ವಿಜಯಪುರ: ಅಂತೂ ಇಂತೂ ಮಹಾನಗರ ಪಾಲಿಕೆ ಸಾಮಾನ್ಯ ಸಭೆಗೆ ಮುಹೂರ್ತ ಕೂಡಿ ಬಂದಿದ್ದು, ಇಂದು (ಜೂ.13) ಬೆಳಗ್ಗೆ 11ಕ್ಕೆ ಪಾಲಿಕೆ ಸಭಾಂಗಣದಲ್ಲಿ ಸಭೆ ನಡೆಯಲಿದೆ.
ಐದು ತಿಂಗಳ ಬಳಿಕ ಸಭೆ ನಡೆಯುತ್ತಿದ್ದು, ಬಹುತೇಕ ಇದೇ ಅಂತಿಮ ಸಭೆ ಎನ್ನಲಾಗುತ್ತಿದೆ. ಕೆಲವೇ ದಿನಗಳಲ್ಲಿ ಪಾಲಿಕೆ ಚುನಾವಣೆ ಸಮೀಪಿಸಲಿದೆ. ವಾರ್ಡ್ ಮೀಸಲಾತಿ ಮತ್ತು ಗಡಿ ವಿಸ್ತರಣೆ ಹಿನ್ನೆಲೆ ಕೆಲ ಸದಸ್ಯರು ನ್ಯಾಯಾಲಯದ ಮೆಟ್ಟಿಲೇರಿದ್ದರಿಂದ ಚುನಾವಣೆ ದಿನಾಂಕ ಪ್ರಕಟಣೆಗೆ ಅಡ್ಡಿಯಾಗಿದೆ. ನ್ಯಾಯಾಲಯದಿಂದ ತೀರ್ಪು ಪ್ರಕಟಗೊಳ್ಳುತ್ತಿದ್ದಂತೆ ಚುನಾವಣೆ ನಡೆಯಲಿದ್ದು, ಅದಕ್ಕಾಗಿ ಈಗಿನಿಂದಲೇ ಸದಸ್ಯರು ತಯಾರಿ ನಡೆಸಿದ್ದಾರೆ. ಇದು ಗುರುವಾರದ ಸಭೆಯ ಮೇಲೂ ಪರಿಣಾಮ ಬೀರಲಿದ್ದು, ಮಹತ್ವದ ನಿರ್ಣಯಗಳು ಹೊರಬೀಳುವ ನಿರೀಕ್ಷೆ ಇದೆ.
ಮೂರು ಸಭೆ ಮುಂದೂಡಿಕೆ: 2018 ಅ. 6 ರಂದು ಸಾಮಾನ್ಯ ಸಭೆ ನಡೆದ ಬಳಿಕ ಅ.12ಕ್ಕೆ ಮುಂದುವರಿದ ಸಭೆ ನಡೆಯಿತು. ಸಭೆಯಲ್ಲಿ ಗಂಭೀರ ವಿಷಯಗಳ ಮೇಲೆ ಚರ್ಚೆ ನಡೆದು ವಿಶೇಷ ಕ್ರಮಕ್ಕೆ ಠರಾವು ಮಂಡಿಸಲಾಗಿತ್ತು. ಬಳಿಕ ನಾಲ್ಕು ತಿಂಗಳಾದರೂ ಸಾಮಾನ್ಯ ಸಭೆ ನಡೆಯಲೇ ಇಲ್ಲ. ಆರಂಭದಲ್ಲಿ ಎರಡು ಬಾರಿ ದಿನ ನಿಗದಿಯಾಗಿ ಅನಿವಾರ್ಯ ಕಾರಣಗಳಿಂದ ಸಭೆ ಮುಂದೂಡಲ್ಪಟ್ಟಿತು. ಫೆ. 27 ಕ್ಕೆ ಮೊದಲ ದಿನ ನಿಗದಿಯಾಗಿತ್ತಾದರೂ ಅನಿವಾರ್ಯ ಕಾರಣಗಳಿಂದ ಮಾ.2ಕ್ಕೆ ಮುಂದೂಡಲ್ಪಟ್ಟಿತು. ಆ ದಿನವೂ ಸಭೆ ಮುಂದೂಡಲ್ಪಟ್ಟಿತು. ಬಳಿಕ ಮಾ. 13ಕ್ಕೆ ದಿನ ನಿಗದಿಗೊಳಿಸಲಾಯಿತಾದರೂ ಅಷ್ಟರೊಳಗೆ ಲೋಕಸಭೆ ಚುನಾವಣೆ ಅಧಿಸೂಚನೆ ಹೊರಬಿತ್ತು. ಹೀಗಾಗಿ ಸಾಮಾನ್ಯ ಸಭೆಗೂ ಕೊಕ್ಕೆ ಬಿತ್ತು. ಆ ಬಳಿಕ ಇದೀಗ ಸಭೆ ನಡೆಯುತ್ತಿದೆ.
