ಮನೆ ಬೇಡ, ರೊಕ್ಕ ಕೊಡ್ರಿ ಸಾಕು…!

ವಿಜಯಪುರ: ಕಳಪೆಮಟ್ಟದ ಕಾಮಗಾರಿ, ಮೂಲಸೌಕರ್ಯಗಳ ಕೊರತೆ ಹಾಗೂ ವಾಸಕ್ಕೆ ಯೋಗ್ಯವಲ್ಲದ ಮನೆಗಳ ನಿರ್ಮಾಣದ ಮೂಲಕ ಜನಸಾಮಾನ್ಯರನ್ನು ಮೋಸ ಮಾಡಿರುವ ಕರ್ನಾಟಕ ಗೃಹ ಮಂಡಳಿ ವಿರುದ್ಧ ನೀಡಿದ ದೂರಿನನ್ವಯ ಲೋಕಾಯುಕ್ತ ಅಧಿಕಾರಿಗಳು ಸೋಮವಾರ ತನಿಖೆ ನಡೆಸಿದ್ದಾರೆ.
ನಗರ ಹೊರವಲಯದ ಮಹಲ್ ಬಾಗಾಯತ್‌ನ ಕಸಬಾ ಪ್ರದೇಶದಲ್ಲಿ ಕರ್ನಾಟಕ ಗೃಹ ಮಂಡಳಿಯಿಂದ 2011ರಲ್ಲಿ ನಿರ್ಮಿಸಿದ ಮನೆಗಳನ್ನು ಲೋಕಾಯುಕ್ತರು ಪರಿಶೀಲನೆ ನಡೆಸಿದರು. ಬೆಳಗ್ಗೆ 11 ರ ಸುಮಾರಿಗೆ ಸ್ಥಳಕ್ಕೆ ಭೇಟಿ ನೀಡಿ ಪ್ರತಿ ಮನೆಗಳ ವಿವರ ಪಡೆದರು. ಕಳಪೆಮಟ್ಟದ ಕಾಮಗಾರಿ, ಮೂಲಸೌಕರ್ಯಗಳ ಕೊರತೆ, ವಾಸಕ್ಕೆ ಯೋಗ್ಯವಲ್ಲದ ಸ್ಥಳಗಳ ಕುರಿತು ಇಂಚಿಂಚು ಮಾಹಿತಿ ಕಲೆ ಹಾಕಿದರು.
ಲೋಕಾಯುಕ್ತ ತನಿಖಾಧಿಕಾರಿ ಆರ್.ರವಿಶಂಕರ ಸೇರಿದಂತೆ ಕೆಎಚ್‌ಬಿಯ ಅಧಿಕಾರಿಗಳು ಪರಿಶೀಲನೆ ನಡೆಸಿದ್ದಾರೆ. ಜನರು ಸ್ಥಳೀಯ ಸಮಸ್ಯೆಗಳ ಮಗ್ಗೆ ಅಧಿಕಾರಿಗಳಿಗೆ ವಿಸ್ತೃತ ವರದಿ ನೀಡಿದರು. ಪ್ರತೀ ನಿವಾಸಿಗಳ ಹೇಳಿಕೆಗಳನ್ನು ದಾಖಲಿಸಿಕೊಂಡ ಲೋಕಾಯುಕ್ತರು ತನಿಖೆ ಮುಂದಿನ ಹಂತಕ್ಕೆ ಹೆಜ್ಜೆಯಿಟ್ಟರು.

