ವ್ಯವಸ್ಥಿತ ಚುನಾವಣೆ ನಡೆಯುವಂತೆ ಸೂಚನೆ

ವಿಜಯಪುರ: ಲೋಕಸಭಾ ಸಾರ್ವತ್ರಿಕ ಚುನಾವಣೆಯನ್ನು ವ್ಯವಸ್ಥಿತವಾಗಿ ನಡೆಸಲು ಅನುಕೂಲವಾಗುವಂತೆ ಪ್ರತಿ ವಿಧಾನಸಭಾ ಕ್ಷೇತ್ರವಾರು ಮಾಸ್ಟರ್ ಟ್ರೇನರ್‌ಗಳನ್ನು ನೇಮಿಸಲಾಗಿದ್ದು, ಮತಗಟ್ಟೆ ಅಧಿಕಾರಿಗಳಿಗೆ ಸೂಕ್ತ ರೀತಿಯಲ್ಲಿ ತರಬೇತುಗೊಳಿಸಿ ಮತದಾನ ಪ್ರಕ್ರಿಯೆಯು ಅಚ್ಚುಕಟ್ಟಾಗಿ ನಡೆಯುವಂತೆ ನೋಡಿಕೊಳ್ಳಲು ಜಿಲ್ಲಾ ಚುನಾವಣಾಧಿಕಾರಿ ಎಂ.ಕನಗವಲ್ಲಿ ಅವರು ಸೂಚನೆ ನೀಡಿದರು.

ನಗರದ ಜಿಪಂ ಸಭಾಂಗಣದಲ್ಲಿ ಜಿಲ್ಲೆಯ ಚುನಾವಣಾ ಕಾರ್ಯಕ್ಕಾಗಿ ನೇಮಕಗೊಂಡಿರುವ ಮಾಸ್ಟರ್ ಟ್ರೇನರ್‌ಗಳಿಗೆ ಬುಧವಾರ ಆಯೋಜಿಸಿದ ತರಬೇತಿ ಕಾರ್ಯಾಗಾರದಲ್ಲಿ ಮಾತನಾಡಿದ ಅವರು, ಮಸ್ಟರಿಂಗ್ ಹಾಗೂ ಡಿ ಮಸ್ಟರಿಂಗ್ ಸಂದರ್ಭದಲ್ಲಿ ಕೈಗೊಳ್ಳಬೇಕಾದ ಮುಂಜಾಗ್ರತಾ ಕ್ರಮಗಳು, ಮತದಾನದ ಮುಂಚಿತ ದಿನ, ಮತದಾನದ ಆರಂಭ ಹಾಗೂ ಮತದಾನ ಮುಗಿದ ನಂತರ ಕೈಗೊಳ್ಳಬೇಕಾದ ಮುನ್ನೆಚ್ಚರಿಕಾ ಕ್ರಮಗಳ ಬಗ್ಗೆ ಪೂರ್ವಭಾವಿಯಾಗಿ ಸಂಪೂರ್ಣ ಮಾಹಿತಿ ಪಡೆದು, ಮತದಾನ ಸಂದರ್ಭದಲ್ಲಿ ಯಾವುದೇ ರೀತಿಯ ಲೋಪವಾಗದಂತೆ ಎಚ್ಚರಿಕೆ ವಹಿಸಬೇಕು. ವಿಶೇಷವಾಗಿ ಮತಗಟ್ಟೆ ಮಟ್ಟದ ಅಧಿಕಾರಿಗಳನ್ನು ತರಬೇತಿಗೊಳಿಸಿ ವ್ಯವಸ್ಥಿತ ರೀತಿಯಲ್ಲಿ ಮತದಾನ ನಡೆಯುವಂತೆ ನೋಡಿಕೊಳ್ಳಲು ಸೂಚನೆ ನೀಡಿದರು.

ಚುನಾವಣೆ ಸಂದರ್ಭಧಲ್ಲಿ 17ಎ ರಜಿಸ್ಟರ್ ಕಡ್ಡಾಯವಾಗಿ ನಿರ್ವಹಣೆ ಮಾಡುವುದು, ಮತಗಟ್ಟೆ ಅಧಿಕಾರಿಗಳು ಡೈರಿ ನಿರ್ವಹಣೆ ಮಾಡುವುದು, 17ಸಿ ರಜಿಸ್ಟರ್ ನಿರ್ವಹಣೆ, ಅಣಕು ಮತದಾನ ಯಶಶ್ವಿಯಾಗಿ ಪೂರೈಸುವುದು ಸೇರಿದಂತೆ ಇನ್ನಿತರ ಮುನ್ನೆಚ್ಚರಿಕೆ ಕ್ರಮಗಳನ್ನು ಯಾವುದೇ ಲೋಪವಿಲ್ಲದೇ ನಿರ್ವಹಿಸಬೇಕೆಂದು ತಿಳಿಸಿದರು.

