ರಮೇಶ ಜಿಗಜಿಣಗಿ ಮತ್ತೆ ಸಂಸತ್ ಪ್ರವೇಶ

ವಿಜಯಪುರ: ತೀವ್ರ ಕುತೂಹಲ ಮೂಡಿಸಿದ್ದ 17ನೇ ಲೋಕಸಭೆ ಚುನಾವಣೆ ಫಲಿತಾಂಶ ಪ್ರಕಟಗೊಂಡಿದ್ದು ನಿರೀಕ್ಷೆಯಂತೆ ಬಿಜೆಪಿ ಅಭ್ಯರ್ಥಿ ರಮೇಶ ಜಿಗಜಿಣಗಿ ಗೆಲುವು ಸಾಧಿಸಿದ್ದಾರೆ.
ಬಿಜೆಪಿ ಅಭ್ಯರ್ಥಿ ರಮೇಶ ಜಿಗಜಿಣಗಿ ಸತತ ಮೂರನೇ ಬಾರಿಗೆ ಗೆಲುವು ಸಾಧಿಸಿದ್ದು ಬಿಜೆಪಿ ಸತತವಾಗಿ ಐದನೇ ಬಾರಿ ಕ್ಷೇತ್ರ ವಶ ಮಾಡಿಕೊಂಡಿದೆ. ಮೈತ್ರಿ ಸೂತ್ರದಡಿ ಜೆಡಿಎಸ್‌ಗೆ ಕ್ಷೇತ್ರ ಬಿಟ್ಟುಕೊಟ್ಟಾಗಲೇ ಕಾಂಗ್ರೆಸ್ ಮೊದಲ ಸೋಲು ಅನುಭವಿಸಿದ್ದು, ಆ ಮೂಲಕ ಜಿಲ್ಲೆಯಲ್ಲಿ ಜೆಡಿಎಸ್ ಮೂಲಕ ಕಾಂಗ್ರೆಸ್ ಸೋಲಿನ ಸರಣಿಯೂ ಮುಂದುವರಿದಿದೆ.
ನಗರದ ಸೈನಿಕ ಶಾಲೆ ಆವರಣದಲ್ಲಿ ಗುರುವಾರ ನಡೆದ ಮತ ಎಣಿಕೆ ಬಿಜೆಪಿ ಪಾಲಿನ ಜಾತ್ರೆಯಂತಿತ್ತು. ಬೆಳಗ್ಗೆ 7.25ಕ್ಕೆ ಸ್ಟ್ರಾಂಗ್ ರೂಂ ಕೊಠಡಿ ತೆಗೆಯುವ ಮೂಲಕ ಎಣಿಕೆ ಪ್ರಕ್ರಿಯೆಗೆ ಮುನ್ನುಡಿ ಬರೆದ ಜಿಲ್ಲಾಡಳಿತ ಬೆಳಗ್ಗೆ 8ಕ್ಕೆ ಅಂಚೆ ಪತ್ರಗಳ ಎಣಿಕೆಯೊಂದಿಗೆ ಅಧಿಕೃತವಾಗಿ ಎಣಿಕೆ ಪ್ರಕ್ರಿಯೆ ಆರಂಭಿಸಿತು. ನಿರೀಕ್ಷೆಯಂತೆ ಮಧ್ಯಾಹ್ನ 1 ರೊಳಗೆ ಮತ ಎಣಿಕೆ ಪ್ರಕ್ರಿಯೆ ಪೂರ್ಣಗೊಂಡು ಜಿಗಜಿಣಗಿ ಗೆಲುವು ಸಾಧಿಸಿದರಾದರೂ ಅಧಿಕೃತ ಘೋಷಣೆಗೆ ವಿಳಂಬ ತೋರಿತು.


