ಕಾಲುವೆಗೆ ನೀರು ಹರಿಸಲು ಕ್ರಮ

>

ವಿಜಯಪುರ: ಬರದಿಂದ ತತ್ತರಿಸಿರುವ ಗ್ರಾಮಗಳ ಕೆರೆಗಳನ್ನು ತುಂಬಿಸಲು ವಿಜಯಪುರ ಮುಖ್ಯ ಕಾಲುವೆಗೆ ನೀರು ಹರಿಸುವ ನಿಟ್ಟಿನಲ್ಲಿ ಅಗತ್ಯವಿರುವ ಕಾಮಗಾರಿ ಪೂರ್ಣಗೊಳಿಸಲು ಕ್ರಮ ಕೈಗೊಳ್ಳುತ್ತಿರುವುದಾಗಿ ಮಾಜಿ ಸಚಿವ ಹಾಗೂ ಬಬಲೇಶ್ವರ ಶಾಸಕ ಎಂ.ಬಿ. ಪಾಟೀಲ ತಿಳಿಸಿದ್ದಾರೆ.

ಈ ಕುರಿತು ಪತ್ರಿಕಾ ಹೇಳಿಕೆ ನೀಡಿರುವ ಅವರು, ವಿಜಯಪುರ-ತೆಲಗಿ ಮಧ್ಯದ ರೈಲು ಸಂಚಾರವನ್ನು 10ದಿನಗಳವರೆಗೆ ಸ್ಥಗಿತಗೊಳಿಸಿ ಅಹೋರಾತ್ರಿ ಕಾರ್ಯ ಮಾಡಿದರೆ ನೀರು ಹರಿಸಲು ಸಾಧ್ಯ. ಈ ದಿಶೆಯಲ್ಲಿ ಎಲ್ಲ ಪ್ರಯತ್ನಗಳು ನಡೆದಿವೆ ಎಂದಿದ್ದಾರೆ.

ವಿಜಯಪುರ ಮುಖ್ಯ ಕಾಲುವೆಗೆ ನೀರು ಹರಿಸಿದರೆ ಬಸವನ ಬಾಗೇವಾಡಿ, ವಿಜಯಪುರ, ಸಿಂದಗಿ ಮತ್ತು ಮುದ್ದೇಬಿಹಾಳ ತಾಲೂಕಿನ 40 ಕೆರೆಗಳಿಗೆ ನೀರು ಹರಿಸಬಹುದು. ಇದರಿಂದ ಜಿಲ್ಲೆಯ 200 ಗ್ರಾಮಗಳ ಕುಡಿಯುವ ನೀರಿನ ಸಮಸ್ಯೆ ನೀಗಿಸಬಹುದು. ಯುದ್ಧೊಪಾದಿಯಲ್ಲಿ ಈ ಕಾರ್ಯ ನಿರ್ವಹಿಸದೆ ಇದ್ದರೆ ಈ ಕಾರ್ಯ ಪೂರ್ಣಗೊಳ್ಳಲು ಆರು ತಿಂಗಳ ಅವಧಿ ಬೇಕಾಗುತ್ತದೆ. ಆದರೆ ನೀರಿನ ಹಾಹಾಕಾರ ಇರುವ ಈ ಸಂದರ್ಭದಲ್ಲಿ ವಿಜಯಪುರ ಮುಖ್ಯ ಕಾಲುವೆ ಹಾಗೂ ಕಾಲುವೆಯಿಂದ ಕೆರೆಗಳಿಗೆ ಸಂಪರ್ಕಿಸುವ ಜಾಲದ ಕಾಮಗಾರಿ ಬಹುತೇಕ ಪೂರ್ಣಗೊಂಡಿದ್ದು, ಕೂಡಗಿ ಹತ್ತಿರ ಕೇವಲ ರೈಲ್ವೆ ಕ್ರಾಸಿಂಗ್ ಕಾರ್ಯ ತಾಂತ್ರಿಕ ಕಾರಣಗಳಿಂದ ನನೆಗುದಿಗೆ ಬಿದ್ದಿದೆ. ಸಂಪೂರ್ಣ ಕಾಮಗಾರಿ ಪೂರ್ಣಗೊಳಿಸಲು 8-10 ದಿನ ಕೂಡಗಿ ಮಾರ್ಗದಲ್ಲಿ ಸಂಚರಿಸುವ ರೈಲುಗಳನ್ನು ನಿಲ್ಲಿಸುವ ಅಗತ್ಯತೆ ಇದೆ ಎಂದು ಅಭಿಪ್ರಾಯಪಟ್ಟಿದ್ದಾರೆ.

