ಕಾಂಗ್ರೆಸ್ ಕಾರ್ಯಕರ್ತರಿಂದ ಪ್ರತಿಭಟನೆ

ವಿಜಯಪುರ: ನೋಟು ಅಮಾನ್ಯೀಕರಣಕ್ಕೆ ಎರಡು ವರ್ಷ ಭರ್ತಿಯಾಗಿದ್ದು, ಇದರ ರೂವಾರಿ ಪ್ರಧಾನಿ ನರೇಂದ್ರ ಮೋದಿ ನೀತಿಗೆ ಖಂಡನೆ ವ್ಯಕ್ತಪಡಿಸಿದ ಕಾಂಗ್ರೆಸ್ ಕಾರ್ಯಕರ್ತರು ಶುಕ್ರವಾರ ಪ್ರತಿಕೃತಿ ದಹಿಸಿ ಪ್ರತಿಭಟಿಸಿದರು.

ನಗರದ ಮಹಾತ್ಮ ಗಾಂಧಿ ವೃತ್ತದಲ್ಲಿ ಜಮಾಯಿಸಿದ ನೂರಾರು ಕಾರ್ಯಕರ್ತರು ಕೇಂದ್ರ ಸರ್ಕಾರದ ವಿರುದ್ಧ ಘೊಷಣೆ ಕೂಗಿದರು. ನೋಟು ಅಮಾನ್ಯೀಕರಣ ನೀತಿ ಖಂಡಿಸಿ ಬ್ಯಾನರ್ ಪ್ರದರ್ಶಿಸಿದರು.

ಜಿಲ್ಲಾಧ್ಯಕ್ಷ ರವಿಗೌಡ ಪಾಟೀಲ ಧೂಳಖೇಡ ಮಾತನಾಡಿ, ನವೆಂಬರ್ 8, 2016ರಂದು ರಾತ್ರಿ 8ಕ್ಕೆ ಪ್ರಧಾನಿ ನರೇಂದ್ರ ಮೋದಿ ಅವರು ನೋಟು ರದ್ದತಿಗೆ ಆದೇಶಿಸಿದರು. ಕೂಡಲೇ 1000 ಮತ್ತು 500 ರ ನೋಟುಗಳು ರದ್ದಾದವು. ಇದರಿಂದ ದೇಶದ ಆರ್ಥಿಕ ಸ್ಥಿತಿಯೇ ಅಲ್ಲೋಲ ಕಲ್ಲೋಲವಾಯಿತು. ಕೋಟ್ಯಂತರ ಬಡಪಾಯಿಗಳು ಕೂಲಿ ಬಿಟ್ಟು ಬ್ಯಾಂಕ್ ಮುಂದೆ ತಿಂಗಳ ಪರ್ಯಂತ ಸರತಿ ಸಾಲಿನಲ್ಲಿ ನಿಲ್ಲಬೇಕಾಯಿತು. ನೋಟ್ ಅಮಾನ್ಯೀಕರಣದಿಂದ ದೇಶದ ಆರ್ಥಿಕ ಪ್ರಗತಿ ಆಗಬಹುದೆಂದು ದೇಶದ ಜನ ಭಾವಿಸಿದ್ದರು. ಹಾಗಾಗಲಿಲ್ಲ. ಬದಲಾಗಿ ದೇಶದ ಬಡ ಹಾಗೂ ಮಧ್ಯಮ ವರ್ಗದ ಜನ ತೀವ್ರ ಸಂಕಟ ಅನುಭವಿಸುವಂತಾಯಿತು ಎಂದರು.

ನೋಟ್ ಬ್ಯಾನ್ ನೀತಿಗೆ 2 ವರ್ಷ ಪೂರ್ಣಗೊಂಡಿದೆಯಾದರೂ ಫಲಿತಾಂಶ ಮಾತ್ರ ಶೂನ್ಯ. ಇದರಿಂದ ದೇಶದ ಆರ್ಥಿಕತೆಗೆ ಯಾವುದೇ ಪ್ರಯೋಜನವಾಗಿಲ್ಲ. ಆರ್ಥಿಕ ತಜ್ಞರ ಸಲಹೆ ಪಡೆಯದೇ ಪ್ರಧಾನಿ ಮೋದಿ ಕೈಗೊಂಡ ತರಾತುರಿ ನಿರ್ಧಾರ ದೇಶದ ಜನರನ್ನು ಸಂಕಷ್ಟಕ್ಕೀಡಾಗಿಸಿತು. ದೇಶದ ಆರ್ಥಿಕ ಸ್ಥಿತಿ ಪಾತಾಳಕ್ಕಿಳಿಯಿತೆಂದರು.

ಮಾಜಿ ಶಾಸಕ ವಿಠ್ಠಲ ಕಟಕಧೋಂಡ ಮಾತನಾಡಿ, ದೇಶದ ದೊಡ್ಡ ಹಗರಣವೆಂದರೆ ನೋಟ್ ಬ್ಯಾನ್ ಹಗರಣ ಎಂದರು. ಮುಖಂಡ ಅಬ್ದುಲ್ ಹಮೀದ ಮುಶ್ರೀಫ್, ಸಂಗಮೇಶ ಬಬಲೇಶ್ವರ, ವೈಜನಾಥ ಕರ್ಪರಮಠ ಮಾತನಾಡಿದರು.

ಡಿಸಿಸಿ ಉಪಾಧ್ಯಕ್ಷ ಚಾಂದಸಾಬ ಗಡಗಲಾವ, ಜಮೀರ ಅಹಮ್ಮದ ಭಕ್ಷಿ, ಅಬ್ದುಲ್ ಖಾದರ, ಡಿ.ಎಚ್. ಕಲಾಲ, ಮಹಾದೇವಿ ಗೋಕಾಕ, ಜಯಶ್ರೀ ಭಾರತೆ, ಡಾ. ಗಂಗಾಧರ ಸಂಬಣ್ಣಿ, ಅಫ್ತಾಫ್​ಖಾದ್ರಿ ಇನಾಮದಾರ, ವಸಂತ ಹೊನಮೊಡೆ, ಶಬ್ಬೀರ ಜಾಗೀರದಾರ, ಜಮೀರ ಬಾಂಗಿ, ಇದ್ರುಸ್ ಭಕ್ಷಿ, ತಾಜುದ್ದಿನ ಖಲೀಪಾ, ರಾಜಶ್ರೀ ಚೋಳಕೆ, ಅನ್ನಪೂರ್ಣಾ ಬೀಳಗಿಕರ, ಹಾಜಿಲಾಲ ದಳವಾಯಿ, ಫಿರೋಜ ಶೇಖ, ಮೋಯಿನ್ ಶೇಖ, ಪ್ರಕಾಶ ಕಟ್ಟಿಮನಿ, ಅನುಪ (ಪ್ರತಾಪ) ಬಬಲೇಶ್ವರ, ಶೌಕತ್ ಕೋತವಾಲ ಇತರರಿದ್ದರು.