More

  ಆಧುನಿಕತೆಯಿಂದ ನಾಟಕಗಳು ಅಸ್ತಿತ್ವ ಉಳಿಸಿಕೊಂಡಿವೆ

  ವಿಜಯಪುರ: ನಾಟಕಗಳು ನೈಜ ಜೀವನದ ಪ್ರತಿಬಿಂಬಗಳು. ಅವು ಗ್ರಾಮೀಣರ ಜೀವನದಲ್ಲಿ ಮಹತ್ವದ ಪಾತ್ರ ವಹಿಸಿದೆ. ಆಧುನಿಕತೆ ಭರಾಟೆಯಲ್ಲೂ ನಾಟಕಗಳು ಅಸ್ತಿತ್ವ ಉಳಿಸಿಕೊಂಡಿವೆ ಎಂದು ಮಾಜಿ ಸಚಿವ ಅಪ್ಪಾಸಾಹೇಬ ಪಟ್ಟಣಶೆಟ್ಟಿ ಹೇಳಿದರು.
  ನಗರದ ಕಂದಗಲ್ ಹನಮಂತರಾಯ ರಂಗಮಂದಿರದಲ್ಲಿ ನಟಕೇಸರಿ ಹಂದಿಗನೂರ ಸಿದ್ರಾಮಪ್ಪ ನೆನಪಿಗಾಗಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಹಾಗೂ ರಂಗಸೇವಾ ಕಲಾ ಸಂಘದ ಸಹಯೋಗದಲ್ಲಿ ಗುರುವಾರ ಹಮ್ಮಿಕೊಂಡಿದ್ದ ಪೌರಾಣಿಕ ನಾಟಕೋತ್ಸವದ ಕೊನೆದಿನದ ರಕ್ತರಾತ್ರಿ ನಾಟಕ ಪ್ರದರ್ಶನಕ್ಕೆ ಚಾಲನೆ ನೀಡಿ ಹಾಗೂ ಸಮಾರೋಪ ಸಮಾರಂಭದಲ್ಲಿ ಅವರು ಮಾತನಾಡಿದರು.
  ಹಿಂದಿನ ಕಾಲದಲ್ಲಿ ನಾಟಕಗಳೇ ಮನರಂಜನೆ ಕೇಂದ್ರಗಳಾಗಿದ್ದವು. ನಾವು ಚಿಕ್ಕವರಿದ್ದಾಗ ವಿವಿಧ ಗ್ರಾಮಗಳಲ್ಲಿ ನಡೆಯುವ ನಾಟಕಗಳಿಗೆ ಬಂಡಿ ಹಾಗೂ ಸೈಕಲ್‌ಗಳ ಮೂಲಕ ನಾಟಕ ನೋಡಲು ಹೋಗುತ್ತಿದ್ದೇವು. ನಾಟಕಗಳ ಬಗ್ಗೆ ತಿಂಗಳುಗಟ್ಟಲೆ ಚರ್ಚೆ ಮಾಡಿದ್ದು ಉಂಟು ಎಂದರು.
  ಪೌರಾಣಿಕ ನಾಟಕಗಳ ಉತ್ಸವದ ಸರ್ವಾಧ್ಯಕ್ಷ, ಮಾನವ ಹಕ್ಕುಗಳ ಕಲ್ಯಾಣ ಮಂಡಳಿ ಅಧ್ಯಕ್ಷ ಹಾಸಿಂಪೀರ್ ವಾಲಿಕಾರ್ ಸಮಾರೋಪ ಸಮಾರಂಭವನ್ನುದ್ದೇಶಿಸಿ ಮಾತನಾಡಿ, ಶತ-ಶತಮಾನಗಳಿಂದ ನಾಟಕಗಳು ಗ್ರಾಮೀಣರಿಗೆ ಮನರಂಜನೆ ನೀಡುತ್ತ ಬಂದಿವೆ. ಗ್ರಾಮೀಣರು ನಾಟಕದ ಪಾವಿತ್ರೃತೆ ಉಳಿಸಿಕೊಂಡು ಬಂದಿದ್ದಾರೆ. ರಂಗಭೂಮಿ ಕಲಾವಿದರು