ಬಿಜೆಪಿಗೆ ಭಾರೀ ಗೆಲುವು: ಜೆಡಿಎಸ್ ಅಭ್ಯರ್ಥಿ ಡಾ.ಸುನೀತಾ ಚವಾಣ್‌ರನ್ನು 258038 ಅಂತರದಿಂದ ಸೋಲಿಸುವ ಮೂಲಕ ಬಿಜೆಪಿ ಅಭ್ಯರ್ಥಿ ರಮೇಶ ಜಿಗಜಿಣಗಿ ಕ್ಷೇತ್ರದಲ್ಲಿ ದಾಖಲೆ ಬರೆದರು. ಒಟ್ಟು 635867 ಮತಗಳನ್ನು ಪಡೆದು ಜಿಗಜಿಣಗಿ ಗೆಲುವಿನ ನಗೆ ಬೀರಿದರೆ ಡಾ.ಸುನೀತಾ ಚವಾಣ್ ಅವರು 377829ಮತಗಳನ್ನು ಪಡೆದು ಪರಾಜಯಗೊಂಡರು.
ಲೋಕಸಭೆ ಚುನಾವಣೆಗೆ ಹೊಸಬರಾದರೂ ಡಾ.ಸುನೀತಾ ಚವಾಣ್ ಪತಿಯ ಆಸರೆಯೊಂದಿಗೆ ಉತ್ತಮ ಸಾಧನೆಯನ್ನೇ ತೋರಿದ್ದಾರೆ. ಆದರೆ, ವಿಜಯಲಕ್ಷ್ಮಿಯನ್ನು ಒಲಿಸಿಕೊಳ್ಳಲಾಗಲಿಲ್ಲ. ಸಂಸತ್ ಪ್ರವೇಶಿಸಬೇಕೆಂಬ ಕನಸು ಕೊನೆಗೂ ಸುನೀತಾರಿಗೆ ಮರೀಚಿಕೆಯಾಯಿತು.
ಪಕ್ಷೇತರರ ಪೈಪೋಟಿ: ರಾಷ್ಟ್ರೀಯ-ಪ್ರಾದೇಶಿಕ ಪಕ್ಷಗಳ ಅಭ್ಯರ್ಥಿಗಳು ಸೇರಿದಂತೆ ಒಟ್ಟು 12 ಅಭ್ಯರ್ಥಿಗಳು ಕಣದಲ್ಲಿದ್ದರು. ಬಿಜೆಪಿ-ಜೆಡಿಎಸ್ ಸೆಣಸಾಟದ ನಡುವೆಯೂ ಇನ್ನಿತರರು ತಕ್ಕಮಟ್ಟಿಗೆ ಫಸಲು ತೆಗೆದಿದ್ದಾರೆ. ಪಕ್ಷೇತರ ಅಭ್ಯರ್ಥಿ ಧರೆಪ್ಪ ಮಹಾದೇವ ಅರ್ಧಾವೂರ 23706 ಮತ ಪಡೆದು ತೃತೀಯ ಸ್ಥಾನದಲ್ಲಿದ್ದರೆ ಬಿಎಸ್‌ಪಿ ಅಭ್ಯರ್ಥಿ ಶ್ರೀನಾಥ ಪೂಜಾರಿ 23442 ಮತ ಪಡೆದು ಚತುರ್ಥ ಸ್ಥಾನಕ್ಕಿಳಿದರು. ಇನ್ನುಳಿದಂತೆ ಉತ್ತಮ ಪ್ರಜಾಕೀಯ ಪಕ್ಷ, ಹಿಂದುಸ್ಥಾನ ಜನತಾ ಪಾರ್ಟಿ ಹಾಗೂ ಪಕ್ಷೇತರ ಅಭ್ಯರ್ಥಿಗಳು 10 ಸಾವಿರ ಮತಗಳ ಗಡಿ ತಲುಪುವುದರೊಳಗೆ ಸುಸ್ತಾದರು. ಅನೇಕರು ಮೊದಲ ಬಾರಿ ಸ್ಪರ್ಧಿಸಿದ ಖುಷಿಯೊಂದಿಗೆ ಎಣಿಕೆ ಕೇಂದ್ರದಿಂದ ಹೊರಬಂದರು. ಅದರಲ್ಲಿ ಧರೆಪ್ಪಾ ಅರ್ಧಾವೂರ ಅವರು ರಾಜ್ಯದಲ್ಲೇ ಸುಮಲತಾ ಬಿಟ್ಟರೆ ಪಕ್ಷೇತರ ಅಭ್ಯರ್ಥಿಯಾಗಿ ನಾನೇ ಹೆಚ್ಚಿನ ಮತ ಪಡೆದಿದ್ದು ಎಂದರು.

1139 ಅಂಚೆ ಮತ ತಿರಸ್ಕೃತ: ವಿಶೇಷವೆಂದರೆ ಎಲ್ಲರಿಗೂ ಅಂಚೆ ಮೂಲಕ ಮತ ಪಡೆದಿದ್ದು ಇದರಲ್ಲಿ ಬಿಜೆಪಿ ಪ್ರಮಾಣ ಹೆಚ್ಚಿದೆ. ಒಟ್ಟು 3712 ಅಂಚೆಮತಗಳು ಸಿಂಧುಗೊಂಡಿವೆ. ಇದರಲ್ಲಿ ರಮೇಶ ಜಿಗಜಿಣಗಿ-1999, ಶ್ರೀನಾಥ ಪೂಜಾರಿ-53, ಡಾ.ಸುನೀತಾ ಚವಾಣ್-487, ಗುರಬಸವ ರಬಕವಿ-4, ದೀಪಕ ಗಂಗಾರಾಮ ಕಟಕಧೋಂಡ-3, ಯಮನಪ್ಪ ಗುಣದಾಳ-5, ರುದ್ರಪ್ಪ ಚಲವಾದಿ-1, ದಾದಾಸಾಬ ಸಿದ್ದಪ್ಪ ಬಾಗಾಯತ-2, ದೊಂಡಿಬಾ ರಾಠೋಡ-3, ಧರೆಪ್ಪ ಅರ್ಧಾವೂರ-5, ಬಾಲಾಜಿ ವಡ್ಡರ-3, ರಾಮಪ್ಪ ಹರಿಜನ-2 ಅಂಚೆ ಮತ ಪಡೆದಿದ್ದಾರೆ. 1139 ಅಂಚೆ ಮತಗಳು ತಿರಸ್ಕೃತಗೊಂಡಿವೆ.

Leave a Reply

Your email address will not be published. Required fields are marked *