ಶಿಕ್ಷಕರಿಂದ ಶಿಕ್ಷಣ ಕ್ಷೇತ್ರದಲ್ಲಿ ಬದಲಾವಣೆ ಸಾಧ್ಯ

ವಿಜಯಪುರ: ಶಿಕ್ಷಣ ಕ್ಷೇತ್ರದಲ್ಲಿ ಬದಲಾವಣೆಯ ಸಾಧ್ಯತೆಗಳಿದ್ದರೆ ಅದು ವಿಷಯ ಶಿಕ್ಷಕರ ಸಮೂಹದಿಂದ ಮಾತ್ರ ಸಾಧ್ಯ. ಸಂಪನ್ಮೂಲ ಶಿಕ್ಷಕರನ್ನು ಗುರುತಿಸಿ ಅವರನ್ನು ಗೌರವಿಸುವ ವಾತಾವರಣ ಬೆಳೆಯಬೇಕಿದೆ ಎಂದು ವಿಧಾನಪರಿಷತ್ ಸದಸ್ಯ ಅರುಣ ಶಹಾಪುರ ಹೇಳಿದರು.
ನಗರದ ಕಂದಗಲ್ ಹನುಮಂತರಾಯ ರಂಗಮಂದಿರದಲ್ಲಿ ಸಾರ್ವಜನಿಕ ಶಿಕ್ಷಣ ಇಲಾಖೆ ವತಿಯಿಂದ ಬುಧವಾರ ಹಮ್ಮಿಕೊಂಡಿದ್ದ ಜಿಲ್ಲಾಮಟ್ಟದ ಕನ್ನಡ ಭಾಷೆ ಬೋಧಕರ ಕಾರ್ಯಾಗಾರ ಮತ್ತು ಶಿಕ್ಷಕರಿಗೆ ಸನ್ಮಾನ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.
ಕನ್ನಡ ನೆಲದಲ್ಲಿ ಕನ್ನಡವನ್ನು ಕಲಿಸಬೇಕು ಎಂಬ ಕಡ್ಡಾಯ ನೀಡಿ ಮಾಡುವ ಅವಶ್ಯಕತೆ ಇದೆ. ಶುದ್ಧ ಕನ್ನಡ ಮಾತನಾಡುವವರನ್ನು ಹುಡುಕಬೇಕಾಗಿದೆ. ಶುದ್ಧ ಕನ್ನಡ ಉಳಿಯಲು ಕನ್ನಡ ಸಂಭಾಷಣೆ ಮಾಡುವ ಶಿಬಿರಗಳನ್ನು ಆಯೋಜಿಸಬೇಕು ಎಂದು ಅವರು ಸಲಹೆ ನೀಡಿದರು.
ಕನ್ನಡ ಭಾಷೆಯ ಅಭಿವೃದ್ಧಿಗೆ ಶಿಕ್ಷಣ ಸಂಸ್ಥೆ ನಡೆಸುವವರು ಕನ್ನಡವನ್ನು ಕಟ್ಟಿಕೊಂಡು ಸಂಸ್ಥೆ ನಡೆಸಬೇಕು. ಶೈಕ್ಷಣಿಕ ಅಭಿವೃದ್ಧಿ ಕೆಲಸ ರಾಜ್ಯದಲ್ಲಿ ಆಗಬೇಕಿದೆ. ಅಂತಹ ನಿರ್ಧಾರಕ್ಕೆ ಶಿಕ್ಷಣ ಸಚಿವರು ಹಾಗೂ ಸರ್ಕಾರಗಳು ಕ್ರಮ ಕೈಗೊಳ್ಳಬೇಕು ಎಂದರು.
ಧಾರವಾಡದ ಉಪನ್ಯಾಸಕ ಸುರೇಶ ಕುಲಕರ್ಣಿ ಮಾತನಾಡಿ, ಉತ್ತಮ ಶಿಕ್ಷಕರಾಗಲು ನಾವು ಮಕ್ಕಳ ಮಟ್ಟಕ್ಕೆ ಇಳಿಯಬೇಕು. ಅವರ ಆಸಕ್ತಿ ಕೆರಳಿಸುವ ಬೋಧನಾ ಶೈಲಿ, ವೈವಿಧ್ಯಮಯ ಪಾಠೋಪಕರಣಗಳು ನಮಗಿರಬೇಕು. ಎಲ್ಲ ಬಗೆಯ ಕೌಶಲ ಕರಗತವಾಗಬೇಕು. ಶಿಕ್ಷಕರು ಎಲ್ಲ ವಿಷಯ ವಿಜ್ಞಾನವನ್ನು ಮೈಗೂಡಿಸಿಕೊಳ್ಳಬೇಕು ಆಗಲೇ ಉತ್ತಮ ಶಿಕ್ಷಕರಾಗಲು ಸಾಧ್ಯ ಎಂದು ಹೇಳಿದರು.
ನೂತನ ಚಾಣಕ್ಯ ಕರಿಯರ್ ಅಕಾಡೆಮಿ ನಿರ್ದೇಶಕ ಬಿ.ಡಿ.ಪಾಟೀಲ ಅವರು ಮಾತನಾಡಿದರು. ಸಾರ್ವಜನಿಕ ಶಿಕ್ಷಣ ಇಲಾಖೆ ಉಪ ನಿರ್ದೇಶಕ ಸಿ.ಪ್ರಸನ್ನಕುಮಾರ ಅಧ್ಯಕ್ಷತೆವಹಿಸಿದ್ದರು. ಜಿಲ್ಲಾ ಶಿಕ್ಷಣ ಮತ್ತು ತರಬೇತಿ ಸಂಸ್ಥೆ ಉಪ ನಿರ್ದೇಶಕಿ ಸಾಯಿರಾಬಾನು ಖಾನ್, ಕ್ಷೇತ್ರ ಶಿಕ್ಷಣಾಧಿಕಾರಿ ಶರೀ ನದ್ಾ, ಎಚ್.ಎಸ್.ನಗನೂರ, ಜಿಲ್ಲಾ ಕನ್ನಡ ಭಾಷಾ ಶಿಕ್ಷಕರ ಸಮೂಹದ ಅಧ್ಯಕ್ಷ ಎಚ್.ಆರ್.ಭಾಲಿ, ಇತರರು ಉಪಸ್ಥಿತರಿದ್ದರು.

Leave a Reply

Your email address will not be published. Required fields are marked *