ಚುನಾವಣೆ ಸಂದರ್ಭದಲ್ಲಿ ಕಂಟ್ರೋಲ್ ಯೂನಿಟ್, ಬ್ಯಾಲೆಟ್ ಯೂನಿಟ್, ಮತದಾನ ಖಾತ್ರಿ ಯಂತ್ರ, ಮತದಾರರ ಪಟ್ಟಿ, ಸ್ಪರ್ಧಿಸುತ್ತಿರುವ ಉಮೇದುವಾರರ ಪಟ್ಟಿ, ಗುರುತು ಮಾಡಿರುವ ಮತದಾರರ ಪಟ್ಟಿ, ಮತಚೀಟಿಗಳ ನಿರ್ವಹಣೆ, 25 ನಮೂನೆಗಳು, ಮತದಾನ ದಿನದಂದು ಮತಗಟ್ಟೆ ಕೇಂದ್ರದಲ್ಲಿ ನಿರ್ವಹಿಸಬೇಕಾದ ಕರ್ತವ್ಯಗಳ ಹಾಗೂ ಮತದಾನ ಪ್ರಕ್ರಿಯೆ ಸಂದರ್ಭದಲ್ಲಿ ಅನುಸರಿಸಬೇಕಾದ ಎಲ್ಲ ನಿಯಮಗಳ ಬಗ್ಗೆ ಈಗಾಗಲೇ ಹಲವು ಬಾರಿ ತರಬೇತಿ ನೀಡಲಾಗಿದ್ದು, ಸಂಬಂಧಪಟ್ಟ ಸಿಬ್ಬಂದಿ ವ್ಯವಸ್ಥಿತವಾಗಿ, ಶಿಸ್ತುಬದ್ಧವಾಗಿ ಕಾರ್ಯನಿರ್ವಹಿಸಿ ಯಾವುದೇ ರೀತಿಯ ಕರ್ತವ್ಯಲೋಪಕ್ಕೆ ಅವಕಾಶ ನೀಡದೇ ಚುನಾವಣೆ ಯಶಸ್ವಿಗೊಳಿಸುವಂತೆ ಸಲಹೆ ನೀಡಿದರು.

ಹೆಚ್ಚುವರಿ ಜಿಲ್ಲಾಧಿಕಾರಿ ಎಚ್. ಪ್ರಸನ್ನ ಮಾತನಾಡಿ, ಪಿಆರ್‌ಓ ಹಾಗೂ ಎಪಿಆರ್‌ಓಗಳಿಗೆ ಇದೇ ಏಪ್ರಿಲ್ 7 ರಂದು ಹಾಗೂ ಏ. 16 ಮತ್ತು 17 ರಂದು ತರಬೇತಿಯನ್ನು ಸಹ ಆಯೋಜಿಸಲಾಗುತ್ತಿದ್ದು, ಸಂಬಂಧಪಟ್ಟ ಸಿಬ್ಬಂದಿಗಳಿಗೆ ಈ ತರಬೇತಿಯಲ್ಲಿ ಸಿದ್ಧಾಂತ ಹಾಗೂ ಪ್ರಾತ್ಯಕ್ಷಿಕೆ ರೂಪದಲ್ಲಿ ಮತದಾನ ಖಾತ್ರಿ ಯಂತ್ರದ ಬಗ್ಗೆ ತರಬೇತಿಗೊಳಿಸಲಾಗುವುದು. ಅದರಂತೆ ವ್ಯವಸ್ಥಿತ ಚುನಾವಣೆಗಾಗಿ ಸೂಕ್ತ ರೀತಿಯಲ್ಲಿ ಸಂಬಂಧಪಟ್ಟ ಅಧಿಕಾರಿ-ಸಿಬ್ಬಂದಿಗಳಿಗೆ ತರಬೇತಿಗೊಳಿಸಲಾಗುತ್ತಿದ್ದು, ಎಂಟು ವಿಧಾನಸಭಾ ಕ್ಷೇತ್ರದವರಿಗೆ ಒಂದೇ ಮಾದರಿಯಲ್ಲಿ ತರಬೇತಿಗೊಳಿಸಲು ಉದ್ದೇಶಿಸಲಾಗಿದೆ ಎಂದು ಹೇಳಿದರು.

ಶಿಕ್ಷಣಾಧಿಕಾರಿ ಎ.ಎಂ.ಲಿಮಕರ, ಎಂಟು ವಿಧಾನಸಭಾ ಕ್ಷೇತ್ರದ ಸಹಾಯಕ ಚುನಾವಣಾಧಿಕಾರಿಗಳು, ಮಾಸ್ಟರ್ ಟ್ರೇನರ್‌ಗಳು ಉಪಸ್ಥಿತರಿದ್ದರು.