ಗ್ರಾಪಂಗೆ ಬೀಗ ಹಾಕಿ ಪ್ರತಿಭಟನೆ

<< ಅಕ್ರಮ ಮದ್ಯ ಮಾರಾಟ ತಡೆಗೆ ಮಹಿಳೆಯರ ಆಗ್ರಹ >>

ತಾಳಿಕೋಟೆ: ಅಕ್ರಮ ಮದ್ಯ ಮಾರಾಟ ತಡೆಗಟ್ಟಬೇಕು ಎಂದು ಆಗ್ರಹಿಸಿ ತಾಲೂಕಿನ ಭಂಟನೂರ ಗ್ರಾಮದಲ್ಲಿ ಮಹಿಳೆಯರು ಗ್ರಾಮ ಪಂಚಾಯಿತಿ ಕಾರ್ಯಾಲಯಕ್ಕೆ ಬೀಗ ಜಡಿದು ಪ್ರತಿಭಟನೆ ನಡೆಸಿದರು.

ಅಲ್ಲದೆ, ಗ್ರಾಮದ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಕಚೇರಿಗೆ, ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೂ ಬೀಗ ಜಡಿದು ಆಕ್ರೋಶ ವ್ಯಕ್ತಪಡಿಸಿದರು.

ಅಕ್ರಮ ಮದ್ಯ ಮಾರಾಟ ಎಗ್ಗಿಲ್ಲದೆ ನಡೆಯುತ್ತಿದೆ. ಚಹಾದ ಅಂಗಡಿ, ಕಿರಾಣಿ ಅಂಗಡಿ, ಹಿಟ್ಟಿನ ಗಿರಣಿ, ಪಾನ್​ಶಾಪ್ ಮತ್ತು ಪ್ರಭಾವಿಗಳ ಮನೆಯಲ್ಲಿ ಮಾರಾಟವಾಗುತ್ತಿದೆ. ಇದರಿಂದ ಕುಡುಕರ ಸಂಖ್ಯೆ ಹೆಚ್ಚಾಗಿದ್ದು, ಮಹಿಳೆಯರು, ಮಕ್ಕಳು, ವಿದ್ಯಾರ್ಥಿಗಳು ತೀವ್ರ ತೊಂದರೆಪಡುವಂತಾಗಿದೆ. ಕೂಡಲೇ ಅಕ್ರಮ ಮದ್ಯ ಮಾರಾಟ ತಡೆಯಬೇಕು. ಇಲ್ಲದಿದ್ದರೆ ಮುಂದಿನ ದಿನಗಳಲ್ಲಿ ಉಗ್ರ ಹೋರಾಟ ಮಾಡಬೇಕಾಗುತ್ತದೆ ಎಂದು ಎಚ್ಚರಿಸಿದರು.

ಸ್ಥಳಕ್ಕಾಗಮಿಸಿದ ಪಿಡಿಒ ಸಿ.ಎಸ್. ಮಠ ಮನವೊಲಿಕೆ ಮಹಿಳೆಯರು ಒಪ್ಪದೆ ಪ್ರತಿಭಟನೆ ಮುಂದುವರಿಸಿದರು. ನಂತರ ಎಸ್​ಐ ಜಿ.ಎಸ್.ಬಿರಾದಾರ ಮಹಿಳೆಯರೊಂದಿಗೆ ಚರ್ಚೆ ನಡೆಸಿ, ಅಕ್ರಮ ಮದ್ಯ ಮಾರಾಟ ತಡೆಯಲು ಅಗತ್ಯ ಕ್ರಮ ಕೈಕೊಳ್ಳುವುದಾಗಿ ಭರವಸೆ ನೀಡಿದ್ದರಿಂದ ಪ್ರತಿಭಟನೆ ಹಿಂಪಡೆದರು.

ಶಿಲ್ಪಾ ತಳವಾರ, ಬಸಮ್ಮ ಹೆಗರಡ್ಡಿ, ಲಕ್ಷ್ಮಿಬಾಯಿ ಬಸರಡ್ಡಿ, ಮೀನಾಕ್ಷಿ ಬಸರಡ್ಡಿ, ಹೊನ್ನಮ್ಮ ಸಾಸನೂರ, ಯಲ್ಲಮ್ಮ ರತ್ನಾಗಿರಿ ಇತರರು ಇದ್ದರು.