ಅಕ್ರಮ ಚಟುವಟಿಕೆ ಮೇಲೆ ನಿಗಾ ಇರಲಿ

ವಿಜಯಪುರ: ಮುಕ್ತ ಹಾಗೂ ನ್ಯಾಯಸಮ್ಮತ ಚುನಾವಣೆಗಾಗಿ ಈಗಾಗಲೇ ನೀತಿ ಸಂಹಿತೆ ಜಾರಿಯಲ್ಲಿದ್ದು, ಅಕ್ರಮ ಮದ್ಯ ಹಂಚಿಕೆ ಹಾಗೂ ಮತದಾರರಿಗೆ ಆಮಿಷ ನೀಡುವಂತಹ ಚಟುವಟಿಕೆ ಮೇಲೆ ಕಟ್ಟುನಿಟ್ಟಿನ ನಿಗಾ ಇಡುವಂತೆ ಸಾಮಾನ್ಯ ವೀಕ್ಷಕ ಅಶೋಕ ಶಹಾ ಅಧಿಕಾರಿಗಳಿಗೆ ಸೂಚಿಸಿದರು.

ಜಿಲ್ಲಾಡಳಿತ ಕಚೇರಿ ಸಭಾಂಗಣದಲ್ಲಿ ಮಂಗಳವಾರ ನಡೆದ 8 ವಿಧಾನಸಭಾ ಕ್ಷೇತ್ರದ ಸಹಾಯಕ ಚುನಾವಣಾಧಿಕಾರಿ ಹಾಗೂ ತಹಸೀಲ್ದಾರ್‌ಗಳ ಸಭೆಯಲ್ಲಿ ಅವರು ಮಾತನಾಡಿದರು.

ಚುನಾವಣೆ ಮುಕ್ತ ಹಾಗೂ ನ್ಯಾಯಸಮ್ಮತವಾಗಿ ನಡೆಯುವ ಜತೆಗೆ ಶಾಂತಿಯುತವಾಗಿ ನಡೆಯಬೇಕು. ಈಗಾಗಲೇ ನೀತಿ ಸಂಹಿತೆ ಜಾರಿಯಲ್ಲಿದ್ದು, ಸಂಹಿತೆ ಉಲ್ಲಂಘನಾ ನಿಯಂತ್ರಣ ತಂಡಗಳು ಚುರುಕಾಗಿ ಹಾಗೂ ಪರಸ್ಪರ ಸಮನ್ವಯತೆಯಿಂದ ಕಾರ್ಯನಿರ್ವಹಿಸಬೇಕು ಎಂದರು.

ಎರಡು ಕಡೆ ಮತದಾನ ಮಾಡುವಂಥವರ ಪ್ರದೇಶಗಳ ಹಾಗೂ ಜನರ ಮೇಲೆ ನಿಗಾ ಇಡಬೇಕು. ಅಧಿಕಾರಿಗಳ ಪಾಲಿಗೆ ಇದೊಂದು ಮಹತ್ವದ ಕರ್ತವ್ಯ ಆಗಿದ್ದು, ಯಾವುದೇ ಒತ್ತಡಗಳಿಗೆ ಒಳಗಾಗದೆ ಆಯೋಗ ನೀಡಿರುವ ನಿರ್ದೇಶನಗಳನ್ವಯ ಕಾರ್ಯನಿರ್ವಹಿಸಬೇಕು. ಸಮಸ್ಯೆಗಳಿದ್ದಲ್ಲಿ ತಕ್ಷಣ ಜಿಲ್ಲಾ ಚುನಾವಣಾಧಿಕಾರಿ ಗಮನಕ್ಕೆ ತರುವಂತೆ ತಿಳಿಸಿದ ಅವರು, ಅಕ್ರಮಗಳನ್ನು ಕಂಡು ಕಂಡರಿಯದಂತೆ ಇರುವ ಅಧಿಕಾರಿಗಳ ವರ್ತನೆಯನ್ನು ಗಂಭೀರವಾಗಿ ಪರಿಗಣಿಸಲಾಗುವುದೆಂದರು.

ಮತಗಟ್ಟೆ ವ್ಯವಸ್ಥೆ, ಸಿಬ್ಬಂದಿಗೆ ಆರೋಗ್ಯ ಸೇವಾ ಸೌಲಭ್ಯ, ಮುದ್ರಣ ಹಾಗೂ ವಿದ್ಯುನ್ಮಾನ ಮಾಧ್ಯಮಗಳಿಂದ ಪ್ರಕಟವಾಗುವ ಕಾಸಿಗಾಗಿ ಸುದ್ದಿ ಹಾಗೂ ಜಾಹೀರಾತುಗಳ ಬಗ್ಗೆ ಕೈಗೊಳ್ಳಲಾಗುತ್ತಿರುವ ಕ್ರಮ ಸೇರಿದಂತೆ ಇನ್ನಿತರ ಚುನಾವಣಾ ಪ್ರಕ್ರಿಯೆ ಕುರಿತು ಪರಿಶೀಲನೆ ನಡೆಸಿದರು.

