<< ಕೆಬಿಜೆಎನ್ಎಲ್ ಕಚೇರಿಗೆ ಬೀಗ > ಅನ್ನದಾತರಿಂದ ಪ್ರತಿಭಟನೆ >>
ಸಿಂದಗಿ: ತಾಲೂಕಿನ ಗುತ್ತಿ ಬಸವಣ್ಣ ಏತ ನೀರಾವರಿ ಕಾಲುವೆ ವ್ಯಾಪ್ತಿಯಲ್ಲಿರುವ ದೇವರಹಿಪ್ಪರಗಿ ಮತಕ್ಷೇತ್ರದ ಹಳ್ಳಿಗಳ ಜಮೀನುಗಳಿಗೆ ಕೂಡಲೇ ನೀರು ಹರಿಸಬೇಕೆಂದು ಒತ್ತಾಯಿಸಿ ರೈತರು ರಾಂಪುರ ಗ್ರಾಮದ ಕೃಷ್ಣಾ ಭಾಗ್ಯ ಜಲ ನಿಗಮದ ಕಚೇರಿಗೆ ಬೀಗ ಜಡಿದು ಮಂಗಳವಾರ ಪ್ರತಿಭಟನೆ ನಡೆಸಿದರು.
ಗ್ರಾಮದ ಆರೂಢಮಠದಲ್ಲಿ ಜಮಾಯಿಸಿದ ರೈತರು ಶಾಸಕ ಸೋಮನಗೌಡ ಪಾಟೀಲರ ನೇತೃತ್ವದಲ್ಲಿ ಮೆರವಣಿಗೆ ಮೂಲಕ ಕೆಬಿಜೆಎನ್ಎಲ್ ಕಚೇರಿಗೆ ತೆರಳಿ ಮುಖ್ಯ ಅಭಿಯಂತ ಎ.ಎನ್.ಮುಗಳಿ ಅವರಿಗೆ ಮನವಿ ಸಲ್ಲಿಸಿದರು.
ನಂತರ ಮುಖಂಡರು ಮಾತನಾಡಿ, ದೇವರಹಿಪ್ಪರಗಿ ಮತಕ್ಷೇತ್ರದ ವ್ಯಾಪ್ತಿಯ ಚಿಕ್ಕರೂಗಿ, ಗಂಗನಳ್ಳಿ, ಹಿಟ್ನಳ್ಳಿ, ಕಡ್ಲೇವಾಡ ಸೇರಿದಂತೆ ಹಲವು ಗ್ರಾಮಗಳ ರೈತರ ಜಮೀನುಗಳಿಗೆ ಕಾಲುವೆ ನೀರು ತಲುಪುತ್ತಿಲ್ಲ. 90 ಕಿಮೀದಿಂದ 121 ಕಿಮೀವರೆಗೆ ನೀರಿಲ್ಲ. ಜನ-ಜಾನುವಾರುಗಳು ತತ್ತರಿಸುವಂತಾಗಿದೆ. ಕಾಲುವೆಯಲ್ಲಿ ಕಲ್ಲು-ಮಣ್ಣು ಹಾಕಿ ನೀರು ತಡೆಯಲಾಗಿದೆ. ಕೇಳಲು ಹೋದ ರೈತರಿಗೆ ಹಿಗ್ಗಾ ಮುಗ್ಗಾ ಥಳಿಸಲಾಗುತ್ತಿದೆ. ಬಡ ರೈತರು ಕಂಗಾಲಾಗಿದ್ದಾರೆ. ಕಾಲುವೆ ಪಕ್ಕದಲ್ಲಿ ಜಮೀನು ಇದ್ದರೂ ನೀರಿಲ್ಲದೆ ಪರದಾಡುವಂತಾಗಿದೆ. ಈ ಕುರಿತು ಅನೇಕ ಬಾರಿ ಅಧಿಕಾರಿಗಳಿಗೆ ಹೇಳಿದರೂ ಯಾರೊಬ್ಬರೂ ಗಮನ ಹರಿಸುತ್ತಿಲ್ಲ. ಸಮರ್ಪಕವಾಗಿ ವಾರಾಬಂದಿ ಮಾಡಿ ಎಲ್ಲರಿಗೂ ನೀರು ಸಿಗುವಂತೆ ಮಾಡದಿದ್ದರೆ, ಕಚೇರಿ ಮುಂದೆ ಆತ್ಮಹತ್ಯೆ ಮಾಡಿಕೊಳ್ಳುವುದಾಗಿ ಎಚ್ಚರಿಕೆ ನೀಡಿದರು.
ಮನವಿ ಸ್ವೀಕರಿಸಿದ ಮುಖ್ಯ ಅಭಿಯಂತ ಎ.ಎನ್.ಮುಗಳಿ ಮಾತನಾಡಿ, ಕೂಡಲೇ ನೀರು ಹರಿಸಲು ಕ್ರಮಕೈಗೊಳ್ಳುವ ಭರವಸೆ ನೀಡಿದ್ದರಿಂದ ರೈತರು ಹೋರಾಟ ಹಿಂಪಡೆದರು.
ಶಾಸಕ ಸೋಮನಗೌಡ ಪಾಟೀಲ, ಬಿಜೆಪಿ ಮಂಡಲ ಅಧ್ಯಕ್ಷ ಪ್ರಭುಗೌಡ ಅಸ್ಕಿ, ಸಿದ್ದು ಬುಳ್ಳಾ, ಕಾಶಿನಾಥ ಮಸಬಿನಾಳ, ಶಂಕರಗೌಡ ಕೋಟಿಖಾನಿ, ಸುರೇಶಗೌಡ ಬಿರಾದಾರ, ಬಸವರಾಜ ಹೂಗಾರ ಮತ್ತಿತರರು ಮಾತನಾಡಿದರು.
