ಅಖಾಡದಲ್ಲಿ ಏಳು ಹುರಿಯಾಳುಗಳು

ವಿಜಯಪುರ: ಸ್ಥಳೀಯ ಸಂಸ್ಥೆಗಳ ವಿಧಾನ ಪರಿಷತ್ ಉಪಚುನಾವಣೆ ಅಖಾಡದಿಂದ ಕೊನೇ ಘಳಿಗೆಯಲ್ಲಿ ಒಬ್ಬ ಅಭ್ಯರ್ಥಿ ಹಿಂದೆ ಸರಿದಿದ್ದು, ಕಣದಲ್ಲಿ ಅಂತಿಮವಾಗಿ ಏಳು ಅಭ್ಯರ್ಥಿಗಳು ಉಳಿದಿದ್ದಾರೆ.

ಪಕ್ಷೇತರವಾಗಿ ನಾಮಪತ್ರ ಸಲ್ಲಿಸಿದ್ದ ಗುರುಲಿಂಗಪ್ಪ ಅಂಗಡಿ ಗುರುವಾರ ನಾಮಪತ್ರ ಹಿಂಪಡೆದಿದ್ದಾರೆ. ವಿಜಯಪುರ ಜಿಪಂ ಸದಸ್ಯೆ ದಾನಮ್ಮ ಅಂಗಡಿ ಅವರ ಪತಿಯಾಗಿರುವ ಗುರುಲಿಂಗಪ್ಪ ಮೂಲತಃ ಬಿಜೆಪಿ ಮುಖಂಡರಾಗಿದ್ದಾರೆ. ನಾಮಪತ್ರ ಹಿಂಪಡೆಯುವ ಅಂತಿಮ ದಿನದಂದು ಮುಖಂಡರ ಒತ್ತಾಯದ ಮೇರೆಗೆ ಕಣದಿಂದ ಹಿಂದೆ ಸರಿದು ಬಿಜೆಪಿ ಅಭ್ಯರ್ಥಿ ಗೂಳಪ್ಪ ಶಟಗಾರ ಅವರಿಗೆ ಬೆಂಬಲ ಸೂಚಿಸಿದ್ದಾರೆ.

ಕಣದಲ್ಲಿರುವ ಅಭ್ಯರ್ಥಿಗಳು

ಗೂಳಪ್ಪ ಶಟಗಾರ (ಬಿಜೆಪಿ), ಸುನೀಲಗೌಡ ಪಾಟೀಲ (ಕಾಂಗ್ರೆಸ್), ಪಕ್ಷೇತರ ಅಭ್ಯರ್ಥಿಗಳಾದ ಕಾಂತಪ್ಪ ಶಂಕ್ರಪ್ಪ ಇಂಚಗೇರಿ (ವಿಜಯಪುರ), ದುರಗಪ್ಪ ಭರಮಪ್ಪ ಸಿದ್ದಾಪುರ (ಬಾಗಲಕೋಟೆ), ಜಮೀನ್ದಾರ್ ಮಾರುತಿ ಹನಮಪ್ಪ (ಬಾಗಲಕೋಟೆ), ಮಲ್ಲಿಕಾರ್ಜುನ ಭೀಮಪ್ಪ ಕೆಂಗನಾಳ (ವಿಜಯಪುರ), ಶರಣಪ್ಪ ವಿಶ್ವಾಸರಾಯ ಕನ್ನೊಳ್ಳಿ (ವಿಜಯಪುರ) ಕಣದಲ್ಲಿದ್ದಾರೆ.

ಕಣದಲ್ಲಿ ಏಳು ಜನರಿದ್ದರೂ ಪ್ರಮುಖವಾಗಿ ಬಿಜೆಪಿ ಮತ್ತು ಕಾಂಗ್ರೆಸ್ ಅಭ್ಯರ್ಥಿಗಳ ಮಧ್ಯೆ ಪ್ರಬಲ ಪೈಪೋಟಿ ಏರ್ಪಟ್ಟಿದೆ. ಮಾಜಿ ಸಚಿವ ಎಂ.ಬಿ. ಪಾಟೀಲರ ಸಹೋದರ ಸುನೀಲಗೌಡ ಪಾಟೀಲ ಕಾಂಗ್ರೆಸ್​ನಿಂದ ಭರ್ಜರಿ ಪ್ರಚಾರ ನಡೆಸಿದ್ದಾರೆ. ಬಿಜೆಪಿ ಅಭ್ಯರ್ಥಿ ಗೂಳಪ್ಪ ಶಟಗಾರ ಅವಳಿ ಜಿಲ್ಲೆ ಬಿಜೆಪಿ ಮುಖಂಡರನ್ನು ವಿಶ್ವಾಸಕ್ಕೆ ತೆಗೆದುಕೊಂಡು ಮತದಾರರ ಮನವೊಲಿಸುವ ಪ್ರಯತ್ನ ನಡೆಸಿದ್ದಾರೆ.