ಶಕ್ತಿ ನೆಪ ಆಕಾಂಕ್ಷಿಗಳ ಟಿಕೆಟ್ ಜಪ

ಪರಶುರಾಮ ಭಾಸಗಿ

ವಿಜಯಪುರ: ಲೋಕಸಭೆ ಚುನಾವಣೆ ಸಮೀಪಿಸುತ್ತಿದ್ದಂತೆ ಜಿಲ್ಲಾ ಕಾಂಗ್ರೆಸ್ ಕಚೇರಿಗೆ ಕಳೆ ಬಂದಿದ್ದು, ಆಕಾಂಕ್ಷಿಗಳಿಂದ ತುಂಬಿ ತುಳಕುತ್ತಿದೆ!

ಪಂಚರಾಜ್ಯಗಳ ಚುನಾವಣೆ ಫಲಿತಾಂಶ ‘ಕೈ’ ಪಾಳಯದಲ್ಲಿ ಸಂಚಲನ ಮೂಡಿಸಿದ್ದು, ಅದರಲ್ಲೂ ಲೋಕಸಭೆ ಚುನಾವಣೆ ಟಿಕೆಟ್ ಆಕಾಂಕ್ಷಿಗಳಲ್ಲಿ ಹುಮ್ಮಸ್ಸು ಹೆಚ್ಚಿಸಿದೆ. ಹೀಗಾಗಿ ಅಖಾಡದಲ್ಲಿ ಹೆಚ್ಚಾಗಿ ಕಾಣಸಿಕೊಳ್ಳುತ್ತಿರುವ ಆಕಾಂಕ್ಷಿಗಳು ‘ಶಕ್ತಿ’ ಹೆಸರಲ್ಲಿ ಪಕ್ಷ ಸಂಘಟನೆ ಜಪ ಮಾಡುತ್ತಿದ್ದಾರೆ. ಜತೆಗೆ ಜನರ ಮುಂದೆ ಹೋಗಲು ಇದಕ್ಕಿಂತ ಬೇರೆ ಅವಕಾಶ ಇಲ್ಲವೆಂದು ‘ಶಕ್ತಿ’ ಅಭಿಯಾನದಲ್ಲಿ ಸಕ್ರಿಯವಾಗಿ ಪಾಲ್ಗೊಳ್ಳುತ್ತಿದ್ದಾರೆ.

ಕ್ಷೇತ್ರವಾರು ಸಂಚಾರ

ಎಂಟು ವಿಧಾನಸಭೆ ಕ್ಷೇತ್ರಗಳಲ್ಲಿ ನಡೆಯುತ್ತಿರುವ ಶಕ್ತಿ ಅಭಿಯಾನಕ್ಕೆ ಆಕಾಂಕ್ಷಿಗಳು ತಪ್ಪದೇ ಹಾಜರಾಗುತ್ತಿದ್ದಾರೆ. ಸದಸ್ಯತ್ವ ಹೆಚ್ಚಿಸುವ ಮೂಲಕ ಮತದಾರರ ನಿಕಟ ಸಂಪರ್ಕ ಸಾಧಿಸುವ ತಂತ್ರ ಹೆಣೆದಿದ್ದಾರೆ. ಪಕ್ಷದ ಕೆಳ ಮಟ್ಟದ ಕಾರ್ಯಕರ್ತರನ್ನು ತಲುಪಲು ಇದೇ ಅವಕಾಶ ಎಂದರಿತು ಬೆಳಗ್ಗೆಯಿಂದಲೇ ಅಖಾಡಕ್ಕಿಳಿಯುತ್ತಿದ್ದಾರೆ. ಹೀಗಾಗಿ ಸಂಘಟನೆ ‘ಶಕ್ತಿ’ ಹೆಚ್ಚಿದೆ. ಎಐಸಿಸಿ ಪ್ರಧಾನ ಕಾರ್ಯದರ್ಶಿ ಜಲಜಾ ನಾಯಕ, ಕಾಂತಾ ನಾಯಕ, ಮಾಜಿ ಶಾಸಕರಾದ ಮನೋಹರ ಐನಾಪುರ, ವಿಠಲ ಕಟಕಧೋಂಡ, ರಾಜು ಆಲಗೂರ, ಶ್ರೀದೇವಿ ಉತ್ಲಾಸರ ಸೇರಿ ಹಲವರು ಸಕ್ರಿಯವಾಗಿ ಪಾಲ್ಗೊಳ್ಳುತ್ತಿದ್ದಾರೆ. ಅಧಿಕಾರದಲ್ಲಿದ್ದಾಗ ಅಪರೂಪಕ್ಕೂ ಕಚೇರಿಯತ್ತ ತಿರುಗಿ ನೋಡದವರು ಈಗ ನಿರಂತರ ಒಡನಾಟ ಹೊಂದುತ್ತಿರುವುದು ಕಾರ್ಯಕರ್ತರಲ್ಲೂ ಚೈತನ್ಯ ತಂದಿದೆ ಎಂಬುದು ಕಾರ್ಯಕರ್ತರೊಬ್ಬರ ಅಭಿಪ್ರಾಯ.

