ಪರಿಹಾರದಲ್ಲಿ ಅನ್ಯಾಯವಾಗಲ್ಲ

ವಿಜಯಪುರ: ಗದಗ-ಹೊಟಗಿ ರೈಲ್ವೆ ಮಾರ್ಗದ ಕಾಮಗಾರಿಯಲ್ಲಿ ಗುರುತಿಸಲಾದ ಜಮೀನುಗಳ ಭೂಸ್ವಾಧೀನ ಪ್ರಕ್ರಿಯೆಯಲ್ಲಿ ಭೂ ಮಾಲೀಕರಿಗೆ ದೊರೆಯಬೇಕಾದ ಪರಿಹಾರದಲ್ಲಿ ಯಾವುದೇ ರೀತಿಯ ಅನ್ಯಾಯವಾಗುವುದಿಲ್ಲ ಎಂದು ಬೆಳಗಾವಿ ವಿಭಾಗದ ಪ್ರಾದೇಶಿಕ ಆಯುಕ್ತ ಪಿ.ಎ.ಮೇಘಣ್ಣವರ ಭೂ ಮಾಲೀಕರಿಗೆ ಭರವಸೆ ನೀಡಿದರು.

ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಸೋಮವಾರ ನಡೆದ ಗದಗ-ಹೊಟಗಿ ರೈಲ್ವೆ ಮಾರ್ಗ ಕಾಮಗಾರಿಯ ಭೂಸ್ವಾಧೀನ ಪ್ರಕ್ರಿಯೆಯಲ್ಲಿ ಪರಿಹಾರ ಮೊತ್ತ ದರ ನಿಗದಿ ಕುರಿತು ಸಂಬಂಧಿಸಿದ ಭೂಮಾಲೀಕರೊಂದಿಗೆ ನಡೆದ ಸಮಾಲೋಚನೆ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.

ರೈಲ್ವೆ ಮಾರ್ಗಕ್ಕೆ ಬೇಕಾದ ಅಗತ್ಯ ಸೌಕರ್ಯಗಳನ್ನು ಒದಗಿಸಲು ಆ ಮಾರ್ಗದಲ್ಲಿ ಬರುವ ಜಿಲ್ಲೆಯ ಮುಳವಾಡ, ಮಸೂತಿ, ತೆಲಗಿ, ಕೂಡಗಿ, ಅಲಿಯಾಬಾದ, ಹಂಚನಾಳ (ಪಿಎಚ್), ಇಂಗನಾಳ, ಬರಟಗಿ, ಗುಡದಿನ್ನಿ ಗ್ರಾಮಗಳಲ್ಲಿ ನಿರ್ದಿಷ್ಟವಾಗಿ ಗುರುತಿಸಿದ ಸರ್ವೆ ನಂಬರ್ ಆಧಾರದ ಅಗತ್ಯ ಪ್ರಮಾಣದ ಭೂಮಿಯನ್ನು ಭೂಸ್ವಾಧೀನ ಕಾಯ್ದೆಯಡಿ ಕಡ್ಡಾಯವಾಗಿ ಸ್ವಾಧೀನಪಡಿಸಿಕೊಳ್ಳಲಾಗುತ್ತಿದೆ ಎಂದರು. ಯೋಜನೆಯಡಿ ಭೂಮಿ ಕಳೆದುಕೊಳ್ಳುವ ಭೂ ಮಾಲೀಕರಿಗೆ ಹೊಸ ಭೂಸ್ವಾಧೀನ ಕಾಯ್ದೆ ಪ್ರಕಾರ ಮಾರುಕಟ್ಟೆ ಬೆಲೆಗಿಂತ ನಿಯಮಾನುಸಾರ ಖುಷ್ಕಿ, ನೀರಾವರಿ ಭೂಮಿ ಅನ್ವಯ 4 ಪಟ್ಟು ದರ ನಿಗದಿಪಡಿಸಿದ್ದು, ಇದರಲ್ಲಿ ಭೂ ಮಾಲೀಕರಿಗೆ ಯಾವುದೇ ರೀತಿಯಲ್ಲಿ ಅನ್ಯಾಯವಾಗುವುದಿಲ್ಲ ಎಂದರು. ಜಿಲ್ಲಾಧಿಕಾರಿ ಎಸ್.ಬಿ. ಶೆಟ್ಟೆಣ್ಣವರ, ಅಪರ ಜಿಲ್ಲಾಧಿಕಾರಿ ಎಚ್. ಪ್ರಸನ್ನ, ಉಪವಿಭಾಗಾಧಿಕಾರಿ ಡಾ.ಔದ್ರಾಮ್ ತಹಸೀಲ್ದಾರ್ ರವಿಚಂದ್ರ, ಎಂ.ಎನ್. ಚೋರಗಸ್ತಿ, ಇಂಡಿ ಉಪವಿಭಾಗಾಧಿಕಾರಿ ಹಿಟ್ನಾಳ ಸೇರಿದಂತೆ ವಿವಿಧ ಇಲಾಖೆಗಳ ಜಿಲ್ಲಾ ಮಟ್ಟದ ಅಧಿಕಾರಿಗಳು, ರೈಲ್ವೆ ಇಲಾಖೆ ಅಧಿಕಾರಿಗಳು ಉಪಸ್ಥಿತರಿದ್ದರು.