ಚುನಾವಣಾ ವೆಚ್ಚ ವೀಕ್ಷಕರಾದ ಸುಹಾಸ ಕುಲಕರ್ಣಿ ಮಾತನಾಡಿ, ಎ್ಎಸ್‌ಟಿ ಹಾಗೂ ಎಸ್‌ಎಸ್‌ಟಿ ತಂಡಗಳು ಸಾರ್ವಜನಿಕರೊಂದಿಗೆ ಉತ್ತಮ ರೀತಿಯಲ್ಲಿ ವ್ಯವಹರಿಸಬೇಕು. ಸಮರ್ಪಕ ದಾಖಲೆಗಳೊಂದಿಗೆ ಅಭ್ಯರ್ಥಿಗಳ ವೆಚ್ಚವನ್ನು ದಾಖಲಿಸಬೇಕು ಎಂದರು.

ಪೊಲೀಸ್ ವೀಕ್ಷಕ ಕೆ. ನಾರಾಯಣ ನಾಯಕ ಮಾತನಾಡಿ, ಚುನಾವಣಾ ಕರ್ತವ್ಯಕ್ಕೆ ನೇಮಿಸಿರುವ ಆಯಾ ತಂಡಗಳು ಸಮನ್ವಯತೆಯಿಂದ ಕಾರ್ಯನಿರ್ವಹಿಸಬೇಕು. ಯಾವುದೇ ಲೋಪಕ್ಕೆ ಅವಕಾಶ ನೀಡಬಾರದು. ವಿಶೇಷವಾಗಿ ಅಂತಾರಾಜ್ಯ ಗಡಿಗೆ ಹೊಂದಿಕೊಂಡಿರುವ ಚೆಕ್‌ಪೋಸ್ಟ್‌ಗಳಲ್ಲಿ ಸಿಬ್ಬಂದಿ ಹಾಜರಾತಿ, ವಿಸಿಟರ್ಸ್‌ ರಜಿಸ್ಟರ್ ಹಾಗೂ ವಾಹನಗಳ ರಜಿಸ್ಟರ್‌ನ್ನು ತಪ್ಪದೇ ನಿರ್ವಹಣೆ ಮಾಡಬೇಕು. ಎಂಸಿಸಿ ನೋಡಲ್ ಅಧಿಕಾರಿಗಳು ಸರಿಯಾಗಿ ವಾಹನಗಳ ತಪಾಸಣೆ ನೋಂದಣಿ ಕಾರ್ಯ ಮಾಡಬೇಕು ಎಂದು ಸೂಚಿಸಿದರು.

ಜಿಲ್ಲಾ ಚುನಾವಣಾಧಿಕಾರಿ ಎಂ.ಕನಗವಲ್ಲಿ ಮಾತನಾಡಿ, ಆಯಾ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ಸಹಾಯಕ ಚುನಾವಣಾಧಿಕಾರಿಗಳು ಜವಾಬ್ದಾರಿಯಿಂದ ಕಾರ್ಯನಿರ್ವಹಿಸಬೇಕು. ವಿವಿಧ ತಂಡಗಳಲ್ಲಿನ ಅಧಿಕಾರಿಗಳು ಇನ್ನಷ್ಟು ಪರಿಣಾಮಕಾರಿಯಾಗಿ ಕಾರ್ಯನಿರ್ವಹಿಸಬೇಕು ಎಂದರು.

ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಪ್ರಕಾಶ ನಿಕ್ಕಂ, ಜಿಪಂ ಸಿಇಒ ವಿಕಾಸ ಕಿಶೋರ ಸುರಳಕರ, ಚುನಾವಣೆ ಹಿನ್ನೆಲೆ ಭದ್ರತೆಗೆ ನಿಯೋಜಿಸಿರುವ ಸಿಬ್ಬಂದಿ ವಿವರ ನೀಡಿದರು. ಅಪರ ಜಿಲ್ಲಾಧಿಕಾರಿ ಎಚ್.ಪ್ರಸನ್ನ, ಹೆಚ್ಚುವರಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ನೇಮಗೌಡ ಸೇರಿ ಇತರರು ಇದ್ದರು.