ಪಾದಯಾತ್ರೆ ಅಭಿವೃದ್ಧಿಗಾಗಿಯಲ್ಲ; ಅಧಿಕಾರಕ್ಕಾಗಿ

ವಿಜಯಪುರ: ಮಾಜಿ ಪ್ರಧಾನಿ ಎಚ್.ಡಿ. ದೇವೇಗೌಡರ ಪಾದಯಾತ್ರೆ ಮಗನ ಅಧಿಕಾರ ಉಳಿಕೆಗಾಗಿಯೇ ಹೊರತು ರಾಜ್ಯದ ಅಭಿವೃದ್ಧಿಗಾಗಿ ಅಲ್ಲವೆಂದು ಬಿಜೆಪಿ ಶಾಸಕ ಬಸನಗೌಡ ಪಾಟೀಲ ಯತ್ನಾಳ ಟೀಕಿಸಿದ್ದಾರೆ.

ನಗರದಲ್ಲಿ ಭಾನುವಾರ ಸುದ್ದಿಗಾರರ ಪ್ರಶ್ನೆಯೊಂದಕ್ಕೆ ಪ್ರತಿಕ್ರಿಯಿಸಿರುವ ಅವರು, ದೇವೇಗೌಡರೇನು ಉತ್ತರ ಕರ್ನಾಟಕಕ್ಕೆ ಅನ್ಯಾಯವಾಗಿದೆ, ಹೆಚ್ಚಿನ ಅನುದಾನ ನೀಡಬೇಕೆಂಬ ಕಾರಣಕ್ಕಾಗಿ ಪಾದಯಾತ್ರೆ ನಡೆಸುತ್ತಿದ್ದಾರೆಯೇ? ಅಥವಾ ಮಂಡ್ಯಕ್ಕೆ 8 ಸಾವಿರ ಕೋಟಿ ರೂ.ಅನುದಾನ ನೀಡಿ ಉತ್ತರ ಕರ್ನಾಟಕಕ್ಕೆ ಕೇವಲ 800 ಕೋಟಿ ರೂ. ಸಹ ಅನುದಾನ ನೀಡದ ಕಾರಣಕ್ಕಾಗಿ ನಡೆಸುತ್ತಿದ್ದಾರಾ? ಎಂದು ಮರುಪ್ರಶ್ನೆ ಹಾಕಿದರು.

ದೇವೇಗೌಡರ ಉದ್ದೇಶ ಎಲ್ಲ ಸಮುದಾಯದವರನ್ನು ಮುನ್ನಡೆಸಿಕೊಂಡು ಹೋಗುವುದಲ್ಲ; ಕೇವಲ ಮಂಡ್ಯ, ಮೈಸೂರು, ಬೆಂಗಳೂರು ಗ್ರಾಮೀಣ ಮತ್ತು ತುಮಕೂರು ಅಭಿವೃದ್ಧಿಯಾದರೆ ಸಾಕು. ತಮ್ಮ ಪಕ್ಷದ 30-40 ಸ್ಥಾನ ಬರಬೇಕು. ಯಾವುದೇ ಪಕ್ಷ ಅಧಿಕಾರಕ್ಕೆ ಬರಲು ತಮ್ಮ ಬೆಂಬಲ ಇರಬೇಕೆಂಬ ಸ್ವಾರ್ಥ ಹೊಂದಿದವರು. ತಮ್ಮ ಕುಟುಂಬದವರು ಸೋತ ಹಿನ್ನೆಲೆ ಹತಾಶರಾಗಿ ಈ ನಿರ್ಧಾರ ಕೈಗೊಂಡಿದ್ದಾರೆಂದು ತಿಳಿಸಿದರು.

ದೇವೇಗೌಡರಿಗೆ ನಿಜವಾದ ಜನಪರ ಕಾಳಜಿಯಿದ್ದಲ್ಲಿ ಬಜೆಟ್‌ನಲ್ಲಿ ಉತ್ತರ ಕರ್ನಾಟಕಕ್ಕೆ ಆದ ಅನ್ಯಾಯ ಸರಿಪಡಿಸಬೇಕು. ಯಾವ ಯಾವ ಜಿಲ್ಲೆಗೆ ಎಷ್ಟು ಅನುದಾನ ನೀಡಿದ್ದೀರಿ ಅದನ್ನು ಜನರ ಮುಂದಿಡಿ. ಆ ಮೇಲೆ ಪಾದಯಾತ್ರೆ ನಡೆಸಿ. ಈ ಹಿಂದಿನ ನೀರಾವರಿ ಯೋಜನೆಗಳೆಲ್ಲ ಸ್ಥಗಿತಗೊಂಡಿವೆ. ಅಕ್ವಾಡೆಕ್ಟಗಳೆಲ್ಲ ಅರ್ಧಕ್ಕೆ ನಿಂತ ಬಾರಾಕಮಾನ್‌ನಂತಾಗಿವೆ. ನೀರಾವರಿಗೆ ಯಾವುದೇ ಅನುದಾನ ನೀಡಿಲ್ಲ. ಮೊದಲು ನೀರಾವರಿ ಯೋಜನೆಗೆ ಅನುದಾನ ನೀಡಿ ಎಂದು ಕಿಡಿ ಕಾರಿದರು.