ಏನಿದು ಪ್ರಕರಣ?: ಈ ಹಿಂದಿನ ವಸತಿ ಸಚಿವ ವಿ.ಸೋಮಣ್ಣ ಅವರ ಅವಧಿಯಲ್ಲಿ ಸೂರು ಕಲ್ಪಿಸುವ ಉದ್ದೇಶದಿಂದ ಲಾಟರಿ ಮೂಲಕ ಫಲಾನುಭವಿಗಳನ್ನು ಆಯ್ಕೆ ಮಾಡಿದ್ದರು. ಒಟ್ಟು 170 ಎಕರೆ ಪ್ರದೇಶದಲ್ಲಿ 200 ಮನೆಗಳ ಸಹಿತ ಒಟ್ಟು 1600 ನಿವೇಶನಗಳನ್ನು ಹಂಚಿಕೆ ಮಾಡಲಾಗಿತ್ತು. ಮನೆ ನಿರ್ಮಾಣ ಕಾರ್ಯವನ್ನು ಹೈದರಾಬಾದ್ ಮೂಲದ ಎಸ್.ಆರ್. ಕನ್ಸ್‌ಟ್ರಕ್ಷನ್‌ಗೆ ಗುತ್ತಿಗೆ ನೀಡಲಾಗಿತ್ತು. ಗುತ್ತಿಗೆದಾರ ನಿಯಮದ ಪ್ರಕಾರ 39 ಬೃಹತ್, 70 ಮಧ್ಯಮ ಹಾಗೂ 91 ಸಣ್ಣ ಮನೆಗಳನ್ನು ನಿರ್ಮಿಸಿದ್ದ. ಇನ್ನುಳಿದ ಜಮೀನಿನಲ್ಲಿ 1400 ನಿವೇಶನಗಳನ್ನು ನಿರ್ಮಿಸಲಾಗಿದೆ. ಇವುಗಳನ್ನು ಮಾರಾಟ ಮಾಡುವ ಉದ್ದೇಶ ಕೆಎಚ್‌ಬಿಗೆ ಇತ್ತು. ನಂತರ 2013ರಲ್ಲಿ ಮನೆಗಳನ್ನು ಲಾಟರಿ ಮೂಲಕ ಆಯ್ಕೆ ಮಾಡಿ ಫಲಾನುಭವಿಗಳಿಗೆ ಹಸ್ತಾಂತರ ಮಾಡಲಾಗಿತ್ತು. ಆದರೆ ಮನೆಗಳು ಸಂಪೂರ್ಣ ಕಳಪೆಯಾಗಿವೆ ಎಂಬುದು ನಿವಾಸಿಗಳ ಆರೋಪ.

ಭೂತಬಂಗಲೆಗಳಾದ ಮನೆಗಳು: ಇಲ್ಲಿರುವ ಎಲ್ಲ ಮನೆಗಳ ಪಾಯ ಕುಸಿದು ಗೋಡೆಗಳೆಲ್ಲ ಬಿರುಕು ಬಿಟ್ಟಿರುವುದು ವಾಸ್ತವ. ಬಾಗಿಲು ಕಿಟಕಿಗಳು ಕಿತ್ತು ಹೋಗಿವೆ. ಇವೆಲ್ಲ ಕಳಪೆ ಕಾಮಗಾರಿಗೆ ಹಾಗೂ ಗುಣಮಟ್ಟದ ಕಾಮಗಾರಿ ಮಾಡದೇ ವ್ಯಾಪಕ ಭ್ರಷ್ಟಾಚಾರ ನಡೆದಿರುವುದು ಮೇಲ್ನೋಟಕ್ಕೆ ಕಂಡು ಬರುತ್ತಿದೆ. ಮೂಲ ಸೌಕರ್ಯಗಳಿಗಾಗಿ ಹಲವು ಬಾರಿ ಕರ್ನಾಟಕ ಗೃಹ ಮಂಡಳಿ ಹಾಗೂ ಗುತ್ತಿಗೆದಾರರಿಗೆ ಮನವಿ ಮಾಡಿದರೂ ಪ್ರಯೋಜನವಾಗಿರಲಿಲ್ಲ. ಇದರಿಂದ ರೋಸಿ ಹೋದ ಸ್ಥಳಿಯರು ಇಡೀ ಪ್ರಕರಣವನ್ನು ಲೋಕಾಯುಕ್ತ ಇಲಾಖೆಗೆ ದೂರು ನೀಡಿದರು. ಸಾರ್ವಜನಿಕರ ದೂರಿನ ಅನ್ವಯ ಸೋಮವಾರ ಲೋಕಾಯುಕ್ತ ತನಿಖಾಧಿಕಾರಿ ಆರ್. ರವಿಶಂಕರ ಸ್ಥಳ ಪರಿಶೀಲನೆ ನಡೆಸಿದ್ದಾರೆ.

