ಜಿಲ್ಲೆಯಲ್ಲಿ ಮುಷ್ಕರಕ್ಕೆ ಮಿಶ್ರ ಪ್ರತಿಕ್ರಿಯೆ ವ್ಯಕ್ತ

ವಿಜಯಪುರ: ವಿವಿಧ ಬೇಡಿಕೆ ಈಡೇರಿಕೆಗೆ ಆಗ್ರಹಿಸಿ ಕಾರ್ವಿುಕ ಸಂಘಟನೆಗಳು ಮಂಗಳವಾರ ಕರೆ ನೀಡಿದ ದೇಶ ವ್ಯಾಪಿ ಮುಷ್ಕರಕ್ಕೆ ಜಿಲ್ಲಾದ್ಯಂತ ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಗಿದೆ. ಸಾರಿಗೆ ಬಸ್​ಗಳು ರಸ್ತೆಗಿಳಿಯದೆ ಪ್ರಯಾಣಿಕರು, ಶಾಲೆ, ಕಾಲೇಜು ವಿದ್ಯಾರ್ಥಿಗಳು ತೊಂದರೆ ಅನುಭವಿಸಿದರು.

ಬಸ್ ನಿಲ್ದಾಣಗಳಲ್ಲಿ ಬಿಕೋ: ಬಸ್ ಸಂಚಾರ ಸ್ಥಗಿತಗೊಂಡು ಜಿಲ್ಲೆಯ ಎಲ್ಲ ತಾಲೂಕು ಕೇಂದ್ರಗಳು ಜನರಿಲ್ಲದೆ ಬಿಕೋ ಎನ್ನುತ್ತಿದ್ದವು. ವಿಜಯಪುರ ಕೇಂದ್ರ ಬಸ್ ನಿಲ್ದಾಣ ನಾಯಿಗಳ ಆಶ್ರಯ ತಾಣವಾಗಿತ್ತು.

ವಿದ್ಯಾರ್ಥಿಗಳ ಪರದಾಟ: ಶಾಲೆ ಕಾಲೇಜುಗಳಿಗೆ ಜಿಲ್ಲಾಡಳಿತ ರಜೆ ಘೋಷಣೆ ಮಾಡದ ಹಿನ್ನೆಲೆ ವಿದ್ಯಾರ್ಥಿಗಳು ಮಂಗಳವಾರ ಶಾಲೆ, ಕಾಲೇಜುಗಳಿಗೆ ಹೋಗಲು ಪರದಾಡುವಂತಾಯಿತು. ಮುದ್ದೇಬಿಹಾಳ ಇನ್ನಿತರ ತಾಲೂಕು ಕೇಂದ್ರಗಳಿಂದ ವಿಜಯಪುರಕ್ಕೆ ವ್ಯಾಸಂಗ ಮಾಡಲು ಆಗಮಿಸುವ ವಿದ್ಯಾರ್ಥಿಗಳು ಸಾರಿಗೆ ಬಸ್ ಇಲ್ಲದೆ ತೊಂದರೆ ಅನುಭವಿಸಿದರು. ಖಾಸಗಿ ವಾಹನಗಳ ಮಾಲೀಕರು ಪ್ರಯಾಣ ದರ ಹೆಚ್ಚಿಸಿದ್ದು ಕಂಡು ಬಂತು.

ಮುಷ್ಕರಕ್ಕೆ ವಿವಿಧ ಸಂಘಟನೆಗಳ ಬೆಂಬಲ: ದೇಶ ವ್ಯಾಪಿ ಮುಷ್ಕರಕ್ಕೆ ಐಎನ್​ಟಿಯುಸಿ, ಎಐಟಿಯುಸಿ, ಸಿಐಟಿಯು ಸೇರಿ ದೇಶದ ಪ್ರಮುಖ 10 ಕಾರ್ವಿುಕ ಸಂಘಟನೆಗಳ ಜಂಟಿ ಸಮಿತಿ, ಸಾರಿಗೆ ಕಾರ್ವಿುಕ ಸಂಘಟನೆಗಳ ಜತೆಗೆ ಬ್ಯಾಂಕ್ ನೌಕರರ ಸಂಘಟನೆ, ಸರ್ಕಾರಿ ನೌಕರರ ಸಂಘಟನೆ, ಬಿಎಸ್​ಎನ್​ಎಲ್, ಅಂಚೆ ಕಚೇರಿ ನೌಕರರು ಸೇರಿ ಹಲವು ಸಂಯೋಜಿತ ಸಂಘಟನೆಗಳು ವಿಜಯಪುರದ ಗಾಂಧಿಚೌಕ್​ನಿಂದ ಅಂಬೇಡ್ಕರ್ ವೃತ್ತದವರೆಗೆ ಪ್ರತಿಭಟನೆ, ಬೈಕ್ ರ‍್ಯಾಲಿ ನಡೆಸಿ ಬೆಂಬಲ ಸೂಚಿಸಿದವು.

ಕೇಂದ್ರ ಸರ್ಕಾರದ ವಿರುದ್ಧ ಆಕ್ರೋಶ: ಬೆಲೆ ಏರಿಕೆ ತಡೆ ಹಾಗೂ ಉದ್ಯೋಗ ಸೃಷ್ಟಿ, ರೈತರ ಬೆಳೆಗಳಿಗೆ ಕನಿಷ್ಠ ಬೆಂಬಲ ಬೆಲೆ, ಡಾ. ಸ್ವಾಮಿನಾಥನ್ ಆಯೋಗದ ವರದಿ ಜಾರಿ, ಮೋಟಾರು ವಾಹನ (ತಿದ್ದುಪಡಿ) ಮಸೂದೆ-2017 ಹಿಂಪಡೆಯಬೇಕು, ಗುತ್ತಿಗೆ ಕಾರ್ವಿುಕ ಪದ್ಧತಿ ನಿಷೇಧ, ಸಮಾನ ಕೆಲಸಕ್ಕೆ ಸಮಾನ ವೇತನ, ಅಂಗನವಾಡಿ, ಬಿಸಿಯೂಟ, ಆಶಾ ಮತ್ತಿತರ ಸ್ಕೀಂ ನೌಕರರನ್ನು ಕಾಯಂಗೊಳಿಸುವುದು ಸೇರಿ ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಕಾರ್ವಿುಕ ಸಂಘಟನೆಗಳು ಕೇಂದ್ರ ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದವು.