ಜಿಲ್ಲೆ ಕೀರ್ತಿ ಹೆಚ್ಚಿಸಿದ ಕಂಚ್ಯಾಣಿ

ವಿಜಯಪುರ: ಭಾರತ ಸ್ವಾತಂತ್ರ್ಯದ 72ವರ್ಷಗಳ ನಂತರ ವಿಜಯಪುರ ಜಿಲ್ಲೆಗೆ ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಬಂದಿರುವದು ಜಿಲ್ಲೆಯ ಗೌರವ. ಈ ಗೌರವ ತಂದು ಕೊಟ್ಟವರು ಮಕ್ಕಳ ಸಾಹಿತಿ ಕಂಚ್ಯಾಣಿ ಶರಣಪ್ಪನವರು ಎಂದು ಖ್ಯಾತ ಸಂಶೋಧಕ ಡಾ.ಕೃಷ್ಣಕೋಲ್ಹಾರ ಕುಲಕರ್ಣಿ ಹೇಳಿದರು.

ಬಿಎಲ್​ಡಿಇ ವಚನ ಪಿತಾಮಹ ಡಾ.ಫ.ಗು.ಹಳಕಟ್ಟಿ ಸಂಶೋಧನಾ ಕೇಂದ್ರದಲ್ಲಿ ಚಿಂತನ-ಸಾಂಸ್ಕೃತಿಕ ಬಳಗದಿಂದ ಏರ್ಪಡಿಸಿದ್ದ ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಪುರಸ್ಕೃತ ಕಂಚ್ಯಾಣಿ ಶರಣಪ್ಪನವರ ಸನ್ಮಾನ ಸಮಾರಂಭದ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.

ದೇಶ ಸ್ವಾತಂತ್ರ್ಯಗೊಂಡು 72ವರ್ಷಗಳಲ್ಲಿ ಈ ಹಿಂದೆ ವಿಜಯಪುರದವರೇ ಆದ ಖ್ಯಾತ ನಾಟಕಕಾರ ಶ್ರೀರಂಗರು, ಸಂಶೋಧಕ ಡಾ.ಎಂ.ಎಂ.ಕಲಬುರ್ಗಿಯವರಿಗೆ ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಬಂದಿವೆ. ಆದರೆ ಅವರ ಮೂಲ ವಿಜಯಪುರವಾದರೂ ಕಾರ್ಯ ಕ್ಷೇತ್ರ ಬೇರೆಕಡೆಯಿದೆ. ಅದು ಇಲ್ಲಿನ ಸಸಿಯನ್ನು ಕಿತ್ತಿ, ಬೇರೆಕಡೆಗೆ ಹಚ್ಚಿದಂತೆ. ಅಲ್ಲಿ ಅವರು ಮರವಾಗಿ ಬೆಳೆದಿದ್ದಾರೆ. ಆದರೆ ಕಂಚ್ಯಾಣಿ ಶರಣಪ್ಪನವರು ಪ್ರಾಥಮಿಕ ಶಾಲಾ ಶಿಕ್ಷಕರಾಗಿ ನಮ್ಮ ಜಿಲ್ಲೆಯಲ್ಲಿಯೇ ಹುಟ್ಟಿ, ಇಲ್ಲಿಯೇ ಬೆಳೆದು, ಈ ಮಣ್ಣಿನಿಂದಲೇ ಸಾಹಿತ್ಯ ರಚನೆ ಮಾಡಿ, ತಮ್ಮ ಸಾಹಿತ್ಯದಿಂದ ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿಯ ಗೌರವವನ್ನು ವಿಜಯಪುರಕ್ಕೆ ತಂದಿದ್ದಾರೆ ಎಂದರು. ಕಂಚ್ಯಾಣಿ ಶರಣಪ್ಪನವರ ಬದುಕಿನ ಕುರಿತು ಉಪನ್ಯಾಸಕ ಡಾ.ಗುರುರಾಜ ಮೇಡಿದಾರ ಮಾತನಾಡಿದರು. ಕಂಚ್ಯಾಣಿ ಶರಣಪ್ಪ ದಂಪತಿಗೆ ಸನ್ಮಾನಿಸಲಾಯಿತು. ಮಹಾಂತ ಗುಲಗಂಜಿ, ಹ.ಮ. ಪೂಜಾರ, ಡಾ.ಡಿ.ಆರ್. ನಿಡೋಣಿ, ಡಾ.ಎಚ್.ವಿ. ಕರಿಗೌಡರ, ಎಂ.ಜಿ.ಯಾದವಾಡ, ಡಿ.ಆರ್. ಬನಸೊಡೆ, ಪ್ರಭಾವತಿ ದೇಸಾಯಿ, ವಿದ್ಯಾವತಿ ಅಂಕಲಗಿ, ಬಿ.ಎಂ.ಪಾಟೀಲ, ಚಂದ್ರಕಾಂತ ಬಿಜ್ಜರಗಿ, ದೊಡ್ಡಣ್ಣ ಭಜಂತ್ರಿ, ಪ್ರೊ.ದೊಡಮನಿ ಇದ್ದರು. ಡಾ.ಮಹಾಂತೇಶ ಬಿರಾದಾರ ಸ್ವಾಗತಿಸಿದರು. ಡಾ.ಎಂ.ಎಸ್.ಮದಭಾವಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಡಾ.ಎ.ಬಿ.ಬೂದಿಹಾಳ ವಂದಿಸಿದರು. ಡಾ.ವಿ.ಡಿ.ಐಹೊಳ್ಳಿ ನಿರೂಪಿಸಿದರು.