ಬಿಜೆಪಿ ಅಭ್ಯರ್ಥಿಗಳಲ್ಲಿ ಹೊಸ ಸಂಚಲನ

ಪರಶುರಾಮ ಭಾಸಗಿ

ವಿಜಯಪುರ: ಲೋಕಸಭೆ ಚುನಾವಣೆ ಫಲಿತಾಂಶ ಹೊರ ಬೀಳುತ್ತಿದ್ದಂತೆ ಜಿಲ್ಲೆ ಹಾಗೂ ಸ್ಥಳೀಯ ಸಂಸ್ಥೆಗಳ ರಾಜಕೀಯ ಅಂಗಳದಲ್ಲಿ ಹೊಸ ಸಂಚಲನ ಶುರುವಾಗಿದೆ !
ಕಳೆದ ವಿಧಾನ ಸಭೆ ಚುನಾವಣೆಯಲ್ಲಿ ಪರಾಜಿತಗೊಂಡ ಹಾಗೂ ಪ್ರಸ್ತುತ ಪುರಸಭೆ ಚುನಾವಣೆ ಕಣದಲ್ಲಿರುವ ಅಭ್ಯರ್ಥಿಗಳಿಗೆ ಫಲಿತಾಂಶ ಹೊಸ ಹುಮ್ಮಸ್ಸು ತರಿಸಿದ್ದರೆ ಜೆಡಿಎಸ್- ಕಾಂಗ್ರೆಸ್ ಪಾಳಯದಲ್ಲಿ ಜವಾಬ್ದಾರಿ ಹೆಚ್ಚಿಸಿದೆ. ಲೋಕಸಭೆಗೂ ಪುರಸಭೆ ಚುನಾವಣೆಗೂ ಸಾಕಷ್ಟು ವ್ಯತ್ಯಾಸ ಇದ್ದರೂ ಫಲಿತಾಂಶದ ಪರಿಣಾಮ ಬೀರುವ ಸಾಧ್ಯತೆ ಇಲ್ಲದಿಲ್ಲ.
ಇನ್ನೊಂದೆಡೆ ರಾಜ್ಯ ರಾಜಕೀಯದಲ್ಲಿ ಆಗುತ್ತಿರುವ ಬದಲಾವಣೆಯಿಂದಾಗಿ ಯಾವಾಗ ಬೇಕಾದರೂ ಚುನಾವಣೆ ಎದುರಾಗಬಹುದೆಂಬ ಕಾರಣಕ್ಕೆ ಕಳೆದ ವಿಧಾನ ಸಭೆ ಚುನಾವಣೆಯಲ್ಲಿ ಪರಾಜಿತಗೊಂಡ ಬಿಜೆಪಿ ಅಭ್ಯರ್ಥಿಗಳು ಮತ್ತೆ ಚೇತರಿಸಿಕೊಂಡಿದ್ದು ಮತ ಕ್ಷೇತ್ರಗಳಲ್ಲಿ ಸಕ್ರಿಯಗೊಳ್ಳುತ್ತಿದ್ದಾರೆ. ಮತ್ತೆ ಮತದಾರರ ಮನೆ ಬಾಗಿಲಿಗೆ ಹೋಗಲು ಸಜ್ಜಾಗಿದ್ದಾರೆ.

ಪುರಸಭೆ ಚುನಾವಣೆ ಮೇಲೆ ಪರಿಣಾಮ: ಮೇ 29 ಕ್ಕೆ ಜಿಲ್ಲೆ ಮೂರು ಪುರಸಭೆಗಳಿಗೆ ಚುನಾವಣೆ ನಡೆಯಲಿದ್ದು ಅದರ ಮೇಲೆ ಲೋಕಸಭೆ ಚುನಾವಣೆ ಫಲಿತಾಂಶ ಸಾಕಷ್ಟು ಪರಿಣಾಮ ಬೀರಲಿದೆ. ಬಸವನಬಾಗೇವಾಡಿ, ಇಂಡಿ ಮತ್ತು ತಾಳಿಕೋಟೆ ಪುರಸಭೆಗಳಿಗೆ ಈಗಾಗಲೇ ನಾಮಪತ್ರ ಹಿಂಪಡೆಯುವ ಪ್ರಕ್ರಿಯೆ ಮುಗಿದಿದ್ದು ಅಂತಿಮ ಅಖಾಡ ಸಿದ್ಧಗೊಂಡಿದೆ. ಈಗಾಗಲೇ ‘ದೋಸ್ತಿ’ ಮಾಡಿ ಕೈ ಸುಟ್ಟುಕೊಂಡಿರುವ ಕಾಂಗ್ರೆಸ್-ಜೆಡಿಎಸ್ ಮುಖಂಡರು ಪುರಸಭೆಯಲ್ಲಿ ಸ್ವತಂತ್ರವಾಗಿ ಸ್ಪರ್ಧಿಸುವ ನಿರ್ಧಾರ ಪ್ರಕಟಿಸಿದ್ದಾರೆ. ಇದು ಬಿಜೆಪಿಗೆ ವರವಾಗಿದ್ದು ಜೆಡಿಎಸ್‌ನ್ನು ಮತ ವಿಭಜನೆಗೆ ಬಳಸಿಕೊಳ್ಳುವ ಹುನ್ನಾರ ನಡೆಸಿದೆ.
ಬಿಜೆಪಿ ಅಭ್ಯರ್ಥಿಗಳು ಮೋದಿ ಸರ್ಕಾರದ ವರ್ಚಸ್ಸು, ಫಲಿತಾಂಶ ಮತ್ತು ಸಾಧನೆ ಮುಂದಿಟ್ಟುಕೊಂಡು ಮತದಾರರ ಮನವೊಲಿಸಲು ತುದಿಗಾಲ ಮೇಲೆ ನಿಂತಿದ್ದಾರೆ. ಮೋದಿ ಅಲೆಯಲ್ಲಿ ಮತದಾರರು ತಮ್ಮನ್ನು ಆಶೀರ್ವದಿಸಲಿದ್ದಾರೆಂಬ ಆತ್ಮವಿಶ್ವಾಸ ವ್ಯಕ್ತಪಡಿಸುತ್ತಿದ್ದಾರೆ.

