ಮಕ್ಕಳ ಕಳ್ಳರೆಂದು ಕೊಂದ ಐವರಲ್ಲಿ ಒಬ್ಬಾತ ವಿಜಯಪುರದ ವ್ಯಕ್ತಿ

ವಿಜಯಪುರ: ಮಹಾರಾಷ್ಟ್ರ ಧುಲೆ (ಮಾಳೆಗಾಂವ) ಗ್ರಾಮದಲ್ಲಿ ಮಕ್ಕಳ ಕಳ್ಳರೆಂಬ ವದಂತಿ ಹಿನ್ನೆಲೆಯಲ್ಲಿ ಗ್ರಾಮಸ್ಥರು ಮಾರಕಾಸ್ತ್ರಗಳಿಂದ ಕೊಚ್ಚಿ ಕೊಂದು ಹಾಕಿದ್ದ ಪ್ರಕರಣದಲ್ಲಿ ಮೃತಪಟ್ಟವರಲ್ಲಿ ಕರ್ನಾಟಕದ ವಿಜಯಪುರ ಜಿಲ್ಲೆಯ ವ್ಯಕ್ತಿ ಇದ್ದರು ಎಂದು ತಿಳಿದು ಬಂದಿದೆ.

ವಿಜಯಪುರ ಜಿಲ್ಲೆ ಇಂಡಿ ತಾಲೂಕಿನ ಗುಂದವಾನ ಗ್ರಾಮದ ರಾಜು ಭೋಸ್ಲೆ (45) ಹಾಗೂ ಮಹಾರಾಷ್ಟ್ರದ ಖವೆ ಗ್ರಾಮದ ದಾದಾರಾವ್ ಭೋಸಲೆ (35), ಭರತ ಮಾಳವೆ (20), ಭರತ ಭೋಸಲೆ (45), ಮಾನೆವಾಡಿ ಗ್ರಾಮದ ಅಪ್ಪಾ ಇಂಗೋಲೆ (20) ಗ್ರಾಮಸ್ಥರ ಆಕ್ರೋಶಕ್ಕೆ ಬಲಿಯಾದವರು.

ಇವರೆಲ್ಲರೂ ಭಿಕ್ಷೆ ಬೇಡಲು ಧೂಳೆ ಗ್ರಾಮಕ್ಕೆ ತೆರಳಿದ್ದಾಗ ಇವರನ್ನು ಮಕ್ಕಳ ಕಳ್ಳರು ಎಂಬ ಸಂಶಯದ ಮೇಲೆ ಜನರು ಮಾರಕಾಸ್ತ್ರಗಳಿಂದ ಥಳಿಸಿದ್ದಾರೆ.

ಮೃತ ರಾಜು ಭೋಸ್ಲೆಗೆ ಐವರು ಹೆಣ್ಣು ಮಕ್ಕಳು, ಓರ್ವ ಪುತ್ರರಿದ್ದಾರೆ. ಗುಂದಾವನದಲ್ಲಿ 5 ಎಕರೆ ತೋಟ ಇದೆ. ಗ್ರಾಮದಲ್ಲಿ ಮೃತರ ಕುಟುಂಬ ಸದಸ್ಯರ ಆಕ್ರಂದನ ಮುಗಿಲು ಮುಟ್ಟಿದೆ. ಶವ ತರಲಿಕ್ಕೆಂದು ಕುಟುಂಬಸ್ಥರು ಸೋಮವಾರ ಬೆಳಗ್ಗೆ ಮಾಳೆಗಾಂವದತ್ತ ದೌಡಾಯಿಸಿದ್ದಾರೆ. ಮಕ್ಕಳು ತಂದೆ ನೆನೆದು ಅಳುತ್ತಿದ್ದ ದೃಶ್ಯ ಕರಳು ಹಿಂಡುವಂತಿತ್ತು. ಮಾಳೆಗಾಂವ ಪೊಲೀಸರು 23 ಜನರನ್ನು ಬಂಧಿಸಿದ್ದಾರೆ ಎಂದು ಮೂಲಗಳು ತಿಳಿಸಿವೆ.