ಜಿಗಜಿಣಗಿ ಯಾವ ಲೆಕ್ಕದಲ್ಲಿ ಪ್ರಬಲ?

ವಿಜಯಪುರ: ಕ್ಷೇತ್ರದಲ್ಲಿ ತಮ್ಮ ಸ್ವಂತಿಕೆ ಅಲೆ ಇಲ್ಲವೆನ್ನುತ್ತಿರುವ ಬಿಜೆಪಿ ಅಭ್ಯರ್ಥಿ ರಮೇಶ ಜಿಗಜಿಣಗಿ ಪ್ರಚಾರ ವೇಳೆ ತಮ್ಮ ಹೆಸರು ಎಲ್ಲೂ ಬಳಸದೆ ಮೋದಿ ಹೆಸರಲ್ಲಿ ಮತ ಯಾಚಿಸುವಂತೆ ಕಾರ್ಯಕರ್ತರಿಗೆ ಒತ್ತಡ ಹೇರುತ್ತಿದ್ದಾರೆ. ಪರಿಸ್ಥಿತಿ ಹೀಗಿರುವಾಗಿ ಜಿಗಜಿಣಗಿ ಅವರು ಯಾವ ಲೆಕ್ಕದಲ್ಲಿ ಪ್ರಬಲ? ಎಂಬುದು ತಿಳಿಯದಾಗಿದೆ ಎಂದು ಮೈತ್ರಿ ಅಭ್ಯರ್ಥಿ ಸುನೀತಾ ಚವಾಣ್ ಪಶ್ನಿಸಿದರು.

‘ನಾನೆಲ್ಲೂ ನನ್ನ ಹೆಸರ ಮೇಲೆ ಮತ ಕೇಳೋದಿಲ್ಲ, ಮೋದಿ ಹೆಸರಿನಲ್ಲಿ ಮತ ಕೇಳುತ್ತೇನೆ’ ಎಂದು ಜಿಗಜಿಣಗಿ ಹೇಳುತ್ತಿದ್ದಾರೆ. ಅವರ ಮಾತಿನಲ್ಲೇ ಜಿಲ್ಲೆಗೆ ಅವರ ಕೊಡುಗೆ ಏನೂ ಇಲ್ಲವೆಂಬುದು ಗೊತ್ತಾಗುತ್ತದೆ. ಹೀಗಾಗಿ ಈ ಬಾರಿ ಅವರ ಸೋಲು ನಿಶ್ಚಿತ ಎಂದು ಶನಿವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.

ಮಹಿಳಾ ಶಕ್ತಿ ಪ್ರದರ್ಶನ
ಸ್ವಾತಂತ್ರೃ ನಂತರ ಜಿಲ್ಲೆಯಲ್ಲಿ ಮಹಿಳೆಗೆ ಅವಕಾಶ ಸಿಕ್ಕಿದ್ದು ಅಪರೂಪ. ಅಂಥದರಲ್ಲಿ ಜೆಡಿಎಸ್ ಮೊದಲ ಬಾರಿಗೆ ಮಹಿಳೆಗೆ ಅವಕಾಶ ಕಲ್ಪಿಸಿದೆ. ಜಿಲ್ಲೆಯಲ್ಲಿ ಮಹಿಳಾ ಶಕ್ತಿ ಪ್ರದರ್ಶನಕ್ಕೆ ಇದೊಂದು ಅವಕಾಶ. ಮುಂಬರುವ ದಿನಗಳಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಮಹಿಳೆಯರು ಬೆಂಬಲ ಸೂಚಿಸುವ ಮೂಲಕ ಶಕ್ತಿ ಪ್ರದರ್ಶಿಸಲಿದ್ದಾರೆ. ಚುನಾವಣೆಯಲ್ಲಿ ಜನರ ಆಶೀರ್ವಾದ ಸಿಗುವ ವಿಶ್ವಾಸವಿದೆ ಎಂದರು.

