ವಿಜ್ಞಾನಿ ಕಸ್ತೂರಿ ರಂಗನ್‌ಗೆ ಭಾಸ್ಕರಾಚಾರ್ಯ ಪ್ರಶಸ್ತಿ

ವಿಜಯಪುರ: ಇಸ್ರೋದ ಈ ಹಿಂದಿನ ನಿರ್ದೇಶಕ ಖ್ಯಾತ ವಿಜ್ಞಾನಿ ಕಸ್ತೂರಿ ರಂಗನ್ ಅವರಿಗೆ ಚನ್ನವೀರ ಸ್ವಾಮೀಜಿ ಪ್ರತಿಷ್ಟಾನದಿಂದ ಪ್ರಸಕ್ತ ಸಾಲಿನ ಭಾಸ್ಕರಾಚಾರ್ಯ ಪ್ರಶಸ್ತಿ ನೀಡಲಾಗುತ್ತಿದೆ ಎಂದು ಸಿಂದಗಿ ಸಾರಂಗಮಠದ ಪ್ರಭು ಸಾರಂಗದೇವ ಶಿವಾಚಾರ್ಯರು ತಿಳಿಸಿದರು.

ಸೆ. 25 ಕ್ಕೆ ಸಿಂದಗಿಯಲ್ಲಿ ನಡೆಯಲಿರುವ ಪದ್ಮರಾಜ ಶಿಕ್ಷಣ ಸಂಸ್ಥೆ ಸುವರ್ಣ ಮಹೋತ್ಸವ ಹಾಗೂ ಭಾಸ್ಕರಾಚಾರ್ಯರ ಜಯಂತಿ ನಿಮಿತ್ತ ಈ ಪ್ರಶಸ್ತಿ ನೀಡಲಾಗುತ್ತಿದೆ. ಸತತ ಮೂರು ವರ್ಷಗಳಿಂದ ಈ ಪ್ರಶಸ್ತಿ ನೀಡಲಾಗುತ್ತಿದ್ದು ಈ ಬಾರಿ ಖ್ಯಾತ ವಿಜ್ಞಾನಿ ಕಸ್ತೂರಿ ರಂಗನ್ ಅವರಿಗೆ ಪ್ರಶಸ್ತಿ ನೀಡಿ ಗೌರವಿಸಲಾಗುತ್ತಿದೆ ಎಂದು ಶನಿವಾರ ಪ್ರವಾಸಿ ಮಂದಿರದಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಅವರು ತಿಳಿಸಿದರು.

ಮೊದಲ ಮೂರು ವರ್ಷಗಳಲ್ಲಿ ಅನುಕ್ರಮವಾಗಿ ಸಿ.ಎನ್.ಆರ್. ರಾವ್, ಯು.ಆರ್. ರಾವ್ ಹಾಗೂ ಕೃಷಿ ವಿಜ್ಞಾನ ಕ್ಷೇತ್ರದಲ್ಲಿ ಎಸ್.ಎ. ಪಾಟೀಲ ಅವರಿಗೆ ಪ್ರಶಸ್ತಿ ನೀಡಲಾಗಿದೆ. ನಾಲ್ಕನೇ ವರ್ಷಕ್ಕೆ ಕಸ್ತೂರಿ ರಂಗನ್ ಅವರಿಗೆ ನೀಡಲಾಗುತ್ತಿದ್ದು ಈ ಪ್ರಕ್ರಿಯೆ ನಿರಂತರವಾಗಿರಲಿದೆ ಎಂದರು.

ಸೆ. 25 ರಂದು ಬೆಳಗ್ಗೆ 9.15 ಕ್ಕೆ ಸಿಂದಗಿಯಲ್ಲಿಯೇ ಪ್ರಶಸ್ತಿ ಪ್ರದಾನ ಸಮಾರಂಭ ನೆರವೇರಲಿದೆ. ಗ್ರಾಮೀಣ ವಿದ್ಯಾರ್ಥಿಗಳು ಹೆಚ್ಚಿನ ಪ್ರಮಾಣದಲ್ಲಿ ವಿಜ್ಞಾನಿಗಳಾಗಿ ಮುಂದೆ ಬರುತ್ತಿದ್ದು ಅವರಿಗೆ ಸ್ಫೂರ್ತಿ ತುಂಬುವುದು ಮತ್ತು ವಿಜ್ಞಾನಿಗಳನ್ನಾಗಿಸಲು ಪ್ರೇರೇಪಿಸುವ ಉದ್ದೇಶ ಹೊಂದಲಾಗಿದೆ. ಆ ನಿಟ್ಟಿನಲ್ಲಿ ಕಾರ್ಯಕ್ರಮದಂದು ವಿದ್ಯಾರ್ಥಿಗಳೊಂದಿಗೆ ಮತ್ತು ಯುವ ವಿಜ್ಞಾನಿಗಳೊಂದಿಗೆ ಕಸ್ತೂರಿ ರಂಗನ್ ಅವರೊಂದಿಗೆ ಸಂವಾದ ಏರ್ಪಡಿಸಲಾಗಿದೆ ಎಂದರು.

