ಇಂಡಿ ದೂರದರ್ಶನ ಕೇಂದ್ರ ಸ್ಥಗಿತ

<< ಕಳೆದ ಮಾರ್ಚ್​ನಿಂದ ಬಂದ್ > ಬರದ ನಾಡಿನ ಜನತೆಗೆ ಶಾಕ್ ನೀಡಿದ ಸರ್ಕಾರ >>

ಇಂಡಿ: 16 ವರ್ಷಗಳಿಂದ ಇಂಡಿ ಸೇರಿದಂತೆ ತಾಲೂಕಿನ ಗ್ರಾಮೀಣ ಪ್ರದೇಶದ ಜನರಿಗೆ ಅನುಕೂಲವಾಗಿದ್ದ ಪಟ್ಟಣದ ದೂರದರ್ಶನ ಕೇಂದ್ರ ಕಳೆದ ಮಾರ್ಚ್ ತಿಂಗಳಿನಿಂದ ಸರ್ಕಾರ ಸ್ಥಗಿತಗೊಳಿಸಿದ ಹಿನ್ನೆಲೆ ಗ್ರಾಮೀಣ ಭಾಗದ ಜನತೆ ತೊಂದರೆ ಪಡುವಂತಾಗಿದೆ.

9 ಏಪ್ರಿಲ್ 2002ರಲ್ಲಿ ಅಂದಿನ ಕೇಂದ್ರ ಸಚಿವ, ಈಗಿನ ವಿಜಯಪುರ ಶಾಸಕ ಬಸನಗೌಡ ಪಾಟೀಲ ಯತ್ನಾಳ ಉದ್ಘಾಟಿಸಿದ್ದರು. ಹಲವು ವರ್ಷಗಳಿಂದ ಇಬ್ಬರು ತಾಂತ್ರಿಕ ಸಿಬ್ಬಂದಿಯೊಂದಿಗೆ ತನ್ನ ಕಾರ್ಯ ಚಟುವಟಿಕೆಯಿಂದ ರೈತರಿಗೆ ಉಪಯೋಗವಾಗುವ ಅನೇಕ ಸುದ್ದಿಗಳನ್ನು ಬಿತ್ತರಿಸುತ್ತ ಬಂದಿತ್ತು. ಈ ಕೇಂದ್ರವನ್ನು ಡಿಜಿಟಲ್ ಕೇಂದ್ರವನ್ನಾಗಿ ಅಥವಾ ಎಫ್​ಎಂ ಕೇಂದ್ರವನ್ನಾಗಿ ಮಾಡಿ ರೈತರಿಗೆ ಹಾಗೂ ಜನತೆಗೆ ಉಪಯೋಗವಾಗುವಂತೆ ಸರ್ಕಾರ ಉನ್ನತೀರಿಸಬೇಕಿತ್ತು. ಆದರೆ, ಸರ್ಕಾರ ಈಗ ಈ ಕೇಂದ್ರವನ್ನು ಸ್ಥಗಿತಗೊಳಿಸಿ ಬರದ ನಾಡಿನ ಜನತೆಗೆ ಶಾಕ್ ನೀಡಿದೆ.

ತಾಲೂಕಿನವರೇ ಆದ ಕೇಂದ್ರ ಸಚಿವ ರಮೇಶ ಜಿಗಜಿಣಗಿ, ಶಾಸಕರಾದ ಯಶವಂತರಾಯಗೌಡ ಪಾಟೀಲ, ದೇವಾನಂದ ಚವಾಣ್ ಮುಂತಾದ ಜನಪ್ರತಿನಿಧಿಗಳು ಇದನ್ನು ಉಳಿಸಿ ಉನ್ನತೀಕರಿಸಲು ಸರ್ಕಾರದ ಮೇಲೆ ಒತ್ತಡ ತರಬೇಕಾಗಿತ್ತು. ಆದರೆ, ಅವರ ನಿರ್ಲಕ್ಷ್ಯಂದ ಕೇಂದ್ರ ಮುಚ್ಚುವಂತಾಗಿದೆ. ಕೂಡಲೇ ಜನಪ್ರತಿನಿಗಳು ಮುತುವರ್ಜಿ ವಹಿಸಿ ಮತ್ತೆ ಆರಂಭಿಸಲು ಮುಂದಾಗಬೇಕು ಎಂದು ಚಂದ್ರಶೇಖರ ಈವಣಿ ಒತ್ತಾಯಿಸಿದ್ದಾರೆ.

ದೂರದರ್ಶನ ಕೇಂದ್ರದಿಂದ ರೈತರಿಗೆ ತುಂಬ ಅನುಕೂಲವಾಗಿತ್ತು. ಇದನ್ನು ಸ್ಥಗಿತಗೊಳಿಸಿರುವ ಸರ್ಕಾರದ ಕ್ರಮ ಸರಿಯಲ್ಲ. ಸರ್ಕಾರ ಉನ್ನತೀಕರಿಸಿ ತಾಲೂಕಿನ ಜನತೆಗೆ ಇನ್ನೂ ಹೆಚ್ಚಿನ ಉಪಯೋಗವಾಗುವಂತೆ ಮಾಡಬೇಕು. ಈ ದೆಸೆಯಲ್ಲಿ ಜನಪ್ರತಿನಿಧಿಗಳು ಪ್ರಯತ್ನಿಸಬೇಕು.
| ಜಗದೀಶ ಕ್ಷೇತ್ರಿ ಉದ್ಯಮಿ