ವಿಜಯಪುರದಲ್ಲಿ ಮಹಾ ಸತ್ಸಂಗ ಸಂಭ್ರಮ ಆಚರಣೆ

ವಿಜಯಪುರ: ಕನ್ನೂರದ ಶ್ರೀ ಸದ್ಗುರು ಸಮರ್ಥ ಗಣಪತರಾವ ಮಹಾರಾಜರ 111ನೇ ಜನ್ಮೋತ್ಸವ ಅಂಗವಾಗಿ ನಗರ ಸಂಕೀರ್ತನೆ ಹಾಗೂ ಶ್ರೀ ಸದ್ಗುರು ಸಮರ್ಥ ಗಣಪತರಾವ ಮಹಾರಾಜರ ಪಲ್ಲಕ್ಕಿ ಮೆರವಣಿಗೆ ನಗರದ ಜ್ಞಾನಯೋಗಾಶ್ರಮದಿಂದ ಭಾನುವಾರ ಬೆಳಗ್ಗೆ 8 ಗಂಟೆಗೆ ಪ್ರಾರಂಭವಾಗಿ ವಿವಿಧ ಕಾಲನಿಗಳಲ್ಲಿ ಸಂಚರಿಸಿತು.
ಗುರುಬಂಧು- ಭಗಿನಿಯರು ನಾಮಸ್ಮರಣೆ ಮಾಡುತ್ತ ಪಾಲ್ಗೊಂಡ
ಮೆರವಣಿಗೆ ಪ್ರಮುಖ ಬೀದಿಗಳ ಮೂಲಕ ಲಿಂಗಾಯತ ಸಾಂಸ್ಕೃತಿಕ ಸಮುದಾಯ ಭವನ
ತಲುಪಿತು. ಭವನದ ಎದುರು ಗುರುವಿನ ಹಾಡುಗಳನ್ನು ಹಾಡುತ್ತ ಸುಮಂಗಲೆಯರು ಕೋಲಾಟ ನೃತ್ಯ ಪ್ರದರ್ಶಿಸಿದರು. ಲಿಂಗಾಯತ ಸಾಂಸ್ಕೃತಿಕ ಸಮುದಾಯ ಭವನದಲ್ಲಿ ಭಾನುವಾರ ಬೆಳಗ್ಗೆ 10 ಗಂಟೆಗೆ ಭಕ್ತಿ ಸಂಗೀತದೊಂದಿಗೆ ಮಹಾ ಸತ್ಸಂಗ ಕಾರ್ಯಕ್ರಮ ಆರಂಭವಾಯಿತು. ವಿಜಯಪುರದ ಅನಂತರಾವ್ ಕುಲಕರ್ಣಿ ದಂಪತಿ ಹಾಗೂ ಜಾಜು, ಕುಲಕರ್ಣಿ, ಜುಮ್ಮಣ್ಣವರ, ಪತ್ತಾರ ಕುಟುಂಬಸ್ಥರು ಶ್ರೀ ಸ.ಸ ಗಣಪತರಾವ ಮಹಾರಾಜರ ಪಾದುಕೆ ಪೂಜೆ ನೆರವೇರಿಸಿದರು.

ನಂತರ ಸುಲಭ ಆತ್ಮಜ್ಞಾನ ಗ್ರಂಥವಾಚನ ನಡೆಯಿತು. ವಿಜಯಪುರ-ಹುಬ್ಬಳ್ಳಿಯ ಷಣ್ಮುಖಾರೂಢ ಮಠದ ಅಭಿನವ ಸಿದ್ಧಾರೂಢ ಶ್ರೀಗಳು ಮಾತನಾಡಿ, ಜಗತ್ತು ಕಂಡ ದಾರ್ಶನಿಕರಲ್ಲಿ ಶ್ರೀ ಸ.ಸ. ಗಣಪತರಾವ ಮಹಾರಾಜರು ಒಬ್ಬರಾಗಿದ್ದಾರೆ. ಅವರ ಸರಳ ಆಧ್ಯಾತ್ಮಿಕ ಪ್ರವಚನದಲ್ಲಿ ಮುಮುಕ್ಷುಗಳನ್ನು ಸಾಧಕರನ್ನಾಗಿ, ಸಾಧಕರನ್ನು ಸಿದ್ಧರನ್ನಾಗಿಸುವ ಶಕ್ತಿಯಿತ್ತು. ಅವರು ರಚಿಸಿದ ಸುಲಭ ಆತ್ಮಜ್ಞಾನ ಗ್ರಂಥ ಉಪನಿಷತ್ತುಗಳ ಸರಿಸಮನಾಗಿದೆ. ಪ್ರತಿಯೊಬ್ಬ ಅಧ್ಯಾತ್ಮ ಆಸಕ್ತರು ಈ ಗ್ರಂಥವನ್ನು ಅಧ್ಯಯನ ಮಾಡಬೇಕಾಗಿದೆ ಎಂದು ತಿಳಿಸಿದರು.

ನಂತರ ಮಧ್ಯಾಹ್ನದ ಭಜನೆ, ನಾಮಸ್ಮರಣೆ, ಗುರುವಂದನೆ, ಮಂತ್ರಪಠಣ, ಭಾರುಡ, ನೃತ್ಯ, ಧಾರ್ಮಿಕ ಹಾಡುಗಳೊಂದಿಗೆ ಕಾರ್ಯಕ್ರಮ ಸಂಪನ್ನವಾಯಿತು. ಭಂಡಾರಕವಠೆಯ ಕಲ್ಲಪ್ಪ ಮಹಾರಾಜರು, ಸುರೇಶ ಕನ್ನೂರ, ಅನಂತರಾವ್ ಕುಲಕರ್ಣಿ, ಕೆ.ವಿ. ತಿಕೋಟಿ, ಮಹೇಶ ಜೋಷಿ, ಸತೀಶ ಕನ್ನೂರ, ರಮೇಶ ಕನ್ನೂರ, ಗೋವಿಂದ ಬಾಹೇತಿ, ಗೋಕುಲ ಬಾಹೇತಿ, ಎಸ್. ಕೆ. ಕುಲಕರ್ಣಿ, ಎಸ್. ಎಂ. ಗೊಂಗಾಣ್ಣಿ, ಸಂಜಯ ತಿಕೋಟಿ, ಶಿರೀಶ್‌ದೇಶಪಾಂಡೆ, ಕೃಷ್ಣಾಜಿ ಕುಲಕರ್ಣಿ, ಸತೀಶ ತಿಕೋಟಿ, ಶೇಖರ್ ಕುಲಕರ್ಣಿ, ರಮೇಶ ನಾವಿ, ನಿಂಗಣ್ಣ ಬೈಚಬಾಳ, ಪ್ರಕಾಶ ಪತ್ತಾರ ಹಾಗೂ ಗುರುಬಂಧು- ಭಗಿನಿಯರು ಉಪಸ್ಥಿತರಿದ್ದರು.

Leave a Reply

Your email address will not be published. Required fields are marked *