ರೈಲು ಸಂಚಾರ ಸ್ಥಗಿತಗೊಳಿಸುವ ಕುರಿತು ಜಿಲ್ಲೆಯ ಸಂಸದ ಹಾಗೂ ಕೇಂದ್ರ ಸಚಿವ ರಮೇಶ ಜಿಗಜಿಣಗಿ ಅವರೊಂದಿಗೆ ಮಾತನಾಡಿದ್ದು, ಅವರಿಗೆ ಎಲ್ಲ ಮಾಹಿತಿ ಒದಗಿಸಲಾಗಿದೆ. ಅಲ್ಲದೆ, ಜಿಲ್ಲೆಯವರೇ ಆದ ಶಾಸಕ, ಕೇಂದ್ರ ಮಾಜಿ ರೈಲ್ವೆ ಸಚಿವ ಬಸನಗೌಡ ಪಾಟೀಲ ಯತ್ನಾಳ ಅವರೊಂದಿಗೆ ಮಾತನಾಡಿರುವೆ. ಅವರು ತಮ್ಮ ಪ್ರಭಾವ ಬಳಸಿ ಈ ಕಾರ್ಯದಲ್ಲಿ ಯಶಸ್ವಿಯಾಗುತ್ತಾರೆ ಎನ್ನುವ ವಿಶ್ವಾಸವಿದೆ ಎಂದು ತಿಳಿಸಿದ್ದಾರೆ.

ರೈಲು ನಿಲುಗಡೆ ವ್ಯವಸ್ಥೆ ಆಗದೆ ಹೋದರೆ ಪರ್ಯಾಯವಾಗಿ ಪೈಪ್‌ಲೈನ್ ಅಳವಡಿಸಿ ಕಾಲುವೆಗೆ ನೀರು ಹರಿಸಲು ಸಹ ಚಿಂತಿಸಲಾಗುತ್ತಿದೆ. ಇದಕ್ಕೆ ಅಗತ್ಯವಿರುವ ಪೈಪ್‌ಗಳು ಸಹ ತುಬಚಿ-ಬಬಲೇಶ್ವರ, ಪೀರಾಪೂರ-ಬೂದಿಹಾಳ ಯೋಜನೆಯಡಿ ಲಭ್ಯವಿದ್ದು, ಸ್ಥಳೀಯ ಗುತ್ತಿಗೆದಾರರಿಂದ ಅವುಗಳನ್ನು ಪಡೆದು, ಅಲ್ಲಿಂದ ಸ್ಥಳಾಂತರಿಸಿ 8-10 ದಿನಗಳಲ್ಲಿ ಕಾಮಗಾರಿ ಪೂರ್ಣಗೊಳಿಸಿ ನೀರು ಹರಿಸಬಹುದಾಗಿದೆ. ಆದರೆ ಈ ವಿಧಾನದಿಂದ 92.87 ಕ್ಯೂಮೆಕ್ಸ್ ಬದಲಿಗೆ ಕೇವಲ 38.6 ಕ್ಯೂಮೆಕ್ಸ್ ನೀರು ಹರಿಯಲಿದೆ. ಈ ಕುರಿತು ಅಧಿಕಾರಿಗಳೊಂದಿಗೆ ಚರ್ಚಿಸಲಾಗುತ್ತಿದ್ದು, ಶಕ್ತಿ ಮೀರಿ ಪ್ರಯತ್ನಿಸಿ ಜಿಲ್ಲೆಯ ಕೆರೆಗಳಿಗೆ ನೀರು ತುಂಬಿಸಲು ಸಾಧ್ಯವಿರುವ ಕ್ರಮಗಳನ್ನು ಕೈಗೊಳ್ಳಲಾಗುತ್ತಿದೆ ಎಂದು ಶಾಸಕ ಎಂ.ಬಿ.ಪಾಟೀಲ ತಿಳಿಸಿದ್ದಾರೆ.