ಅತಿಕ್ರಮಣಕ್ಕಿಲ್ಲದ ಅಡ್ಡಿ ಅಭಿವೃದ್ಧಿಗೇಕೆ?

ಪರಶುರಾಮ ಭಾಸಗಿ

ವಿಜಯಪುರ: ವಿಶ್ವ ಪ್ರವಾಸೋದ್ಯಮ ದಿನದಂದೇ ದೋಣಿ ವಿಹಾರ ಯೋಜನೆಗೆ ಚಾಲನೆ ನೀಡಬೇಕೆಂಬ ಜಿಲ್ಲಾಡಳಿತ ಹಾಗೂ ಪ್ರವಾಸೋದ್ಯಮ ಇಲಾಖೆ ಕನಸಿಗೆ ಪ್ರಾಚ್ಯ ವಸ್ತು ಇಲಾಖೆ ತಣ್ಣೀರು ಎರಚಿತೆ?
ಹೌದು, ಐತಿಹಾಸಿಕ ಗಗನಮಹಲ್ ಉದ್ಯಾನ ಪಕ್ಕದ ಕಂದಕದಲ್ಲಿ ಬೋಟಿಂಗ್ ಸೌಲಭ್ಯ ಕಲ್ಪಿಸಬೇಕೆಂಬ ಬಹುದಿನದ ಬೇಡಿಕೆಗೆ ಕೊನೆಗೂ ಸ್ಪಂದಿಸಿದ್ದ ಜಿಲ್ಲಾಡಳಿತಕ್ಕೀಗ ಪ್ರಾಚ್ಯವಸ್ತು ಇಲಾಖೆಯ ಪರವಾನಗಿ ನೀತಿ ಕಂಟಕವಾಗಿ ಪರಿಣಮಿಸಿದೆ.
ಈಗಾಗಲೇ ಟೆಂಡರ್ ಕರೆಯಲಾಗಿದ್ದು ವಿಶ್ವ ಪ್ರವಾಸೋದ್ಯಮ ದಿನದಿಂದು ಅಧಿಕೃತ ಚಾಲನೆಗೆ ಸಕಲ ಸಿದ್ಧತೆಯಲ್ಲಿದ್ದ ಅಧಿಕಾರಿಗಳಿಗೆ ಪುರಾತತ್ವ ಇಲಾಖೆ ಶಾಕ್ ನೀಡಿದೆ.
ಕಂದಕದಲ್ಲಿ ಬೋಟಿಂಗ್ ಮಾಡಲು ಕೇಂದ್ರ ಪುರಾತತ್ವ ಇಲಾಖೆಯ ಪರವಾನಗಿ ಬೇಕೆಂಬ ಕ್ಯಾತೆ ತೆಗೆದಿದ್ದು ನಗರವಾಸಿಗಳ ಬಹುದಿನದ ಕನಸಿಗೆ ಬರೆ ಎಳೆದಂತಾಗಿದೆ. ಇತ್ತ ಪ್ರವಾಸಿಗರಿಗೂ ನಿರಾಸೆ ತರಿಸಿದೆ.

ಏನಿದು ಯೋಜನೆ?: ಪ್ರವಾಸೋದ್ಯಮ ಅಭಿವೃದ್ಧಿ ದೃಷ್ಟಿಯಿಂದ ಜಿಲ್ಲಾಡಳಿತ ಕಂದಕದಲ್ಲಿ ಬೋಟಿಂಗ್ ವ್ಯವಸ್ಥೆಗೆ ಮುಂದಾಗಿತ್ತು. ಕಯಾಕಿಂಗ್, ಪೆಡಲ್ ಬೋಟಿಂಗ್ ಹಾಗೂ ರ‌್ಯಾಪ್ಟಿಂಗ್ ನಡೆಸಲು ಮೂರು ವರ್ಷದ ಅವಧಿಗೆ ಲೀಸ್ ನೀಡುವ ಯೋಜನೆ ರೂಪಿಸಲಾಗಿತ್ತು. ಸೂರ್ಯೋದಯದಿಂದ ಸೂರ್ಯಾಸ್ತದವರೆಗೆ ಬೋಟಿಂಗ್ ನಡೆಸಲು ಜಿಲ್ಲಾಡಳಿತವೇ ಎರಡು ಮೋಟರ್ ಬೋಟ್‌ಗಳನ್ನು, 10 ಡಬ್ಬಲ್ ಸೀಟರ್ ಕಯಾಕಿಂಗ್‌ಗಳನ್ನು ನೀಡಲು ತೀರ್ಮಾನಿಸಿತ್ತು. ಲೀಸ್ ಅವಧಿ ಮುಗಿದ ತಕ್ಷಣ ಈ ಬೋಟ್‌ಗಳಿಗೆ ಬದಲಾಗಿ ಹೊಸ ಬೋಟ್ ಜಿಲ್ಲಾಡಳಿತಕ್ಕೆ ಒದಗಿಸುವ ನಿಯಮವೂ ಇತ್ತು. ರಕ್ಷಣಾ ಸಿಬ್ಬಂದಿ ನೇಮಕ, ಕಂದಕದ ಸ್ವಚ್ಛತೆ, ಉದ್ಯಾನದ ಅಭಿವೃದ್ಧಿಗೆ ಆದ್ಯತೆ ನೀಡುವ ಕರಾರಿನ ಮೇಲೆ ಟೆಂಡರ್ ಕರೆಯಲಾಗಿತ್ತು. ಆಗಲೇ ಇಬ್ಬರು ಗುತ್ತಿಗೆದಾರರು ಅರ್ಜಿ ಕೂಡ ಸಲ್ಲಿಸಿದ್ದರು. ಸೂಕ್ತ ಸಮಯ ನೋಡಿಕೊಂಟು ಟೆಂಡರ್ ಪ್ರಕ್ರಿಯೆ ಅಂತಿಮಗೊಳಿಸಬೇಕೆನ್ನುವಷ್ಟರಲ್ಲಿಯೇ ಪುರಾತತ್ವ ಇಲಾಖೆ ಹೊಸ ರಾಗ ತೆಗೆದಿದೆ.