ಪದ್ಮರಾಜ್ ಶಿಕ್ಷಣ ಸಂಸ್ಥೆಯ ಸುವರ್ಣಮಹೋತ್ಸವ ಸಹ ಇರುವುದರಿಂದ ಯುಜಿಸಿ ಅನುದಾನದಲ್ಲಿ ನಿರ್ಮಿಸಿದ ವಸತಿ ನಿಲಯಕ್ಕೆ ಗುಡ್ಡಾಪುರ ದಾನಮ್ಮದೇವಿ ಹೆಸರಿಟ್ಟು ಉದ್ಘಾಟಿಸಲಾಗುತ್ತಿದೆ. ಶ್ರೀಶೈಲದ ಜಗದ್ಗುರುಗಳ ಸಾನ್ನಿಧ್ಯದಲ್ಲಿ ಪ್ರಶಸ್ತಿ ನೀಡಲಾಗುವುದು. ಸಂಸ್ಥೆ ವಿದ್ಯಾರ್ಥಿ ಈರಣ್ಣ ಜಿ.ಆರ್ ಎಂಬುವರು ಬೆಳ್ಳಿ ಫಲಕ ಹಾಗೂ ಒಂದು ಲಕ್ಷ ರೂ. ನೀಡುತ್ತಿದ್ದಾರೆ. ಈರಣ್ಣ ಇವರು ಫೈನ್ ಆರ್ಟ್ ನಲ್ಲಿ ಹೆಸರಾಗಿದ್ದಾರೆ. ಸದ್ಯ ದೆಹಲಿಯಲ್ಲಿದ್ದು ಪ್ರತೀ ವರ್ಷ ಫಲಕ ಸ್ವಂತ ಖರ್ಚಿನಲ್ಲಿ ಫಲಕ ಮಾಡಿಕೊಡುವುದಾಗಿ ತಿಳಿಸಿದ್ದಾರೆಂದು ಶ್ರೀಗಳು ಹೇಳಿದರು.

ಸಾರ್ವಜನಿಕ ಶಿಕ್ಷಣ ಇಲಾಖೆ ಪರಿ ವೀಕ್ಷಕ ಬ್ಯಾಹಟ್ಟಿ ಮಾತನಾಡಿ, ವಿಜ್ಞಾನಿಗಳನ್ನು ಕರೆತಂದು ಜಿಲ್ಲೆಯ ವಿಜ್ಞಾನ ಕ್ಷೇತ್ರ ಶ್ರೀಮಂತಗೊಳಿಸುವ ಪ್ರಯತ್ನದ ಫಲ ಇದು. ಜಿಲ್ಲೆಯ ಎಲ್ಲ ವಿಜ್ಞಾನ ಮತ್ತು ಗಣಿತ ಶಿಕ್ಷಕರು ಹಾಗೂ ಪ್ರತೀ ಶಾಲೆಯ ಮೂರು ವಿದ್ಯಾರ್ಥಿಗಳನ್ನು ಸಂವಾದದಲ್ಲಿ ಭಾಗವಹಿಸಲು ಸೂಚನೆ ನೀಡಲಾಗಿದೆ ಎಂದರು. ಮತ್ತು ಶಾಸಕ ಅರುಣ ಶಹಾಪುರ ಅವರ ನಿರ್ದೇಶನದಂತೆ ಕಾರ್ಯಕ್ರಮದಲ್ಲಿ ಭಾಗವಹಿಸುವ ಎಲ್ಲ ಶಿಕ್ಷಕರಿಗೆ ಒಒಡಿ ನೀಡುವುದಾಗಿ ತಿಳಿಸಿದರು.

ಶಾಸಕ ಅರುಣ ಶಹಾಪುರ ಮಾತನಾಡಿ, ಸಾರ್ವಜನಿಕ ಶಿಕ್ಷಣ ಇಲಾಖೆ, ಪದವಿ ಪೂರ್ವ ಶಿಕ್ಷಣ ಇಲಾಖೆ ಹಾಗೂ ಜಿಲ್ಲಾಡಳಿತದ ಸಹಯೋಗದಲ್ಲಿ ಈ ಕಾರ್ಯಕ್ರಮ ಆಯೋಜಿಸಲಾಗಿದೆ. ಜಿಲ್ಲೆಯ ಒಟ್ಟು ಏಳು ಶೈಕ್ಷಣಿಕ ವಲಯದಲ್ಲಿ ಇನ್‌ಸ್ಪೈರ್ ಅವಾರ್ಡ್ ಪಡೆದ ವಿದ್ಯಾರ್ಥಿಗಳು ಹಾಗೂ ಯುವ ವಿಜ್ಞಾನಿ ಎಂದು ಗುರುತಿಸಲ್ಪಟ್ಟ ವಿದ್ಯಾರ್ಥಿಗಳು ಸಂವಾದದಲ್ಲಿ ಭಾಗವಹಿಸಲಿದ್ದಾರೆ. ಇನ್ನೂ ಹೆಚ್ಚಿನ ಉತ್ಸಾಹಿತ ಹಾಗೂ ಪ್ರತಿಭಾವಂತರು ಸೇರಿ ಸುಮಾರು 100 ವಿದ್ಯಾರ್ಥಿಗಳಿಗೆ ಭಾಗವಹಿಸಲು ಅವಕಾಶ ಕಲ್ಪಿಸಲಾಗುವುದು ಎಂದರು.

ಮುಖಂಡರಾದ ಡಾ. ವಿವೇಕಾನಂದ ಸಾಲಿಮಠ, ನೆಹರು ಪೋರವಾಲ, ಗಂಗಾಧರ ಜೋಗೂರ, ಅಶೋಕ ಮಸೂರಿ ಸೇರಿದಂತೆ ಇತರರಿದ್ದರು.

Leave a Reply

Your email address will not be published. Required fields are marked *