಾಗೂ ಸಿಬ್ಬಂದಿ ಉಪಸ್ಥಿತರಿದ್ದರು.