ವಿಧಾನಸಭೆ ಕ್ಷೇತ್ರಗಳಲ್ಲಿ ಬದಲಾವಣೆ: ರಾಜ್ಯ ಸಮ್ಮಿಶ್ರ ಸರ್ಕಾರ ಪತನಗೊಳ್ಳುವ ಸೂಚನೆ ಮೇರೆಗೆ ವಿಧಾನ ಸಭೆ ಕ್ಷೇತ್ರಗಳ ಪರಾಜಿತ ಅಭ್ಯರ್ಥಿಗಳೆಲ್ಲರೂ ಮತ್ತೆ ಚೇತರಿಸಿಕೊಳ್ಳುತ್ತಿದ್ದಾರೆ. ರಾಜ್ಯ ಸಮ್ಮಿಶ್ರ ಸರ್ಕಾರಕ್ಕೆ ಭರ್ತಿ ವರ್ಷ ತುಂಬಿದ ಬೆನ್ನಲ್ಲೆ ಹೊಸ ಸರ್ಕಾರ ರಚನೆಯಾಗುವ ಮಾತು ಕೇಳಿ ಬರುತ್ತಿದೆ. ರಾಜ್ಯದಲ್ಲಿ ಯಾವಾಗ ಬೇಕಾದರೂ ಚುನಾವಣೆ ಎದುರಾಗಬಹುದೆಂಬ ಕಾರಣಕ್ಕೆ ಮತ್ತೆ ಮತದಾರರ ನಿರಂತರ ಸಂಪರ್ಕ ಕಾಯ್ದುಕೊಳ್ಳಲು ಪರಾಜಿತ ಅಭ್ಯರ್ಥಿಗಳು ಸಜ್ಜಾಗಿದ್ದಾರೆ. ಬಿಜೆಪಿ ಜತೆಗೆ ಕಾಂಗ್ರೆಸ್- ಜೆಡಿಎಸ್‌ನ ಮುಖಂಡರು ಸಹ ‘ಅಲರ್ಟ್’ ಆಗಿದ್ದಾರೆ. ಟಿಕೆಟ್ ರೇಸ್‌ನಲ್ಲಿದ್ದ ಬಿಜೆಪಿಗರು ವಿಜಯೋತ್ಸವ, ಸಂಭ್ರಮಾಚರಣೆ ಅಂತೆಲ್ಲಾ ಮತ್ತೆ ಮುಂಚೂಣಿಗೆ ಬರತೊಡಗಿದ್ದಾರೆ.

ಪಾಲಿಕೆ ಅಂಗಳದಲ್ಲಿ ಹೊಸಕಳೆ: ಮುಂದಿನ ತಿಂಗಳ ಮೊದಲ ವಾರದಲ್ಲಷ್ಟೇ ಮಹಾನಗರ ಪಾಲಿಕೆಯ ಚುನಾವಣೆಗೆ ಅಧಿಸೂಚನೆ ಪ್ರಕಟಗೊಳ್ಳುವ ಸಾಧ್ಯತೆ ಇದೆ. ಈಗಾಗಲೇ ವಾರ್ಡ್‌ವಾರು ಮೀಸಲಾತಿಯೂ ಪ್ರಕಟಗೊಂಡಿದೆ. ಆದರೆ, ನಾಲ್ಕು ವಾರ್ಡ್‌ಗಳ ಸದಸ್ಯರು ಮೀಸಲಾತಿ ಪ್ರಶ್ನಿಸಿ ನ್ಯಾಯಾಲಯದ ಮೆಟ್ಟಿಲೇರಿದ್ದಾರೆ. ಹೀಗಾಗಿ ಅಧಿಸೂಚನೆ ಪ್ರಕಟಣೆ ವಿಳಂಬವಾಗುತ್ತಿದೆ. ಅದಾಗ್ಯೂ ಪಾಲಿಕೆಯಂಗಳದಲ್ಲಿ ರಾಜಕೀಯ ಚಟುವಟಿಕೆ ಚುರುಕೊಂಡಿದ್ದು ಇದು ಸಹ ಲೋಕಸಭೆ ಚುನಾವಣೆ ಫಲಿತಾಂಶದ ಪರಿಣಾಮ ಎನ್ನಲಾಗುತ್ತಿದೆ. ಮೋದಿ ಅಲೆಯಲ್ಲಿ ಗೆಲ್ಲುವ ವಿಶ್ವಾಸ ಹೆಚ್ಚಿದ್ದು ಆಕಾಂಕ್ಷಿಗಳು ಟಿಕೆಟ್‌ಗಾಗಿ ಇನ್ನಿಲ್ಲದ ಕಸರತ್ತು ನಡೆಸಿದ್ದಾರೆ.

Leave a Reply

Your email address will not be published. Required fields are marked *