ಸೋಲೊಪ್ಪಿಕೊಂಡ ಬಿಜೆಪಿ
ಶಾಸಕ ದೇವಾನಂದ ಚವಾಣ್ ಮಾತನಾಡಿ, ಜಿಲ್ಲೆಯ ಇತಿಹಾಸದಲ್ಲೇ ಜೆಡಿಎಸ್‌ನಿಂದ ಮಹಿಳೆಯರಿಗೆ ಅವಕಾಶ ಸಿಕ್ಕಿರಲಿಲ್ಲ. ಆದರೆ, ಮೈತ್ರಿ ಸರ್ಕಾರದಲ್ಲಿ ಆ ಭಾಗ್ಯ ಲಭಿಸಿದ್ದು ಜಿಲ್ಲೆ ಮತದಾರರು ಮಹಿಳೆಗೆ ಆಶೀರ್ವದಿಸಬೇಕೆಂದರು. ಬಿಜೆಪಿ ಅಭ್ಯರ್ಥಿ ಚುನಾವಣೆ ಸಂದರ್ಭ ಮಾತ್ರ ಹೊರಬರುತ್ತಾರೆ. ಇನ್ನುಳಿದ ಸಂದರ್ಭದಲ್ಲಿ ಕಾಣೆಯಾಗುತ್ತಾರೆಂಬ ಅಪಸ್ವರ ಇದೆ. ಇದು ಜೆಡಿಎಸ್‌ಗೆ ಅನುಕೂಲವಾಗಲಿದೆ. ಪ್ರಚಾರ ವೇಳೆ ತಮ್ಮ ಹೆಸರು ಎಲ್ಲೂ ಪ್ರಸ್ತಾಪಿಸಬೇಡಿ, ಮೋದಿ ಹೆಸರು ತೆಗೆದುಕೊಳ್ಳಿ ಎನ್ನುವ ಮೂಲಕ ಹಾಲಿ ಸಂಸದರು ಸೋಲಿನ ಭೀತಿಯನ್ನು ಹೊರಹಾಕಿದ್ದಾರೆ. ತಮ್ಮ ಸೋಲನ್ನು ತಾವೇ ಒಪ್ಪಿಕೊಂಡಿದ್ದಾರೆ ಎಂದರು.

ಏ. 4ಕ್ಕೆ ನಾಮಪತ್ರ ಸಲ್ಲಿಕೆ
ಜೆಡಿಎಸ್ ಜಿಲ್ಲಾಧ್ಯಕ್ಷ ಮಲ್ಲಿಕಾರ್ಜುನ ಯಂಡಿಗೇರಿ ಮಾತನಾಡಿ, ಜೆಡಿಎಸ್-ಕಾಂಗ್ರೆಸ್ ಮೈತ್ರಿ ಅಭ್ಯರ್ಥಿಯಾಗಿ ಸುನೀತಾ ಚವಾಣ್ ಸ್ಪರ್ಧಿಸಿದ್ದಾರೆ. ಎರಡೂ ಪಕ್ಷಗಳು ಒಮ್ಮತದಿಂದ ಅಭ್ಯರ್ಥಿ ಆಯ್ಕೆಗೆ ಶ್ರಮಿಸಲಿವೆ. ಏ.2 ರಂದು ಸಾಂಕೇತಿಕವಾಗಿ ನಾಮಪತ್ರ ಸಲ್ಲಿಸಲಿದ್ದು, ಏ. 4ಕ್ಕೆ ಅಧಿಕೃತವಾಗಿ ಉಮೇದುವಾರಿಕೆ ಸಲ್ಲಿಸಲು ತೀರ್ಮಾನಿಸಲಾಗಿದೆ. ಅಂದು ಮಾಜಿ ಪ್ರಧಾನಿ ಎಚ್.ಡಿ. ದೇವೇಗೌಡರು ಆಗಮಿಸುತ್ತಿರುವುದಾಗಿ ತಿಳಿಸಿದರು.

ವಿಜಯಪುರ ಕ್ಷೇತ್ರದಲ್ಲಿರುವ ಆಡಳಿತ ಪಕ್ಷದ ಐದು ಶಾಸಕರು ಚುನಾವಣೆಯನ್ನು ಗಂಭೀರವಾಗಿ ಪರಿಗಣಿಸಿ ಅಭ್ಯರ್ಥಿ ಗೆಲುವಿಗೆ ಶ್ರಮಿಸಲಿದ್ದಾರೆ. ಸಚಿವರಾದ ಎಂ.ಸಿ. ಮನಗೂಳಿ, ಎಂ.ಬಿ. ಪಾಟೀಲ, ಶಿವಾನಂದ ಪಾಟೀಲ, ಶಾಸಕರಾದ ಯಶವಂತರಾಯಗೌಡ ಪಾಟೀಲ, ದೇವಾನಂದ ಚವಾಣ್ ಸೇರಿ ಜಿಲ್ಲೆ ಹಾಗೂ ರಾಜ್ಯಮಟ್ಟದ ಕಾರ್ಯಕರ್ತರು ಅಭ್ಯರ್ಥಿ ಗೆಲುವಿಗೆ ಸಹಕರಿಸಲಿದ್ದಾರೆ. ಯಾವುದೇ ಗೊಂದಲ ಇಲ್ಲದೆ ಏಕತೆಯಿಂದ ಚುನಾವಣೆ ಎದುರಿಸಲಾಗುವುದು ಎಂದು ಯಂಡಿಗೇರಿ ತಿಳಿಸಿದರು.