ಸಾಲ ಮಾಡಿ ಮನೆ ಖರೀದಿ: ಜನ ಸಾಮಾನ್ಯರು ಇರಲೊಂದು ಸೂರುಬೇಕೆಂಬ ಆಸೆಯಿಂದ ಸಾಲ ಸೋಲ ಮಾಡಿ ಮನೆ ಖರೀದಿಸಿದ್ದಾರೆ. ಪ್ರತೀ ಸ್ಕ್ವೇರ್‌ಫಿಟ್‌ಗೆ 350 ರೂ.ಗಳಂತೆ ಜಾಗೆ ನೀಡಲಾಗಿದೆ. ಒಟ್ಟು 81 ಕೋಟಿ ರೂ. ವೆಚ್ಚದಲ್ಲಿ 200 ಮನೆಗಳನ್ನು ನಿರ್ಮಿಸಲಾಗಿದೆ. ಮೊದಲ ಹಂತದಲ್ಲಿ 56.34 ಕೋಟಿ ರೂ. ವೆಚ್ಚದಲ್ಲಿ 100 ಮನೆಗಳನ್ನು ನಿರ್ಮಿಸಲಾಗಿದೆ. ಅದರಲ್ಲಿ 10 ಎಚ್‌ಐಜಿ (ಹೈ ಇನ್‌ಕಮ್ ಗ್ರೂಪ್), 30 ಎಂಐಜಿ (ಮಿಡ್ಲ್ ಇನ್‌ಕಮ್ ಗ್ರೂಪ್), 60 ಎಲ್‌ಐಜಿ (ಲೋ ಇನ್‌ಕಮ್ ಗ್ರೂಪ್) ಮನೆಗಳಿವೆ. ಎರಡನೇ ಹಂತದಲ್ಲಿ 24.82 ಕೋಟಿ ರೂ. ವೆಚ್ಚದಲ್ಲಿ 100 ಮನೆಗಳನ್ನು ನಿರ್ಮಿಸಲಾಗಿದೆ. ಇದರಲ್ಲಿ 29 ಎಚ್‌ಐಜಿ (ಹೈ ಇನ್‌ಕಮ್ ಗ್ರೂಪ್), 40 (ಮಿಡ್ಲ್ ಇನ್‌ಕಮ್ ಗ್ರೂಪ್) ಹಾಗೂ 31 ಮನೆಗಳಿವೆ.
ಮೊದಲ ಹಂತದ ಎಚ್‌ಐಜಿ ಮನೆಗಳಿಗೆ ತಲಾ 27,50,000 ರೂ., ಎಂಐಜಿ ಮನೆಗಳಿಗೆ ತಲಾ 19,50,000 ರೂ. ಹಾಗೂ ಎಲ್‌ಐಜಿ ಮನೆಗಳಿಗೆ 16,50,000 ರೂ. ಗಳಂತೆ ಜನರಿಂದ ಹಣ ಪಡೆಯಲಾಗಿದೆ. 2 ನೇ ಹಂತದಲ್ಲಿ ಎಚ್‌ಐಜಿ ಮನೆಗಳಿಗೆ ತಲಾ 29,50,000 ರೂ., ಎಂಐಜಿ ಮನೆಗಳಿಗೆ ತಲಾ 20,00,000 ರೂ. ಮತ್ತು ಎಲ್‌ಐಜಿ ಮನೆಗಳಿಗೆ 16,50,000 ರೂ.ಗಳಂತ ಹಣ ಪಡೆದಿದ್ದರೂ ಗುಣಮಟ್ಟದ ಮನೆ ನೀಡಿಲ್ಲವೆಂಬುದು ಸ್ಥಳೀಯರ ಆರೋಪ.
ಒಟ್ಟಾರೆ ಲಕ್ಷಾಂತರ ರೂಪಾಯಿ ಕೊಟ್ಟು ಮನೆ ಖರೀದಿಸಿದ ಜನವೀಗ ಕೈ ಕೈ ಹಿಸುಕಿಕೊಳ್ಳುತ್ತಿದ್ದಾರೆ. ಕರ್ನಾಟಕ ಗೃಹ ಮಂಡಳಿ ತಮಗೆ ಮೋಸ ಮಾಡಿದೆ ಎಂದು ಹಿಡಿ ಶಾಪ ಹಾಕುತ್ತಿದ್ದಾರೆ. ಇವೆಲ್ಲವುಗಳ ಮಾಹಿತಿ ಹಾಗೂ ಪ್ರಸ್ತುತ ಸ್ಥಿತಿಗಳ ಬಗ್ಗೆ ಲೋಕಾಯುಕ್ತ ತನಿಖಾಧಿಕಾರಿ ಆರ್. ರವಿಶಂಕರ ಮಾಹಿತಿ ಪಡೆದಿದ್ದಾರೆ. ಶೀಘ್ರದಲ್ಲೇ ನಿವಾಸಿಗಳಿಗೆ ನ್ಯಾಯ ಸಿಗುವ ಲಕ್ಷಣಗಳು ಗೋಚರಿಸುತ್ತಿವೆ.

 

Leave a Reply

Your email address will not be published. Required fields are marked *