ಏನದು ಪುರಾತತ್ವ ಇಲಾಖೆ ತಗಾದೆ?: ಸಂರಕ್ಷಿತ ಸ್ಮಾರಕಗಳಲ್ಲೊಂದಾದ ಗಗನ ಮಹಲ್ ಕಂದಕದಲ್ಲಿ ಬೋಟಿಂಗ್ ನಡೆಸಲು ಪರವಾನಗಿ ಬೇಕೆಂದು ಪುರಾತತ್ವ ಇಲಾಖೆ ಅಧಿಕಾರಿಗಳು ಅಪಸ್ವರ ಎತ್ತಿದ್ದಾರೆ. ನಿಯಮಾವಳಿ ಪ್ರಕಾರ ಸಂರಕ್ಷಿತ ಸ್ಮಾರಕಗಳ ವ್ಯಾಪ್ತಿಯಲ್ಲಿ ಯಾವುದೇ ಚಟುವಟಿಕೆ ಕೈಗೊಳ್ಳುವಂತಿಲ್ಲ. ಹೀಗಾಗಿ ಏನೇ ಮಾಡಿದರೂ ಪರವಾನಗಿ ಪಡೆದು ಮಾಡಿ ಎಂಬುದು ಪುರಾತತ್ವ ಇಲಾಖೆ ಅಧಿಕಾರಿಗಳ ಲಿಖಿತ ಹೇಳಿಕೆ.
ಆದರೆ, ಅತಿಕ್ರಮಣಕ್ಕಿಲ್ಲದ ಅಡ್ಡಿ ಅಭಿವೃದ್ಧಿಗೇಕೆ? ನಗರದಲ್ಲಿ ಅನೇಕ ಸ್ಮಾರಕಗಳು ಅತಿಕ್ರಮಣಕ್ಕೊಳಪಟ್ಟಿವೆ. ಕೆಲವರು ಕೋಟೆ ಪಕ್ಕದಲ್ಲೇ ಮೀನು ಮಾರಾಟ ಅಡ್ಡೆ ತೆಗೆದರೆ ಕೆಲವರು ಮನೆ ಕಟ್ಟಿಕೊಂಡಿದ್ದಾರೆ, ಇನ್ನೂ ಕೆಲವರು ಅನಧಿಕೃತವಾಗಿ ಉದ್ಯಮ ಆರಂಭಿಸಿದ್ದಾರೆ. ಅದೆಲ್ಲಾ ಕಾಣದೇ? ಎಂಬುದು ಪ್ರವಾಸ ಪ್ರಿಯರ ಪ್ರಶ್ನೆ.