ಇನ್ನು ಬಿಜೆಪಿ ಧ್ವಜ ಹಾಕದ ಕಾರಣಕ್ಕೆ ಡಿಸಿಎಂ ಪರಮೇಶ್ವರ ನೋಟಿಸ್ ನೀಡಿರುವ ವಿಚಾರ ಪ್ರಸ್ತಾಪಿಸುತ್ತಾ, ಮೈತ್ರಿ ಪಕ್ಷದವರು ದ್ವೇಷ ರಾಜಕಾರಣ ಮಾಡುತ್ತಿದ್ದಾರೆ. ಕಾಂಗ್ರೆಸ್‌ನವರಿಗೆ ಹತಾಶ ಭಾವ ಬಂದಿದೆ. ಸಿಎಂ ಕುಮಾರಸ್ವಾಮಿ, ಡಿಸಿಎಂ ಪರಮೇಶ್ವರ, ಲಾಲುಪ್ರಸಾದ ಯಾದವ್ ಸೇರಿದಂತೆ ಅನೇಕರಿಗೆ ಜನರು ತಿರಸ್ಕಾರ ಮಾಡಿದ್ದಾರೆ. ಅದಕ್ಕಾಗಿ ಅಸೂಯೆ ಭಾವನೆ ಬಂದಿದೆ. ಬಿಜೆಪಿಯವರು ಇಂತಹ ಹೊಲಸು ಕೆಲಸ ಮಾಡಿಲ್ಲ, ಮೈತ್ರಿ ಸರ್ಕಾರ ಚಿಲ್ಲರೆ ರಾಜಕಾರಣ ಬಿಟ್ಟು ಅಭಿವೃದ್ಧಿ ಕೆಲಸ ಮಾಡಬೇಕು. ಇಲ್ಲದೇ ಹೋದ್ರೆ ಮುಂದಿನ ಬಾರಿ ಕಾಂಗ್ರೆಸ್ ವಿಶ್ವದ ಭೂಪಟದಲ್ಲೇ ಇರುವುದಿಲ್ಲವೆಂದು ಭವಿಷ್ಯ ನುಡಿದರು.

ಬಿಜೆಪಿ ಬಳಿ ಡಿಕೆಶಿ ಲಾಬಿ
ಜಲಸಂಪನ್ಮೂಲ ಸಚಿವ ಡಿ.ಕೆ. ಶಿವಕುಮಾರ ಅವರಿಗೆ ಬಿಜೆಪಿ ಆಫರ್ ನೀಡಿರುವ ವಿಚಾರಕ್ಕೆ ಸಂಬಂಧಿಸಿ ಪ್ರಶ್ನೆಯೊಂದಕ್ಕೆ ಪ್ರತಿಕ್ರಿಯಿಸಿದ ಶಾಸಕ ಯತ್ನಾಳ, ಡಿಕೆಶಿಗೆ ಯಾವುದೇ ಆಫರ್ ನೀಡಿಲ್ಲ. ಡಿಕೆಶಿ ಅವರೇ ಬಿಜೆಪಿಯ ಕೇಂದ್ರ ಸಚಿವರ ಬಳಿ ಹೋಗಿ ಐಟಿ ದಾಳಿಗೆ ಸಂಬಂಧಿಸಿದಂತೆ ತಮ್ಮನ್ನು ರಕ್ಷಿಸಿದರೆ ರಾಜ್ಯದಲ್ಲಿ ಬಿಜೆಪಿ ಸರ್ಕಾರ ರಚನೆಗೆ ವಿರೋಧ ಮಾಡಲ್ಲ ಎನ್ನುತ್ತಿದ್ದಾರೆಂಬುದು ನಮಗೂ ಗೊತ್ತಿದೆ ಎಂದರು.

Leave a Reply

Your email address will not be published. Required fields are marked *