ಜಿಪಂ ಸದಸ್ಯ ಕಲ್ಲಪ್ಪ ಮಟ್ಟಿ, ಭೀಮನಗೌಡ ಸಿದರಡ್ಡಿ, ರಾಯಪ್ಪಗೌಡ ಪಾಟೀಲ, ರಾಮನಗೌಡ ಬಿರಾದಾರ, ಪ್ರಕಾಶ ಪಡಶೆಟ್ಟಿ, ಅಪ್ಪು ಚಟ್ಟರಕಿ, ಸುರೇಶಗೌಡ ಪಾಟೀಲ, ಭೀಮರಾಯ ಕುಳಗೇರಿ, ರಮೇಶ ಮಸಬಿನಾಳ, ಚಿದಾನಂದ ಹಚ್ಯಾಳ, ಸಂಗನಗೌಡ ಸಿದರಡ್ಡಿ, ಸಿದ್ದನಗೌಡ ಬಿರಾದಾರ ಮತ್ತಿತರರು ನೇತೃತ್ವ ವಹಿಸಿದ್ದರು.
ರೈತರ ಆಕ್ರೋಶ: ಮನವಿ ಸ್ವೀಕರಿಸಲು ಆಗಮಿಸಿದ ಅಭಿಯಂತರ ಮುಂದೆ ರೈತರು ಆಕ್ರೋಶ ವ್ಯಕ್ತಪಡಿಸಿದರು. ಮಾತಿನ ಚಕಮಕಿ ತೀವ್ರಗೊಳ್ಳುತ್ತಿದ್ದಂತೆ ಶಾಸಕರು ಮಧ್ಯ ಪ್ರವೇಶಿಸಿ ವಾತಾವರಣ ತಿಳಿಗೊಳಿಸಿದರು.
ಶಾಸಕರ ಎದುರು ಸಭೆ: ಹೋರಾಟದ ತೀವ್ರತೆಗೆ ಕಂಗಾಲಾದ ಅಧಿಕಾರಿಗಳು ಶಾಸಕರ ನೇತೃತ್ವದಲ್ಲಿ ಸಭೆ ನಡೆಸಿ, ಸಮಸ್ಯೆ ಹೇಳಿಕೊಂಡರು. ಮುಖ್ಯ ಅಭಿಯಂತ ಮುಗಳಿ ಮಾತನಾಡಿ, ಎಷ್ಟೆ ಹೇಳಿದರೂ ರೈತರು ಕೇಳುವುದಿಲ್ಲ. ಅಧಿಕಾರಿಗಳ ಮೇಲೆ ದಬ್ಬಾಳಿಕೆ ಮಾಡಲು ಬರುತ್ತಾರೆ. ವಾರಾಬಂದಿಗೆ ಸಹಕಾರ ನೀಡುವುದಿಲ್ಲ. ಗೇಟ್ ಬಂದ್ ಮಾಡಿದರೆ ತೆಗೆಯುತ್ತಾರೆ. ಇದರಿಂದ ಕೆಲವರಿಗೆ ನೀರು ಸಿಗುತ್ತದೆ ಮತ್ತೆ ಕೆಲವರಿಗೆ ಸಿಗುವುದಿಲ್ಲ ಎಂದು ಅಸಹಾಯಕತೆ ವ್ಯಕ್ತಪಡಿಸಿದರು.
ಶಾಸಕ ಸೋಮಗೌಡ ಪಾಟೀಲ ಮಾತನಾಡಿ, ನೀವೇ ಹೀಗೆ ಅಸಹಾಯಕರಾದರೆ ಹೇಗೆ? ಕಾನೂನು ಪ್ರಕಾರ ಕ್ರಮ ಕೈಗೊಂಡು ಎಲ್ಲ ರೈತರಿಗೆ ನೀರು ಸಿಗುವಂತೆ ಮಾಡಿ. ಈಗಾಗಲೇ ನಿಮಗೆ ಪತ್ರ ಬರೆದಿದ್ದೇನೆ. ಸಭೆ ಮಾಡಿ ತಿಳಿಸಿದ್ದೇನೆ ಆದರೂ ಯಾವುದೇ ಪ್ರಯೋಜನವಾಗಿಲ್ಲ. ದಬ್ಬಾಳಿಕೆ ಮಾಡುವವರ ವಿರುದ್ಧ ದೂರು ಕೊಡಿ. ನಿರ್ಲಕ್ಷೃ ಮುಂದುವರಿದರೆ ಮತ್ತೆ ಹೋರಾಟ ಮಾಡಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದರು.
ಸಭೆಯಲ್ಲಿ ಹಾಜರಿದ್ದ ಸಿಪಿಐ ಮಹಾಂತೇಶ ದಾಮಣ್ಣವರ ಮಾತನಾಡಿ, ದೂರು ನೀಡಿದರೆ ಅಂಥವರ ವಿರುದ್ಧ ಖಂಡಿತ ಕ್ರಮಕೈಗೊಳ್ಳುತ್ತೇನೆ. ಅಲ್ಲದೆ ಶಾಸಕರ ಸೂಚನೆ ಮೇರೆಗೆ ಗೇಟ್ ಬಂದ್ ಮಾಡುವಾಗ ತಿಳಿಸಿದರೆ ಅಧಿಕಾರಿಗಳ ಜತೆಗೆ ಪೊಲೀಸರನ್ನು ಕಳುಹಿಸಲಾಗುವುದು ಎಂದರು.