ಕೋಮುವಾದಿ ಪಕ್ಷ ಸೋಲಿಸುವ ಗುರಿ
ಕೋಮುವಾದಿ ಬಿಜೆಪಿ ಸೋಲಿಸಲು ಒಗ್ಗಟ್ಟಿನಿಂದ ಚುನಾವಣೆ ಎದುರಿಸಲಾಗುತ್ತಿದೆ. ನಾಮಪತ್ರ ಸಲ್ಲಿಕೆ ಆದ ಮೇಲೆ ಅಚ್ಚುಕಟ್ಟಾಗಿ ಚುನಾವಣೆ ಎದುರಿಸಲಾಗುವುದು. ಬಿಜೆಪಿ ಅಭ್ಯರ್ಥಿಯ ವೈಫಲ್ಯ ಹಾಗೂ ಆಂತರಿಕ ಜಗಳ ಜೆಡಿಎಸ್ ಗೆಲುವಿಗೆ ಸಹಕಾರಿಯಾಗಲಿವೆ. ಹತ್ತು ವರ್ಷಗಳಿಂದ ಬಿಜೆಪಿ ಸಂಸದರು ಅಧಿಕಾರದಲ್ಲಿದ್ದರೂ ಕ್ಷೇತ್ರ ಅಭಿವೃದ್ಧಿಯಾಗಿಲ್ಲ. ಶೋಕಿಯಲ್ಲೇ ಅವರು ಕಾಲ ಕಳೆದಿದ್ದಾರೆ. ಹೀಗಾಗಿ ಈ ಬಾರಿ ಜೆಡಿಎಸ್ ಗೆಲುವು ನಿಶ್ಚಿತ ಎಂದು ಯಂಡಿಗೇರಿ ವಿಶ್ವಾಸ ವ್ಯಕ್ತಪಡಿಸಿದರು. ಜೆಡಿಎಸ್ ಕಾರ್ಯಾಧ್ಯಕ್ಷ ದಿಲಾವರ ಖಾಜಿ, ಇಮಾಮಸಾಬ ಪಟೇಲ ಸೇರಿ ಇತರರು ಸುದ್ದಿಗೋಷ್ಠಿಯಲ್ಲಿದ್ದರು.

ಚುನಾವಣೆಯಲ್ಲಿ ಗೆಲ್ಲಿಸಿದರೆ ಜಿಲ್ಲೆಯ ಬಹುದಿನದ ಬೇಡಿಕೆಗಳಾದ ವಿಮಾನ ನಿಲ್ದಾಣ ಕಾಮಗಾರಿ, ಉದ್ಯೋಗ ಸೃಷ್ಟಿ, ಕೈಗಾರಿಕೆಗಳ ಸ್ಥಾಪನೆ ಸೇರಿ ಕ್ಷೇತ್ರದ ಸಮಗ್ರ ಅಭಿವೃದ್ಧಿಗೆ ಆದ್ಯತೆ ನೀಡುವೆ. ಈ ಬಾರಿ ಮೈತ್ರಿ ಬಲದಿಂದ ಗೆಲ್ಲುವ ವಿಶ್ವಾಸವಿದೆ. ಒಗ್ಗಟ್ಟಿನಲ್ಲಿ ಬಲವಿದೆ ಎಂಬುದನ್ನು ಮೈತ್ರಿ ಪಾಳಯ ತೋರಿಸಲಿದೆ.
ಸುನೀತಾ ಚವಾಣ್, ಮೈತ್ರಿ ಅಭ್ಯರ್ಥಿ

ಈಗಾಗಲೇ ಮೈತ್ರಿ ಪಾಳಯದ ಎಲ್ಲ ಮುಖಂಡರ ಜತೆ ಮಾತುಕತೆಯಾಗಿದೆ. ಎಂ.ಬಿ. ಪಾಟೀಲ, ಶಿವಾನಂದ ಪಾಟೀಲರ ಜತೆ ಮಾತುಕತೆ ನಡೆಸಲಾಗಿದೆ. ಏ. 4 ಕ್ಕೆ ನಾಮಪತ್ರ ಸಲ್ಲಿಸಿದ ಬಳಿಕ ಅಧಿಕೃತ ಪ್ರಚಾರ ನಡೆಸಲಾಗುವುದು. ಮಾಜಿ ಪ್ರಧಾನಿ ದೇವೇಗೌಡರು ಅಂದು ಆಗಮಿಸಲಿದ್ದಾರೆ. ಒಮ್ಮತದಿಂದ ಚುನಾವಣೆ ಎದುರಿಸಲಾಗುವುದು.
ಎಂ.ಸಿ.ಮನಗೂಳಿ, ಜಿಲ್ಲಾ ಉಸ್ತುವಾರಿ ಸಚಿವ