ನೀರಿನ ಸಮಸ್ಯೆಗೆ ಸಿಗುವುದೇ ಮುಕ್ತಿ: ನಗರದಲ್ಲಿ ಕುಡಿಯುವ ನೀರಿನ ಸಮಸ್ಯೆ ವ್ಯಾಪಕವಾಗಿದೆ. ಜಲಮಂಡಳಿಯಿಂದ 10-15 ದಿನಗಳಿಗೊಮ್ಮೆ ನೀರು ಪೂರೈಸಲಾಗುತ್ತಿದೆ. ಇದರಿಂದ ನಗರವಾಸಿಗಳು ಪರದಾಡುವಂತಾಗಿದ್ದು, ಅಲ್ಲಲ್ಲಿ ಪ್ರತಿಭಟನೆಗಳು ಸಹ ನಡೆಯುತ್ತಿವೆ. ಮಹಿಳೆಯರು ಖಾಲಿ ಕೊಡ ಹಿಡಿದು ನಡು ರಸ್ತೆಗಳಲ್ಲಿ ಹೋರಾಟ ನಡೆಸುತ್ತಿದ್ದಾರೆ. ಪಾಲಿಕೆಗೆ ಹಿಡಿಶಾಪ ಹಾಕುತ್ತಿದ್ದಾರೆ. ಹೀಗಾಗಿ ಕುಡಿಯುವ ನೀರಿನ ಸಮಸ್ಯೆಗೆ ಸಭೆ ಪರಿಹಾರ ಕಂಡುಕೊಳ್ಳುವ ನಿರೀಕ್ಷೆ ಹೆಚ್ಚಿದೆ.
ಕಾಮಗಾರಿಗಳಿಗೆ ಮಂಜೂರಾತಿ: ಚುನಾವಣೆ ಸಮೀಪಿಸುತ್ತಿರುವ ಹಿನ್ನೆಲೆ ವಿವಿಧ ಕಾಮಗಾರಿಗಳಿಗೆ ಸಭೆಯಲ್ಲಿ ಮಂಜೂರಾತಿ ಪಡೆಯಲು ಅಧಿಕಾರಿಗಳು ಹಾಗೂ ಸದಸ್ಯರು ಸಜ್ಜಾಗಿದ್ದಾರೆ. ಕಳೆದ ಚುನಾವಣೆಯಲ್ಲಿ ನೀಡಿದ ಭರವಸೆಗಳ ಪೈಕಿ ಬಾಕಿ ಉಳಿದವುಗಳಿಗೆ ಮತ್ತು ಸುದೀರ್ಘಾವಧಿವರೆಗೆ ಈಡೇರದ ಬೇಡಿಕೆಗಳಿಗೆ ಸದರಿ ಸಭೆಯಲ್ಲಿ ಮುಕ್ತಿ ಕಲ್ಪಿಸುವ ಇರಾದೆ ಸದಸ್ಯರಲ್ಲಿ ಮನೆ ಮಾಡಿದೆ. ಹಾಗೆ ಮಾಡಿದಾಗ ಮಾತ್ರ ಮತದಾರರ ಮನೆ ಬಾಗಿಲಿಗೆ ಹೋಗಿ ಮುಖ ತೋರಿಸಲು ಸಾಧ್ಯ ಎಂಬ ಭಾವ ಅಡಗಿದೆ.
ಹಿಂದಿನ ಸಭೆ ನಡಾವಳಿಗಳ ಚರ್ಚೆ: ಕಳೆದ ಸಾಮಾನ್ಯ ಸಭೆಯಲ್ಲಿ ನಡೆದ ನಡಾವಳಿಗಳ ಬಗ್ಗೆ ಬಿರುಸಿನ ಚರ್ಚೆ ನಡೆಯುವ ಸಾಧ್ಯತೆ ಇದೆ. 2018 ಅ. 12 ರಂದು ನಡೆದ ಮುಂದುವರಿದ ಸಾಮಾನ್ಯ ಸಭೆಯಲ್ಲಿ ಪಾಲಿಕೆಯ ಈ ಹಿಂದಿನ ಆಯುಕ್ತ ಶ್ರೀಹರ್ಷಾ ಶೆಟ್ಟಿ ಮೇಲೆ ಭ್ರಷ್ಟಾಚಾರದ ಆರೋಪ ಕೇಳಿ ಬಂದಿತ್ತು. ಅಲ್ಲದೆ, ಸದರಿ ಪ್ರಕರಣವನ್ನು ಎಸಿಬಿಗೆ ವಹಿಸಲು ಠರಾವು ಕೂಡ ಮಂಡಿಸಲಾಗಿತ್ತು. ಆದರೆ, ಆ ಬಳಿಕ ಅದೇನಾಯ್ತೋ ಗೊತ್ತಿಲ್ಲ ಕೆಲ ಸದಸ್ಯರು ಗಾಢ ಮೌನಕ್ಕಿಳಿದರೆ ಅಧಿಕಾರಿಗಳು ನಿರ್ಲಿಪ್ತ ಧೋರಣೆ ತಾಳಿದರು. ಅದೇ ಕಾರಣಕ್ಕೆ ಸಭೆ ಸಹ ಮುಂದೂಡುತ್ತ ಬರಲಾಗಿದೆ ಎಂಬ ಆರೋಪ ಜನರಿಂದ ಕೇಳಿ ಬಂದಿತ್ತು. ಇದೀಗ ಸಭೆ ನಡೆಯುತ್ತಿದ್ದು, ಠರಾವಿನ ಹೂರಣ ಹೊರಬೀಳುವ ಸಾಧ್ಯತೆಯೂ ಇದೆ.