ಆಯುಕ್ತರೊಂದಿಗೆ ವಾಗ್ವಾದ

ಇದೇ ಸಂದರ್ಭ ಕೂಡಗಿಯಲ್ಲಿ ಎನ್​ಟಿಪಿಸಿ ಸ್ಥಾಪನೆ ವೇಳೆ ಭೂಸ್ವಾಧೀನ ಪ್ರಕ್ರಿಯೆಯಲ್ಲಿ ನೀಡಿದ ಬೆಲೆಯ ಪ್ರಕಾರ ಪರಿಹಾರ ಒದಗಿಸುವಂತೆ ಸಂಬಂಧಿಸಿದ ಗ್ರಾಮದ ಭೂಮಾಲೀಕರು ಆಯುಕ್ತರೊಂದಿಗೆ ವಾಗ್ವಾದ ನಡೆಸಿದರು. ಸರ್ಕಾರದ ಆದೇಶದ ಪ್ರಕಾರ ನಿಗದಿಪಡಿಸಿದ ದರಕ್ಕಿಂತ ಹೆಚ್ಚಿಗೆ ನೀಡಲು ಸಾಧ್ಯವಿಲ್ಲ. ಭೂ ಮಾಲೀಕರ ಒಪ್ಪಿಗೆ ಇಲ್ಲದೆಯೂ ಸರ್ಕಾರಿ ನಿಯಮಾವಳಿಯನ್ವಯ ಕಡ್ಡಾಯವಾಗಿ ಭೂಸ್ವಾಧೀನ ಮಾಡಿಕೊಳ್ಳುವ ಅಧಿಕಾರ ಸರ್ಕಾರಕ್ಕಿದೆ ಎಂದು ಆಯುಕ್ತರು ಹೇಳಿದರು. ಸಭೆಯಲ್ಲಿ 9 ಗ್ರಾಮದ ಭೂಮಾಲೀಕರಲ್ಲಿ ಬಹುತೇಕರು ಭೂಸ್ವಾಧೀನಕ್ಕೆ ಒಪ್ಪಿಗೆ ಸೂಚಿಸಿದರು. ವಿವಿಧ ಕಾರಣಗಳಿಂದ ಸಭೆಗೆ ಗೈರಾದ ಭೂಮಾಲೀಕರನ್ನು ತಹಸೀಲ್ದಾರ್ ಹಾಗೂ ಉಪವಿಭಾಗಾಧಿಕಾರಿಗಳು ಖುದ್ದಾಗಿ ಭೇಟಿಯಾಗಿ ಎಲ್ಲ ವಿವರಗಳನ್ನು ನೀಡಿ ಅವರ ಒಪ್ಪಿಗೆ ಕುರಿತ ಬಾಂಡ್ ಪತ್ರವನ್ನು ಕಡ್ಡಾಯವಾಗಿ ಪಡೆಯಬೇಕು. ಈ ಪ್ರಕ್ರಿಯೆ ವಾರದಲ್ಲಿ ಪೂರ್ಣಗೊಳ್ಳಬೇಕು. ಇದರ ಅಂತಿಮ ವರದಿಯನ್ನು ಸಿದ್ಧಪಡಿಸಿ ಆಯುಕ್ತರ ಕಚೇರಿಗೆ ಸಲ್ಲಿಸುವಂತೆ ಸೂಚನೆ ನೀಡಿ, ವರದಿ ಗೊಂದಲಮಯವಾಗಿರದಂತೆ ಎಚ್ಚರ ವಹಿಸಬೇಕು. ರೈಲ್ವೆ ಇಲಾಖೆಯ ನಕ್ಷೆ ಪ್ರಕಾರ ಬರುವ ಎಲ್ಲ ಸರ್ವೆ ನಂಬರ್​ಗಳ ವಿವರವಾದ ಮಾಹಿತಿ ಇರಬೇಕು ಎಂದು ಹೇಳಿದರು.

