ತಾಲೂಕು, ಜಿಲ್ಲೆಯ ಎಲ್ಲ ಕೆರೆಗಳನ್ನು ತುಂಬಿಸಿ

ಆಲಮಟ್ಟಿ: ಬಸವನಬಾಗೇವಾಡಿ ತಾಲೂಕಿನ ಹಾಗೂ ಜಿಲ್ಲೆಯ ಎಲ್ಲ ಕೆರೆಗಳನ್ನು ತುಂಬಿಸುವಂತೆ ಆಗ್ರಹಿಸಿ ರಾಜ್ಯರೈತ ಸಂಘ ಹಾಗೂ ಹಸಿರು ಸೇನೆ ಜಿಲ್ಲಾ ಘಟಕದಿಂದ ಕೃಷ್ಣಾ ಭಾಗ್ಯ ಜಲನಿಗಮದ ಮುಖ್ಯ ಅಭಿಯಂತರಗೆ ಮನವಿ ಸಲ್ಲಿಸಿದರು.
ಪಟ್ಟಣದ ಶ್ರೀರಾಮಲಿಂಗೇಶ್ವರ ದೇವಸ್ಥಾನದಲ್ಲಿ ಬುಧವಾರ ಬೆಳಗ್ಗೆ ಸಂಘದ ಪದಾಧಿಕಾರಿಗಳು ಸೇರಿ ರೈತರು ಪಾದಯಾತ್ರೆಯಲ್ಲಿ ಕೆಬಿಜೆಎನ್‌ಎಲ್ ಮುಖ್ಯ ಅಭಿಯಂತರ ಕಚೇರಿಗೆ ತೆರಳಿ ಮನವಿ ಪತ್ರ ನೀಡಿದರು.
ಜಿಲ್ಲಾ ಸಂಚಾಲಕ ನಿಂಗರಾಜ ಆಲೂರ ಮಾತನಾಡಿ, ಜಿಲ್ಲೆಯ ಆಲಮಟ್ಟಿಯಲ್ಲಿ ಲಾಲಬಹದ್ದೂರ್ ಶಾಸಿ ಜಲಾಶಯ ನಿರ್ಮಿಸಿದ್ದರೂ ನಮ್ಮ ಕೆರೆಗಳಿಗೆ ನೀರು ತುಂಬಿಸುತ್ತಿಲ್ಲ. ಇದರಿಂದ ಜನ- ಜಾನುವಾರುಗಳಿಗೆ ತೀವ್ರ ತೊಂದರೆಯಾಗಿದೆ. ಮುಳವಾಡ ಏತ ನೀರಾವರಿ ಯೋಜನೆ ಹಂತ-3ರಲ್ಲಿ ಬರುವ ಕಾಲುವೆಯು ಕೂಡಗಿ ಬಳಿ ರೈಲ್ವೆ ಕ್ರಾಸಿಂಗ್ ಕಾಮಗಾರಿ ವಿಳಂಬ ಮಾಡಲಾಯಿತು. ವಿವಿಧ ಸಂಘಟನೆಗಳು ಪ್ರತಿಭಟಿಸಿದ್ದಕ್ಕೆ ಕಾಮಗಾರಿಗೆ ವೇಗ ಕಲ್ಪಿಸಿ ತಾತ್ಕಾಲಿಕವಾಗಿ ನೀರು ಹರಿಸಿರುವುದು ಶ್ಲಾಘನೀಯವಾಗಿದ್ದರೂ ಬಸವನಬಾಗೇವಾಡಿ ತಾಲೂಕಿನ ಕೆರೆಗಳಿಗೆ ನೀರಿಲ್ಲ. ನೀರಾವರಿ ನಿಯಮ ಏನೇ ಇರಲಿ, ಮೊದಲು ಜಿಲ್ಲೆಯ ಎಲ್ಲ ಕೆರೆಗಳಿಗೆ ಅಲ್ಪ ಪ್ರಮಾಣದಲ್ಲಿ ನೀರು ಹರಿಸಿ ನಂತರ ನಿಯಮದಂತೆ ಕಾಲುವೆಯ ಕೊನೆಯಂಚಿನಿಂದ ತುದಿಯವರೆಗೂ ಬರುವ ಎಲ್ಲ ಕೆರೆಗಳನ್ನು ಸಂಪೂರ್ಣವಾಗಿ ತುಂಬಿಸಬೇಕೆಂದು ಆಗ್ರಹಿಸಿದರು.
ರೈತ ಸಂಘಟನೆಯ ವಿವಿಧ ಮುಖಂಡರು ಹಾಗೂ ಮಹಿಳಾ ಸಂಘಟನೆಯ ಲಕ್ಷ್ಮಿಬಾಯಿ ಪಾಟೀಲ ಮಾತನಾಡಿದರು.
ಮುಖ್ಯ ಅಭಿಯಂತರ ಪರ ಮನವಿ ಸ್ವೀಕರಿಸಿ ಮಾತನಾಡಿದ ಮಂಜುನಾಥ, ಕೆರೆಗಳಿಗೆ ನೀರು ತುಂಬಿಸುವ ಕುರಿತು ಬೆಳಗಾವಿಯಲ್ಲಿ ವಿಭಾಗೀಯ ಆಯುಕ್ತರು ಸಭೆ ಕರೆದಿರುವುದರಿಂದ ಎಲ್ಲ ಅಧಿಕಾರಿಗಳು ಸಭೆಗೆ ಹಾಜರಾಗಿದ್ದು, ಸಭೆಯಲ್ಲಿ ತೀರ್ಮಾನಿಸಿದಂತೆ ಕ್ರಮ ಕೈಗೊಳ್ಳಲಾಗುವುದು ಎಂದರು.
ತಿರುಪತಿ ಬಂಡಿವಡ್ಡರ, ವೆಂಕಟೇಶ ಬಂಡಿವಡ್ಡರ, ಶಿವಪ್ಪ ಇಂಗಳೇಶ್ವರ, ಶಿವಪ್ಪ ಪಾಟೀಲ, ಬಾಪುಗೌಡ ಬಿರಾದಾರ, ಸಿದ್ರಾಯ ಜಂಗಮಶೆಟ್ಟಿ, ಕಾಶಿನಾಥ ಡೆಂಗಿ, ಶಿವಪ್ಪ ಕಾರಜೋಳ, ಲಕ್ಕಪ್ಪ ಲೋಕುರಿ, ಪ್ರಿಯಾಂಕಾ ಆಲೂರ, ಜಯಾ ಪೂಜಾರಿ, ಸರಸ್ವತಿ ವಸದ ಸೇರಿ ನೂರಾರು ರೈತರು ಇದ್ದರು.
ಆಲಮಟ್ಟಿ ಠಾಣೆ ಪಿಎಸ್‌ಐ ಸಿ.ಬಿ. ಕಿರಶ್ಯಾಳ ಬಿಗಿ ಬಂದೋಬಸ್ತ್ ಏರ್ಪಡಿಸಿದ್ದರು.

Leave a Reply

Your email address will not be published. Required fields are marked *