ಶಕ್ತಿ ಕುಗ್ಗಿಸಿದ ಶಾಸಕರ ಗೈರು

ಸಚಿವ ಶಿವಾನಂದ ಪಾಟೀಲ, ಮಾಜಿ ಸಚಿವ ಎಂ.ಬಿ. ಪಾಟೀಲ, ಶಾಸಕ ಯಶವಂತರಾಯಗೌಡ ಪಾಟೀಲರ ಕ್ಷೇತ್ರದಲ್ಲಿ ‘ಶಕ್ತಿ’ಕುಂದಿದೆ. ಅಭಿಯಾನದಿಂದ ತ್ರಿಮೂರ್ತಿಗಳು ದೂರವುಳಿದಿದ್ದು, ಸಂಘಟಕರಲ್ಲಿ ಕೊಂಚ ಬೇಸರ ತರಿಸಿದೆ. ಕೆಲವರು ಅಧಿವೇಶನ ನೆಪ ಹೇಳಿಕೊಂಡು ದೂರವುಳಿದಿದ್ದರೆ, ಇನ್ನುಳಿದವರು ಸೂಕ್ತ ಸ್ಥಾನಮಾನ ಸಿಗದ ಹಿನ್ನೆಲೆ ಪಾಲ್ಗೊಳ್ಳುತ್ತಿಲ್ಲವೆಂಬ ಮಾತು ಕೇಳಿ ಬರುತ್ತಿದೆ. ಎರಡು ತಿಂಗಳಿಂದ ಅಭಿಯಾನ ನಡೆದರೂ ಜನಪ್ರತಿನಿಧಿಗಳು ಮಾತ್ರ ಸಕ್ರಿಯವಾಗಿ ಪಾಲ್ಗೊಳ್ಳದಿರುವುದು ಶಕ್ತಿಗುಂದಲು ಕಾರಣ ಎನ್ನಲಾಗಿದೆ. ಇನ್ನು ವಿಧಾನಸಭೆ ಚುನಾವಣೆಯಲ್ಲಿ ಪರಾಭವಗೊಂಡ ಅಭ್ಯರ್ಥಿಗಳ ಕ್ಷೇತ್ರಗಳ ಪೈಕಿ ವಿಜಯಪುರ ಹೊರತುಪಡಿಸಿ ಇನ್ನುಳಿದ ಕ್ಷೇತ್ರಗಳ ಸಾಧನೆ ಹೇಳಿಕೊಳ್ಳುವಂತಿಲ್ಲ. ಪರಾಜಿತ ಅಭ್ಯರ್ಥಿಗಳು ಸೋಲಿನ ಕಹಿಯಿಂದ ಹೊರಬರಲಾಗಿಲ್ಲವೆಂಬುದು ಗಮನಾರ್ಹ.

ಪಕ್ಷ ನೀಡಿದ ಜವಾಬ್ದಾರಿಯನ್ನು ಅಚ್ಚುಕಟ್ಟಾಗಿ ನಿಭಾಯಿ ಸುತ್ತಿದ್ದೇನೆ. ಲೋಕಸಭೆ ಚುನಾವಣೆ ಮುಂದಿಟ್ಟುಕೊಂಡು ಈ ಅಭಿಯಾನದಲ್ಲಿ ಸಕ್ರಿಯವಾಗಿಲ್ಲ. ಪಕ್ಷ ಸಂಘಟನೆ ನನ್ನ ಗುರಿ. ಆಕಾಂಕ್ಷಿ ಎಂದು ಎಲ್ಲೂ ಹೇಳಿ ಕೊಂಡಿಲ್ಲ. ಪಕ್ಷ ತೆಗೆದುಕೊಳ್ಳುವ ತೀರ್ಮಾನಕ್ಕೆ ನಾನು ಬದ್ಧ.
– ಜಲಜಾ ನಾಯಕ ಎಐಸಿಸಿ ಪ್ರಧಾನ ಕಾರ್ಯದರ್ಶಿ