ಸರ್ಕಾರದೊಂದಿಗೆ ಸಹಕರಿಸಿ

ಸರ್ಕಾರ ಭೂಸ್ವಾಧೀನ ಮಾಡಿಕೊಂಡ ನಂತರ ಆ ಭೂಮಿಯಲ್ಲಿ ಮಾಲೀಕರು ವ್ಯವಸಾಯ ಸೇರಿದಂತೆ ಯಾವುದೇ ವ್ಯವಹಾರ ಮಾಡುವಂತಿಲ್ಲ. ಕಾಮಗಾರಿ ನಡೆಯುವ ಸಂದರ್ಭ ಇಲಾಖೆಗೆ ಸಂಬಂಧಿಸಿದ ವರೊಂದಿಗೆ ವಾಗ್ವಾದ ನಡೆಸದೆ ಸರ್ಕಾರದೊಂದಿಗೆ ಸಹಕರಿಸಬೇಕು ಎಂದರು. ಸರ್ಕಾರದ ಮಾರ್ಗಸೂಚಿ ಬೆಲೆ, ಮಾರುಕಟ್ಟೆಯ ವಾಸ್ತವಿಕ ಬೆಲೆ ಸೇರಿದಂತೆ ಸರ್ಕಾರದ ಇತರ ನಿಯಮಗಳನ್ವಯ ಭೂಮಿಯ ಬೆಲೆ ಯನ್ನು ನಿರ್ಧರಿಸಲಾಗಿದೆ. ಇದಕ್ಕೆ ಸಂಬಂಧಿಸಿದಂತೆ ಯಾವುದೇ ಗೊಂದಲಗಳಿದ್ದಲ್ಲಿ ಸಂಬಂಧಿಸಿದ ಉಪವಿಭಾಗಾಧಿಕಾರಿ, ತಹಸೀಲ್ದಾರರೊಂದಿಗೆ ಸಮಾಲೋಚಿಸಿ ಎಂದರು.

ರೈಲ್ವೆ ಅಧಿಕಾರಿಗಳಿಗೆ ಸೂಚನೆ

ಸರ್ಕಾರ ನಿಗದಿಪಡಿಸಿದ ಭೂ ಪ್ರದೇಶವನ್ನು ಹೊರತುಪಡಿಸಿ ರೈತರ ಭೂಮಿಯ ಇತರ ಭಾಗದಲ್ಲಿ ಕಾಮಗಾರಿಗೆ ಸಂಬಂಧಿಸಿದ ಸರಕುಗಳನ್ನು ಸಂಗ್ರಹಿಸುವಂತಿಲ್ಲ. ಒಂದು ವೇಳೆ ಹಾಕುವ ಸಂದರ್ಭವಿದ್ದಲ್ಲಿ ಅದಕ್ಕೆ ತಕ್ಕುದಾದ ಪರಿಹಾರವನ್ನು ಭೂಮಾಲೀಕರಿಗೆ ನೀಡಬೇಕು ಎಂದು ರೈಲ್ವೆ ಇಲಾಖೆ ಅಧಿಕಾರಿಗಳಿಗೆ ಸೂಚಿಸಿದರು. ಗ್ರಾಮವಾರು ಭೂಮಿ ಬೆಲೆ ವ್ಯತ್ಯಾಸವಾಗುತ್ತದೆ. ಅದರ ಆಧಾರದ ಮೇಲೆ ಪರಿಹಾರ ಮೊತ್ತವೂ ನಿಗದಿಯಾಗುತ್ತದೆ. ಯಾರಿಗೂ ಪರಿಹಾರ ನೀಡುವಲ್ಲಿ ವಿಳಂಬವಾಗುವುದಿಲ್ಲ ಎಂದರು.