ಇನ್ನೂ ಉತ್ಕೃಷ್ಟ ಮಟ್ಟದ ಕಲೆ ಪ್ರದರ್ಶನ ಮಾಡಬೇಕಾಗಿದೆ. ಪ್ರೇಕ್ಷಕರು ಗುಣಮಟ್ಟದ ನಾಟಕವನ್ನು ಬಯಸುತ್ತಿದ್ದಾರೆ. ಹಿಂದೆ ಪಠ್ಯಕ್ರಮದಲ್ಲಿ ದ್ವಿತೀಯ ಕನ್ನಡವೆಂಬ ಪಠ್ಯಕ್ರಮವಿತ್ತು. ಅದರಲ್ಲಿ ನಾಟಕಗಳನ್ನು ಪ್ರಾಮುಖ್ಯತೆಯಾಗಿ ಇಟ್ಟುಕೊಂಡು ವಿದ್ಯಾರ್ಥಿಗಳಿಗೆ ಪೌರಾಣಿಕ ಕಥೆಗಳ ಪರಿಚಯ ಮಾಡಿದ್ದರು. ಇಂದು ಪಠ್ಯಕ್ರಮದಲ್ಲಿ ಇಲ್ಲದೆ ಇರುವುದು ನೋವಿನ ಸಂಗತಿ ಎಂದರು.
  ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಾಯಕ ನಿರ್ದೇಶಕ ಮಹೇಶ ಪೋತದಾರ ಕನ್ನಡದ ಹಾಡುಗಳನ್ನು ಹಾಡಿ ಪ್ರೇಕ್ಷಕರನ್ನು ರಂಜಿಸಿದರು. ಶ್ರೀಧರ ಹೆಗಡೆ, ರಾಜಣ್ಣ ಜೇವರಗಿ ಮಾತನಾಡಿದರು.
  ಪ್ರಕಾಶ ಕಡಪಟ್ಟಿ, ಬಿ.ಎಂ. ರಾಮಚಂದ್ರ, ಅಯ್ಯಣ್ಣಸ್ವಾಮಿ ಬಿಳ್ವಾರ, ನಾಮದೇವ ನೂಲಿ, ಬಸವರಾಜ ಪಂಚಗಲ, ಸಿದ್ದು ನಾಲತವಾಡ, ಸಿದ್ದಣ್ಣ ವಡಗೇರಿ ಅವರಿಗೆ ರಂಗಗೌರವ ಸಲ್ಲಿಸಲಾಯಿತು.
  ರಂಗನಾಥ ಕುಲಕರ್ಣಿ, ಅಲ್ಲಮಪ್ರಭು ಮಲ್ಲಿಕಾರ್ಜುನಮಠ, ಶರಣು ಸಬರದ, ಡಾ.ಮಲ್ಲಿಕಾರ್ಜುನ ಮೇತ್ರಿ, ಡಿ.ಎಚ್. ಕೋಲಾರ, ಡಾ. ಎ.ಎಲ್. ನಾಗೂರ, ಪಾಪುಸಿಂಗ್ ರಜಪೂತ, ಜಯಸಿಂಗ ಹಲವಾಯಿ, ಸುರೇಖಾ ತಾಳಿಕೋಟಿ, ರಾಜಮ್ಮ ಹೆಗಡೆ ಮತ್ತಿತರರು ಉಪಸ್ಥಿತರಿದ್ದರು.
  ಪ್ರೊ.ಶರಣಗೌಡ ಪಾಟೀಲ ಪ್ರಾಸ್ತಾವಿಕವಾಗಿ ಮಾತನಾಡಿದರು. ಕರ್ನಾಟಕ ನಾಟಕ ಅಕಾಡಮಿ ಮಾಜಿ ಅಧ್ಯಕ್ಷ ಎಲ್.ಬಿ. ಶೇಖ ಮಾಸ್ತರ್ ಸ್ವಾಗತಿಸಿ, ಪರಿಚಯಿಸಿದರು.

  ಸಿನಿಮಾ

  ಲೈಫ್‌ಸ್ಟೈಲ್

  ಟೆಕ್ನಾಲಜಿ

  Latest Posts