ನವರಸಪುರ ಉತ್ಸವದಲ್ಲಿ ಇರಲಿಲ್ಲವೇ?: ಈ ಮುಂಚೆ ಇದೇ ಸ್ಥಳದಲ್ಲಿ ನವರಸಪುರ ಉತ್ಸವದ ಸಂದರ್ಭ ಬೋಟಿಂಗ್ ನಡೆಸಲಾಗಿತ್ತು. ಅದಕ್ಕೆ ಇದೇ ಪುರಾತತ್ವ ಇಲಾಖೆ ಅಧಿಕಾರಿಗಳು ಪರವಾನಗಿ ಕೊಟ್ಟಿರಲಿಲ್ಲವೇ? ಎಂಬ ಪ್ರಶ್ನೆ ಕಾಡದೇ ಇರದು. ಆದರೆ, ಅದರ ಅಧಿಕೃತ ಪತ್ರ ಎಲ್ಲಿದೆ ಎಂಬುದು ಪುರಾತತ್ವ ಇಲಾಖೆ ಅಧಿಕಾರಿಗಳ ಪ್ರಶ್ನೆ. ಪರವಾನಗಿ ಪತ್ರ ಇಲ್ಲದೇ ಅಂದಿನ ಅಧಿಕಾರಿಗಳು ಬಿಟ್ಟಿದ್ದಾದರೂ ಹೇಗೆ? ಎಂಬುದು ಸಾರ್ವಜನಿಕರ ಮರುಪ್ರಶ್ನೆ.
ಅಲ್ಲದೇ, ಬೋಟಿಂಗ್ ಮಾಡಲು ಪರವಾನಗಿ ನಿಯಮ ಮುಂದೆ ತರುವ ಪುರಾತತ್ವ ಇಲಾಖೆಯಾದರೂ ಸದರಿ ಕಂದಕವನ್ನು ಸಂರಕ್ಷಿಸಿ ಕಾಯ್ದಿಟ್ಟುಕೊಳ್ಳುತ್ತದೆಯಾ? ಶೌಚ ಹಾಗೂ ಕ್ಷೌರ ಕೇಂದ್ರವಾಗಿ ಮಾರ್ಪಟ್ಟಿರುವ ಕಟ್ಟಡ ಕಾಣದೇ? ಎಂಬುದು ಪ್ರವಾಸಿ ಪ್ರಿಯರ ಪ್ರಶ್ನೆ. ಈ ಎಲ್ಲ ಪ್ರಶ್ನೆಗಳಿಗೆ ಪುರಾತತ್ವ ಇಲಾಖೆ ಸಿದ್ಧ ಉತ್ತರವಿಷ್ಟೆ ‘ಪರವಾನಗಿ ಪಡೆಯಬೇಕೆಂಬ ನಿಯಮವಿದ್ದು ಆ ಬಗ್ಗೆ ಪತ್ರ ಕೊಟ್ಟಿದ್ದೇವಷ್ಟೆ ಮುಂದಿನದು ಅವರಿಗೆ ಬಿಟ್ಟಿದ್ದು’

ವಿಶ್ವ ಪ್ರವಾಸೋದ್ಯಮ ದಿನದಂದು ಬೋಟಿಂಗ್ ಯೋಜನೆಗೆ ಚಾಲನೆ ನೀಡಲು ತೀರ್ಮಾನಿಸಲಾಗಿತ್ತು. ಆದರೆ, ಕೇಂದ್ರ ಪುರಾತತ್ವ ಇಲಾಖೆ ಅನುಮತಿ ಪಡೆಯಬೇಕೆಂದು ಆ ಇಲಾಖೆ ಅಧಿಕಾರಿಗಳು ತಿಳಿಸಿದ್ದಾರೆ. ತನ್ನಿಮಿತ್ತ ಈಗಾಗಲೇ ದೆಹಲಿಯ ಪುರಾತತ್ವ ಇಲಾಖೆ ನಿರ್ದೇಶಕರಿಗೆ ಪತ್ರ ಕೂಡ ಬರೆಯಲಾಗಿದೆ. ಆದರೆ, ನಿಗದಿತ ದಿನದೊಳಗೆ ಪರವಾನಗಿ ಸಿಗುತ್ತದೆಯಾ? ನೋಡಬೇಕು.
ವೈ.ಎಸ್. ಪಾಟೀಲ, ಜಿಲ್ಲಾಧಿಕಾರಿ
ಪುರಾತತ್ವ ಇಲಾಖೆಗೆ ನಿಜವಾದ ಕಾಳಜಿಯಿದ್ದಲ್ಲಿ ಮೊದಲು ಅತಿಕ್ರಮಣ ತೆರವುಗೊಳಿಸಲಿ. ಕಣ್ಮುಂದೆಯೇ ಪ್ರವಾಸಿಗರ ಸುಲಿಗೆ ಮಾಡುವವರ ಮೇಲೆ ಕ್ರಮ ಕೈಗೊಳ್ಳಲಿ. ಅದನ್ನು ಬಿಟ್ಟು ಅಭಿವೃದ್ಧಿ ಪರ ಕಾರ್ಯಕ್ರಮಗಳಿಗೆ ಅಡ್ಡಗಾಲು ಹಾಕುವುದು ಸರಿಯಲ್ಲ. ಜಿಲ್ಲೆ ಸಂಸದರು ಮತ್ತು ಶಾಸಕರು ಸಹ ಈ ನಿಟ್ಟಿನಲ್ಲಿ ದಿಟ್ಟ ಹೆಜ್ಜೆ ಇರಿಸಬೇಕು. ಧಾರವಾಡದ ಪುರಾತತ್ವ ಇಲಾಖೆ ವೃತ್ತ ಕಚೇರಿ ಜಿಲ್ಲೆಗೆ ತರಬೇಕು.
ಶ್ರೀಶೈಲ ಮುಳಜಿ, ಕರವೇ ಮುಖಂಡ

Leave a Reply

Your email address will not be published. Required fields are marked *